ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ನಕಲಿ ಪೌರಕಾರ್ಮಿಕರ ಹಾವಳಿ!

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರಲ್ಲಿನ ಬಹುತೇಕರು ರಸ್ತೆ ಗೂಡಿಸುವುದು, ಚರಂಡಿ ಸ್ವಚ್ಛಗೊಳಿಸುವುದನ್ನು ಬಿಟ್ಟು ರಾಜಕಾರಣಿಗಳ ಮನೆಗಳಲ್ಲಿ ಕಸ ಗುಡಿಸುತ್ತಾರೆ ಎನ್ನುವ ಆರೋಪವಿದೆ. ಆದರೆ ಪಾಲಿಕೆ ಸದಸ್ಯರು ಈ ಆರೋಪವನ್ನು ನಿರಾಕರಿಸಿದ್ದಾರೆ

ಮನೆಯ ಮುಂದೆ, ಬೀದಿ ಬದಿಗಳಲ್ಲಿ ಕಸದ ರಾಶಿ ಬಿದ್ದಾಗ ಪೌರಕಾರ್ಮಿಕರು ಸರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವ ಆರೋಪ ವ್ಯಕ್ತವಾಗುತ್ತದೆ. ಆದರೆ, ಪೌರಕಾರ್ಮಿಕರಿಗೆ ಸರಿಯಾಗಿ ವೇತನ ಸಿಗದೆ ಇರುವುದು ಮತ್ತು ಗುತ್ತಿಗೆ ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದು ಮುಂದುವರಿದೇ ಇದೆ. ರಾಜ್ಯದ ಪ್ರಮುಖ ಹಾಗೂ ದೊಡ್ಡ ನಗರಗಳಲ್ಲಿ ಒಂದಾಗಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲೂ ಪೌರಕಾರ್ಮಿಕರಿಗೆ ಈ ಸಮಸ್ಯೆ ಕಾಡುತ್ತಲೇ ಇದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರಲ್ಲಿನ ಬಹುತೇಕರು ರಸ್ತೆ ಗುಡಿಸುವುದು, ಚರಂಡಿ ಸ್ವಚ್ಛಗೊಳಿಸುವುದನ್ನು ಬಿಟ್ಟು ರಾಜಕಾರಣಿಗಳ ಮನೆಗಳಲ್ಲಿ ಕಸ ಗುಡಿಸುತ್ತಾರೆ ಎನ್ನುವ ಆರೋಪವಿದೆ. ಸಂಸದರೊಬ್ಬರ ಸಹೋದರ, ಪಾಲಿಕೆಯ ಸದಸ್ಯರಿಬ್ಬರು, ಗುತ್ತಿಗೆದಾರರು ಹಾಗೂ ಅಧಿಕಾರಿಯೊಬ್ಬರು ತಮ್ಮ ಮನೆಯ ಕೆಲಸಗಳಿಗೆ ಪೌರಕಾರ್ಮಿಕರನ್ನು ಬಲವಂತವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಜಿಲ್ಲಾ ಎಸ್‌ಸಿ, ಎಸ್‌ಟಿ ಪೌರಕಾರ್ಮಿಕರು ಮತ್ತು ನೌಕರರ ಧಾರವಾಡ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ ಹಾಗೂ ಗುರುನಾಥ ಉಳ್ಳಿಕಾಶಿ ದಾಖಲೆ ಸಮೇತ ಆರೋಪಿಸಿದ್ದಾರೆ.

ಗುತ್ತಿಗೆ ಪೌರಕಾರ್ಮಿಕರ ಪಟ್ಟಿಯಲ್ಲಿ ಪಾಲಿಕೆಯ ಸದಸ್ಯರ ಹಾಗೂ ಗುತ್ತಿಗೆದಾರರ ಸಂಬಂಧಿಗಳು, ಆಟೋ ರಿಕ್ಷಾ ಚಾಲಕರು, ಖಾಸಗಿ ಉದ್ಯೋಗಿಗಳು, ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವವರು, ಕಾಲೇಜು ವಿದ್ಯಾರ್ಥಿಗಳು, ಬ್ಯಾಂಕ್ ನೌಕರರ ಹೆಸರುಗಳಿವೆ ಎಂದು, ತಾವು ಪತ್ತೆ ಮಾಡಿದ ನಕಲಿ ಪೌರಕಾರ್ಮಿಕರ ಹೆಸರುಗಳುಳ್ಳ ದಾಖಲೆಗಳ ವಾರ್ಡ್‌ವಾರು ಪಟ್ಟಿಗಳನ್ನು ಅವರು ಬಹಿರಂಗಗೊಳಿಸಿದ್ದಾರೆ. “ಇಂತಹ ನಕಲಿ ಪೌರಕಾರ್ಮಿಕರನ್ನು ಎಸ್‌ಡಬ್ಲ್ಯೂಎಂ, ಪಾಲಿಕೆಯ ವಲಯಾಧಿಕಾರಿಗಳು ರಕ್ಷಣೆ ಮಾಡುತ್ತಿದ್ದಾರೆ. ಇದರಿಂದ ನಿಜವಾದ ಪೌರಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ,” ಎಂದು ಧಾರವಾಡ ಜಿಲ್ಲಾ ಎಸ್‌ಸಿ, ಎಸ್‌ಟಿ ಪೌರ ಕಾರ್ಮಿಕರ ಮತ್ತು ನೌಕರರ ಸಂಘ ಆರೋಪಿಸಿದೆ.

