ಮಕ್ಕಳ ನಂತರ ಈಗ ಮಹಿಳೆ, ವೃದ್ಧರ ಅಪಹರಣ ವದಂತಿ; ಆಂಧ್ರ-ಕರ್ನಾಟಕ ಗಡೀಲಿ ಆತಂಕ

ಅಪರಿಚಿತರ ದಾಳಿಯಿಂದ ಭೀತಿಗೊಳಗಾಗಿರುವ ಗ್ರಾಮಸ್ಥರು ಊರು ಬಿಟ್ಟು ಎಲ್ಲಿಗೂ ಹೋಗುತ್ತಿಲ್ಲ. ಮನೆಯಲ್ಲೇ ಉಳಿದುಕೊಂಡು ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಂಧ್ರ-ಕರ್ನಾಟಕ ಗಡಿಭಾಗದ ಹಳ್ಳಿಗಳಲ್ಲಿ ಇಂತಹ ಸುದ್ದಿ ಹರಡಲು ಕಾರಣವೇನು ಎಂಬುದು ನಿಗೂಢ

ಪಾವಗಡ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಗ್ರಾಮಗಳಲ್ಲೂ ಒಂಟಿ ಮಹಿಳೆಯರು ಮತ್ತು ವೃದ್ದರನ್ನು ಹೊತ್ತೊಯ್ಯಲು ಯತ್ನಿಸಿರುವ ಘಟನೆಗಳು ನಡೆದಿರುವುದು ಜನರನ್ನು ಮತ್ತಷ್ಟು ಭೀತಿಗೊಳ್ಳುವಂತೆ ಮಾಡಿದೆ. ಮಹಿಳೆಯರು ಊರಿನಿಂದ ಹೊಲಗಳಿಗೆ ಹೋಗಲು ಹೆದರಿಕೊಳ್ಳುತ್ತಿದ್ದಾರೆ. ಈವರೆಗೆ ಇದ್ದ ಮಕ್ಕಳ ಅಪಹರಣ ವದಂತಿ ಮರೆಯಾದ ನಂತರ ಈಗ ಮತ್ತೊಂದು ಸಂಕಟ ಎದುರಾಗಿದೆ. ಆದರೆ ಜನರು ಆರೋಪಿಸುತ್ತಿರುವಂತೆ ಇದು ನೈಜ ಕೃತ್ಯವೇ ಅಥವಾ ಕಿಡಿಗೇಡಿಗಳ ಸುಳ್ಳು ಸುದ್ದಿಯೇ ಎಂಬುದು ಸ್ಪಷ್ಟವಾಗಿಲ್ಲ.

ಪಾವಗಡ ತಾಲೂಕಿನ ಗುಜ್ಜನಡು ಗ್ರಾಮದ ವೃದ್ದರೊಬ್ಬರು ಮೇ ೧೬ರ ರಾತ್ರಿ ಊರ ಹೊರವಲಯದ ರಸ್ತೆ ಬದಿ ಬಹಿರ್ದೆಸೆಗೆ ಹೋಗಿದ್ದಾಗ ಆಗಂತುಕರು ಅವರನ್ನು ಸ್ವಲ್ಪದೂರ ಹೊತ್ತೊಯ್ದಿದ್ದಾರೆ. ಆ ವೃದ್ಧ ಕೂಗಿಕೊಂಡದ್ದರಿಂದ ಗ್ರಾಮಸ್ಥರು ಸ್ಥಳಕ್ಕೆ ಬಂದಿದ್ದಾರೆ. ಆಗ ಆಗಂತುಕರು ವೃದ್ಧನನ್ನು ಬಿಟ್ಟು ಪರಾರಿಯಾಗಿದ್ದಾರೆ. ನಾಲ್ವರು ಈ ವೃದ್ಧನನ್ನು ಹೊತ್ತೊಯ್ಯಲು ಕಾರಣವೇನು? ಹೊತ್ತೊಯ್ದವರು ಯಾರು ಎಂಬುದು ತಿಳಿದುಬಂದಿಲ್ಲ. ಗ್ರಾಮಸ್ಥರು ಹೇಳುವಂತೆ, "ಆಗಂತುಕರನ್ನು ಅಟ್ಟಿಸಿಕೊಂಡು ಹೋದಾಗ ಕತ್ತಲಲ್ಲಿ ಕಣ್ಮರೆಯಾದರು.’’ ಆದರೆ ವಯಸ್ಸಾದ ವ್ಯಕ್ತಿಯನ್ನು ಹೊತ್ತುಕೊಂಡು ಹೋಗಲು ಕಾರಣವೇನು ಎಂಬುದು ತಿಳಿದಿಲ್ಲ. ಇದರಿಂದ ಗ್ರಾಮದಿಂದ ಒಬ್ಬೊಬ್ಬರೇ ಹೊರಹೋಗಲು ಭಯ ಕಾಡುತ್ತಿದೆ ಎನ್ನುತ್ತಾರವರು.

