ಚುನಾವಣಾ ಕಣ | ಹೋಬಳಿ ಕೇಂದ್ರಕ್ಕೂ ಬಿಜೆಪಿ ರಾಷ್ಟ್ರೀಯ ನಾಯಕರ ಭೇಟಿ  

ಈ ಹಿಂದೆ ಚುನಾವಣೆಯೆಂದರೆ ರಾಷ್ಟ್ರಮಟ್ಟದ ನಾಯಕರು ಜಿಲ್ಲಾ ಕೇಂದ್ರಕ್ಕೆ ಮಾತ್ರ ಬಂದು ಹೋಗುತ್ತಿದ್ದರು. ಆದರೆ ಈ ಬಾರಿ ತಾಲೂಕು, ಹೋಬಳಿಗಳಿಗೂ ಬಂದಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಕೇಂದ್ರಕ್ಕೆ ಬಂದಿರುವುದೇ ಇದಕ್ಕೆ ನಿದರ್ಶನ

ಪ್ರತಿಯೊಬ್ಬ ಅಭ್ಯರ್ಥಿಗೂ, ಪ್ರತಿಯೊಂದು ಕ್ಷೇತ್ರವೂ ಬಹಳಷ್ಟು ಪ್ರಾಮುಖ್ಯತೆ ನೀಡುತ್ಎಂತಿರುವುದು ಈ ಬಾರಿಯ ಚುನಾವಣೆಯ ವಿಶೇಷ. ಈ ಹಿಂದೆ ಚುನಾವಣೆಯೆಂದರೆ ವಿವಿಧ ಪಕ್ಷಗಳ ರಾಷ್ಟ್ರಮಟ್ಟದ ನಾಯಕರು ಜಿಲ್ಲಾ ಕೇಂದ್ರಕ್ಕೆ ಮಾತ್ರ ಬಂದು ಹೋಗುತ್ತಿದ್ದರು. ಆದರೆ ಈ ಬಾರಿ ತಾಲೂಕು ಮತ್ತು ಹೋಬಳಿ ಹಂತಕ್ಕು ಬಂದು ಪ್ರಚಾರ ನಡೆಸುತ್ತಿರುವುದು ಚುನಾವಣೆಯ ಮಹತ್ವವನ್ನು ಹೇಳುತ್ತಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಕೇಂದ್ರಕ್ಕೆ ಬಂದಿರುವುದೇ ಇದಕ್ಕೆ ನಿದರ್ಶನ. ಮೇ 9ರಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಸ್ಥಳೀಯ ವಿಷಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದರು. ತುಮಕೂರು ಜಿಲ್ಲೆಯ ವಿವಿಧ ಮಠಾಧೀಶರ ಸ್ಮರಣೆ, ಗುಬ್ಬಿ ವೀರಣ್ಣ ಹೆಸರಿನಲ್ಲಿ 100 ಕೋಟಿ ರು ವೆಚ್ಚದಲ್ಲಿ ಗುಬ್ಬಿ ವೀರಣ್ಣ ಸಾಂಸ್ಕೃತಿಕ ಅಧ್ಯಯನ ಪೀಠ ಸ್ಥಾಪನೆ, ಹೆಬ್ಬೂರು ಏತ ನೀರಾವರಿ ಯೋಜನೆ, ತೆಂಗಿಗೆ ಬೆಂಬಲ ಬೆಲೆ ವಿಷಯಗಳನ್ನು ಪ್ರಸ್ತಾಪಿಸಿ ಆಯಾ ಸಮುದಾಯದ ಮತಗಳನ್ನು ಸೆಳೆಯುವ ಯತ್ನಕ್ಕೆ ಮುಂದಾದರು.

