ವಿಡಿಯೋ ಸ್ಟೋರಿ | ಮಕ್ಕಳ ಅಪಹರಣ ವದಂತಿ, ಪಾವಗಡದಲ್ಲಿ ಆದಿವಾಸಿಗಳಿಗೆ ಥಳಿತ

ಮಕ್ಕಳ ಅಪಹರಣದ ಕುರಿತ ಸುದ್ದಿ ಪಾವಗಡ ತಾಲೂಕಿನ ಜನರ ನೆಮ್ಮದಿ ಕೆಡಿಸಿದೆ. ತಾಲೂಕಿನ ವೈ ಎನ್ ಹೊಸಕೋಟೆ ಸೇರಿ ಹಲವು ಭಾಗಗಳಲ್ಲಿ ಜನ ಆತಂಕಕ್ಕೊಳಗಾಗಿದ್ದಾರೆ. ಕಳೆದ ಎರಡು-ಮೂರು ದಿನಗಳಿಂದ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ

ಪಾವಗಡ ತಾಲೂಕಿನಲ್ಲಿ ಮಕ್ಕಳನ್ನು ಅಪಹರಿಸಿದ್ದಾರೆಂಬ ಶಂಕೆಯ ಮೇಲೆ ಗ್ರಾಮಸ್ಥರು ಮತ್ತು ಪೊಲೀಸರು ಅಮಾಯಕ ಆದಿವಾಸಿಗಳನ್ನು ಹಿಡಿದು ಅಮಾನವೀಯವಾಗಿ ಥಳಿಸಿರುವ ಘಟನೆ ನಡೆದಿದೆ. ಕಳೆದ ರಾತ್ರಿ ಪಳವಳ್ಳಿಯಲ್ಲಿ ಕಪ್ಪು ಆದಿವಾಸಿ ಸಮುದಾಯದ ವ್ಯಕ್ತಿಯನ್ನು ಹಿಡಿದು, ಕೈ-ಕಾಲುಗಳನ್ನು ಹಗ್ಗದಿಂದ ಬಿಗಿದು ಹಿಗ್ಗಾಮುಗ್ಗ ಥಳಿಸಿರುವುದು ಮನ ಕಲಕುವಂತಿದೆ. ಇಂದು ಮುಂಜಾನೆ ದೊಡ್ಡಹಳ್ಳಿಯಲ್ಲಿ ಮತ್ತೊಬ್ಬ ಆದಿವಾಸಿ ವ್ಯಕ್ತಿ ಸಿಕ್ಕಿದ್ದು, ಆತನನ್ನು ಪೊಲೀಸರು ಲಾಠಿಗಳಿಂದ ಪಶುವಿಗೆ ಹೊಡೆದಂತೆ ಹೊಡೆದಿರುವುದು ನಾಗರಿಕ ಲೋಕ ತಲೆತಗ್ಗಿಸುವಂತೆ ಮಾಡಿದೆ. ಜನರು ಪ್ರಶ್ನೆ ಮಾಡುತ್ತಿದ್ದರೆ, ಆದಿವಾಸಿ ವ್ಯಕ್ತಿಗಳು ಮೌನವಾಗಿ ನರಳುತ್ತ ಶಬ್ದಗಳನ್ನು ಉಚ್ಚರಿಸುತ್ತಿರುವುದು ಕಂಡುಬಂತೇ ವಿನಾ ಅವರಿಗೆ ಕನ್ನಡ, ತೆಲುಗು ಭಾಷೆ ಅರ್ಥವಾಗುತ್ತಿದ್ದಂತೆ ಕಾಣಲಿಲ್ಲ.

