ಪುಟ್ಟ ಜಿಲ್ಲೆ ಕೊಡಗಿನಲ್ಲಿ ಬೆಟ್ಟದಷ್ಟು ಸಮಸ್ಯೆ; ಇನ್ನಾದರೂ ಪರಿಹಾರ ಆದೀತೇ?

ರಸ್ತೆ, ವಸತಿ, ಮೂಲಭೂತ ಸೌಕರ್ಯ ಕೊರತೆಗಳ ನಡುವೆ ಕಾಡಾನೆ ಹಾವಳಿಯೂ ಸೇರಿ ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಕಣ್ಣಿಗೆ ಕಾಣದ ವಿಷಯವಾಗಿದೆ. ಜಿಲ್ಲೆಯ ಇಬ್ಬರು ಶಾಸಕರು ಇತ್ತೀಚೆಗಷ್ಟೇ ಮರಳಿ ಆಯ್ಕೆಯಾಗಿದ್ದಾರೆ. ಈ ಕೊರತೆಗಳತ್ತ ಅವರು ಇನ್ನಾದರೂ ದೃಷ್ಟಿಹರಿಸಬೇಕಿದೆ

ಕೊಡಗು ಜಿಲ್ಲೆ ವಿಸ್ತೀರ್ಣದಲ್ಲಿ ಪುಟ್ಟದಾಗಿದ್ದರೂ ಜಿಲ್ಲೆಯಲ್ಲಿ ಸಮಸ್ಯೆಗಳಿಗೇನೂ ಬರವಿಲ್ಲ. ೨೦೧೧ರ ಜನಗಣತಿ ಪ್ರಕಾರ, ಜಿಲ್ಲೆಯ ಜನಸಂಖ್ಯೆ ೫.೫೫ ಲಕ್ಷದಷ್ಟಿದೆ. ಇದರಲ್ಲಿ ೨.೭೪ ಲಕ್ಷ ಪುರುಷರಿದ್ದರೆ ೨.೭೩ ಲಕ್ಷ ಮಹಿಳೆಯರಿದ್ದಾರೆ. ಮೂರು ತಾಲೂಕುಗಳು, ೨೦ ಹೋಬಳಿ ಕೇಂದ್ರಗಳಿರುವ ಜಿಲ್ಲೆಯಲ್ಲಿ ಮಡಿಕೇರಿ ಪುರಸಭೆಯನ್ನು ಹೊಂದಿದ್ದರೆ; ವೀರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರದಲ್ಲಿ ಪಟ್ಟಣ ಪಂಚಾಯ್ತಿಗಳಿದ್ದು, ಸುಮಾರು ೧೦೦ ಗ್ರಾಮ ಪಂಚಾಯ್ತಿಗಳಿವೆ.

ಇತ್ತೀಚೆಗಷ್ಟೇ ವಿಧಾನಸಭಾ ಚುನಾವಣೆ ಮುಗಿದಿದ್ದು, ಮಡಿಕೇರಿಯಿಂದ ಎಂ ಪಿ ಅಪ್ಪಚ್ಚು ರಂಜನ್ ಹಾಗೂ ವೀರಾಜಪೇಟೆಯಿಂದ ಕೆ ಜಿ ಬೋಪಯ್ಯ ಪುನರಾಯ್ಕೆ ಆಗಿದ್ದಾರೆ. ಕಳೆದ ಒಂದು ದಶಕದಲ್ಲಿ ಜಿಲ್ಲೆಯಲ್ಲಿ ಒಂದಷ್ಟು ಅಭಿವೃದ್ದಿ ಕೆಲಸ ಆಗಿದ್ದರೂ ಗುಡ್ಡಗಾಡು ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ವಿಶೇಷ ಅನುದಾನದೊಂದಿಗೆ ಜಿಲ್ಲೆಯನ್ನು ಅಭಿವೃದ್ದಿಪಡಿಸಬೇಕಾಗಿದೆ. ಹಿಂದಿನ ಸರ್ಕಾರಗಳು ಒಂದಷ್ಟು ಅನುದಾನವನ್ನು ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ ಹೆಸರಿನಲ್ಲಿ ಬಿಡುಗಡೆಗೊಳಿಸಿದರೂ ಅದು ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.

