ದೇವದಾಸಿ ಮಕ್ಕಳಿಗೆ ಕಂಕಣ ಭಾಗ್ಯ; ಮಾದರಿಯಾದ ಕುಷ್ಟಗಿ ಸಾಮೂಹಿಕ ವಿವಾಹ

೨೧ನೇ ಶತಮಾನದಲ್ಲಿಯೂ ದೇವದಾಸಿಯರ ಬಗ್ಗೆ ಸಾಕಷ್ಟು ಮೌಢ್ಯಗಳಿವೆ. ಹಾಗಾಗಿಯೇ, ದೇವದಾಸಿಯರ ಮಕ್ಕಳು ಮುಖ್ಯವಾಹಿನಿಗೆ ಸಮನಾಗಿ ಜೀವನ ನಡೆಸಲು ಅವಕಾಶ ಸಿಗುವುದು ಬಹಳ ಕಡಿಮೆ. ಆದರೆ ಸಾಮೂಹಿಕ ವಿವಾಹದಂತಹ ಕಾರ್ಯಕ್ರಮಗಳು ಭವಿಷ್ಯದ ಭರವಸೆ ಒದಗಿಸಿದೆ

“ನಮ್ಮ ಜೀವನದಾಗ ಇಂಥ ಭಾಗ್ಯ ಸಿಗುತ್ತ ಅಂತ ನಾನ್ ಅಂದ್ಕೋಂಡಿರಲಿಲ್ರಿ. ಇಷ್ಟೊಂದು ಸಡಗರದಾಗ ನಮ್ಮ ತಲಿಮ್ಯಾಲೆ ಅಕ್ಕಿಕಾಳ ಬೀಳ್ತವು ಅಂತ ನಾನೂ ಕನಸನ್ಯಾಗೂ ವಿಚಾರ ಮಾಡಿರಲಿಲ್ರಿ...” ಅಂತ ಹೆಮ್ಮೆಯಿಂದ ಹೇಳಿಕೊಂಡರು ಆ ವಧು. ತಲೆ ತುಂಬಾ ಹೂವು, ವಧುವಿನ ಪೋಷಾಕು. ಪಕ್ಕದಲ್ಲೇ ಬಿಳಿಯುಡುಗೆ ಉಟ್ಟು ಕುಳಿತ ವರ. ಇನ್ನೇನು ಕೆಲವೇ ನಿಮಿಷಗಳಲ್ಲಿ ಪತಿಯಿಂದ ತಾಳಿ ಕಟ್ಟಿಸಿಕೊಳ್ಳುವ ತವಕ. ಈ ಸಂತೋಷದ ಗಳಿಗೆಯಲ್ಲಿ ಮಾತನಾಡುವಾಗ ವಧುವಿನ ಧ್ವನಿ ನಡುಗುತ್ತಿತ್ತು. ಜೀವನದಲ್ಲಿ ಮದುವೆ ಎನ್ನುವ ದಿನ ಬರುತ್ತದೆ ಎಂದು ಕನಸು ಕಾಣುವುದೂ ಕಷ್ಟವಾಗಿದ್ದ ಸಂದರ್ಭದಲ್ಲಿ ದಾಂಪತ್ಯದ ಜೀವನಕ್ಕೆ ಕಾಲಿಡುವ ಅವಕಾಶ ಸಿಕ್ಕ ಖುಷಿ ಅವರಲ್ಲಿತ್ತು.

“ನಾವು ತಪ್ಪು ಮಾಡದಿದ್ರೂ, ಸಂಪ್ರದಾಯದ ಆಚರಣೆ ಅನ್ನೋ ನೆಪದಾಗೋ ಅಥವಾ ಯಾವುದಾದ್ರು ಒತ್ತಡಕ್ ಮಣದೋ ನಮ್ಮವರಿಂದ ನಾವು ಕಷ್ಟ ಅನುಭವಿಸಿದಂಗಾಗಿತ್ತು. ಆದ್ರೆ ಇವತ್ ನಮಗಾಗಿ ಸಾಮೂಹಿಕ ಲಗ್ನ ಮಾಡೋ ಮೂಲಕ ಜೀವನದಾಗ ನಾವು ಎಲ್ಲರಂಗ ಮದುವಿ ಆಗಿ ಛಂದಂಗ ಬಾಳೆ ಮಾಡಕೊಂದು ಅವಕಾಶ ಮಾಡಿಕೊಟ್ಟವರಿಗೆ ಪುಣ್ಯ ಬರ್ಲಿ,” ಎನ್ನುವುದು ಮತ್ತೊಬ್ಬ ವಧುವಿನ ಕೃತಜ್ಞತಾಪೂರ್ವಕ ಧ್ವನಿ.