ಇದು ಸೇರಿ ತುಮಕೂರು ಜಿಲ್ಲೆಗೆ ಮೂರು ಬಾರಿ ಅಮಿತ್ ಶಾ ಬಂದು ಹೋದಂತಾಗಿದೆ. ತಿಪಟೂರು, ತುಮಕೂರು ಮತ್ತು ಈಗ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಕೇಂದ್ರಕ್ಕೆ ಬಂದು ಹೋಗುವ ಮೂಲಕ ಬಿಜೆಪಿ ಪ್ರಭಾವವನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ. ತುಮಕೂರು ಉತ್ತರ ಭಾಗದಲ್ಲಿ ಬಿಜೆಪಿಗೆ ಅಷ್ಟೇನೂ ನೆಲೆ ಇಲ್ಲ. ಹೀಗಾಗಿ ಬಿಜೆಪಿ ಪ್ರಭಾವವಿರುವ ಕೇಂದ್ರನ್ನು ಆಯ್ಕೆ ಮಾಡಿಕೊಂಡಂತೆ ಕಾಣುತ್ತಿದೆ. ಈ ಹಿಂದೆ ತಿಪಟೂರು ಮತ್ತು ತುಮಕೂರು ಗ್ರಾಮಾಂತರದಲ್ಲಿ ಶಾಸಕರಿದ್ದರು. ತುಮಕೂರು ನಗರದಲ್ಲಿಯೂ ನಾಲ್ಕು ಬಾರಿ ಶಾಸಕರಾಗಿದ್ದವರು ಸೊಗಡು ಶಿವಣ್ಣ. ಹೀಗಾಗಿ ಸ್ಥಳೀಯ ಬಿಜೆಪಿ ನಾಯಕರು ಈ ಮೂರು ಕ್ಷೇತ್ರಗಳಿಗೆ ಆದ್ಯತೆ ನೀಡಿರುವುದು ಗೋಚರಿಸುತ್ತದೆ. ಹೀಗಾಗಿಯೇ ಶಾ ತಮ್ಮ ಭಾಷಣದಲ್ಲಿ ಮಠಾಧೀಶರನ್ನು ಪ್ರಸ್ತಾಪಿಸಿದ್ದಾರೆ.

‘’ತುಮಕೂರು ಜಿಲ್ಲೆ ಪ್ರಮುಖ ವ್ಯಕ್ತಿಗಳನ್ನು ದೇಶಕ್ಕೆ ಕೊಟ್ಟಿದೆ. ವಿಜ್ಞಾನಿ ಡಾ.ರಾಜಾರಾಮ್, ಸಿದ್ಧಗಂಗಾ ಶ್ರೀ, ಅಮರಶಿಲ್ಪಿ ಜಕಣಚಾರಿ, ಗುಬ್ಬಿ ವೀರಣ್ಣ. ಆದಿ ಚುಂಚನಗಿರಿ ಮಠಾಧೀಶ ನಿರ್ಮಾಲನಂದ ನಾಥ ಸ್ವಾಮೀಜಿ ಈ ಭಾಗದವರು’’ ಎಂದು ಹೇಳುವ ಮೂಲಕ ಜನರಲ್ಲಿ ಧಾರ್ಮಿಕ ಭಾವನೆ ಮೂಡುವಂತೆ ಮಾಡಿದ್ದಾರೆ. ಆದಿಚುಂಚನಗಿರಿ ಸ್ವಾಮೀಜಿಯನ್ನು ಈ ಹಿಂದೆ ಭೇಟಿಯೂ ಆಗಿದ್ದರು. ನಿರ್ಮಾಲನಂದನಾಥ ಸ್ವಾಮೀಜಿ ಗುಬ್ಬಿ ತಾಲೂಕಿನವರಾಗಿರುವುದರಿಂದ ಅವರನ್ನು ಜನರಿಗೆ ನೆನಪಿಸುವ ಮೂಲಕ ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರು ಮತ್ತು ಆಚಾರರ ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಯತ್ನ ನಡೆಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಷ್ಟೇ ಅಲ್ಲ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ಅಭ್ಯರ್ಥಿ ಸುರೇಶ್ ಗೌಡರಿಗೆ ಉನ್ನತ ಸ್ಥಾನ ನೀಡಲಾಗುವುದು ಎಂದು ಜನರಿಗೆ ಸಚಿವ ಸ್ಥಾನದ ಆಸೆಯನ್ನು ತೋರಿಸಿದರು. ನರೇಂದ್ರ ಮೋದಿ ಸರ್ಕಾರ ತೆಂಗು ಬೆಂಬಲ ಬೆಲೆ ನೀಡಿ ಶೇಕಡ 70 ರಫ್ತಿನ ಪ್ರಮಾಣ ಜಾಸ್ತಿ ಮಾಡಿದೆ. ಮೈಸೂರು ಚಿತ್ರದುರ್ಗ ಸೇರಿದಂತೆ 5 ಕಡೆ ತೆಂಗು ಸಂಸ್ಕರಣ ಘಟಕ ನಿರ್ಮಾಣ ಮಾಡ್ತೇವೆ ಎಂದು ತೆಂಗು ಬೆಳೆಗಾರರ ಗಮನವನ್ನು ಪಕ್ಷದತ್ತ ಸೆಳೆಯುವಂತಹ ಯತ್ನ ನಡೆಸಿದರು.

