ಸಾಲಮನ್ನಾ ಹಣ ಪಾವತಿಸದ ಸರ್ಕಾರ; ನಷ್ಟದಲ್ಲಿ ಬೀದರ್ ಡಿಸಿಸಿ ಬ್ಯಾಂಕ್

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಹಕಾರ ಸಂಘಗಳಲ್ಲಿನ ರೈತರ ಅಲ್ಪಾವಧಿ ಸಾಲ ಮನ್ನಾ ಮಾಡಿದ ಪೂರ್ಣ ಮೊತ್ತ ಬ್ಯಾಂಕ್‌ಗಳಿಗೆ ಪಾವತಿಯಾಗದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಸಹಕಾರಿ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕಿವೆ ಎನ್ನಲಾಗಿದೆ. ಈ ಪೈಕಿ, ಬೀದರ್ ಡಿಸಿಸಿ ಬ್ಯಾಂಕ್ ಕೂಡ ಒಂದು

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಹಕಾರ ಸಂಘಗಳಲ್ಲಿನ ರೈತರ ಅಲ್ಪಾವಧಿ ಸಾಲ ಮನ್ನಾ ಮಾಡಿದ ಪೂರ್ಣ ಮೊತ್ತ ಬ್ಯಾಂಕ್ ಗಳಿಗೆ ಇನ್ನೂ ಪಾವತಿಯಾಗದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಸಹಕಾರಿ ಬ್ಯಾಂಕ್‌‌ಗಳು ಸಂಕಷ್ಟಕ್ಕೆ ಸಿಲುಕಿವೆ ಎನ್ನಲಾಗಿದೆ. ಈ ಪೈಕಿ, ಗಡಿನಾಡ ಜಿಲ್ಲೆ ಬೀದರ್ ನ ಡಿಸಿಸಿ ಬ್ಯಾಂಕ್ ಕೂಡ ಒಂದು. ಸರ್ಕಾರದಿಂದ ಪೂರ್ತಿ ಹಣ ಸಂದಾಯವಾಗದ ಕಾರಣ 6.87 ಕೋಟಿ ರೂ. ನಷ್ಟವಾಗಿದೆ ಎಂದು ಬೀದರ್ ಡಿಸಿಸಿ ಬ್ಯಾಂಕ್ ಮೂಲಗಳಿಂದ ತಿಳಿದುಬಂದಿದೆ.

ತೀವ್ರ ಬರಗಾಲದಿಂದ ತತ್ತರಿಸಿದ್ದ ರಾಜ್ಯದ ರೈತರ ನೆರವಿಗೆ ಬಂದ ಸಿದ್ದರಾಮಯ್ಯ ಸರ್ಕಾರ 2017ರ ಮಧ್ಯಂತರ ಅವಧಿಯಲ್ಲಿ ರೂ.50 ಸಾವಿರದೊಳಗಿನ ಅಲ್ಪಾವಧಿ ಸಾಲ ಪಡೆದಿದ್ದ 30 ಜಿಲ್ಲೆಗಳ 22 ಲಕ್ಷಕ್ಕೂ ಅಧಿಕ ರೈತರ 8,165 ಕೋಟಿ ರೂ. ಸಾಲ ಮನ್ನಾ ಮಾಡಿತು. ಇದರಿಂದಾಗಿ ಬೀದರ್ ಜಿಲ್ಲೆಯ ಡಿಸಿಸಿ ಬ್ಯಾಕ್ ನ ಅಲ್ಪಾವಧಿ ಸಾಲದ ವ್ಯಾಪ್ತಿಯಲ್ಲಿ ಲಕ್ಷಕ್ಕೂ ಅಧಿಕ ರೈತರು ಸಾಲಮನ್ನಾದ ಫಲಾನುಭವಿಗಳಾದರು. ಆದರೆ, ಇಲ್ಲಿಯ ಡಿಸಿಸಿ ಬ್ಯಾಂಕ್ ಮಾತ್ರ ನಷ್ಟದ ಹಾದಿ ಹಿಡಿದಿದೆ ಎನ್ನುವುದು ಬ್ಯಾಂಕ್ ನ ಅಳಲು.

