ವಿಡಿಯೋ ಸ್ಟೋರಿ | ಸಂಜೆವರೆಗೂ ಮತ ಹಾಕದೆ ಪ್ರತಿಭಟಿಸಿದ ಕಡದರಗಡ್ಡಿ ಮಂದಿ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಡದರಗಡ್ಡಿ ಗ್ರಾಮದಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಮತದಾನ ಬಹಿಷ್ಕರಿಸಿದ ನಂತರವೂ ಒತ್ತಾಯಪೂರ್ವಕವಾಗಿ ಮತದಾನ ಮಾಡಿಸಿರುವ ಅಧಿಕಾರಿಗಳ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಕಡದರಗಡ್ಡಿ-ಗೋನವಾಟ್ಲ್ ಗ್ರಾಮದ ನಡುವೆ ಸೇತುವೆ ನಿರ್ಮಾಣಕ್ಕೆ ಹಲವು ವರ್ಷದಿಂದ ಗ್ರಾಮಸ್ಥರು ಹೋರಾಟ ನಡೆಸುತ್ತಿದ್ದು, ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಾರೆ. ಮನವಿಗೆ ಸ್ಪಂದಿಸದ ಕಾರಣ, ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ತೀರ್ಮಾನಿಸಿದ್ದರು. ಹೀಗಾಗಿ ಗ್ರಾಮದಲ್ಲಿ ಸ್ಥಾಪಿಸಿರುವ ಮತಗಟ್ಟೆ ಕೇಂದ್ರಕ್ಕೆ ತೆರಳದೆ ಮತದಾನದಿಂದ ದೂರ ಉಳಿದಿದ್ದರು. ಆದರೆ, ಸರ್ಕಾರಿ ನೌಕರರ ಮೇಲೆ ಒತ್ತಡ ಹೇರಿದ ಅಧಿಕಾರಿಗಳು, ಚುನಾವಣೆಗೆ ಬಹಿಷ್ಕರಿಸದೆ ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದನ್ನು ಖಂಡಿಸಿ ಗ್ರಾಮಸ್ಥರು ಚುನಾವಣಾ ಅಧಿಕಾರಿಗಳಿಗೆ ದಿಗ್ಭಂದನ ಹೇರಿದ್ದಾರೆ.

ಚುನಾವಣಾ ಅಧಿಕಾರಿಗಳಿಗೆ ಗ್ರಾಮಸ್ಥರು ದಿಗ್ಭಂದನ ಹಾಕಲು ಪ್ರಯತ್ನಿಸಿದ ಕಾರಣ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನೂ ಗ್ರಾಮಕ್ಕೆ ರವಾನಿಸಲಾಗಿದೆ. ಸದ್ಯ ಗ್ರಾಮದಲ್ಲಿ ಮೂವರು ಸರ್ಕಾರಿ ನೌಕರರು ಮಾತ್ರವೇ ಮತದಾನ ಮಾಡಿದ್ದಾರೆ. ಈ ಗ್ರಾಮದಲ್ಲಿ ಒಟ್ಟು ೩೯೯ ಮತದಾರರಿದ್ದು, ೩೯೭ ಪುರುಷ, ೩೦೨ ಮಹಿಳೆಯ ಮತದಾರರು ಇದ್ದಾರೆ. ಆದರೆ ಇವರು ಯಾರೂ ಮತದಾನ ಮಾಡಿಲ್ಲ.

ಸರ್ಕಾರಿ ನೌಕರರನ್ನು ಉದ್ಯೋಗದಿಂದ ತೆಗೆದುಹಾಕುವುದಾಗಿ ಬೆದರಿಸಿ ಮತದಾನ ಮಾಡಲು ಒತ್ತಾಯ ಹೇರಿದ್ದಾರೆ. ದೊಡ್ಡ ಅಧಿಕಾರಿಗಳಾಗಿ ಅವರು ಈ ರೀತಿ ಮಾಡುವುದು ಸರಿಯೇ? ಚುನಾವಣಾ ಸಿಬ್ಬಂದಿಗಳ ಇಂತಹ ಕ್ರಮವನ್ನು ನಾವು ವಿರೋಧಿಸುತ್ತೇವೆ.
ಗ್ರಾಮಸ್ಥ
ಇದನ್ನೂ ಓದಿ : ಚುನಾವಣಾ ಕಣ | ಅಧಿಕಾರಿಗಳು ಸುಳ್ಳು ಹೇಳಿ ಮತ ಹಾಕಿಸುವುದು ಈ ಹಳ್ಳಿಯ ವಿಶೇಷ!
ಸೇತುವೆ ನಿರ್ಮಾಣ ಆಗುವವರೆಗೂ ಮತ ಚಲಾಯಿಸುವುದಿಲ್ಲ ಎಂದು ಹೇಳಿದ್ದೇವೆ. ಅದಕ್ಕೆ ಚುನಾವಣಾ ಅಧಿಕಾರಿಗಳು ನೋಟಾ ಒತ್ತಿ ಎಂದು ಒತ್ತಾಯಿಸುತ್ತಿದ್ದಾರೆ. ಲಿಖಿತ ರೂಪದಲ್ಲಿ ಸೇತುವೆ ನಿರ್ಮಾಣ ಮಾಡುವುದಾಗಿ ತಹಶೀಲ್ದಾರರು ಬರೆದುಕೊಟ್ಟರಷ್ಟೇ ಮತ ಚಲಾಯಿಸುತ್ತೇವೆ.
ಗ್ರಾಮಸ್ಥ