“ಗುಬ್ಬಿ ವೀರಣ್ಣನವರ ಹೆಸರಿನಲ್ಲಿ ನೂರು ಕೋಟಿ ಅನುದಾನದ ಸಾಂಸ್ಕೃತಿಕ ಅಧ್ಯಯನ ಪೀಠ ಸ್ಥಾಪನೆ ಮಾಡುತ್ತೇವೆ” ಎಂದು ಕಲಾವಿದರ ಗಮನವನ್ನು ಸೆಳೆದರು. ಈಗಾಗಲೇ ಗುಬ್ಬಿ ಮತ್ತು ತುಮಕೂರು ನಗರದಲ್ಲಿ ಎರಡು ಗುಬ್ಬಿ ವೀರಣ್ಣ ರಂಗಮಂದಿರಗಳು ಇವೆ. ಇಲ್ಲಿ ನಿರಂತರ ರಂಗಭೂಮಿ ಚಟುವಟಿಕೆಗಳ ನಡೆಯುತ್ತಲಿವೆ. ಇದಕ್ಕೆ ಪೂರಕವಾಗಿ ಸಾಂಸ್ಕೃತಿಕ ಅಧ್ಯಯನ ಪೀಠ ಸ್ಥಾಪನೆ ಮಾಡುವುದರಿಂದ ಗುಬ್ಬಿ ವೀರಣ್ಣ ಅವರ ಕುರಿತು ವಿಶೇಷ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಕಲಾವಿದರಿಗೂ ಇದರಿಂದ ಅನುಕೂಲವಾಗುತ್ತದೆ. ಸಂಶೋಧನೆ ಕೈಗೊಳ್ಳುವವರಿಗೆ ಸಹಾಯವಾಗುತ್ತದೆ. ಇದೇ ಉದ್ದೇಶದಿಂದ ಸಾಂಸ್ಕೃತಿಕವಾಗಿಯೂ ಕಲಾವಿದರ ಸೆಳೆಯುವಂತಹ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ : ಚುನಾವಣಾ ಕಣ | ತುಮಕೂರಿಗೆ ಎರಡನೇ ಬಾರಿ ಬಂದು ರೋಡ್‌ ಶೋ ಮಾಡಿದ ಅಮಿತ್ ಶಾ!

ಹೆಬ್ಬೂರು ಹೋಬಳಿಗೆ ಸಂಬಂಧಿಸಿದಂತೆ ಹೆಬ್ಬೂರು ಏತನೀರಾವರಿ ವಿಷಯವನ್ನು ಉಲ್ಲೇಖಿಸಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೆಬ್ಬೂರು ಭಾಗಕ್ಕೆ ನೀರು ಪೂರೈಕೆ ಮಾಡುವಂತಹ ಅಂಶಗಳಿಗೂ ಭಾಷಣದಲ್ಲಿ ಒತ್ತು ನೀಡಲಾಯಿತು. ಸಮಾರಂಭದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸುರೇಶ್ ಗೌಡ ಅವರನ್ನು ಬಿಟ್ಟರೆ ಬೇರೆ ಯಾರೂ ಹೇಳಿಕೊಳ್ಳುವಂತಹ ಮುಖಂಡರೇ ಇರಲಿಲ್ಲ. ರಾಜ್ಯ ಮುಖಂಡರ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದ ಅಮಿತ್ ಶಾ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರೊಂದಿಗೆ ವೇದಿಕೆ ಹಂಚಿಕೊಂಡು ಗಮನ ಸೆಳೆದರು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More