ಜಿಲ್ಲೆಯ ಹೊಸ ಶಾಸಕರ ಮುಂದಿರುವ ಸವಾಲುಗಳು ಏನು ಎಂಬ ಬಗ್ಗೆ ‘ದಿ ಸ್ಟೇಟ್’ ವಿವಿಧ ಪ್ರದೇಶಗಳ ಜನತೆಯೊಂದಿಗೆ ಮಾತನಾಡಿ ಸಂಗ್ರಹಿಸಿದ ಅಭಿಪ್ರಾಯ, ಜನತೆಯ ನಿರೀಕ್ಷೆ ಇಲ್ಲಿದೆ.

ಜಿಲ್ಲೆಯು ಗ್ರಾಮೀಣ ಪ್ರದೇಶವಾಗಿರುವುದರಿಂದ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ. ವರ್ಷದ ಮೂರು ತಿಂಗಳು ಮಳೆ ಸುರಿಯುವ ಜಿಲ್ಲೆಯಲ್ಲಿ ಕೆಲಸ ಮಾಡಲು ಅಧಿಕಾರಿಗಳೂ ಹಿಂದೇಟು ಹಾಕುತ್ತಾರೆ. ಅನೇಕ ಹಿರಿಯ ಅಧಿಕಾರಿಗಳು ಇತ್ತ ವರ್ಗಾವಣೆಗೊಂಡ ಎರಡು ದಿನಗಳಲ್ಲಿಯೇ ವರ್ಗಾವಣೆ ರದ್ದು ಮಾಡಿಸಿಕೊಂಡು ಬೇರೆಡೆಗೆ ವರ್ಗವಾದ ನಿದರ್ಶನಗಳು ಹತ್ತಾರು ಇವೆ. ಮಡಿಕೇರಿ ಸಮೀಪದ ನಾಪೋಕ್ಲುವಿನ ಜನತೆ ರಸ್ತೆ ಹಾಗೂ ಕುಡಿಯುವ ನೀರಿನ ಸೌಕರ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ನಿವಾಸಿ ಕೆಎಂ ಪೂಣಚ್ಚ, ಗುಂಡಿ ಬಿದ್ದಿರುವ ಮಡಿಕೇರಿ-ನಾಪೋಕ್ಲು ರಸ್ತೆ ದುರಸ್ಥಿ ಮಾಡಿಸುವಂತೆ ಶಾಸಕರನ್ನು ಒತ್ತಾಯಿಸಿದ್ದಾರೆ. "ಈ ಕಿರಿದಾದ ರಸ್ತೆಯಲ್ಲಿ ದ್ವಿಚಕ್ರವಾಹನ ಸವಾರರು ವೇಗವಾಗಿ ವಾಹನ ಚಲಾಯಿಸುತ್ತಿದ್ದು, ಪೋಲೀಸರು ಯಾವುದೇ ಕ್ರಮ ಕೈಗೊಳ್ಳುತಿಲ್ಲ. ವೃದ್ಧರು ಮತ್ತು ಮಹಿಳೆಯರು, ಮಕ್ಕಳು ರಸ್ತೆ ದಾಟಲು ಭಯಪಡುತ್ತಿದ್ದಾರೆ,” ಎಂದರು.

“ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತಿದ್ದು, ನೌಕರರು ಹಣವಿಲ್ಲದೆ ಯಾವುದೇ ಕೆಲಸ ಮಾಡುತ್ತಿಲ್ಲ,” ಎಂಬುದು ಕೆ ಎಂ ಪೂಣಚ್ಚ ದೂರು. “ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದ್ದು, ಶಾಸಕರು ಮೊದಲು ಈ ಅವ್ಯವಸ್ಥೆ ಸರಿಪಡಿಸಲಿ. ಈ ಪ್ರದೇಶದಲ್ಲಿ ಕಾಡಾನೆಗಳ ಹಾವಳಿಯೂ ಇದೆ. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ. ಬಿಎಸ್ಎನ್ಎಲ್ ನೆಟ್ವರ್ಕ್ ಕೂಡ ಸರಿಯಾಗಿಲ್ಲ. ದೂರು ನೀಡಿದರೂ ಪ್ರಯೋಜನವಾಗಿಲ್ಲ,” ಎಂದು ದೂರಿದವರು ಮೂರ್ನಾಡಿನ ನಿವಾಸಿ ಕಿಗ್ಗಾಲು ಎಂ ಗಿರೀಶ್.