ಇನ್ನು, ಸರಿಯಾದ ವಿಚಾರಣೆ ನಡೆಸಿ ಕಾನೂನು ಕ್ರಮ ಜರುಗಿಸಬೇಕಾಗಿದ್ದ ಪೊಲೀಸರು ಕೂಡ ಆದಿವಾಸಿಗಳ ಜೊತೆಗೆ ನಿರ್ದಯಿಯಾಗಿ ವರ್ತಿಸಿದ್ದಾರೆ. ಇದುವರೆಗೆ ಯಾವುದೇ ಹಳ್ಳಿಯಲ್ಲೂ ಮಕ್ಕಳು ಅಪಹರಣವಾಗಿರುವ ಬಗ್ಗೆ ವರದಿಯಾಗಿಲ್ಲ. ಪರಿಸ್ಥಿತಿ ಹೀಗಿದ್ದರೂ ಅಮಾನವೀಯವಾಗಿ ಹೊಡೆಯುವುದು ನ್ಯಾಯವೇ ಎಂಬ ಪ್ರಶ್ನೆ ಎದುರಾಗಿದೆ. ಈ ನಡುವೆ, ಆದಿವಾಸಿಗಳಿಗೆ ಥಳಿಸಿದ ಪೊಲೀಸರು ಕರ್ನಾಟಕದವರಲ್ಲ, ಆಂಧ್ರದವರು ಎನ್ನಲಾಗುತ್ತಿದೆ.

ಕಳೆದ ಕೆಲ ದಿನಗಳಿಂದ ಹಬ್ಬುತ್ತಲೇ ಇರುವ ಮಕ್ಕಳ ಅಪಹರಣದ ವದಂತಿ ಪಾವಗಡ ತಾಲೂಕಿನ ಜನರಲ್ಲಿ ಭೀತಿ ಮೂಡುವಂತೆ ಮಾಡಿದೆ. ಪೋಷಕರು ತಮ್ಮ ಮಕ್ಕಳ ರಕ್ಷಣೆಗೆ ಹಗಲಿರುಳೂ ಕಾಯುತ್ತಿದ್ದಾರೆ. ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆ ಸೇರಿದಂತೆ ಹಲವು ಭಾಗಗಳಲ್ಲಿ ಜನ ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ಎರಡು-ಮೂರು ದಿನಗಳಿಂದಲೂ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ಜನರು ಗುಂಪುಗುಂಪಾಗಿ ಬೆಟ್ಟಗುಡ್ಡಗಳ ಮೇಲೆ ಮಕ್ಕಳ ಕಳ್ಳರಿಗಾಗಿ ಹುಡುಕಾಡಿದ್ದಾರೆ.

