ವಿಡಿಯೋ ಸ್ಟೋರಿ | ಕಂಡು ಕೇಳರಿಯದ ಮಳೆಗೆ ಮೈಯೊಡ್ಡಿದ ಹಾಸನ ಜಿಲ್ಲೆ

ಸತತ ಬರಗಾಲದಿಂದ ಹೇಮಾವತಿ ಜಲಾಶಯ ತುಂಬದೆ, ಕೆಲವೊಮ್ಮೆ ಹಾಸನ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಕೂಡ ಡೆಡ್ ಸ್ಟೋರೇಜ್ ನೀರನ್ನೇ ಲಿಫ್ಟ್ ಮಾಡಿ ಬಳಸಿದ ಉದಾಹರಣೆಗಳಿವೆ. ಆದರೆ, ಹೇಮಾವತಿ ಜಲಾಶಯದ ನೀರಿನ ಮಟ್ಟ ಈಗ 2,880.75 ಅಡಿಗಳಿಗೆ ಏರಿದೆ!

ಕಳೆದ ನಾಲ್ಕು ವರ್ಷಗಳಿಂದ ಸತತ ಬರದ ಬೇಗೆಯಲ್ಲಿ ಬೆಂದಿದ್ದ ಹಾಸನ ಜಿಲ್ಲೆಯಲ್ಲಿ ಈ ಬಾರಿ ವರುಣನ ಕೃಪೆ ಸ್ವಲ್ಪ ಹೆಚ್ಚಾಗಿಯೇ ಆದಂತಿದೆ. ವಾರದ ಹಿಂದೆ ನಿಧಾನಕ್ಕೆ ಆರಂಭವಾದ ಮಳೆಯು ದಿನದಿಂದ ದಿನಕ್ಕೆ ವೇಗ ಪಡೆದುಕೊಂಡು ಅಬ್ಬರಿಸತೊಡಗಿದೆ. ಜಿಲ್ಲೆಯ ಮಲೆನಾಡು ಪ್ರದೇಶಗಳಾದ ಸಕಲೇಶಪುರ, ಆಲೂರು ಮತ್ತು ಬೇಲೂರು ತಾಲೂಕುಗಳಲ್ಲಿ ಮಳೆ ಆರ್ಭಟ ಜೋರಾಗಿದ್ದರೆ, ಉಳಿದಂತೆ ಅರ್ಧ ಮಲೆನಾಡು ಪ್ರದೇಶ ಒಳಗೊಂಡಿರುವ ಅರಕಲಗೂಡು, ಅರೆಮಲೆನಾಡು ಹಾಸನ, ಬಯಲುಸೀಮೆಗಳಾದ ಅರಸೀಕೆರೆ, ಚನ್ನರಾಯಪಟ್ಟಣ ಮತ್ತು ಹೊಳೆನರಸೀಪುರ ತಾಲೂಕುಗಳಲ್ಲೂ ಬಿಟ್ಟೂಬಿಡದೆ ಮುಸಲಧಾರೆ ಮುಂದುವರಿದಿದೆ.

ದಟ್ಟ ಮಲೆನಾಡು ಪ್ರದೇಶವಾದ ಸಕಲೇಶಪುರದಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯನ್ನು ಮಿ.ಮೀ. ಮತ್ತು ಇಂಚುಗಳ ಲೆಕ್ಕದಲ್ಲಿ ಅಳೆದರೆ, ಸಕಲೇಶಪುರ ತಾಲೂಕಿನಲ್ಲಿ ಅಡಿಗಳ ಲೆಕ್ಕದಲ್ಲಿ ಅಳೆಯುವಂತಾಗಿದೆ. ಸಕಲೇಶಪುರ ತಾಲೂಕಿನ ಹೊಂಗಡಹಳ್ಳ, ಹಾಲುಬಾಳು, ಮಾರನಹಳ್ಳಿ ಮತ್ತಿತರೆಡೆ ಒಂದು ಅಡಿಯಿಂದ ಎರಡು ಅಡಿಗಳ ಪ್ರಮಾಣದಲ್ಲಿ ಮಳೆ ಸುರಿದಿದೆ. ಜೂನ್ ತಿಂಗಳಲ್ಲಿ ಈ ರೀತಿಯ ಪ್ರಳಯಸ್ವರೂಪಿ ಮಳೆ ಸುರಿದಿರುವ ಇತಿಹಾಸವೇ ಇಲ್ಲ ಎನ್ನುತ್ತಾರೆ ಕಾಫಿ ಬೆಳೆಗಾರರು.

ಮರಗಳು ಉರುಳುವುದು, ಸಣ್ಣಪುಟ್ಟ ಸೇತುವೆಗಳು ಮುರಿದುಬೀಳುವುದು ಸಾಮಾನ್ಯವಾಗಿದೆ. ಸೇತುವೆಗಳು ಕೊಚ್ಚಿಹೋಗಿರುವುದರಿಂದ ಹಲವು ಗ್ರಾಮಗಳು ಹೊರಜಗತ್ತಿನ ಸಂಪರ್ಕ ಕಡಿದುಕೊಂಡಿವೆ. ಯಡಕುಮರಿ ಬಳಿ ರೈಲುಹಳಿ ಮೇಲೆ ಗುಡ್ಡ ಕುಸಿದು, ಭಾನುವಾರ ಮತ್ತು ಸೋಮವಾರ ರೈಲು ಸಂಚಾರ ಬಂದ್ ಆಗಿತ್ತು. ಹೊಂಗಡಹಳ್ಳದಲ್ಲಿ ಭೂಕುಸಿತ ಉಂಟಾಗಿದೆ.