ಸಾಮೂಹಿಕ ವಿವಾಹದಲ್ಲಿ ವಧುಗಳು ಇಷ್ಟೊಂದು ಭಾವಪರವಶವಾಗಲು ಕಾರಣವೂ ಇತ್ತು. ಮದುವೆಯೇ ಕನಸಾಗಿದ್ದ ಇವರ ಬಾಳಿಗೆ ಜೊತೆಗಾರರು ಸಿಕ್ಕಿದ್ದ. ಎಲ್ಲರಿಗೂ ಮದುವೆಯ ಬಗ್ಗೆ ನೂರಾರು ಕನಸುಗಳಿರುತ್ತವೆ ಮತ್ತು ಒಂದು ದಿನ ಇಷ್ಟಪಟ್ಟ ವ್ಯಕ್ತಿಯನ್ನು ಮದುವೆಯಾಗಿ ಸಂತೋಷದಿಂದ ಹೊಸಬಾಳಿಗೆ ಅಡಿಯಿಡುತ್ತಾರೆ. ಆದರೆ, ಈ ಸಾಮೂಹಿಕ ವಿವಾಹ ಮಹೋತ್ಸವ ಮಾತ್ರ ವಿಶೇಷವಾಗಿತ್ತು. ಸಂಪ್ರದಾಯ ಮತ್ತು ಸಾಮಾಜಿಕ ಆಚರಣೆಗಳ ಹೆಸರಿನಲ್ಲಿ ಬಾಲ್ಯದಲ್ಲಿಯೇ ಇವರ ಮದುವೆಯ ಕನಸನ್ನು ಮುರುಟಿಬಿಡಲಾಗುತ್ತಿತ್ತು. ‘ದೇವದಾಸಿ’ ಎನ್ನುವ ಹಣೆಪಟ್ಟಿ ಕಟ್ಟಿದ ಮೇಲೆ ಇವರ ಮದುವೆಯ ಕನಸೇ ಬತ್ತಿಹೋಗುತ್ತಿತ್ತು. ಮದುವೆಯಿಲ್ಲದೆ ಮಕ್ಕಳಾದರೆ ಅವರ ಜೀವನ ಮತ್ತೊಂದು ದೊಡ್ಡ ದುರಂತ. ದೇವದಾಸಿಯರು ಅಂದರೆ ಸಮಾಜ ಅವರನ್ನು ನೋಡುವ ದೃಷ್ಟಿಕೋನವೇ ಬೇರೆ. ಹೀಗಿರುವಾಗ ಮದುವೆ, ದಾಂಪತ್ಯ ಮೊದಲಾದ ಕನಸುಗಳು ಅವರಿಂದ ದೂರವೇ ಇರುತ್ತವೆ.

ಪ್ರೊ.ಬಿ ಕೃಷ್ಣಪ್ಪ ಅವರ 85ನೇ ಜನ್ಮದಿನದ ಅಂಗವಾಗಿ ಕುಷ್ಟಗಿಯ ತಾಲೂಕು ಕ್ರೀಡಾಂಗಣದಲ್ಲಿ ಇಂತಹ ಒಂದು ವಿಶಿಷ್ಟ ಮದುವೆಯ ಸಮಾರಂಭ ಆಯೋಜಿಸಲಾಗಿತ್ತು. ಮಾಜಿ ಸಚಿವ ಎಚ್ ಆಂಜನೇಯ ಮೊದಲಾದ ಗಣ್ಯರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಕಂಕಣ ಭಾಗ್ಯ ಪಡೆದುಕೊಂಡ ಬಹುತೇಕರು ದಲಿತ ಸಮುದಾಯದವರು ಎಂಬುದು ವಿಶೇಷ. ಸಮಾಜದ ಶೋಷಿತ ವರ್ಗಕ್ಕೆ ಸೇರಿದ ಸಮುದಾಯವೊಂದರ ಮಕ್ಕಳು ಮುಖ್ಯವಾಹಿನಿಗೆ ಸೇರುವ ಪ್ರಯತ್ನದ ಭಾಗವಾಗಿ ಕಂಡಿದೆ ಈ ಸಾಮೂಹಿಕ ವಿವಾಹ.

ನಾವು ತಪ್ಪು ಮಾಡದಿದ್ರೂ, ಸಂಪ್ರದಾಯದ ಆಚರಣೆ ಅನ್ನೋ ನೆಪದಾಗೋ ಅಥವಾ ಯಾವುದಾದ್ರೂ ಒತ್ತಡಕ್ ಮಣದೋ ನಮ್ಮವರಿಂದ ನಾವು ಕಷ್ಟ ಅನುಭವಿಸಿದಂಗಾಗಿತ್ತು. ಆದ್ರೆ, ಇವತ್ ನಮಗಾಗಿ ಸಾಮೂಹಿಕ ಲಗ್ನ ಮಾಡೋ ಮೂಲಕ ಜೀವನದಾಗ ನಾವು ಎಲ್ಲರಂಗ ಮದುವಿ ಆಗಿ ಛಂದಂಗ ಬಾಳೆ ಮಾಡಕೊಂದು ಅವಕಾಶ ಮಾಡಿಕೊಟ್ಟವರಿಗೆ ಪುಣ್ಯ ಬರ್ಲಿ.
ದಾಂಪತ್ಯಕ್ಕೆ ಕಾಲಿಟ್ಟ ವಧು
ಇದನ್ನೂ ಓದಿ : ವಿಡಿಯೋ ಸ್ಟೋರಿ | ಕಾಖಂಡಕಿ ಗ್ರಾಮದಲ್ಲಿ ದೇವದಾಸಿ ಮಹಿಳೆ ಕೆಂಚಮ್ಮನೇ ದೇವತೆ