ಕುಶಾಲನಗರ ಸಮೀಪದ ರಂಗಸಮುದ್ರ ನಿವಾಸಿ ಪಿ ಎಸ್ ಮೋಹನ್, “ಸಿದ್ದಾಪುರ-ಕೊಡಗರಳ್ಳಿ ನಡುವಿನ ೧೨ ಕಿಲೋಮೀಟರ್ ರಸ್ತೆ ದುರಸ್ಥಿ ಆಗಿಲ್ಲ. ಮಳೆಗಾಲದಲ್ಲಿ ಜನರು ವಾಹನ ಪ್ರಯಾಣ ಮಾಡಲು ಸರ್ಕಸ್ ಮಾಡಬೇಕಿದೆ,” ಎಂದು ಅಲವತ್ತುಕೊಂಡರು.

ಇದನ್ನೂ ಓದಿ : ಚುನಾವಣಾ ಕಣ | ವೀರಾಜಪೇಟೆ ಸ್ಪರ್ಧಿಗಳಿಗೆ ಕಾಡಾನೆ ಹಾವಳಿಯೇ ತಲೆನೋವು

ವೀರಾಜಪೇಟೆ ತಾಲೂಕು ಕುಂಜಿಲಗೇರಿ ನಿವಾಸಿ, ನಿವೃತ್ತ ಡಿವೈಎಸ್ಪಿ ಮುಕ್ಕಾಟಿರ ಚೋಟು ಅಪ್ಪಯ್ಯ ಹೇಳುವುದಿಷ್ಟು: "೨೦೦೪ರಲ್ಲಿ ನಿವೃತ್ತರಾದ ನಾನು ಅದೇ ವರ್ಷ ಗ್ರಾಮ ಪಂಚಾಯ್ತಿ ಮೇಲೆ ಒತ್ತಡ ತಂದು ಒಂದು ಸಾರ್ವಜನಿಕ ಕೊಳವೆಬಾವಿ ತೋಡಿಸಿದೆ. ನಂತರ ರಾಜಕೀಯ ಕಾರಣಗಳಿಗಾಗಿ ಆ ಕೊಳವೆಬಾವಿಯಲ್ಲಿ ಸುಮಾರು ೯ ವರ್ಷ ನೀರು ಹರಿಯಲಿಲ್ಲ. ನಂತರ ೨೦೧೩ರ ವಿಧಾನಸಭಾ ಚುನಾವಣೆಗೂ ಮುನ್ನ ಕೊಳವೆಬಾವಿಗೆ ಸಮೀಪದಲ್ಲಿ ಟ್ಯಾಂಕ್‌ವೊಂದನ್ನು ನಿರ್ಮಿಸಿ ಕುಡಿಯುವ ನೀರನ್ನು ಸರಬರಾಜು ಮಾಡಲಾಯಿತು. ಆದರೆ, ಇದರಲ್ಲಿ ನೀರು ಬತ್ತಿಹೋಗಿದ್ದು ಬೇಸಿಗೆಯಲ್ಲಿ ಜನರು ನೀರಿಗಾಗಿ ಪರದಾಡಬೇಕಾಗಿದೆ."

ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ಕಾರ್ಮಿಕ ಎಂ ಕೆ ಪೂವಯ್ಯ, “ಸರ್ಕಾರ ನರೇಗಾ ಯೋಜನೆಯಡಿಯಲ್ಲಿ ಸಿಗುತ್ತಿರುವ ಕೂಲಿ ತುಂಬಾ ಕಡಿಮೆ ಆಗಿದ್ದು, ಕಾಫಿತೋಟಗಳಲ್ಲೇ ಅಧಿಕ ಸಂಬಳ ದೊರೆಯುತ್ತಿದೆ. ಸರ್ಕಾರವು ಕನಿಷ್ಠ ವೇತನ ಏರಿಸಬೇಕಿದೆ,” ಎಂದು ಒತ್ತಾಯಿಸಿದರು.

