ಮೈಸೂರು ತಲಚೇರಿ ರೈಲು ಮಾರ್ಗಕ್ಕೆ ಗೌಪ್ಯ ಸರ್ವೆ; ಕೊಡಗಿನ ಜನತೆಯ ತೀವ್ರ ಆಕ್ರೋಶ

ಮೈಸೂರಿನಿಂದ ಕೇರಳದ ತಲಚೇರಿಗೆ ರೈಲ್ವೆ ಮಾರ್ಗದ ಮೂಲಕ ಸಂಪರ್ಕ ಕಲ್ಪಿಸುವ ಯೋಜನೆಗೆ ಕೇರಳ ಸರ್ಕಾರ ಮತ್ತೆ ಚಾಲನೆ ನೀಡುತ್ತಿದೆ. ಹಿಂದೆ ಈ ಯೋಜನೆಗೆ ಕೊಡಗಿನ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈಗ ಮತ್ತೆ ಜಿಲ್ಲೆಯಲ್ಲಿ ರೈಲ್ವೆ ವಿರುದ್ಧ ಪ್ರತಿಭಟನೆಗೆ ಸಿದ್ಧತೆ ನಡೆಯುತ್ತಿದೆ

ಮೈಸೂರಿನಿಂದ ಕೇರಳದ ತಲಚೇರಿಗೆ ರೈಲ್ವೇ ಮಾರ್ಗದ ಮೂಲಕ ಸಂಪರ್ಕ ಕಲ್ಪಿಸಲು ಪುನಃ ಕೇರಳ ಸರ್ಕಾರ ಮುಂದಾಗಿದೆ. ಈ ಹಿಂದೆ ಸುಮಾರು 3778 ಕೋಟಿ ರೂಪಯಿಗಳ ಈ ಯೋಜನೆಗೆ ಕೇರಳ ಸರ್ಕಾರ ಮುಂದಾಗಿದ್ದು ಕೊಡಗಿನಲ್ಲಿ ಈ ಅರಣ್ಯ ನಾಶದ ಯೋಜನೆಗೆ ಪುನಃ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಅದರೆ ಕಳೆದ ಶುಕ್ರವಾರ ಕೊಂಕಣ್ ರೈಲ್ವೇ ಕಾರ್ಪೊರೇಷನ್ ಅಧಿಕಾರಿಗಳು ಕೊಡಗಿನ ಗಡಿ ಭಾಗವಾದ ವೀರಾಜಪೇಟೆ ತಾಲ್ಲೂಕಿನ ಕುಟ್ಟ ಮತ್ತು ಬಾಡಗ ಗ್ರಾಮದಲ್ಲಿ ಉದ್ದೇಶಿತ ರೈಲ್ವೇ ಯೋಜನೆ ಸಂಬಂಧ ಗೂಗಲ್ ಮೂಲಕ ಜಿಪಿಎಸ್ ಸರ್ವೆ ಕಾರ್ಯಕ್ಕೆ ಮುಂದಾಗಿದ್ದರು. ವಿಷಯ ತಿಳಿದ ಬೆನ್ನಲ್ಲೇ ನೂರಾರು ಗ್ರಾಮಸ್ಥರು ಸರ್ವೆ ಕಾರ್ಯಕ್ಕೆ ತಡೆ ಒಡ್ಡಿದ್ದಾರೆ. ಅಷ್ಟೇ ಅಲ್ಲ ಸುಮಾರು 10 ರಿಂದ 15 ರಷ್ಟಿದ್ದ ಅಧಿಕಾರಿಗಳ ಮೇಲೆ ಹಲ್ಲೆಗೂ ಮುಂದಾಗಿದ್ದು ಅವರ ವಾಹನಗಳನ್ನೂ ಗುರುತು ಪತ್ರಗಳನ್ನೂ ಕಸಿದುಕೊಂಡಿದ್ದಾರೆ. ಅಧಿಕಾರಿಗಳು ಗ್ರಾಮಸ್ಥರ ಆಕ್ರೋಶ ಎದುರಿಸಲಾಗದೇ ಹಿಂತಿರುಗಿದ್ದಾರೆ. ಮುಖ್ಯವಾಗಿ ವೀರಾಜಪೇಟೆ ತಾಲ್ಲೂಕಿನ ತಹಸೀಲ್ದಾರ್‌ ಅಥವಾ ಇತರ ಯಾವುದೇ ಅಧಿಕಾರಿಗಳಿಗೆ ಕೇರಳದ ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿಲ್ಲ.