ಜಿಲ್ಲೆಯ ಜೀವನದಿ ಹೇಮಾವತಿ ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು, ಮೂಡಿಗೆರೆ ಮತ್ತು ಸಕಲೇಶಪುರ ತಾಲೂಕುಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಹೇಮಾವತಿ ಮೈದುಂಬಿ ಹರಿಯಲಾರಂಭಿಸಿದೆ. ಸಕಲೇಶಪುರದಲ್ಲಿ ಹೇಮಾವತಿ ನದಿ ದಂಡೆಯಲ್ಲಿರುವ ಹೊಳೆಮಲ್ಲೇಶ್ವರಸ್ವಾಮಿ ದೇವಾಲಯದ ಒಳಕ್ಕೆ ನೀರು ನುಗ್ಗುವಷ್ಟರ ಮಟ್ಟಕ್ಕೆ ನದಿ ತುಂಬಿ ಹರಿಯುತ್ತಿದೆ.

ಇದನ್ನೂ ಓದಿ : ಮುಂಗಾರು ವಿಶೇಷ | ಮಳೆಯಲ್ಲಿ ಒದ್ದೆಯಾಗುವ ಮುನ್ನ ಈ ಎರಡು ವಿಡಿಯೋ ನೋಡಿಬಿಡಿ

ಕಳೆದ ನಾಲ್ಕೈದು ವರ್ಷಗಳಿಂದ ಒಡಲು ಬರಿದಾಗಿಸಿಕೊಂಡಿದ್ದ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಿದೆ. ಹೇಮಾವತಿ ಅಣೆಕಟ್ಟೆಗೆ ಸೋಮವಾರ ಬೆಳಗ್ಗೆ 30 ಸಾವಿರ ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, ಜಲಾಶಯದ ನೀರಿನ ಮಟ್ಟ 2,880.75 ಅಡಿಗಳಿಗೆ ಏರಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 2,922 ಅಡಿಗಳು. 37.103 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಗೊರೂರು ಜಲಾಶಯದಲ್ಲಿ ಈಗ 9.97 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ದಿನದಲ್ಲಿ 2.66 ಟಿಎಂಸಿ ಮಾತ್ರ ನೀರು ಇತ್ತು. ಇದೇ ರೀತಿ ಮಳೆ ಮುಂದುವರಿದರೆ ಜುಲೈ ವೇಳೆಗೆ ಜಲಾಶಯ ತುಂಬುವ ಸಾಧ್ಯತೆ ಇದೆ.

ಸತತ ಬರಗಾಲದಿಂದ ಹೇಮಾವತಿ ಜಲಾಶಯ ತುಂಬದೆ, ಕೆಲವೊಮ್ಮೆ ಹಾಸನ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಡೆಡ್ ಸ್ಟೋರೇಜ್ ನೀರನ್ನೇ ಲಿಫ್ಟ್ ಮಾಡಿ ಬಳಸಿದ ಉದಾಹರಣೆಗಳಿವೆ. ಆದರೆ, ಈ ಬಾರಿಯ ಮಳೆಯು ನಾಗರಿಕರಲ್ಲಿ ಕುಡಿಯುವ ನೀರಿನ ಚಿಂತೆ ದೂರ ಮಾಡಿದೆ.

ಈ ಬಾರಿ ಜಿಲ್ಲೆಗೆ ಬಹಳ ಬೇಗ ಮುಂಗಾರು ಕಾಲಿಟ್ಟಿದ್ದರಿಂದ ಸುಮಾರು 12,500 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗಿದೆ. ಆದರೆ, ಸತತ ಮಳೆಯ ಕಾರಣ ಬಿತ್ತಿದ್ದ ಗಡ್ಡೆಗಳು ಕೊಳೆಯಲಾರಂಭಿಸಿವೆ. ಬರಗಾಲ, ರೋಗ ಮತ್ತಿತರ ಕಾರಣಗಳಿಂದ ಸತತವಾಗಿ ನಷ್ಟ ಅನುಭವಿಸುತ್ತಿರುವ ಆಲೂಗಡ್ಡೆ ಬೆಳೆಗಾರರು ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಸತತ ಮಳೆ ಆವರ ಆಸೆಯನ್ನು ಕಮರಿಸಿದೆ.

ಮಳೆ ಸುರಿಯುತ್ತಿರುವುದರಿಂದ ಈಗಾಗಲೇ ಬಿತ್ತನೆಯಾಗಿದ್ದ ಬೆಳೆಗಳಿಗೆ ಹಾನಿಯಾಗುತ್ತಿದ್ದರೂ ರೈತರು ಸಂಪೂರ್ಣ ನಿರಾಶರಾಗಿಲ್ಲ. ಸತತ ಬರಗಾಲದಿಂದ ಕೆರೆಕಟ್ಟೆಗಳು ಒಣಗಿ, ಕೊಳವೆಬಾವಿಗಳು ಬತ್ತಿಹೋಗಿ, ಲಕ್ಷಾಂತರ ತೆಂಗಿನ ಮರಗಳು ನಾಶವಾಗಿ ಕಂಗಾಲಾಗಿದ್ದ ರೈತರಿಗೆ ಈ ಮಳೆ ಸಂತಸವನ್ನೇ ತಂದಿದೆ. ಉತ್ತಮ ಮಳೆಯಾಗಿ ಕೆರೆಗಳು ತುಂಬಿದರೆ ಕೊಳವೆಬಾವಿಗಳು ಜೀವತಳೆಯುತ್ತವೆ. ಮುಂದಿನ ಮೂರ್ನಾಲ್ಕು ವರ್ಷಗಳ ಕಾಲ ಬರದ ಬಿಸಿ ತಟ್ಟುವುದಿಲ್ಲ ಎಂಬುದು ಅವರ ಆಶಾಭಾವನೆಯಾಗಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More