ಮಹದಾಯಿ, ಕಪ್ಪತಗುಡ್ಡದ ಕುರಿತು ಸುಳ್ಳಾಡಿದ ಪ್ರಧಾನಿಗೆ ಎಚ್ ಕೆ ಪಾಟೀಲ್ ತರಾಟೆ

ಮೇ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗದಗದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಆಡಿದ ಮಾತುಗಳು ವಿವಾದಕ್ಕೂ ಕಾರಣವಾಗಿದ್ದವು. ಮಹದಾಯಿ ಕುರಿತ ಪ್ರಧಾನಿ ನರೇಂದ್ರ ಮೋದಿಯವರ ಮಾತಿಗೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಅವರು ನೆಲದಲ್ಲಿ ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡಿದ್ದಾರೆ ಎಂದು ಸಚಿವ ಎಚ್ ಕೆ ಪಾಟೀಲ ದೂರಿದ್ದಾರೆ. ಮೇ.5ರಂದು ಗದಗನಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹದಾಯಿ ವಿಚಾರವಾಗಿ ನೀಡಿದ ಹೇಳಿಕೆಗೆ ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. “ಮೋದಿ ಹೇಳಿಕೆ ವಾಸ್ತವಾಂಶಕ್ಕೆ ಸಂಬಂಧವಿಲ್ಲ‌. ಅವರು ಸಣ್ಣ ಮಟ್ಟದ ರಾಜಕೀಯ ಭಾಷಣದ ಮೂಲಕ ಸುಳ್ಳುಗಳ ಸರಮಾಲೆ ಮಾಡಿ ಪ್ರಜ್ಞಾವಂತ ಜನರಿಗೆ ಅವಮಾನಿಸಿದ್ದಾರೆ. ನಿನ್ನೆ ಗದಗನಲ್ಲಿ ಪ್ರಧಾನಿ ಮೋದಿ ಮಹದಾಯಿ ವಿವಾದ ಸೃಷ್ಟಿಸಿದ್ದು ಕಾಂಗ್ರೆಸ್‌ನವರು ಅಂತ ಹೇಳಿಕೆ ನೀಡಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ಘನತೆ ಕಡಿಮೆ ಮಾಡಬೇಕೆನ್ನೋ ದುರುದ್ದೇಶ ಅಥವಾ ಅಜ್ಞಾನದಿಂದಲೋ ಮೋದಿ ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ,” ಎಂದರು.

“ಸಿಎಂ ಸಿದ್ದರಾಮಯ್ಯ 2005-06ರಲ್ಲೇ ಕಾಂಗ್ರೆಸ್ ಸೇರ್ಪಡೆಯಾಗಿರೋದು ಎಲ್ಲರಿಗೂ ಗೊತ್ತಿದೆ. ಆದರೆ ಪ್ರಧಾನಿಗೆ ಮಾತ್ರ ಗೊತ್ತಿಲ್ಲ ಎಂಬುವುದು ಹಾಸ್ಯಾಸ್ಪದ ಸಂಗತಿ. 2007ರಲ್ಲಿ ಗೋವಾದಲ್ಲಿ ಮಹದಾಯಿ ವಿಚಾರದಲ್ಲಿ ಸೋನಿಯಾ ಗಾಂಧಿ ಹೇಳಿಕೆ ನೀಡಿದಾಗ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲೇ ಇದ್ದರು. ರಾಷ್ಟ್ರದ ಪ್ರಧಾನಿ ಸ್ಥಾನದಲ್ಲಿರುವ ಮೋದಿ ಅವರು ಕರ್ನಾಟಕದ ರಾಜಕೀಯ ಘಟನೆ ಬಗ್ಗೆ ಮಾತನಾಡುವಾಗ ಇಲ್ಲಿನ ರಾಜಕೀಯದ ಬಗ್ಗೆ ಅರಿವು ಹೊಂದಬೇಕು. ಯಾವುದೋ ಸುದೈವವೋ ಅಥವಾ ದುರ್ದೈವವೋ ಗೊತ್ತಿಲ್ಲ, ಪ್ರಧಾನಿ ಪಟ್ಟದಲ್ಲಿದ್ದೀರಿ. ನಿಮಗಿರೋ ಶಿಷ್ಟಾಚಾರದ ಹಿನ್ನೆಲೆಯಲ್ಲಿಯಾದರೂ ಸುಳ್ಳನ್ನು ಜನರಿಗೆ ಬಿತ್ತರಿಸಬೇಡಿ. 2007ರಲ್ಲೇ ಸೋನಿಯಾ ಗಾಂಧಿ ಹೇಳಿಕೆಯನ್ನು ಮಾಧ್ಯಮಗಳು ವಿವಾದ ಸೃಷ್ಟಿಸಿದ್ದವು. ಆಗ ಈ ಹೇಳಿಕೆ ಬಂದ ತಕ್ಷಣವೇ ಮಹದಾಯಿಗೆ ನಮ್ಮ ವಿರೋಧವಿಲ್ಲ ಎಂದು ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಆದರೆ, ವಿವಾದ ಸೃಷ್ಠಿಸಿದ ಹೇಳಿಕೆ ಮಾತ್ರ ಪ್ರಧಾನಿ ಗಮನಕ್ಕೆ ಬಂದಿದೆ. ಮಹದಾಯಿಗೆ ಮತ್ತೊಮ್ಮೆ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ ಹೇಳಿಕೆ ಪ್ರಧಾನಿ ಗಮನಕ್ಕೆ ಬರಲಿಲ್ವಾ?” ಎಂದು ಪ್ರಶ್ನಿಸಿದರು.

