ಚುನಾವಣಾ ಕಣ | ಗದಗದಲ್ಲಿ ಕಾಂಗ್ರೆಸ್ ಮತಗಳನ್ನು ಕಸಿಯುತ್ತಾರಾ ಸಿರಾಜ್?

ಗದಗ ವಿಧಾನಸಭಾ ಕ್ಷೇತ್ರದಲ್ಲಿ ಎಮ್ಇಪಿ ಪಕ್ಷದಿಂದ ಸಿರಾಜ್ ಬಳ್ಳಾರಿ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ 38,200 ಮುಸ್ಲಿಂ ಮತದಾರರಿದ್ದಾರೆ. ಮುಸ್ಲಿಂ ಸಮಾಜದಲ್ಲಿ ತಮ್ಮದೇ ಪ್ರಭಾವ ಹೊಂದಿರೋ ಸಿರಾಜ್ ಅವರು ಎಷ್ಟೇ ಮತ ಪಡೆದರೂ ಅದರಿಂದ ಕಾಂಗ್ರೆಸ್ ಪಕ್ಷಕ್ಕೇ ಪೆಟ್ಟು ಎಂದು ಹೇಳಲಾಗುತ್ತಿದೆ

ಗದಗ ಕ್ಷೇತ್ರದಲ್ಲೀಗ ಪ್ಲಸ್, ಮನೈಸ್ ರಾಜಕಾರಣ ಶುರುವಾಗಿದೆ. ಇನ್ನೇನು ವಿಧಾನಸಭಾ ಚುನಾವಣೆ ಹಿನ್ನೆಲೆ ದಿನಗಣನೆ ಆರಂಭವಾಗಿದೆ. ಯಾವ ಪಕ್ಷಕ್ಕೆ ಎಷ್ಟು ಮತ, ಗೆಲುವಿಗೆ ಪೂರಕವಾಗೋ ಅಂಶಗಳು ಯಾವುವು ಎಂಬೆಲ್ಲ ಬಿಸಿಬಿಸಿ ಚರ್ಚೆ ಇದೀಗ ಕ್ಷೇತ್ರದಾದ್ಯಂತ ನಡೆಯುತ್ತಿದೆ.

ಗದಗ ವಿಧಾನಸಭಾ ಕ್ಷೇತ್ರದಲ್ಲಿ 13 ಜನ ಕಣದಲ್ಲಿದ್ದಾರೆ. ಈ ಪೈಕಿ ಕಾಂಗ್ರೆಸ್‌ನಿಂದ ಗ್ರಾಮೀಣಾಭಿವೃದ್ಧಿ ಸಚಿವ ಎಚ್ ಕೆ ಪಾಟೀಲ್, ಬಿಜೆಪಿಯಿಂದ ಅನೀಲ್ ಮೆಣಸಿನಕಾಯಿ, ಬಿಎಸ್‌ಪಿಯಿಂದ ಎಮ್ ಆರ್ ಸೋಂಪೂರ್, ಎಮ್ಇಪಿ ಯಿಂದ ಸಿರಾಜ್ ಬಳ್ಳಾರಿ, ಪಕ್ಷೇತರ ಅಭ್ಯರ್ಥಿಯಾಗಿ ಮಂಜುನಾಥ್ ಅಬ್ಬಿಗೇರಿ ಪ್ರಮುಖರಾಗಿದ್ದಾರೆ. 2013 ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಗದಗ ಕ್ಷೇತ್ರದ ಚುನಾವಣೆ ಮಾತ್ರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಮಂಜುನಾಥ್ ಅಬ್ಬಿಗೇರಿ ಹಾಗೂ ಎಮ್ಇಪಿ ಅಭ್ಯರ್ಥಿ ಸಿರಾಜ್ ಬಳ್ಳಾರಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಸೋಲು, ಗೆಲುವಿನ ಲೆಕ್ಕಾಚಾರಕ್ಕೆ ಕಾರಣವಾಗಿದ್ದಾರೆ. ಗದಗ ಕ್ಷೇತ್ರದಲ್ಲಿ ಲಿಂಗಾಯತ ಮತದಾರರು 58,100 ಜನರಿದ್ದು, ಇದರಲ್ಲಿ ಪಂಚಮಸಾಲಿ ಮತಗಳು 25,000 ಕ್ಕೂ ಅಧಿಕ ಇವೆ.