“ಬಿಪಿಎಲ್ ಕಾರ್ಡಿಗೆ ಪ್ರತಿ ತಿಂಗಳೂ ಸಮಯಕ್ಕೆ ಸರಿಯಾಗಿ ಪಡಿತರ ದೊರಕುತ್ತಿದ್ದರೂ ಅಕ್ಕಿಯು ಮುಗ್ಗಲು ವಾಸನೆ ಬರುತ್ತಿದೆ,” ಎಂದು ಆರೋಪಿಸುತ್ತಾರೆ ಯಡೂರು ಗ್ರಾಮದ ಪೂವಯ್ಯ. ಮಡಿಕೇರಿಯ ವಿಷ್ಣು ದೇವಯ್ಯ, “ಎಲ್ಲ ತಾಲ್ಲೂಕು ಕಚೇರಿಗಳಲ್ಲಿಯೂ ಶಾಸಕರ ಪ್ರತಿನಿಧಿ ಇರಬೇಕು. ಹೀಗೆ ಪ್ರತಿನಿಧಿ ಇದ್ದರೆ ಜನರ ಕೆಲಸಗಳು ಬೇಗ ಆಗುವುದಲ್ಲದೆ ನೌಕರರ ಲಂಚದ ಬೇಡಿಕೆಗೂ ಕಡಿವಾಣ ಬೀಳಲಿದೆ,” ಎಂದು ಆಗ್ರಹಿಸಿದರು. “ಗ್ರಾಮದ ೬ ಕಿಲೋಮೀಟರ್ ಉದ್ದದ ರಸ್ತೆಯನ್ನು ಕಳೆದ ೧೫ ವರ್ಷಗಳಿಂದಲೂ ದುರಸ್ತಿ ಮಾಡಿಲ್ಲ,” ಎಂಬುದು ಕೊಳಕೇರಿ-ಕೋಕೇರಿ ನಿವಾಸಿ ಎಂ ಎ ಮೈದು ಅವರ ದೂರು. ಶನಿವಾರಸಂತೆಯ ಜಿ ಕೆ ವೇಲಾಯುಧನ್, “ಶನಿವಾರಸಂತೆಯ ಸರ್ಕಾರಿ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡ ಇದ್ದರೂ ಏಕೈಕ ವೈದ್ಯರಿದ್ದು, ಉಳಿದ ನಾಲ್ಕು ವೈದ್ಯರ ಹುದ್ದೆಗಳು ಅನೇಕ ವರ್ಷಗಳಿಂದ ಖಾಲಿ ಬಿದ್ದಿವೆ. ಕುಶಾಲನಗರ ಮಾರ್ಕೆಟ್ ರಸ್ತೆಯ ಪಕ್ಕದಲ್ಲಿ ೨೦ ಬಡ ಕುಟುಂಬಗಳು ವಾಸಿಸುತ್ತಿದ್ದು, ಕಂದಾಯ ಇಲಾಖೆಗೆ ನಮೂನೆ ೯೪ ಸಿಸಿಯಲ್ಲಿ ಅರ್ಜಿ ಸಲ್ಲಿಸಿದ್ದರೂ ಈತನಕವೂ ಮನೆಯ ಹಕ್ಕು ಪತ್ರ ಸಿಕ್ಕಿಲ್ಲ,” ಎಂದು ಬೇಸರಿಸಿದರು. ಕೂಡು ಮಂಗಳೂರಿನ ನಿವಾಸಿ ಆಶಾ ಅಪ್ಪಣ್ಣ, “ಗ್ರಾಮದಲ್ಲಿ ಕಸದ ಸಮಸ್ಯೆ ಇದ್ದು ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ. ಶಾಸಕರು ಕೂಡಲೇ ಇತ್ತ ಗಮನ ಹರಿಸಲಿ,” ಎಂದು ಆಗ್ರಹಿಸಿದರು.

