ಎಲ್ಲರೂ ‘ಬಾರಪ್ಪ ಮಳೆರಾಯ’ ಎನ್ನುವಾಗ ‘ಸಾಕಪ್ಪ’ ಅಂತಿದ್ದಾರೆ ಧಾರವಾಡ ಮಂದಿ!

ಮೂರ್ನಾಲ್ಕು ವರ್ಷಗಳಿಂದ ಮಳೆ ಇಲ್ಲದೆ ಕಂಗೆಟ್ಟಿದ್ದ ಧಾರವಾಡ ಜಿಲ್ಲೆ ರೈತರು, ಈಗ ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದ ಕಂಗಾಲಾಗಿದ್ದಾರೆ. ಮಳೆಯಿಂದಾಗಿ ನೂರಾರು ಮನೆಗಳು ಕುಸಿದುಬಿದ್ದಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹತ್ತಾರು ಗ್ರಾಮಗಳು ಇಪ್ಪತ್ತು ದಿನಗಳಿಂದ ಕತ್ತಲಲ್ಲಿವೆ

‘ಮಳೆ ಬಂದರೆ ಕೇಡಲ್ಲ, ಮನೆಮಗ ಉಂಡರೆ ಕೇಡಲ್ಲ’ ಎಂಬ ನಾಣ್ಣುಡಿ ಉತ್ತರ ಕರ್ನಾಟಕದಲ್ಲಿ ಇಂದಿಗೂ ಜನಜನಿತ. ಆದರೆ, ಸದ್ಯದ ಮಳೆಯ ಅವಾಂತರ ನೋಡಿದರೆ, ಈ ಮಾತು ಸುಳ್ಳು ಎಂದೇ ಅನಿಸುತ್ತಿದೆ. ಮಳೆ ಹೆಚ್ಚಾದರೆ ಕೇಡು ಎಂದು ರೈತರೇ ಹೇಳುವಂತಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆ ಇಲ್ಲದೆ ಕಂಗೆಟ್ಟಿದ್ದ ಧಾರವಾಡ ಜಿಲ್ಲೆಯ ರೈತರು, ಈಗ ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದ ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ, ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೂರಾರು ಮನೆಗಳು ಕುಸಿದುಬಿದ್ದಿವೆ. ಹಳ್ಳಿಗಳ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಹತ್ತಾರು ಗ್ರಾಮಗಳು ಸುಮಾರು 20 ದಿನಗಳಿಂದ ಕತ್ತಲಲ್ಲಿವೆ.

ಜಿಲ್ಲೆಯಾದ್ಯಂತ ಕಳೆದ ಒಂದು ತಿಂಗಳಿಂದ ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಕೃಷಿ ಚಟುವಟಿಕೆಗೆ ಹಿನ್ನಡೆಯಾಗುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೇವಲ ಶೇ.7ರಷ್ಟು ಭೂಮಿ ಬಿತ್ತನೆ ಕಾರ್ಯ ಮಾತ್ರ ನಡೆದಿದೆ. ಇಷ್ಟರಲ್ಲೇ ಬಿತ್ತುವ ಕಾರ್ಯ ಸಂಪೂರ್ಣ ಮುಗಿಸಿ, ಮುಂದಿನ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕಿದ್ದ ರೈತರು, ಇನ್ನೂ ಬಿತ್ತನೆಯ ಕಾರ್ಯವೇ ಮುಗಿಯದ ಕಾರಣ ಚಿಂತಾಕ್ರಾಂತರಾಗಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಕೃಷಿ ಇಲಾಖೆಯು 2,30,620 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಅಂದಾಜು ಮಾಡಿತ್ತು. ಹೀಗಾಗಿ, ಇಷ್ಟು ಭೂಮಿ ಬಿತ್ತನೆಗೆ ಅವಶ್ಯವಿದ್ದಷ್ಟು ಬೀಜ, ಗೊಬ್ಬರ ದಾಸ್ತಾನು ಕೂಡ ಕೃಷಿ ಇಲಾಖೆಯಿಂದ ನಡೆದಿತ್ತು. ಆದರೆ, ಮಳೆರಾಯನ ರುದ್ರನರ್ತನದ ಮುಂದೆ ರೈತರು ಹಾಗೂ ಇಲಾಖೆ ಅಧಿಕಾರಿಗಳು ದಿಕ್ಕು ಕಾಣದೆ ಕುಳಿತಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷದಿಂದ ಬರದಿಂದ ಕಂಗೆಟ್ಟಿದ್ದ ಧಾರವಾಡ ಜಿಲ್ಲೆಯ ರೈತರಿಗೆ ಪ್ರಾರಂಭದಲ್ಲಿ ಮಳೆ ಶುಭಶಕುನವಾಗಿ ಕಂಡಿತ್ತು. ಮೇ ಮಧ್ಯಭಾಗದಲ್ಲಿ ಎರಡ್ಮೂರು ಬಾರಿ ಉತ್ತಮ ಮಳೆ ಸುರಿದ ಪರಿಣಾಮ ರೈತರು ಬಿತ್ತನೆಗೆ ಭೂಮಿ ಹದಗೊಳಿಸಿಕೊಂಡಿದ್ದರು. ಆದರೆ, ಇನ್ನೇನು ಬಿತ್ತಬೇಕು ಎನ್ನುವಷ್ಟರಲ್ಲಿಯೇ ಪ್ರಾರಂಭವಾದ ಮಳೆ ಅವಾಂತರ ಇನ್ನೂ ತಣ್ಣಗಾಗಿಲ್ಲ. ಇಲ್ಲಿವರೆಗೆ ಮಳೆ ಆಗಮನಕ್ಕೆ ಆಕಾಶದತ್ತ ಮುಖ ಮಾಡಿ ಕುಳಿತುಕೊಳ್ಳುತ್ತಿದ್ದ ರೈತರು, ಈ ಬಾರಿ ಸ್ವಲ್ಪ ವಿರಾಮ ಸಿಗಲೆಂದು ಬೇಡಿಕೊಳ್ಳುವಂತಾಗಿದೆ.