ನನ್ನ ಮೇಲೆ ಪೌರಕಾರ್ಮಿಕರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಷಯ. ನಾನು ಯಾವ ಪೌರಕಾರ್ಮಿಕರನ್ನೂ ಮನೆಗೆಲಸಕ್ಕೆ ನೇಮಿಸಿಕೊಂಡಿಲ್ಲ. ನನ್ನ ಮೇಲಿನ ಆರೋಪ ಸುಳ್ಳು ಎಂದು ಪೌರಕಾರ್ಮಿಕರ ಸಂಘಟನೆ ಒಪ್ಪಿಕೊಳ್ಳುವವರೆಗೂ ನಾನು ಹೋರಾಟ ಮಾಡುತ್ತೇನೆ.
ಶಿವಾನಂದ ಮುತ್ತಣ್ಣವರ, ಪಾಲಿಕೆ ಸದಸ್ಯ

ರಾಜ್ಯ ಸರ್ಕಾರವು ಪೌರಕಾರ್ಮಿಕರ ನೇರ ನೇಮಕಾತಿ, ನೇರ ವೇತನ ಜಾರಿಗೊಳಿಸಿದೆ. 244 ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆದರೆ, ಪೌರಕಾರ್ಮಿಕರ ನೇರ ನೇಮಕಾತಿಗೆ ಎಲ್ಲ ನಕಲಿ ಪೌರಕಾರ್ಮಿಕರು ಮೀಸಲಾತಿವಾರು ಅರ್ಜಿ ಸಲ್ಲಿಸಿದ್ದಾರೆ. ನಕಲಿ ಪೌರಕಾರ್ಮಿಕರ ಬಗ್ಗೆ ಪಟ್ಟಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದರೂ ಅವರನ್ನು ಕೆಲಸದಿಂದ ತೆಗೆದುಹಾಕುತ್ತಿಲ್ಲ. ನಕಲಿ ಪೌರಕಾರ್ಮಿಕರನ್ನು ಪತ್ತೆಮಾಡುವ ಕಾರ್ಯ ಮಾಡುತ್ತಿಲ್ಲ. ಮಹಿಳಾ ಪೌರಕಾರ್ಮಿಕರಾದ ದೇವಕ್ಕ ಬಾವಿಮನಿ, ಸಾಮವ್ವ ಮೊರಬದ, ಲಕ್ಷ್ಮೀ ಗುರಣ್ಣವರ, ಲಕ್ಷ್ಮೀ ಬಳ್ಳಾರಿ ಅವರು ಪಾಲಿಕೆ ಸದಸ್ಯರಾದ ಶಿವಾನಂದ ಮುತ್ತಣ್ಣವರ, ವೀರಣ್ಣ ಸವಡಿ ಹಾಗೂ ಸಂಸದರ ಸಹೋದರ, ಗುತ್ತಿಗೆದಾರರ ಮನೆಯಲ್ಲಿ ಪ್ರತಿದಿನ ಕೆಲಸ ಬೆಳಿಗ್ಗೆ ಕೆಲಸ ಮಾಡುತ್ತಿರುವುದಾಗಿ ಹಾಗೂ ಪೌರಕಾರ್ಮಿಕ ಪ್ರಶಾಂತ ಮನಮುಟಗಿ ವಾರ್ಡ್ ಬಿಟ್ಟು ಬೇರೆ ಕಡೆ ಬಲವಂತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ವತಃ ನೊಂದ ಪೌರಕಾರ್ಮಿಕರೇ ‘ದಿ ಸ್ಟೇಟ್’ ಜೊತೆ ಮಾತನಾಡಿದ್ದಾರೆ.