ಈ ನಡುವೆಯೇ, ಪಾವಗಡದಲ್ಲಿ ಯುವತಿಯೊಬ್ಬಳು ಕಾಣೆಯಾಗಿರುವುದು ಜನರ ಭೀತಿ ಹೆಚ್ಚಿಸಿದೆ. ಈಗಿನ ಮಕ್ಕಳ ಕಳವು ಭೀತಿಯ ಹಿನ್ನೆಲೆಯಲ್ಲಿ, ೧೯೮೪-೮೫ರ ಆಸುಪಾಸಿನಲ್ಲಿ ತೋಳಗಳು ಮಕ್ಕಳನ್ನು ಅಪಹರಿಸಿ ತಿಂದುಹಾಕುತ್ತಿದ್ದ ಘಟನೆಯ ಕುರಿತು ಜನ ನೆನಪಿಸಿಕೊಂಡಿದ್ದಾರೆ. ಹೀಗಿರುವಾಗಲೇ ಮತ್ತೊಮ್ಮೆ ಅಂತಹದೇ ವದಂತಿ ಚಾಲ್ತಿಗೆ ಬಂದು ಜನರ ನೆಮ್ಮದಿ ಕೆಡಿಸಿದೆ. ಪಾವಗಡ ತಾಲೂಕಿನಲ್ಲಿ ತೋಳಗಳು ಮಕ್ಕಳನ್ನು ಅಪಹರಣ ಮಾಡುತ್ತವೆ ಎಂಬ ಸುದ್ದಿ ಹರಡಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ೩೨ ವರ್ಷಗಳ ಹಿಂದೆ ನಡೆದ ಈ ಅವಾಂತರ ನೆನೆದರೆ ಪಾವಗಡದ ಮಂದಿ ಈಗಲೂ ಬೆಚ್ಚುತ್ತಾರೆ. ತೋಳಗಳು ಮೇಕೆ, ಕುರಿಗಳನ್ನು ತಿನ್ನುತ್ತಿದ್ದವೇ ಹೊರತು ಮನುಷ್ಯರ ಮೇಲೆ ದಾಳಿ ಮಾಡಿದ ನಿದರ್ಶನಗಳೇ ಇಲ್ಲ. ಆದರೂ ತೋಳ ಮಕ್ಕಳನ್ನು ಹೊತ್ತೊಯ್ದು ತಿಂದುಹಾಕುತ್ತದೆ ಎಂಬ ಕಾರಣಕ್ಕೆ ಪೋಷಕರು ಮಕ್ಕಳನ್ನು ತಮ್ಮ ಜೊತೆಯೇ ಹೊಲಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅಂದಿನ ರಾಜ್ಯ ಸರ್ಕಾರ ತೋಳದ ಕಾರ್ಯಾಚರಣೆಗೆ ಹೆಲಿಕಾಪ್ಟರ್‌ ಬಳಸಿತ್ತು. ಎರಡು ಹೆಲಿಕಾಪ್ಟರ್‌ಗಳು ಬೆಟ್ಟಗುಡ್ಡಗಳ ಮೇಲೆ ಹಾರಾಟ ನಡೆಸಿ ಶಬ್ಬ ಮಾಡುತ್ತಿದ್ದಂತೆ ಕರಡಿಗಳು, ನರಿಗಳು, ಕಾಡುಹಂದಿಗಳು ಹೊರಬಂದಾಗ ಜನ ಕೇಕೆ ಹಾಕುತ್ತ ಅವುಗಳನ್ನು ಓಡಿಸಿದ ದೃಶ್ಯಗಳು ಮರೆಯುವಂತಿಲ್ಲ. ಪ್ರಾಣಿಗಳು ಬಂದಾಗ ವಾಕಿಟಾಕಿಗಳ ಮೂಲಕ ಪೊಲೀಸರಿಗೂ, ಪೊಲೀಸ್ ಕಂಟ್ರೋಲ್ ರೂಂಗಳಿಗೂ ಮಾಹಿತಿ ನೀಡಲಾಗುತ್ತಿತ್ತು. ತೋಳಗಳನ್ನು ಕೊಂದುಹಾಕುವ ಕೆಲಸವೂ ನಡೆಯಿತು. ಅದಾದ ಮೇಲೆ ಮತ್ತೆ ಮಕ್ಕಳ ಅಪಹರಣದ ಸುದ್ದಿ ಕೇಳಿರಲಿಲ್ಲ. ಆದರೆ ಈಗ ಅಂತಹದ್ದೇ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ಈ ಸುದ್ದಿಯಿಂದ ಪಾವಗಡ ತಾಲೂಕಿನ ಜನ ಮತ್ತೆ ಆತಂಕಕ್ಕೊಳಗಾಗಿದ್ದಾರೆ. ಮಕ್ಕಳನ್ನು ಅಪಹರಣ ಮಾಡಿ ಅಂಗಾಂಗಗಳನ್ನು ಕದಿಯುತ್ತಾರೆ, ಆಂಧ್ರದ ಗಡಿಭಾಗದ ಹಳ್ಳಿಗಳಲ್ಲಿ ಅಪರಿಚಿತರು ಗ್ರಾಮಕ್ಕೆ ಬರದಂತೆ ಕಾವಲು ಕಾಯುತ್ತಿದ್ದಾರೆ ಎಂಬಿತ್ಯಾದಿ ಸುದ್ದಿಗಳು, ಫೋಟೊಗಳು ವೈರಲ್ ಆಗಿವೆ. ಇದೇ ಸಮಯಕ್ಕೆ, ಪೊನ್ನಸಮುದ್ರದ ದೊಡ್ಡಹಳ್ಳಿಯಲ್ಲಿ ಬಹಿರ್ದೆಸೆಗೆ ಹೋಗಿದ್ದ ಯುವತಿ ನಾಪತ್ತೆಯಾಗಿರುವುದು ಜನರು ಆತಂಕಗೊಳ್ಳಲು ಕಾರಣವಾಗಿದೆ.