ಜಿಲ್ಲೆಯ ಡಿಸಿಸಿ ಬ್ಯಾಂಕ್ ನ ಸಾಲ ಮನ್ನಾದ ವಿವರ ‘ದಿ ಸ್ಟೇಟ್’ಗೆ ಲಭ್ಯವಾಗಿದ್ದು, ಆ ಬ್ಯಾಂಕ್ ವ್ಯಾಪ್ತಿಯ 1,54,839 ರೈತರ 50 ಸಾವಿರ ರೂ. ಅಲ್ಪಾವಧಿ ಸಾಲದ ಒಟ್ಟು ಮೊತ್ತ 528.16 ಕೋಟಿ ರೂ. ಹಿಂದಿನ ಸರ್ಕಾರ ಆ ಪೂರ್ತಿ ಹಣವನ್ನು ಬ್ಯಾಂಕ್‌ ಗೆ ಸಂದಾಯ ಮಾಡದೇ 506.21 ಕೋಟಿ ರೂ. ಪಾವತಿಸಿ, 21.95 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಸರ್ಕಾರ ಪಾವತಿಸಿದ ಹಣದಲ್ಲಿ 1,48,364 ರೈತರ ಸಾಲಮನ್ನಾ ಆಗಿದ್ದು ಬ್ಯಾಂಕ್ ಮಾಡಿದ್ದು, ಉಳಿದ 1,561 ರೈತರ ಸಾಲಮನ್ನಾದ ಹಣ ಸಮಯಕ್ಕೆ ಸರಿಯಾಗಿ ಸರ್ಕಾರ ಬ್ಯಾಂಕ್ ಗೆ ಪಾವತಿಯಾಗದ ಹಿನ್ನೆಲೆಯಲ್ಲಿ 6.29 ಕೋಟಿ ರೂ. ಬ್ಯಾಂಕ್ ಗೆ ನಷ್ಟವಾಗಿದೆ.

ಈ ಕುರಿತು ಬೀದರ್ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಮಹಾಜನ್ ಅವರು ‘ದಿ ಸ್ಟೇಟ್’ನೊಂದಿಗೆ ಮಾತನಾಡಿ, “ಸರ್ಕಾರ ಸಾಲ ಮನ್ನಾ ಮಾಡಿ ಸಮಯಕ್ಕೆ ಸರಿಯಾಗಿ ಬ್ಯಾಂಕ್ ಗೆ ಹಣ ನೀಡದ ಹಿನ್ನೆಲೆಯಲ್ಲಿ ನಮ್ಮ ಬ್ಯಾಂಕ್ ಗೆ 6.87 ಕೋಟಿ ರೂ. ನಷ್ಟವಾಗಿದೆ. ಸರ್ಕಾರ ಪಾವತಿಸಬೇಕಾದ ಹಣದ ವಿಳಂಬದಿಂದಾಗಿ ರೈತರಿಗೂ ಹೊಸ ಸಾಲ ಕೊಡಲು ಆಗುತ್ತಿಲ್ಲ. ಇದರಿಂದ ಕೆಲವು ರೈತರು ಬ್ಯಾಂಕ್ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ,” ಎಂದರು.

ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಅವರು ಪ್ರತಿಕ್ರಿಯಿಸಿ, “ಸಿದ್ದರಾಮಯ್ಯ ಸರ್ಕಾರ ರೈತರ ಕೃಷಿ ಸಾಲ ಮನ್ನಾ ಮಾಡಿದಾಗ ರೈತರು ಭಾರಿ ಸಂಭ್ರಮಿಸಿದರು. ಆದರೆ, ಸರ್ಕಾರ ಸಾಲ ಮನ್ನಾ ಮಾಡಿ ವರ್ಷ ಕಳೆಯುತ್ತ ಬಂದರೂ ಬ್ಯಾಂಕ್ ಗಳಿಗೆ ಪೂರ್ತಿ ಹಣ ಸಂದಾಯವಾಗಿಲ್ಲ. ಇದರಿಂದ ರೈತರಿಗೆ ಹೊಸ ಸಾಲ ಸಿಗುತ್ತಿಲ್ಲ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕುಮಾರಸ್ವಾಮಿ ಅವರಿಗೆ ನಿಜಕ್ಕೂ ರೈತರ ಬಗ್ಗೆ ಕಾಳಜಿ ಇದ್ದಲ್ಲಿ ಮೊದಲು ಹಿಂದಿನ ಸರ್ಕಾರ ಉಳಿಸಿಕೊಂಡಿರುವ ಬಾಕಿ ಹಣವನ್ನು ಬ್ಯಾಂಕ್ ಗಳಿಗೆ ಜಮಾ ಮಾಡಿ, ಸಂಕಷ್ಟದಲ್ಲಿರುವ ರೈತರ ಬ್ಯಾಂಕ್ ಗಳು ಉಳಿಸಿಕೊಳ್ಳಬೇಕು,” ಎಂದು ಮನವಿ ಮಾಡಿದರು.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಈ ಬಾರಿ ಡಿಸಿಸಿ ಬ್ಯಾಂಕ್ ಹಗರಣದ ಬ್ರಹ್ಮಾಸ್ತ್ರ ಪ್ರಯೋಗ!

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, “ಸರ್ಕಾರ ಸಾಲ ಮನ್ನಾ ಮಾಡಿ ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡದ ಹಿನ್ನಲ್ಲೆಯಲ್ಲಿ ಬೀದರ್ ಡಿಸಿಸಿ ಬ್ಯಾಂಕ್ ಗೆ ನಷ್ಟವಾಗಿದ್ದು ನಿಜ. ಈಗಿನ ಸರ್ಕಾರವಾದರೂ ತಕ್ಷಣವೇ ಹಳೆಯ ಬಾಕಿ ಹಣವನ್ನು ಬ್ಯಾಂಕ್ ಗೆ ಪಾವತಿಸಿ ಬ್ಯಾಂಕ್ ಹಾಗೂ ರೈತರ ಹಿತ ಕಾಪಾಡಬೇಕು,” ಎಂದು ತಿಳಸಿದರು.

ರೈತ ವಿಜಯಕುಮಾರ ಪರ್ಮಾ ಪ್ರತಿಕ್ರಿಯಿಸಿ, “ಸಹಕಾರಿ ಬ್ಯಾಂಕ್ ಗಳು ಎಷ್ಟು ಮುಖ್ಯವೋ ಅಷ್ಟೇ ನಾವು ಕೂಡ ಮುಖ್ಯ. ವರ್ಷದ 12 ತಿಂಗಳು ಕಷ್ಟಪಟ್ಟು ದುಡಿಯುವ ನಮಗೆ ಸಾಲ ಮನ್ನಾ ಬೇಕಿಲ್ಲ. ಬೆವರು ಹರಿಸಿ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕರೆ ಸಾಕು. ಈಗ ಮಾರುಕಟ್ಟೆಯಲ್ಲಿ ತೊಗರಿಗೆ 2 ರಿಂದ 3 ಸಾವಿರ ರೂ. ಬೆಲೆ ಇದೆ. ಇದರಿಂದ ರೈತರಿಗೆ ಲಾಭವಾಗಲಾರದು. ತೊಗರಿ, ಕಡಲೆ ಖರೀದಿ ಮಾಡಿ ಆರು ತಿಂಗಳಾದರೂ ಸರ್ಕಾರದಿಂದ ಸಮಯಕ್ಕೆ ಹಣ ಬಂದಿಲ್ಲ. ಹೀಗಾಗಿ ಮಕ್ಕಳ ಮದುವೆಯಂಥ ಶುಭ ಕಾರ್ಯ ಮಾಡಲು ಎಷ್ಟೋ ರೈತರಿಗೆ ಆಗುತ್ತಿಲ್ಲ. ಸರ್ಕಾರ ರೈತರ ಹಿತ ಕಾಪಾಡಬೇಕಾದರೆ ಮೊದಲು ನಮ್ಮ ಬೆಳೆಗಳಿಗೆ ಉತ್ತಮ ಬೆಂಬಲ ಬೆಲೆ ನಿಗದಿ ಮಾಡಲಿ,” ಎಂದು ಆಗ್ರಹಿಸಿದರು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More