ಕುಟ್ಟ ಗ್ರಾಮಸ್ಥ ಎಂ ಪಿ ಕಾವೇರಪ್ಪ ಅವರನ್ನು ದಿ ಸ್ಟೇಟ್ ಮಾತನಾಡಿಸಿದಾಗ ಕೇರಳದಿಂದ ಬಂದಿದ್ದ ಅಧಿಕಾರಿಗಳ ತಂಡ ರೈಲ್ವೇ ಮಾರ್ಗದ ಸರ್ವೆ ಕಾರ್ಯವನ್ನು ಜಿಪಿಎಸ್ ಮೂಲಕ ಖಾಸಗೀ ಜಮೀನುಗಳಲ್ಲಿ ಮಾಡಲು ಮುಂದಾಯಿತು. ಕೂಡಲೇ ಗ್ರಾಮಸ್ಥರು ಪ್ರತಿಭಟಿಸಿದರಲ್ಲದೆ ಖಾಸಗಿ ಜಮೀನುಗಳಿಗೆ ಪ್ರವೇಶಿಸಿದರೆ ಅಕ್ರಮ ಪ್ರವೇಶ ಆರೋಪದಡಿ ಪೋಲೀಸರಿಗೆ ದೂರು ನೀಡಿ ಮೊಕದ್ದಮೆ ದಾಖಲಿಸಲಾಗುವದೆಂದು ಎಚ್ಚರಿಸಲಾಯಿತು. ಅದಿಕಾರಿಗಳು ಸ್ಥಳದಿಂದ ತೆರಳಿದರು ಎಂದು ತಿಳಿಸಿದರು.

ಇದೇ ವರ್ಷದ ಫೆಬ್ರುವರಿ 18 ರಂದು ಕೊಡಗಿನ ಎಲ್ಲಾ ಕೊಡವ ಸಮಾಜಗಳ ಒಕ್ಕೂಟ, ‘ಸೇವ್ ಕೊಡಗು’ ಫೋರಂ ಹಾಗೂ ಜನಪರ ಸಂಘಟನೆಗಳು ಮೈಸೂರಿನಲ್ಲಿ ಉದ್ದೇಶಿತ ಮೈಸೂರು -ತಲಚೇರಿ ರೈಲ್ವೇ ಮಾರ್ಗದ ವಿರುದ್ದ ಬೃಹತ್ ಪ್ರತಿಭಟನೆಯನ್ನೂ ನಡೆಸಿದ್ದವು.

ವ್ಯಾಪಕ ಪ್ರತಿಭಟನೆಯ ನಂತರ ರಾಜ್ಯ ಸರ್ಕಾರ ಮತ್ತು ಸ್ವತಃ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಂ ಆರ್ ಸೀತಾರಾಂ ಅವರೂ ಕೊಡಗಿನ ಪರಿಸರಕ್ಕೆ ಧಕ್ಕೆ ತರುವ ಈ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದೇ ಘೋಷಿಸಿದ್ದರು. ಈ ಯೋಜನೆಯನ್ನು ಕೈಬಿಡಲಾಗಿದೆ ಎಂದು ಸ್ವತಃ ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ರೈಲ್ವೇ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದರು.