ಇನ್ನು ಕೊಡಗಿನ ಜನ ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆ ಎಂದರೆ ಕಾಡಾನೆಗಳ ಹಾವಳಿ. ಜಿಲ್ಲೆಯು ನಾಗರಹೊಳೆ ಅಭಯಾರಣ್ಯಕ್ಕೆ ಹೊಂದಿಕೊಂಡೇ ಇದೆ ಮತ್ತು ಅರಣ್ಯ ಇಲಾಖೆಯ ಆನೆ ಕಾರಿಡಾರ್ ವ್ಯಾಪ್ತಿಯಲ್ಲೂ ಇದೆ. ಹೀಗಾಗಿ, ಉತ್ತರ ಕೊಡಗಿನಲ್ಲಿ ಕಾಡಾನೆ ಹಾವಳಿ ಕೊಂಚ ಕಡಿಮೆ ಇದ್ದರೆ, ದಕ್ಷಿಣ ಕೊಡಗಿನ ವೀರಾಜಪೇಟೆ, ಸಿದ್ದಾಪುರ ವ್ಯಾಪ್ತಿಯಲ್ಲಿ ಮಿತಿಮೀರಿದ್ದು ರೈತಾಪಿ ಮತ್ತು ಕಾರ್ಮಿಕ ವರ್ಗ ಭಯದ ನೆರಳಿನಲ್ಲೇ ಬದುಕಬೇಕಾಗಿದೆ. “ಕಾಡಾನೆಗಳ ಹಾವಳಿಯನ್ನು ಶಾಶ್ವತವಾಗಿ ತಡೆಯಲು ರೈಲುಹಳಿಯ ಬೇಲಿ ನಿರ್ಮಿಸಲು ೬೫೦ ಕೋಟಿ ರುಪಾಯಿಗಳ ಅರಣ್ಯ ಇಲಾಖೆಯ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಲಿ,” ಎಂದು ಆಗ್ರಹಿಸಿದ್ದಾರೆ ಸಾಮಾಜಿಕ ಕಾರ್ಯಕರ್ತ ಸಂಕೇತ್ ಪೂವಯ್ಯ.

ಕಳೆದ ೮ ವರ್ಷಗಳಲ್ಲಿ ಜಿಲ್ಲೆಯಲ್ಲಿ ಸುಮಾರು ೪೧ ಜನರು ಕಾಡಾನೆಗಳ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದು, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. “ಗ್ರಾಮದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ಶಾಶ್ವತ ಪರಿಹಾರ ಕಂಡುಹಿಡಿಯಬೇಕಿದೆ,” ಎನ್ನುತ್ತಾರೆ ಸಿದ್ದಾಪುರ ಸಮೀಪದ ಮಾಲ್ದಾರೆ ನಿವಾಸಿ ಬಿ ಎಂ ಹನೀಫ್. ಕುಶಾಲನಗರದ ಜಿ ಶ್ರೀಹರ್ಷ, “ಕುಶಾಲನಗರ ಸರ್ಕಾರಿ ಬಸ್ ನಿಲ್ದಾಣ ಮೇಲ್ದರ್ಜೆಗೇರಿಸಬೇಕಿದೆ. ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಅನಿವಾರ್ಯತೆ ಇದ್ದು, ನಗರದ ಒಳಚರಂಡಿ ಯೋಜನೆ ಮಂಜೂರಾಗಿ ೬ ವರ್ಷ ಕಳೆದರೂ ಇನ್ನೂ ಕೆಲಸ ಆರಂಭ ಆಗದಿರುವುದಕ್ಕೆ ಶಾಸಕರ ನಿರಾಸಕ್ತಿಯೇ ಕಾರಣ,” ಎಂದು ದೂರಿದರು.

ಒಟ್ಟಿನಲ್ಲಿ ಜಿಲ್ಲೆಯ ಜನತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ನೂತನ ಶಾಸಕರು ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಶ್ರಮ ವಹಿಸಲೇಬೇಕಿದೆ. ಇಲ್ಲದಿದ್ದರೆ, ಮುಂದಿನ ಚುನಾವಣೆಯಲ್ಲಿ ಸಹಸ್ರಾರು ಮತಗಳ ಅಂತರದ ಗೆಲುವು ಮಾಯವಾಗಿ ಸೋಲಿಗೂ ಕಾರಣ ಆಗಬಹುದು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More