ಲಿಂಗಸುಗೂರು ಸಮೀಪದ ‘ಗುರುಗುಂಟ ಸಂಸ್ಥಾನ’ ಎನ್ನುವ ರಾಜಮನೆತನ ಈ ಗ್ರಾಮಗಳಲ್ಲಿ ಹೆಚ್ಚು ಪ್ರಭಾವ ಹೊಂದಿದೆ. ಈ ಬಾರಿ ಚುನಾವಣಾ ಅಧಿಕಾರಿಗಳು ಈ ಮನೆತನದವರಿಂದ ಗ್ರಾಮಸ್ಥರನ್ನು ಒಪ್ಪಿಸಿದ್ದಾರೆ. ಗ್ರಾಮಸ್ಥರು ಐದು ತಾಸುಗಳ ದಿಗ್ಬಂದನ ಹೇರಿದ ನಂತರ ಆ ಮನೆತನದವರು ಬಂದು ಮನವೊಲಿಸಿದ್ದಾರೆ.

ಕಡದರಗಡ್ಡಿ ಗ್ರಾಮದ ಸೇತುವೆ ಸಂಬಂಧಿಸಿದಂತೆ ಕರದಗಡ್ಡಿ ಜನರಿಗೆ ಇದುವರೆಗೂ ಸ್ಪಂದನೆ ದೊರೆತಿಲ್ಲ. ಈ ನಿಟ್ಟಿನಲ್ಲಿ ನಾವು ಸಹ ಗ್ರಾಮದ ಒಳಿತಿಗೆ ನಡೆಯುವ ಹೋರಾಟಕ್ಕೆ ಮಣೆ ನೀಡಬೇಕಾಗುತ್ತದೆ. ಮತದಾನ ಬಹಿಷ್ಕಾರ ಮಾಡುವ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಅದಾಗಲೇ ಮೂವರು ಮತ ಹಾಕಿದ್ದರಿಂದ ಇತರರನ್ನು ಮನವೊಲಿಸಲಾಯಿತು. ಈ ಬಾರಿಯೂ ಸಮಸ್ಯೆ ಸ್ಪಂದಿಸದಿದ್ದರೆ ಹೋರಾಟ ಮುಂದುವರಿಯಲಿದೆ.
ರಾಜಾ ಅಮರೇಶ ನಾಯಕ, ಸಂಸ್ಥಾನಿಕ (ದೊರೆ), ಗುಂತುಗೋಳ, ಸಂಸ್ಥಾನ

ಅದಾಗಲೇ ಮೂವರು ಸರ್ಕಾರಿ ನೌಕರರು ಮತ ಚಲಾಯಿಸಿರುವ ಕಾರಣದಿಂದ ಗ್ರಾಮ ಮತದಾನಕ್ಕೆ ಬಹಿಷ್ಕಾರ ಹಾಕಿದೆ ಎಂದು ಪರಿಗಣನೆಯಾಗುವುದಿಲ್ಲ ಎಂದು ಹಿರಿಯರು ಗ್ರಾಮಸ್ಥರಿಗೆ ವಿವರಿಸಿದರು. ಅಲ್ಲದೆ, “ಈ ಬಾರಿ ಮತದಾನ ಮಾಡಿ. ಬೇಡಿಕೆಯನ್ನು ಜನಪ್ರತಿನಿಧಿಗಳು ಈಡೇರಿಸದೆ ಇದ್ದಲ್ಲಿ, ಮುಂದಿನ ಬಾರಿ ಮತದಾನಕ್ಕೆ ಬಹಿಷ್ಕಾರ ಹಾಕಬಹುದು,” ಎಂದು ಅಧಿಕಾರಿಗಳು ಜನರನ್ನು ಒಪ್ಪಿಸಿದ್ದಾರೆ. ಅಂತಿಮವಾಗ ಸಂಜೆ ವೇಳೆಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಿ, ೩೯೯ ಮತದಾರರ ಪೈಕಿ ೩೧೭ ಮಂದಿ ಮತದಾನ ಮಾಡಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More