ಈ ವ್ಯಾಪಕ ಪ್ರತಿಭಟನೆಯ ನಂತರವೂ ಕೂಡ ನಾಲ್ಕು ತಿಂಗಳೂ ಸುಮ್ಮನಿದ್ದಂತೆ ಮಾಡಿದ ಕೇರಳ ಸರ್ಕಾರದ ಅಧಿಕಾರಿಗಳು ಇದೀಗ ಪುನಃ ಸರ್ವೆ ಕಾರ್ಯಕ್ಕೆ ಮುಂದಾಗಿರುವುದು ಜಿಲ್ಲೆಯಲ್ಲಿ ತೀವ್ರ ಆಕ್ರೋಶವನ್ನೇ ಹುಟ್ಟು ಹಾಕಿದೆ. ಕೊಡವ ಸಮಾಜಗಳ ಒಕ್ಕೂಟದ ಅದ್ಯಕ್ಷ ವಿಷ್ಣು ಕಾರ್ಯಪ್ಪ ಅವರು ಜಿಲ್ಲೆಯ ಜನತೆ ಒಂದಾಗಿದ್ದು ಪದೇ ಪದೇ ಕೊಡಗಿನ ಜನತೆಯ ತಾಳ್ಮೆಯ ಪರೀಕ್ಷೆ ಮಾಡಬೇಡಿ ಎಂದು ಕಟು ಎಚ್ಚರಿಕೆ ನೀಡಿದ್ದಾರೆ.

ತೀವ್ರ ಪ್ರತಿರೋಧದ ನಡುವೆಯೂ ಗೋಪ್ಯವಾಗಿ ಸರ್ವೆ ಕಾರ್ಯಕ್ಕೆ ಮುಂದಾದ ಕೇರಳ ಸರ್ಕಾರ ನಿಜಕ್ಕೂ ಕುಟಿಲತೆಯಿಂದ ತನ್ನ ಅಭಿವೃದ್ದಿ ಮಾಡಕೊಳ್ಳಲು ಹೊರಟಿದೆ ಎಂದು ಸ್ಪಷ್ಟವಾಗಿದೆ. ಕೊಡಗಿನ ಮೂಲಕ ಮೈಸೂರು-ತಲಚೇರಿ ರೈಲ್ವೇ ಮಾರ್ಗ ಸುಮಾರು 247.75 ಕಿಲೋಮೀಟರ್ ಆಗಲಿದ್ದು ಇದಕ್ಕೆ 3778 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಕೇರಳ ಸರ್ಕಾರ ಹಾಗೂ ಕೇರಳ ಸರ್ಕಾರೀ ಸ್ವಾಮ್ಯದ ಕೇರಳ ರೈಲ್ ಡೆವಲಪ್‍ಮೆಂಟ್ ಕಾರ್ಪೊರೇಷನ್ ಲಿಮಿಟೆಡ್(ಕೆಆರ್‍ಡಿಸಿಎಲ್) ಈ ಯೋಜನೆಯನ್ನು ಜಂಟಿಯಾಗಿ ಶೇಕಡಾ 49;51 ರ ಪಾಲುದಾರಿಕೆಯಲ್ಲಿ ಕೈಗೆತ್ತಿಕೊಳ್ಳಲು ನಿರ್ದರಿಸಿವೆ ಎಂದು ಮೂಲಗಳು ತಿಳಿಸಿದ್ದು ಡಿಟೇಲ್ಡ್ ಪ್ರಾಜೆಕ್ಟ್ ರಿಪೋರ್ಟ್ ಇನ್ನೂ ತಯಾರಿಸಬೇಕಿದೆ ಅದಕಾಗಿ ಸರ್ವೆಗೆ ಮುಂದಾಗಿವೆ ಎಂದೂ ಮೂಲಗಳು ತಿಳಿಸಿವೆ.