ದೇವದಾಸಿ ಪದ್ಧತಿಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸರ್ಕಾರ, ಸಂಘ, ಸಂಸ್ಥೆಗಳು ಸಾಕಷ್ಟು ಪ್ರಯತ್ನ ಮಾಡುತ್ತಲೇ ಇವೆ. ಆದರೆ, ಈಗಾಗಲೇ ದೇವದಾಸಿಯರಾಗಿರುವವರ ಮಕ್ಕಳ ಬದುಕು ದುಸ್ತರವಾಗಿಯೇ ಇದೆ. ದೇವದಾಸಿಯರ ಹೆಣ್ಣುಮಕ್ಕಳ ಮದುವೆಗೆ ಅವಕಾಶ ಕಡಿಮೆಯೇ ಇರುತ್ತದೆ ಅಥವಾ ದೇವದಾಸಿಯರ ಮನೆಗೆ ಹೆಣ್ಣು ಕೊಡಲೂ ಬಹುತೇಕರು ಹಿಂದೇಟು ಹಾಕುತ್ತಾರೆ. ಹೀಗಾಗಿ, ಸಾಮಾನ್ಯರಂತೆ ಮದುವೆಯಾಗಿ ಸಂಸಾರ ಮಾಡುವ ಕನಸು ಕೆಲವು ದೇವದಾಸಿಯರ ಮಕ್ಕಳ ಪಾಲಿಗಷ್ಟೇ ನನಸಾಗುತ್ತಿತ್ತು. ಆದರೆ, ಇದೀಗ ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ದೇವದಾಸಿ ಮಕ್ಕಳ ಸಾಮೂಹಿಕ ವಿವಾಹ ಮಾಡುವ ಮೂಲಕ ಸಾಮಾಜಿಕ ಕ್ರಾಂತಿಯೊಂದು ನಡೆದಿದೆ. ಅಪರೂಪದ ವಿವಾಹ ಮಹೋತ್ಸವದಲ್ಲಿ ದಾಂಪತ್ಯ ಬದುಕಿಗೆ ಹೆಜ್ಜೆ ಇಟ್ಟ ಜೋಡಿಗಳಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿತ್ತು. ತಮ್ಮ ವಿವಾಹಕ್ಕೆ ಕಾರಣರಾದವರ ಬಗ್ಗೆ ಮೊಗದಲ್ಲೊಂದು ಕೃತಜ್ಞತಾ ಭಾವವಿತ್ತು.

ದೇವದಾಸಿ ಒಂದು ಅನಿಷ್ಠ ಪದ್ಧತಿ ಎಂದು 12ನೇ ಶತಮಾನದಲ್ಲಿ ಬಸವಾದಿ ಶರಣರು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಆದರೆ, ೨೧ನೇ ಶತಮಾನದಲ್ಲಿಯೂ ಅದು ಜೀವಂತವಾಗಿರುವುದು ವಿಪರ್ಯಾಸ. ಕುಷ್ಟಗಿಯ ಈಗಿನ ಪ್ರಯತ್ನ ಹೊಸ ಭವಿಷ್ಯವೊಂದಕ್ಕೆ ನಾಂದಿ ಹಾಡುವ ಭರವಸೆ ನೀಡಿದೆ. ದೇವದಾಸಿಯ ಮಕ್ಕಳೂ ಮುಖ್ಯವಾಹಿನಿಯ ಅಂಗವೆಂದು ಭಾವನೆ ಮೂಡಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ. ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಮತ್ತು ಮಾದಿಗ ಛಲವಾದಿ ಮಹಾಸಭಾ ಆಯೋಜಿಸಿದ ಕುಷ್ಟಗಿಯ ಸಾಮೂಹಿಕ ವಿವಾಹ ಕಾರ್ಯಕ್ರಮ ಈ ನಿಟ್ಟಿನಲ್ಲಿ ಬಹಳ ಪ್ರಶಂಸೆಗೆ ಒಳಗಾಗಿದೆ.

ಸಾಮೂಹಿಕ ವಿವಾಹದಲ್ಲಿ ವಿವಿಧ ಪ್ರದೇಶಗಳ ಸುಮಾರು 32 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನೂತನ ದಂಪತಿಗಳಿಗೆ ಆದರ್ಶ ದಾಂಪತ್ಯದ ಕುರಿತು ಪ್ರಮಾಣ ವಚನ ಬೋಧಿಸಲಾಯಿತು. ಈ ಅಪರೂಪದ, ಐತಿಹಾಸಿಕ ಸಾಮೂಹಿಕ ವಿವಾಹದಲ್ಲಿ ಹಿರಿಯೂರಿನ ಅದಿಜಾಂಭವ ಮಠದ ಷಡಕ್ಷರಿಮುನಿ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More