ಈ ಬಾರಿ ಮುಂಗಾರು ಉತ್ತಮವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹೆಸರು ಬೀಜಕ್ಕೆ ಉತ್ತಮ ಬೇಡಿಕೆ ಬಂದಿದೆ. ಸದ್ಯ ಬಿತ್ತನೆಯಾಗಿರುವ ಶೇ.7ರಷ್ಟು ಭೂಮಿಯಲ್ಲಿ ಶೇ.6ಕ್ಕಿಂತಲೂ ಹೆಚ್ಚು ಹೆಸರನ್ನೇ ಬಿತ್ತನೆ ಮಾಡಲಾಗಿದೆ. ಮಳೆ ವಿರಾಮ ನೀಡಿದರೆ, ಬಹುತೇಕ ರೈತರು ಕೂಡ ಹೆಸರು ಬಿತ್ತುವ ಸಾಧ್ಯತೆಯಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಅಷ್ಟೇ ಅಲ್ಲ, ಮುಂಗಾರು ಬೆಳೆಗಳಾದ ಜೋಳ, ಹೆಸರು, ಈರುಳ್ಳಿ, ಶೇಂಗಾ, ಮೆಕ್ಕೆಜೋಳ, ಅಲಸಂದಿ, ಹತ್ತಿ, ಸೂರ್ಯಕಾಂತಿ, ಗೆಜ್ಜೆಶೇಂಗಾ, ಮಡಿಕೆ, ಉದ್ದು ಸೇರಿದಂತೆ ತರಕಾರಿ ಬೆಳೆಗಳ ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ. ಆದರೆ, ಬಿತ್ತನೆಗೆ ಹಿನ್ನಡೆಯಾಗುತ್ತಿದೆ. ಇದೇ ರೀತಿ ಮಳೆ ರೌದ್ರ ನರ್ತನ ಮುಂದುವರಿಸಿದರೆ, ಬಿತ್ತನೆ ವಿಳಂಬವಾಗಿ ಬೆಳೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ. ಅಷ್ಟೇ ಅಲ್ಲ, ಬಿತ್ತನೆ ವಿಳಂಬವಾಗಿ ನಾನಾ ರೀತಿಯ ರೋಗಗಳು ಬೆಳೆಗಳಿಗೆ ಮುತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಇದರೊಂದಿಗೆ ಹಿಂಗಾರು ಬೆಳೆಗೆ ಹಿನ್ನಡೆಯಾಗಲಿದೆ. ಒಂದು ವೇಳೆ, ಮುಂಗಾರಿನಲ್ಲಿಯೇ ಬಿತ್ತನೆ ಕಾರ್ಯ ವಿಳಂಬವಾದರೆ, ಹಿಂಗಾರಿನ ಬೆಳೆಗಳಿಗೂ ಪೆಟ್ಟು ಬೀಳುವ ಸಂಭವಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.