ಬಿಎಸ್‌ವೈ ಹಾದಿಯಲ್ಲಿ ಪ್ರಧಾನಿ ಮೋದಿ

“ಮಹದಾಯಿ ವಿಚಾರದಲ್ಲಿ ನ್ಯಾಯಾಧೀಕರಣದ ಮೊರೆಹೋದವರು ಯಾರು? ಈ ಬಗ್ಗೆ ವಾಸ್ತವಿಕ ಸತ್ಯ ಕೂಡ ಪ್ರಧಾನಿಗೆ ಗೊತ್ತಿರಲಿಲ್ವಾ? ಬಿಜೆಪಿಯವರು ಮಾಡಿದ ತಪ್ಪಿಗೆ ಪ್ರಧಾನಿ ಮೋದಿ ನಮ್ಮನ್ನು ಹೊಣೆಗಾರರನ್ನಾಗಿಸುತ್ತಿದ್ದಾರೆ. ಅಲ್ಲದೆ, ನ್ಯಾಯಾಧೀಕರಣದಲ್ಲಿ ವಾದ-ವಿವಾದ ನಡೆದಾಗ, ನಿಯೋಗ ಒಯ್ದಾಗ ಪ್ರಧಾನಿ ಮೋದಿ ಮೌನ ತಾಳಿದ್ದರು. ರಾಷ್ಟ್ರದ ಜವಾಬ್ದಾರಿ ವ್ಯಕ್ತಿಯಾದ ಮೋದಿ ಅವರಿಗೆ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಗೌರವ ಇಲ್ವಾ? ಆಗ ಕರ್ನಾಟಕ ರಾಜ್ಯದ ಜನರ ಬಗ್ಗೆ ಕಾಳಜಿ ಮೂಡಲಿಲ್ವಾ? ಬಿಎಸ್‌ವೈ ಕೂಡ ಹುಬ್ಬಳ್ಳಿಯಲ್ಲಿ ಫಣಿಕ್ಕರ್ ಪತ್ರ ಓದಿ ಜನಾಕ್ರೋಶಕ್ಕೆ ಕಾರಣರಾಗಿದ್ದರು. ಅದೇ ಮಾದರಿಯಲ್ಲಿ ಪ್ರಧಾನಿ ಕೂಡ ಮತ್ತೊಂದು ತಪ್ಪು ಮಾಡಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಕಳಸಾ ಬಂಡೂರಿ ಯೋಜನೆ ಹುಟ್ಟುಹಾಕಿದ್ದು ಎಂದು ನೀವು ಹೇಳಿದ್ದನ್ನು ಕೇಳಿಸಿಕೊಂಡು ಸುಮ್ಮನಿರಲು ರಾಜ್ಯದ ಪ್ರಜ್ಞಾವಂತ ಜನತೆ ಮೂರ್ಖರಲ್ಲ. ಹೀಗಾಗಿ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಕೂಡಲೇ ಕನ್ನಡಿಗರ ಕ್ಷಮೆ ಕೋರಬೇಕು,” ಎಂದರು.

ಕಪ್ಪತ್ತಗುಡ್ಡದ ವಿಚಾರದಲ್ಲೂ ಹಸಿ ಸುಳ್ಳು

“ಗದಗ ಜಿಲ್ಲೆಯಲ್ಲಿ ಪೋಸ್ಕೋ ಮೂಲಕ ಕಪ್ಪತ್ತಗುಡ್ಡ ಕಬಳಿಸಲು ಮುಂದಾದವರು ಬಿಜೆಪಿಯವರು ಎಂಬ ಸತ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತಿಲ್ಲವೆ? ಕಪ್ಪತ್ತಗುಡ್ಡ ಕಬಳಿಕೆಗೆ ಬಿಜೆಪಿಗರು ಮುಂದಾಗಿದ್ದ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ತೊಂಟದ ಸಿದ್ದಲಿಂಗ ಶ್ರೀಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಕಪ್ಪತ್ತಗುಡ್ಡ ಕಬಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಹತಾಶೆ ಭಾವನೆಯಿಂದ ಹೀಗೆ ಮಾತಾಡ್ತಿದ್ದಾರೆ. ಕಪ್ಪತ್ತಗುಡ್ಡ ಸಂರಕ್ಷಣೆಗಾಗಿ ಹೋರಾಟ ಮಾಡಿದವರು ಯಾರು ಅಂತ ಎಲ್ಲರಿಗೂ ಗೊತ್ತಿದೆ. ಆದರೆ ಪ್ರಧಾನಿಗೆ ಮಾತ್ರ ಇದ್ಯಾವುದು ಗೊತ್ತಿಲ್ಲವೇ?” ಎಂದು ಪ್ರಶ್ನಿಸಿದರು.