ತಾಲೂಕಿನ ವಿರುಪಸಮುದ್ರದಲ್ಲಿ ಚೂರಿ ಹೊಂದಿದ್ದ ಮಹಿಳೆಯೊಬ್ಬರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ಕಂಡುಬಂದರೆ ಜನ ಶಂಕಾಸ್ಪದವಾಗಿ ನೋಡುವುದು ಮಾಮೂಲಿಯಾಗಿದೆ. ಅಷ್ಟೇ ಅಲ್ಲ, ಮಕ್ಕಳನ್ನು ಕಾಯುವುದು ಒಂದು ಕಡೆಯಾದರೆ ಮತ್ತೆ ಒಬ್ಬೊಬ್ಬರೇ ಹೊರಹೋಗಲು ಹೆದರುವಂತಹ ಪರಿಸ್ಥಿತಿ ಬಂದಿದೆ. ಪೊಲೀಸರು ಆತಂಕಿತ ಗ್ರಾಮಗಳಲ್ಲಿ ಮಫ್ತಿಯಲ್ಲಿ ಓಡಾಡುತ್ತ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಪೋಲೀಸರು ಮಕ್ಕಳ ಅಪಹರಣ ಮತ್ತು ಆದಿವಾಸಿಗಳ ದಾಳಿಯನ್ನು ನಿರಾಕರಿಸಿದ್ದರೂ ಜನರ ಭಯ ಮಾತ್ರ ದೂರವಾಗಿಲ್ಲ.

ಇದೇ ವೇಳೆ, ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನ ಪೇಲಬಂಡೆ ಗ್ರಾಮದ ಸುತ್ತಮುತ್ತ ಒಬ್ಬಂಟಿ ಮಹಿಳೆಯರ ಮೇಲೆ ದಾಳಿ ನಡೆದಿರುವ ಪ್ರಕರಣಗಳು ವರದಿಯಾಗಿವೆ. ಪೇಲಬಂಡೆ ಸಮೀಪದ ತೋಟದ ಬೇಲಿಸಾಲಿನಲ್ಲಿ ಮಹಿಳೆಯೊಬ್ಬರು ಸೌದೆಯನ್ನು ಸಂಗ್ರಹಿಸಿ ಹೊರೆ ಕಟ್ಟಿದ್ದರು. ಆ ಹೊರೆಯನ್ನು ಹೊರಿಸಲು ಯಾರೂ ಕಾಣಲಿಲ್ಲ. ಆಗ ಕಾರಿನಲ್ಲಿ ಬಂದವರಲ್ಲಿ ಒಬ್ಬಾತ ಮಹಿಳೆಯಂತೆ ಸೀರೆಯನ್ನು ಧರಿಸಿದ್ದ. ಸೌದೆ ಸಂಗ್ರಹಿಸಿದ್ದ ಮಹಿಳೆ ಆ ಮಹಿಳಾ ವೇಷದಲ್ಲಿದ್ದ ಆತನನ್ನು ಕೂಗಿ ಕರೆದು ಸೌದೆಯ ಹೊರೆಯನ್ನು ತಲೆಯ ಮೇಲೆ ಹೊರಿಸುವಂತೆ ಕೇಳಿಕೊಂಡಿದ್ದಾರೆ. ಅಲ್ಲಿಗೆ ಬಂದ ಮಹಿಳಾ ವೇಷಧಾರಿ ಪುರುಷ ಮಹಿಳೆಗೆ ಚಾಕು ತೋರಿಸಿ ಪೊದೆಯೊಂದರ ಮರೆಗೆ ಕರೆದುಕೊಂಡು ಹೋಗಿದ್ದಾನೆ. ಮಹಿಳೆ ಕೂಗಿಕೊಂಡ ಪರಿಣಾಮ ಅದೇ ದಾರಿಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿ ಮಹಿಳೆಯ ಸಹಾಯಕ್ಕೆ ಬರುತ್ತಿದ್ದಂತೆ, ಅಪರಿಚಿತರು ಕಾರಿನಲ್ಲಿ ಪರಾರಿಯಾಗಿದ್ದಾರೆ. ಇದರಿಂದ ಭಯಗೊಂಡಿರುವ ಗ್ರಾಮದ ಮಹಿಳೆಯರು ಒಬ್ಬಂಟಿಯಾಗಿ ಹೊಲಗಳಿಗೆ ಹೋಗಲು ಹೆದರಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಮಕ್ಕಳ ಅಪಹರಣ ವದಂತಿ, ಪಾವಗಡದಲ್ಲಿ ಆದಿವಾಸಿಗಳಿಗೆ ಥಳಿತ

ಅಪರಿಚಿತರ ದಾಳಿಯಿಂದ ಭೀತಿಗೊಳಗಾಗಿರುವ ಮಂದಿ ಮನೆಯಲ್ಲೇ ಉಳಿದು ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಂಧ್ರ-ಕರ್ನಾಟಕ ಗಡಿಭಾಗದ ಹಳ್ಳಿಗಳಲ್ಲಿ ಇಂತಹ ಸುದ್ದಿ ಹರಡಲು ಕಾರಣವೇನು? ನಿಜವಾಗಿಯೂ ಅಪಹರಣ ಮಾಡುವ ಪ್ರಯತ್ನ ನಡೆದಿವೆಯೇ ಅಥವಾ ಸುಳ್ಳು ಸುದ್ದಿಗಳೇ ಎಂಬುದು ಇನ್ನಷ್ಟೇ ಸ್ಪಷ್ಟ ಆಗಬೇಕಿದೆ. ಇದು ಪೊಲೀಸರಿಗಂತೂ ತಲೆನೋವಿನ ಸಂಗತಿಯಾಗಿದೆ.

ಚಿತ್ರ: ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ವಿ ಗೋಪಿನಾಥ್

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More