2009ರಿಂದ ಇಲ್ಲಿಯವರೆಗೂ ಪಾಲಿಕೆಯಲ್ಲಿ 600ರಿಂದ 700 ನಕಲಿ ಪೌರಕಾರ್ಮಿಕರಿದ್ದು, ಈ ಕುರಿತು ಪಾಲಿಕೆ, ಜಿಲ್ಲಾಡಳಿತ, ಸಫಾಯಿ ಕರ್ಮಚಾರಿಗಳ ಆಯೋಗಕ್ಕೆ ಲಿಖಿತವಾಗಿ ಸಂಘಟನೆ ಹಲವು ಬಾರಿ ದೂರು ದಾಖಲಿಸಲಾಗಿದೆ. ಹೋರಾಟದ ಫಲವಾಗಿ 2014ರಲ್ಲಿ ಇಎಸ್ಐ ಇಲಾಖೆಯ ಅಧಿಕಾರಿಗಳು ವಾರ್ಡ್‌ವಾರು ಸಮೀಕ್ಷೆ ನಡೆಸಿ, ಪಾಲಿಕೆಯಲ್ಲಿ 175 ನಕಲಿ ಪೌರಕಾರ್ಮಿಕರು ಇರುವುದನ್ನು ಪತ್ತೆಮಾಡಿ, ಅವರನ್ನು ತೆಗೆದುಹಾಕುವಂತೆ ಪಾಲಿಕೆ ಆಯುಕ್ತರಿಗೆ ಎರಡು ಬಾರಿ ಪತ್ರ ಬರೆದಿದ್ದರು. ಅಲ್ಲದೆ, ಈ ಹಿಂದೆ ಪಾಲಿಕೆ ಆಯುಕ್ತರಾಗಿದ್ದ ಸಿದ್ದಲಿಂಗಯ್ಯ ಹಿರೇಮಠ ಸಹ ಇಬ್ಬರು ನಕಲಿ ಪೌರಕಾರ್ಮಿಕರನ್ನು ಪತ್ತೆ ಮಾಡಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತರಿಗೆ ಸೂಚಿಸಿದ್ದರು. ಆದರೆ, ಇದುವರೆಗೂ ಈ ಕುರಿತು ಯಾವುದೇ ಕ್ರಮ ಜರುಗಿಲ್ಲ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನನ್ನ ಮನೆಯಲ್ಲಿ ಯಾವುದೇ ಪೌರಕಾರ್ಮಿಕರನ್ನೂ ಕೆಲಸಕ್ಕೆ ನೇಮಿಸಿಕೊಂಡಿಲ್ಲ. ಬದಲಾಗಿ, ಕೆಲಸ ಮುಗಿದ ನಂತರ ಅವರು ನನ್ನ ಮನೆಗೆ ಕೈ, ಕಾಲು ಹಾಗೂ ಮುಖ ತೊಳೆದುಕೊಳ್ಳಲು ಬರುತ್ತಾರೆ. ಇದನ್ನೇ ಗಮನಿಸಿ, ಈ ರೀತಿಯ ಆರೋಪ ಮಾಡಲಾಗುತ್ತಿದೆ. ನನ್ನ ಮನೆಯ ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಅಗತ್ಯವಿದ್ದರೆ ಅದನ್ನು ಪರಿಶೀಲಿಸಬಹುದು.
ವೀರಣ್ಣ ಸವಡಿ, ಪಾಲಿಕೆ ಸದಸ್ಯ ಹಾಗೂ ಮಾಜಿ ಮೇಯರ್
ಇದನ್ನೂ ಓದಿ : ವಿಡಿಯೋ ಸ್ಟೋರಿ | ಪೌರಕಾರ್ಮಿಕರಿಂದ ಮಲ ಹೊರಿಸಿದ ವಿಜಯಪುರ ಮಹಾನಗರ ಪಾಲಿಕೆ

ಪುರುಷ ಪೌರಕಾರ್ಮಿಕರನ್ನು ಖಾಸಗಿ ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಅವರನ್ನು ನಿಗದಿತ ವಾರ್ಡ್ ಕೆಲಸ ಬಿಡಿಸಿ, ತಮಗೆ ಬೇಕಾದಲ್ಲಿ ಕೆಲಸಕ್ಕೆ ಏಕಾಏಕಿ ನೇಮಿಸುತ್ತಿದ್ದಾರೆ. ದೇಸಾಯಿ ಕ್ರಾಸ್, ಎಲ್ಐಸಿ ಕಚೇರಿ, ಕ್ಯಾನ್ಸರ್ ಆಸ್ಪತ್ರೆ, ಕಾಟನ್ ಕೌಂಟಿ ಕ್ಲಬ್, ಹೆಬಸೂರ ಭವನ, ವಾಸವಿ ಮಹಲ್ ಸೇರಿದಂತೆ ಇನ್ನಿತರೆಡೆ ಪ್ರತಿದಿನ ತ್ಯಾಜ್ಯ ಸಂಗ್ರಹಿಸಿ ಹೊರವಲಯಕ್ಕೆ ಸಾಗಿಸುವಂತೆ ಒತ್ತಾಯಪೂರ್ವಕವಾಗಿ ಅವರಿಂದ ಕೆಲಸ ತೆಗೆದುಕೊಂಡು ಪಾಲಿಕೆ ಸದಸ್ಯರು ಹಾಗೂ ಗುತ್ತಿಗೆದಾರರು ಲಾಭ ಪಡೆಯುತ್ತಿದ್ದಾರೆ. ಈ ವಿಷಯವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪೌರಕಾರ್ಮಿಕರು ತಿಳಿಸಿದರೂ ನಿರ್ಲಕ್ಷ್ಯ ತೋರಲಾಗುತ್ತಿದೆ. ಪೌರಕಾರ್ಮಿಕರಿಗೆ ಸುರಕ್ಷಾ ಸಾಧನಗಳು, ಕೆಲಸದ ಪರಿಕರಗಳನ್ನು ಒದಗಿಸುವಂತೆ ಕೇಳಿದರೆ ಅಮಾಯಕರ ಮುಖಾಂತರ ಸುಳ್ಳು ಪ್ರಕರಣ ದಾಖಲಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಪೌರಕಾರ್ಮಿಕರು ಮಾಡಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More