ಪಳವಳ್ಳಿ, ಪನ್ನಸಮುದ್ರ, ದೊಡ್ಡಹಳ್ಳಿ, ಕೆ ರಾಂಪುರ ಸೇರಿದಂತೆ ಗಡಿಭಾಗದ ಹಳ್ಳಿಗಳಲ್ಲಿ ಹೆಚ್ಚಿನ ವದಂತಿ ಹಬ್ಬುತ್ತಿದೆ. “ಕಾಮನದುರ್ಗದ ಬೆಟ್ಟಕ್ಕೆ ಆದಿವಾಸಿಗಳು ಬಂದಿದ್ದಾರೆ. ಅವರು ಬೆತ್ತಲೆಯಾಗಿ ಓಡಾಡುತ್ತಾರೆ. ಮಕ್ಕಳ ಅಪಹರಣಕ್ಕೆ ಅವರೇ ಕಾರಣ,” ಎಂಬ ಸುದ್ದಿಯೂ ಹರಿದಾಡುತ್ತಿದೆ. ದೊಡ್ಡಹಳ್ಳಿ ಬೆಟ್ಟದಲ್ಲಿ ಮಕ್ಕಳ ಅಪಹರಣಕಾರರು ಅಡಗಿ ಕುಳಿತಿದ್ದಾರೆ ಎಂದು ನೂರಾರು ಜನ ಬೆಟ್ಟವನ್ನು ಶೋಧ ಮಾಡುತ್ತಿದ್ದಾರೆ. ಟ್ರಾಕ್ಟರ್‌ನಲ್ಲಿ ತೆರಳಿರುವ ಜನತೆ ಬೆಟ್ಟದಲ್ಲಿ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ. ಈ ಸುದ್ದಿಯಿಂದ ಎಚ್ಚೆತ್ತಿರುವ ಪೊಲೀಸ್ ಇಲಾಖೆ, ಗ್ರಾಮಗಳಲ್ಲಿ ಡಂಗೂರ ಹೊಡೆಸಿ ಸುಳ್ಳುವದಂತಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದೆ.

ಪೆನುಗೊಂಡ ಭಾಗದ ಬೆಟ್ಟಗುಡ್ಡಗಳಲ್ಲಿ ಕೆಲವರು ವಾಸವಾಗಿದ್ದು, ಅವರು ಆದಿವಾಸಿಗಳು ಎಂದು ಹೇಳಲಾಗುತ್ತಿದೆ. ಅವರು ಮಕ್ಕಳನ್ನು ತಿನ್ನುತ್ತಾರೆಂಬ ವದಂತಿಯೂ ಹರಡಿದೆ. ಪೆನುಗೊಂಡದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿಯೂ ಇದೆ ಎಂದು ವೆಂಕಟಾಪುರ ಗ್ರಾಮದ ಎಸ್ ಶಿವಣ್ಣ ಹೇಳುತ್ತಾರೆ. ಆಂಧ್ರಪ್ರದೇಶದಿಂದ ನಿಧಿಶೋಧ ಮಾಡುವವರು ಬಂದು ಹಗಲೆಲ್ಲ ಬೆಟ್ಟಗುಡ್ಡಗಳಲ್ಲಿ ವಾಸವಿದ್ದು, ರಾತ್ರಿ ವೇಳೆ ನಿಧಿಶೋಧಕ್ಕೆ ಇಳಿಯುತ್ತಾರೆ. ಇವರ ಜೊತೆಗೆ ಕಳ್ಳತನ ಮಾಡುವವರೂ ಸೇರಿಕೊಂಡಿದ್ದಾರೆ. ಪಳವಳ್ಳಿಯಲ್ಲಿ ಓರ್ವನನ್ನು ಹಿಡಿದು ಗ್ರಾಮಸ್ಥರು ಥಳಿಸಿರುವ ಸುದ್ದಿಯೂ ಇದೆ. ಮಹಿಳೆಯೊಬ್ಬರಿಂದ ಸರವನ್ನು ಕಿತ್ತುಕೊಂಡು ಹೋಗುತ್ತಿದ್ದಾಗ ಆತನನ್ನು ಥಳಿಸಿದ್ದಾರೆ... ಮುಂತಾಗಿ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಮೋಜಿಗಾಗಿ ಸೃಷ್ಟಿಸಿದ ವಾಟ್ಸಾಪ್ ಮೆಸೇಜು ಮೂವರ ಜೀವ ತೆಗೆಯಿತು!

