ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬಿಜೆಪಿ ಮೇಲೆ ಹರಿಹಾಯ್ದ ಪರಮೇಶ್ವರ್

ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆ ತುಮಕೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗೆಯೇ ತಮ್ಮ ಪಕ್ಷ ಸರ್ಕಾರ ರಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮುಖದಲ್ಲಿ ಗೆಲುವಿನ ನಗುವಿತ್ತು. ವಿಧಾನಸಭಾ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆ ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಮಾತನಾಡುತ್ತ, “ಮತ್ತೆ ನಮ್ಮದೇ ಸರ್ಕಾರ ಬರುತ್ತದೆ. 2013ರ ಅವಧಿಯಲ್ಲಿ ಕೈಗೆತ್ತಿಕೊಂಡಿರುವ ಮತ್ತು ಅರ್ಧ ಉಳಿದಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಮಗೆ ಜನಾದೇಶ ಸಿಗುತ್ತದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

2013ರಲ್ಲಿ ಚುನಾವಣೆ ಎದುರಾದಾಗ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿ ಭ್ರಷ್ಟಾಚಾರದ ಕುರಿತು ವಿಷಯಗಳನ್ನು ಪ್ರಸ್ತಾಪಿಸಿ ಚುನಾವಣೆಯನ್ನು ಎದುರಿಸಿದ್ದನ್ನು ನೆನಪಿಸಿಕೊಂಡರು. ಪ್ರಸಕ್ತ ಚುನಾವಣೆಯಲ್ಲಿ ಅದೇ ಹಳೆಯ ಟೇಪನ್ನು ಹಾಕಬಾರದು ಎಂಬ ಉದ್ದೇಶದಿಂದ ಹೊಸ ರೀತಿಯಲ್ಲಿ ರಾಜ್ಯ ಸರ್ಕಾರದ ಸಾಧನೆಗಳನ್ನು ಕೇಂದ್ರೀಕರಿಸಿ ಪ್ರಚಾರ ನಡೆಸಿದ್ದನ್ನು ವಿಶೇಷವಾಗಿ ಜನರಿಗೆ ತಲುಪಿಸಿದ್ದೇವೆ. ಅನ್ನಭಾಗ್ಯ, ಕ್ಷೀರಭಾಗ್ಯ, ಪರಿಶಿಷ್ಠರಿಗೆ ಸರ್ಕಾರ ಹಾಕಿಕೊಂಡ ಕಾರ್ಯಕ್ರಮಗಳಿಂದ ಚುನಾವಣೆಯಲ್ಲಿ ನಮಗೆ ನೆರವಾಗಲಿದೆ ಎಂದು ತಿಳಿಸಿದರು.

2013ರ ಚುನಾವಣೆಯ ಸಂದರ್ಭದಲ್ಲಿ ಮಂಗಳೂರಿನಲ್ಲಿ ದೆಹಲಿಯ ಪತ್ರಿಕೆಯವರು ನನ್ನ ಸಂದರ್ಶನ ಮಾಡಿದ್ದನ್ನು ಮೆಲುಕು ಹಾಕಿದ ಪರಮೇಶ್ವರ್, “ಅಂದು ನಾನು ಕಾಂಗ್ರೆಸ್ ಪಕ್ಷಕ್ಕೆ 122 ಸೀಟುಗಳು ಬರುತ್ತವೆ ಎಂದು ದೃಢವಿಶ್ವಾಸದಿಂದ ಹೇಳಿದ್ದೆ. ಅದನ್ನು ಆ ಪತ್ರಿಕೆ ದೊಡ್ಡದಾಗಿ ಸುದ್ದಿ ಮಾಡಿತ್ತು. ಕೆಲವರು ನನ್ನನ್ನು ಕೇಳಿದರು. ಇದರಲ್ಲಿ ಏನಾದರು ವ್ಯತ್ಯಾಸವಾದರೆ ಹೇಗೆ ಎಂದು. ಆಗಲೂ ಕೂಡ ದೃಢವಾಗಿ ಹೇಳಿದ್ದೆ. ಈಗಲೂ ಅದೇ ವಿಶ್ವಾಸದಿಂದ ಹೇಳುತ್ತೇನೆ. 120ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು ಸರ್ಕಾರವನ್ನು ರಚಿಸುತ್ತೇವೆ. ಇದರಲ್ಲಿ ಅನುಮಾನವೇ ಬೇಡ.’’ ಎಂದು ದೃಢವಾಗಿ ನುಡಿದರು.

ಇದನ್ನೂ ಓದಿ : ಚುನಾವಣಾ ಕಣ | ಕೊರಟಗೆರೆಯಲ್ಲಿ ಪರಮೇಶ್ವರ್ ಪರ ನಿಂತ ಎಡಗೈ ನಾಯಕರು

ಪತ್ರಿಕಾಗೋಷ್ಠಿಯಲ್ಲಿ ಮುಂದಿನ ಮುಖ್ಯಮಂತ್ರಿಯ ವಿಚಾರವೂ ಪ್ರಸ್ತಾಪವಾಯಿತು. ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತ ಅಭ್ಯರ್ಥಿಯನ್ನು ನಿರ್ಧರಿಸುತ್ತೇವೆ. ದೆಹಲಿಯಿಂದ ವೀಕ್ಷಕರೂ ಬಂದಿರುತ್ತಾರೆ. ಹೈಕಮಾಂಡ್ ಯಾರು ಮುಖ್ಯಮಂತ್ರಿ ಎಂದು ಹೇಳುತ್ತಾರೋ ಅವರು ಸಿಎಂ ಆಗುತ್ತಾರೆ ಎಂದು ನಿಲುವು ವ್ಯಕ್ತಪಡಿದರು. ಅಷ್ಟೇ ಅಲ್ಲ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಅಂದರೆ ಆಗಲಿ ಬಿಡಿ’’ ಅದರಲ್ಲೇನು ತಪ್ಪಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ನೇರವಾಗಿಯೇ ಉತ್ತರಿಸಿದರು.

ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಯಾರ ಜೊತೆ ಹೊಂದಿಣಿಕೆ ಮಾಡಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈಗಲೂ ಹೇಳುತ್ತೇನೆ. ನಮ್ಮದೇ ಸರ್ಕಾರ ಎಂದರು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More