ಮಳೆಗೆ ಶಿಥಿಲ ಸೇತುವೆಗಳು ಮುರಿದು ಸಂಪರ್ಕ ಕಡಿದುಕೊಂಡ ಬೀದರ್‌ ಗ್ರಾಮಗಳು

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆ ಬೀದರಿಗೂ ಹಬ್ಬಿ, ಜನರು ಸಂಕಷ್ಟಕೀಡಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಮಳೆಯಾದರೆ ಲಾತೂರು ಜಿಲ್ಲೆಯ ಧನೆಗಾಂವ ಅಣೆಕಟ್ಟೆಯ ನೀರು ಬೀದರ್ ಜಿಲ್ಲೆಯ ಮಾಂಜ್ರಾ ನದಿಗೆ ಬಿಡುವ ಸಾಧ್ಯತೆಯಿರುವ ಕಾರಣ ಸ್ಥಳೀಯರು ಆತಂಕದಲ್ಲಿದ್ದಾರೆ 

ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಜಿಲ್ಲೆಯಾಗಿರುವ ಬೀದರಿನಲ್ಲಿ ಈಗ ಸತತ ಮಳೆಯ ಅಬ್ಬರ. ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆ ಬೀದರಿಗೂ ಹಬ್ಬಿ, ಜನರು ಸಂಕಷ್ಟಕೀಡಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಮಳೆಯಾದರೆ ಲಾತೂರು ಜಿಲ್ಲೆಯ ಧನೆಗಾಂವ ಅಣೆಕಟ್ಟೆಯ ನೀರು ಬೀದರ್ ಜಿಲ್ಲೆಯ ಮಾಂಜ್ರಾ ನದಿಗೆ ಬಿಡಲಾಗುತ್ತದೆ. ಈಗಾಗಲೇ ನದಿ ಉಕ್ಕಿ ಹರಿಯುತ್ತಿದೆ. ಹಲವು ಸೇತುವೆಗಳು ಮುಳುಗಿ ವಿವಿಧ ಗ್ರಾಮಗಳಿಗೆ ಸಂಪರ್ಕ ಕಡಿದು ಹೋಗಿದೆ. ಧನೆಗಾಂವ್ ಅಣೆಕಟ್ಟೆಯಿಂದ ಜಿಲ್ಲೆಯ ಮಾಂಜಾರ ಜಲಾಶಯಕ್ಕೆ ನೀರು ಬಿಡುವ ಕಾರಣ ಸಮಸ್ಯೆ ಎದುರಾಗುವ ಸಾಧ್ಯತೆಯಿರುವ ಕಾರಣದಿಂದ ಜಿಲ್ಲಾಡಳಿತ ತಕ್ಷಣ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಕರ್ನಾಟಕ ಮತ್ತು ಮಹಾರಾಷ್ಟ್ರದ ಲಾತೂರು-ಬೀದರಕ್ಕೆ ಸಂಪರ್ಕ ಕಲ್ಪಿಸುವ ಬೀದರ್ ಲಾತೂರು ಮುಖ್ಯರಸ್ತೆಯಲ್ಲಿ ಒಂದು ಕ್ರೂಸರ್ ಜೀಪ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಜೆಸಿಬಿಯಿಂದ ಕ್ರೂಸರ್‌ ಜೀಪ್ ಅನ್ನು ನೀರಿನಿಂದ ಹೊರಗೆ ಎಳೆದು ತೆಗೆಯುತ್ತಿರುವ ವಿಡಿಯೋ ದೃಶ್ಯಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಸೋಮವಾರ ಸುರಿದ ಭಾರೀ ಮಳೆಯಲ್ಲಿ ರಸ್ತೆಗಳು ನೀರು ತುಂಬಿಕೊಂಡಿದ್ದವು. ಕ್ರೂಸರ್ ಜೀಪ್‌ನ ಮಾಲೀಕ ತುರ್ತಾಗಿ ಹೋಗಬೇಕಾದ ಅನಿವಾರ್ಯತೆ ಇದ್ದ ಕಾರಣ ರಾತ್ರಿಯಲ್ಲಿ ಪ್ರಯಾಣಿಸುವ ಪ್ರಯತ್ನದಲ್ಲಿ ಜೀಪ್ ಸಮೇತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ವಾಹನದಲ್ಲಿ ಇಬ್ಬರೇ ಇದ್ದ ಕಾರಣ ಅಕ್ಕ ಪಕ್ಕದಲ್ಲಿದ್ದ ಇತರೆ ವಾಹನ ಸವಾರರು ಇಬ್ಬರನ್ನೂ ರಕ್ಷಿಸಿ ದುರಂತವನ್ನು ತಪ್ಪಿಸಿದ್ದಾರೆ.