ಮಾರ್ಚ್‌ನಿಂದ ಮೇ ಅಂತ್ಯದ ವೇಳೆಗೆ ಧಾರವಾಡ ಜಿಲ್ಲೆಯಲ್ಲಿ 136 ಮೀಮೀನಷ್ಟು ಮಳೆ ಸುರಿಯಬೇಕು. ಆದರೆ, ಮೇ ಅಂತ್ಯದ ವೇಳೆಗೆ 247.5 ಮೀಮೀನಷ್ಟು ಮಳೆ ಸುರಿದು, ಶೇ.82ರಷ್ಟು ಹೆಚ್ಚಾಗಿದೆ. ಪ್ರತಿಯೊಂದು ತಾಲೂಕು ಹಾಗೂ ಹೋಬಳಿಯಲ್ಲಿಯೂ ವಾಡಿಕೆಗಿಂತ ಹೆಚ್ಚಾಗಿಯೇ ಮಳೆ ಸುರಿದಿದೆ. ಹೀಗಾಗಿ, ಜಿಲ್ಲೆಯ ಎಲ್ಲ ಭಾಗದಲ್ಲಿಯೂ ಬಿತ್ತನೆ ಕಾರ್ಯ ಸಂಪೂರ್ಣವಾಗಿ ಇನ್ನೂ ಪ್ರಾರಂಭವಾಗಿಲ್ಲ. ಹೀಗಾಗಿ, ಜಿಲ್ಲೆಯ ಸಂಪೂರ್ಣ ರೈತರು ಆತಂಕದಲ್ಲಿಯೇ ದಿನ ದೂಡುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದಂತೂ ಮಳೆ ಹೆಚ್ಚಾಗಿಯೇ ಸುರಿಯುತ್ತಿದೆ. ಹವಾಮಾನ ವರದಿಯಂತೆ, ಜಿಲ್ಲೆಯಲ್ಲಿ ಇನ್ನೂ ಒಂದೆರಡು ದಿನ ಮಳೆ ಜೋರಾಗಿಯೇ ಸುರಿಯಲಿದೆ. ಹೀಗಾಗಿ, ಬಿತ್ತನೆ ಕಾರ್ಯ ಇನ್ನೂ ವಿಳಂಬವಾಗುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಈ ಸಲ ಉತ್ತಮ ಮಳೆ ಸುರಿಯುತ್ತಿದೆ. ಇದರಿಂದ ಹಾನಿಯೂ ಹೆಚ್ಚಾಗುತ್ತಿದೆ. ಕಂದಾಯ ಇಲಾಖೆ, ಎಂಜಿನಿಯರಿಂಗ್ ಇಲಾಖೆ, ಗ್ರಾಪಂ ಕಾರ್ಯದರ್ಶಿಗಳು, ಮಹಾನಗರ ಪಾಲಿಕೆಯ ಮುಖ್ಯಾಧಿಕಾರಿಗಳು ಜಂಟಿಯಾಗಿ ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯ ಕೈಗೊಂಡು ವರದಿ ಸಲ್ಲಿಸಿದ ನಂತರ ಪರಿಹಾರ ನೀಡಲಾಗಿವುದು.
ಎಸ್ ಬಿ ಬೊಮಮನಹಳ್ಳಿ, ಜಿಲ್ಲಾಧಿಕಾರಿ

ಮಳೆಯಿಂದ ಕೇವಲ ಬಿತ್ತನೆ ಕಾರ್ಯ ಮಾತ್ರ ನಿಂತಿಲ್ಲ. ಜನಜೀವನವೂ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯಲ್ಲಿ ಕೋಟ್ಯಂತರ ರು. ಮೌಲ್ಯದ ಸಾರ್ವಜನಿಕ ಆಸ್ತಿ ಹಾನಿಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಜಿಲ್ಲೆಯಲ್ಲಿ 527 ಮನೆಗಳು ಕುಸಿದುಬಿದ್ದಿದ್ದು, 900ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿವೆ. ಧಾರವಾಡ ತಾಲೂಕಿನಲ್ಲಿ 64 ಮನೆಗಳು ಹಾಗೂ 170 ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿದ್ದರೆ, ಹುಬ್ಬಳ್ಳಿ ತಾಲೂಕಿನಲ್ಲಿ 63 ಮನೆಗಳು ಹಾಗೂ 182 ವಿದ್ಯುತ್ ಕಂಬ, ಕಲಘಟಗಿ ತಾಲೂಕಿನಲ್ಲಿ 97 ಮನೆಗಳು ಹಾಗೂ 174 ವಿದ್ಯುತ್ ಕಂಬ, ಕುಂದಗೋಳ ತಾಲೂಕಿನಲ್ಲಿ 103 ಮನೆಗಳು ಹಾಗೂ 167 ವಿದ್ಯುತ್ ಕಂಬ, ನವಲಗುಂದ ತಾಲೂಕಿನಲ್ಲಿ 200 ಮನೆ ಹಾಗೂ 198 ವಿದ್ಯುತ್ ಕಂಬ ನೆಲಕ್ಕುರುಳಿವೆ. ಕಳೆದ ನಾಲ್ಕು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಕುಂದಗೋಳ ತಾಲೂಕಿನ ಇಂಗಳಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿ, ಜನಜೀವನ ಅಸ್ತವ್ಯಸ್ತವಾಗಿತ್ತು. ಕುಂದಗೋಳ, ಧಾರವಾಡ ಹಾಗೂ ನವಲಗುಂದ ತಾಲೂಕಿನ ಹಲವು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಕತ್ತಲಲ್ಲಿ ಮುಳುಗಿವೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More