“ಕಪ್ಪತ್ತಗುಡ್ಡ ಸಂರಕ್ಷಣೆ ವಿಚಾರವಾಗಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹದಲ್ಲಿ ಪ್ರತಿಯೊಬ್ಬ ಕಾಂಗ್ರೆಸ್ಸಿಗರು ಅಭಿಪ್ರಾಯ ತಿಳಿಸಿದ್ದಾರೆ. ಆದರೆ ನಿಮ್ಮ ಬಿಜೆಪಿಯ ಜಗದೀಶ್ ಶೆಟ್ಟರ್ ಹಾಗೂ ಈಗ ಚುನಾವಣಾ ಕಣದಲ್ಲಿರೋ ಯಾವೊಬ್ಬ ಅಭ್ಯರ್ಥಿಗಳು ಬಂದಿರಲಿಲ್ಲ. ತೋಂಟದ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ನಡೆದ ಹೊರಾಟದ ಬಗ್ಗೆ ಸುಳ್ಳು ಹೇಳುತ್ತಿರುವುದು ಸರಿಯಲ್ಲ. ಕಪ್ಪತ್ತಗುಡ್ಡದ ಸಂರಕ್ಷಣೆಗಾಗಿ ನಿಮ್ಮ ಬಿಜೆಪಿ ಕಾರ್ಯಾಲಯದಲ್ಲಿ ಸಭೆ ನಡೆದ್ವೋ ಅಥವಾ ಮಠದಲ್ಲಿ ನಡೆದ್ವೋ?” ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ನಿಂತಲ್ಲೇ ನಿಂತ ಮಹದಾಯಿ, ಸುಳ್ಳಿಗೆ ಸಿಕ್ಕ ಕಪ್ಪತಗುಡ್ಡ; ಮೋದಿ ಮಾತಿಗೆ ಜನಾಕ್ರೋಶ

“ಕಪ್ಪತ್ತಗುಡ್ಡದಲ್ಲಿ 2008ರ ಫೆ.20ರಲ್ಲೆ ಗಣಿಗಾರಿಕೆಗೆ ಸರ್ಕಾರ ಆದೇಶ ಹೊರಡಿಸಿತ್ತು. 23-09-2009ರಂದು ರಾಮಘಡ ಮಿನಿರಲ್ಸ್ ಜೊತೆ ಒಪ್ಪಂದ ಮಾಡಿಕೊಂಡ ಸಂದರ್ಭದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅವಧಿಯಲ್ಲೇ ಕಪ್ಪತ್ತಗುಡ್ಡವನ್ನು ಕಂಪನಿಗೆ ಕಣಿಗಾರಿಕೆಗಾಗಿ ಲೀಜ್ ಕೊಡಲಾಗಿತ್ತು. ಈ ಸತ್ಯ ಜಿಲ್ಲೆಯ ಜನರಿಗೆ ಗೊತ್ತಿದ್ದಾಗಲೂ ಹಸಿ ಸುಳ್ಳಿನ ಮೂಲಕ ಪ್ರಧಾನಿ ಜನರನ್ನು ತಪ್ಪುದಾರಿಗೆ ಎಳೆಯೋದು ಎಷ್ಟು ಸರಿ? ಈಗ ನಮ್ಮ ಮೇಲೆ ಆರೋಪ ಮಾಡುತ್ತಿರುವುದರಿಂದ ಬಿಜೆಪಿಗರ ಹುಸಿ ಮಾತುಗಳು ಸಾರ್ವಜನಿಕವಾಗಿ ಬಹಿರಂಗವಾಗುತ್ತಿವೆ,” ಎಂದರು.

“ಪ್ರಜಾಪ್ರಭುತ್ವ ಎಂದರೆ ಹಿಟ್ ಆಂಡ್ ರನ್ ಅಲ್ಲ. ಪ್ರಧಾನಿಗಳು ಪ್ರಜ್ಞಾವಂತರ ನಾಡಲ್ಲಿ ನಿಂತು ಹಸಿ ಸುಳ್ಳು ಹೇಳಿದ್ದು, ಕೂಡಲೇ ನಾಡಿನ ಜನರಿಗೆ ಕ್ಷಮೆ ಕೇಳಬೇಕು. ರಾಜ್ಯದ ಜನರಿಗೆ ತಪ್ಪು ಮಾಹಿತಿ ನೀಡೋ ಮೂಲಕ ಪ್ರಧಾನಿ ಚುನಾವಣಾ ಅಕ್ರಮವೆಸಗಿದ್ದಾರೆ. ಆದರೆ ಸುಳ್ಳು ಹೇಳುವ ಪ್ರವೃತ್ತಿ ರಾಷ್ಟ್ರದ ಪ್ರಧಾನಿಗೆ ಬಂದಿರೋದು ದುರ್ದೈವದ ಸಂಗತಿ. ಈ ಬಗ್ಗೆ ಚುನಾವಣಾ ಆಯೋಗ ತಕ್ಷಣ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More