ಇನ್ನು 38,200 ಮುಸ್ಲಿಂ ಮತದಾರರಿದ್ದಾರೆ. ಹೀಗಾಗಿ ಪಂಚಮಸಾಲಿ ಮತ್ತು ಮುಸ್ಲಿಂ ಮತಗಳು ಈ ಕ್ಷೇತ್ರದಲ್ಲಿ ನಿರ್ಣಾಯಕವಾಗುವ ಸಾಧ್ಯತೆಯೇ ಹೆಚ್ಚು. ಕ್ಷೇತ್ರದಲ್ಲಿ ಸಚಿವ ಎಚ್ ಕೆ ಪಾಟೀಲ್ ಹಾಗೂ ಬಿಜೆಪಿಯ ಅನೀಲ್ ಮೆಣಸಿನಕಾಯಿ ಮಧ್ಯೆ ನೇರ ಹಣಾಹಣಿ ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ ಎಮ್ಇಪಿ ಅಭ್ಯರ್ಥಿ ಸಿರಾಜ್ ಹಾಗೂ ಪಕ್ಷೇತರ ಅಭ್ಯರ್ಥಿ ಮಂಜುನಾಥ್ ಅಬ್ಬಿಗೇರಿ ಎಷ್ಟು ಮತಗಳನ್ನು ಪಡೆಯುತ್ತಾರೆ? ಇಬ್ಬರು ಅಭ್ಯರ್ಥಿಗಳು ಪಡೆವ ಮತಗಳು ಯಾರ ಗೆಲುವಿಗೆ ಮುಳುವಾಗಲಿದೆ ಎನ್ನುವುದು ಕ್ಷೇತ್ರದ ಮತದಾರರ ಸದ್ಯದ ಕುತೂಹಲ.

ಪ್ರಮುಖ ಪಕ್ಷಗಳಿಗೆ ನಿದ್ದೆಗೆಡೆಸಿದ ಇತರ ಅಭ್ಯರ್ಥಿಗಳು

ಗದಗ ವಿಧಾನಸಭಾ ಕ್ಷೇತ್ರದಲ್ಲಿ ಎಮ್ಇಪಿ ಪಕ್ಷದಿಂದ ಸಿರಾಜ್ ಬಳ್ಳಾರಿ ಸ್ಪರ್ಧಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗುವ ಸಾಧ್ಯತೆಯೇ ಹೆಚ್ಚು. 38,200 ಮುಸ್ಲಿಂ ಮತದಾರರು ಕ್ಷೇತ್ರದಲ್ಲಿದ್ದಾರೆ. ಜೊತೆಗೆ ಮುಸ್ಲಿಂ ಸಮಾಜದಲ್ಲಿ ತಮ್ಮದೇ ಪ್ರಭಾವ ಹೊಂದಿರೋ ಸಿರಾಜ್ ಮತಗಳು ಕಾಂಗ್ರೆಸ್ ಮತಗಳ ವಿಭಜನೆಗೆ ಕಾರಣವಾಗಬಹುದು. ಹೀಗಾಗಿ ಸಿರಾಜ್ ಎಷ್ಟೆ ಮತ ಪಡೆದರೂ ಅವುಗಳು ಕೈ ಮತಗಳನ್ನೇ ಕಸಿದಂತಾಗುತ್ತದೆ. ಇನ್ನು ಸಿರಾಜ್ ಈ ಹಿಂದೇ ಬಿಜೆಪಿಯಲ್ಲಿದ್ದು ಇನ್ನೇನು ಚುನಾವಣೆ ಕೆಲ ದಿನಗಳ ಮುಂದಷ್ಟೆ ಎಮ್ಇಪಿ ಸೇರಿ ಟಿಕೇಟ್ ಪಡೆದುಕೊಂಡಿದ್ದಾರೆ. ಹೀಗಾಗಿ ಬಹುತೇಕ ಮುಸ್ಲಿಂಮರು ಈ ಬಗ್ಗೆ ಜಾಗೃತರಾಗಿದ್ದು, ಅಷ್ಟಾಗಿ ಮುಸ್ಲಿಂ ಮತಗಳು ವಿಭಜನೆಯಾಗುವುದಿಲ್ಲ ಎನ್ನುವುದು ಕೂಡ ಕಾಂಗ್ರೆಸ್ಸಿಗರ ಆತ್ಮವಿಶ್ವಾಸ. ಒಟ್ಟಾರೆ ಸಿರಾಜ್ ಸ್ಪರ್ಧೆ ಕಾಂಗ್ರೆಸ್ ಮತಗಳಿಗೆ ಕತ್ತರಿ ಹಾಕುವುದು ಬಹುತೇಕ ಖಚಿತ. ಹೀಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಚಿವ ಎಚ್ ಕೆ ಪಾಟೀಲರ ನಾಗಾಲೋಟಕ್ಕೆ ಕೊಂಚ ಬ್ರೇಕ್ ಬೀಳುವ ಸಾಧ್ಯತೆಗಳಿವೆ.