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಸಂಪರ್ಕ ಕಡಿದು ಹೋಗಿದೆ. ಮಹಾರಾಷ್ಟ್ರದ ಲಾತೂರು, ನಿಲಂಗಾ ಮತ್ತು ರಾಜ್ಯದ ಬೀದರ್ ಜಿಲ್ಲೆಗೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಅಂಬೇವಾಡಿ- ಜಮಖಂಡಿ ಬಳಿ ಇರುವ ಸೇತುವೆ ೨ ವರ್ಷಗಳ ಹಿಂದೆ ಭಾರಿ ಮಳೆಗೆ ಕುಸಿದಿತ್ತು. ಆದರೆ ಅದನ್ನು ಮರಳಿ ದೃಢವಾಗಿ ನಿರ್ಮಿಸಲು ಅಧಿಕಾರಿಗಳು ಗಮನಹರಿಸಿಲ್ಲ. ಸೇತುವೆ ಪಕ್ಕದಲ್ಲಿಯೇ ಕಚ್ಚಾ ರಸ್ತೆ ನಿರ್ಮಿಸಿ ಕೈತೊಳೆದುಕೊಂಡ ಅಧಿಕಾರಿಗಳು ಮರಳಿ ಇತ್ತ ಗಮನಹರಿಸಿಲ್ಲ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಕಂಡು ಕೇಳರಿಯದ ಮಳೆಗೆ ಮೈಯೊಡ್ಡಿದ ಹಾಸನ ಜಿಲ್ಲೆ

ಮಹಾರಾಷ್ಟ್ರದ ನಿಲಂಗಾ ತಾಲೂಕಿನ ಸಿರೂರ ಆನಂತಪಳ್ಳಿ ಸೇತುವೆಯಲ್ಲಿ ವ್ಯಕ್ತಿಯೊಬ್ಬರು ಸೇತುವೆ ದಾಟಲು ಹೋಗಿ ನೀರು ಪಾಲಾಗಿದ್ದಾರೆ. ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಭಾಲ್ಕಿಯ ಇಂಚೂರ ಸೇತುವೆ ಮುಳುಗಿದ ಕಾರಣ ಭಾಲ್ಕಿ-ಬಸವಕಲ್ಯಾಣ, ಹಾಗೂ ಭಾತಂಬ್ರಾ ಲಖನಗಾಂವ ಮಾರ್ಗದಿಂದ ಭಾಲ್ಕಿಗೆ, ಮಹಾರಾಷ್ಟ್ರದ ಉದಗೀರಕ್ಕೆ ಸಂಪರ್ಕ ಕಡಿತಗೊಂಡಿತ್ತು. ಜೊತೆಗೆ ಭಾರೀ ಮಳೆಗೆ ಔರಾದ ತಾಲೂಕಿನ ವಡಗಾಂವ, ನಿಡೋದ್ದಾ, ಮಣಗೇಂಪೂರ್ ಸೇರಿದಂತೆ ಹಲವು ಕಡೆ ಸಂಪರ್ಕ ಕಡಿತಗೊಂಡಿತ್ತು. ಮಳೆಯ ಪ್ರಮಾಣ ಮಂಗಳವಾರ ಕಡಿಮೆಯಾದ ಕಾರಣ ಮತ್ತೆ ಎಲ್ಲಡೆ ಸಂಪರ್ಕ ಪ್ರಾರಂಭಗೊಂಡಿದೆ. ಆದರೂ ತೆಲಂಗಾಣ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಹಲವು ಸೇತುವೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಹಳೆಯ ಶಿಥಿಲಗೊಂಡ ಸೇತುವೆಗಳು ದುರಸ್ತಿಯನ್ನೇ ಕಾಣದ ಕಾರಣದಿಂದ ಜನರು ಪರದಾಡುವಂತಾಗಿದೆ. ಆದರೆ ಮುಂಗಾರು ಆರಂಭದಲ್ಲಿಯೇ ಉತ್ತಮ ಮಳೆಯಾಗಿರುವುದು ರೈತರ ಮುಖದಲ್ಲಿ ಖುಷಿ ತಂದಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More