ಆದರೆ, ‘ದಿ ಸ್ಟೇಟ್‌’ ಜೊತೆ ಮಾತನಾಡಿದ ಪಾವಗಡ ಸರ್ಕಲ್ ಇನ್ಸ್‌ಪೆಕ್ಟರ್‌ ಮಹೇಶ್ ಅವರು, ಮಕ್ಕಳ ಅಪಹರಣವನ್ನು ಸಂಪೂರ್ಣವಾಗಿ ತಳ್ಳಿಹಾಕಿದರು. “ಮಕ್ಕಳ ಅಪಹರಣ ಸುಳ್ಳು ಸುದ್ದಿ. ತೆಲುಗಿನಲ್ಲಿ ಬಂದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಹಿಂದೆ ಯಾವಾಗಲೋ ಆಂಧ್ರಪ್ರದೇಶದಲ್ಲಿ ನಡೆದಿರುವ ಘಟನೆ ಇರಬಹುದು, ಇಲ್ಲಿಗೆ ಸಂಬಂಧಿಸಿದ್ದಲ್ಲ. ಇಲ್ಲಿ ಆ ರೀತಿಯ ಘಟನೆಯೇ ನಡೆದಿಲ್ಲ. ಆದರೆ, ದೊಡ್ಡಹಳ್ಳಿಯಲ್ಲಿ ಯುವತಿಯೊಬ್ಬಳು ಬಹಿರ್ದೆಸೆಗೆ ಹೋದಾಗ ನಾಪತ್ತೆಯಾಗಿದ್ದಾಳೆ. ಆಕೆ ಪ್ರಿಯಕರನ ಜೊತೆ ಓಡಿಹೋಗಿರಬಹುದು. ಅದು ಬಿಟ್ಟರೆ ಯಾವುದೇ ಘಟನೆಗಳು ನಡೆದಿಲ್ಲ. ಈ ಭಾಗದ ಹಳ್ಳಿಗಳಲ್ಲಿ ಡಂಗೂರ ಹೊಡೆಸಲಾಗಿದ್ದು, ವದಂತಿಗಳಿಗೆ ಕಿವಿಗೊಡಬಾರದು, ಜನ ಭಯಬೀಳುವಂಥದ್ದು ಏನೂ ಇಲ್ಲ ಎಂದು ಮನವಿ ಮಾಡಿದ್ದೇವೆ,” ಎಂದು ಮಹೇಶ್ ಅವರು ಸ್ಪಷ್ಟಪಡಿಸಿದರು.

ಒಟ್ಟಾರೆ, ಯುವತಿಯೊಬ್ಬಳು ಕಾಣೆಯಾಗಿರುವ ಪ್ರಕರಣದಿಂದ ದೊಡ್ಡಹಳ್ಳಿ ಗ್ರಾಮಸ್ಥರು ಬೆಟ್ಟವನ್ನೂ ಬಿಡದೆ ಶೋಧಿಸಿರುವುದು ಸತ್ಯ. ಪೊಲೀಸರು ಎಲ್ಲ ಹಳ್ಳಿಗಳಿಗೆ ಹೋಗಿ ಮಾಹಿತಿ ಕಲೆಹಾಕಿದ್ದು, ಅಂತಹ ಯಾವುದೇ ಪ್ರಕರಣ ನಡೆದಿಲ್ಲ ಎಂಬು ಬರಿಗೈಯಲ್ಲಿ ಹಿಂದಿರುಗಿದ್ದಾರೆ. ಯಾರೋ ಕೆಲವರು ಹಬ್ಬಿಸಿದ ಸುಳ್ಳು ವದಂತಿಯಿಂದ ಜನತೆ ಭೀತಿಗೊಳ್ಳದೆ ನೆಮ್ಮದಿಯಿಂದ ಇರಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More