ಕ್ಷೇತ್ರದಲ್ಲಿ 2,14,498 ಮತದಾರರಿದ್ದಾರೆ. ಇದರಲ್ಲಿ 1,7393 ಪುರುಷರು, 1,7,105 ಮಹಿಳೆಯರು. ಈ ಪೈಕಿ 58,100 ಲಿಂಗಾಯತರು, ಇದರಲ್ಲಿ 25,000 ಕ್ಕೂ ಅಧಿಕ ಪಂಚಮಸಾಲಿ, ಎಸ್‌ಸಿ 32,250, 12,115, ಎಸ್‌ಟಿ 14005 ಕುರುಬರು, 38,200 ಮುಸ್ಲಿಂ ಮತದಾರರಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್, ಜೆಡಿಎಸ್‌‌ ಮತಬುಟ್ಟಿಗೆ ಕೈಹಾಕಲಿದೆಯೇ ನೌಹೀರಾ ಶೇಖ್‌ರ ಎಂಇಪಿ?

ಬಿಜೆಪಿ ಪಕ್ಷ ಸೀರಾಜ್ ಸ್ಪರ್ಧೆಯಿಂದ ಹೆಚ್ಚಿನ ಆತ್ಮವಿಶ್ವಾಸದಲ್ಲಿದ್ದಾರೆ . ಆದರೆ ಕಾಂಗ್ರೆಸ್ ಗೆ ಸೀರಾಜ್ ಮುಳುವಾದರೆ, ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷರೊಬ್ಬರು ಸ್ಪರ್ಧಿಸಿರುವುದು ಕಮಲ ಪಡೆಯ ಹಿನ್ನಡೆಗೆ ಕಾರಣವಾಗುವ ಸಾಧ್ಯತೆ ಹೆಚ್ಚು. ಮಂಜುನಾಥ್ ಅಬ್ಬಿಗೇರಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರೋದು ಬಿಜೆಪಿ ಮತಗಳಿಗೆ ಕತ್ತರಿ ಹಾಕುವ ಸಾಧ್ಯತೆಯೇ ಹೆಚ್ಚು. ಅಬ್ಬಿಗೇರಿ ಪಂಚಮಸಾಲಿ ಸಮಾಜದವರಾಗಿದ್ದು ಕ್ಷೇತ್ರದಲ್ಲಿ 25,000 ಕ್ಕೂ ಅಧಿಕ ಮತದಾರರಿದ್ದಾರೆ. ಹೀಗಾಗಿ ಮಂಜುನಾಥ್ ಅಬ್ಬಿಗೇರಿ ಎಷ್ಟೆ ಮತಗಳನ್ನು ಪಡೆದರೂ ಅದು ಬಹುತೇಕ ಬಿಜೆಪಿಯ ಮತಗಳೆ. ಈಗಾಗಲೇ ಕ್ಷೇತ್ರದಾದ್ಯಂತ ಪ್ರಚಾರದಲ್ಲಿರುವ ಅಬ್ಬಿಗೇರಿ ಸ್ಪರ್ಧೆ ಬಿಜೆಪಿಗರ ನಿದ್ದೆಗೆಡೆಸಿದೆ. ಈ ಕಾರಣದಿಂದ ಸಿರಾಜ್ ಪಡೆಯುವ ಮತಗಳೆಷ್ಟು? ಮಂಜುನಾಥ್ ಕಬಳಿಸುವ ಮತಗಳೆಷ್ಟು ಎಂಬ ಮತಗಳ ಲೆಕ್ಕಾಚಾರದ ಜೊತೆಗೆ ಜಾತಿಗಳ ಮತಗಳನ್ನು ಅಳೆದು ತೂಗಿ ಲೆಕ್ಕ ಹಾಕಲಾಗುತ್ತಿದೆ. ಈ ಕಾರಣದಿಂದಾಗಿ ಈ ಇಬ್ಬರ ಸ್ಪರ್ಧೆಯಿಂದ ಕ್ಷೇತ್ರದ ಜನತೆ ಕೂಡಿ, ಕಳೆಯುವ ಲೆಕ್ಕಾಚಾರದಲ್ಲಿ ತೊಡಗುವಂತಾಗಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More