ಈ ಕುರಿತು ಮಾತನಾಡಿದ ವೀರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಅವರು ಈ ಯೋಜನೆ ಜಾರಿಯಾದರೆ ಅಮೂಲ್ಯ ಅರಣ್ಯ ಸಂಪತ್ತು ನಾಶವಾಗುವುದಲ್ಲದೆ ಜಿಲ್ಲೆಯೇ ಬರಡಾಗಲಿದೆ, ಜಿಲ್ಲೆಯ ಅಸ್ತಿತ್ವವೇ ನಾಶವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಯಾವುದೇ ಕಾರಣಕ್ಕೂ ಈ ಯೋಜನೆ ಬರಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

ಇಂದಿಗೂ ಇಡೀ ರಾಜ್ಯದಲ್ಲಿ ರೈಲ್ವೇ ಸಂಪರ್ಕ ಇಲ್ಲದ ಜಿಲ್ಲೆ ಎಂದರೆ ಕೊಡಗು ಮಾತ್ರ. ರೈಲ್ವೇ ಸೌಕರ್ಯ ಇಲ್ಲ ಎಂದ ಮಾತ್ರಕ್ಕೆ ಈ ಸೌಲಭ್ಯಕ್ಕೆ ಬೇಡಿಕೆ ಇಲ್ಲ ಎಂದೇನೂ ಇಲ್ಲ. ಮೈಸೂರಿನಿಂದ ಕುಶಾಲನಗರದ ವರೆಗಿನ 80 ಕಿಲೋಮೀಟರ್ ಉದ್ದ ರೈಲ್ವೇ ಮಾರ್ಗಕ್ಕೆ ಈಗಲೂ ಬೇಡಿಕೆ ಇದೆ ಮತ್ತು ಜಿಲ್ಲೆಯ ಜನತೆ ಒತ್ತಾಯಿಸುತ್ತಲೂ ಇದ್ದಾರೆ ಆದರೆ ಕೇಂದ್ರ ಸರ್ಕಾರ ಮಾತ್ರ ಇನ್ನೂ ದೀರ್ಘ ನಿದ್ರೆಯಲ್ಲಿದೆ.

ಆದರೆ ಅಭಿವೃದ್ದಿ ಕಾರ್ಯದಲ್ಲಿ ಕರ್ನಾಟಕಕ್ಕಿಂತಲೂ ಬಹಳ ಮುಂದಿರುವ ಕೇರಳ ರಾಜ್ಯ ಮಾತ್ರ ತಾನು ಮತ್ತಷ್ಟು ಅಭಿವೃದ್ದಿಯಾಗಲು ಕೊಡಗಿನ ಸಸ್ಯ ಸಂಪತ್ತನ್ನೇ ನಾಶ ಮಾಡಲು ಹೊರಟಿದ್ದು ಇದಕ್ಕೆ ಜಿಲ್ಲಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಕೇಂದ್ರ ಸರ್ಕಾರೀ ಸ್ವಾಮ್ಯದ ಪವರ್ ಗ್ರಿಡ್ ಕಂಪೆನಿ ತಮಿಳುನಾಡಿನಿಂದ -ಕೇರಳಕ್ಕೆ ವಿದ್ಯುತ್ ಸರಬರಾಜು ಮಾಡಲು ವೀರಾಜಪೇಟೆ ತಾಲ್ಲೂಕಿನ ಮೀಸಲು ಅರಣ್ಯ ನಾಶಕ್ಕೆ ಕಾರಣವಾಯಿತು. ಸುಮಾರು 5 ವರ್ಷಗಳ ಹಿಂದೆ ಕೈಗೆತ್ತಿಕೊಳ್ಳಲಾದ ಈ ಕಾರ್ಯದಲ್ಲಿ ಜಿಲ್ಲೆಯ ರಾಜಕೀಯ ನಾಯಕರು, ಪರಿಸರವಾದಿಗಳು ಮತ್ತು ಜನತೆಯ ವ್ಯಾಪಕ ಪ್ರತಿರೋಧದ ನಡುವೆಯೂ ಪವರ್ ಗ್ರಿಡ್ ಕಂಪೆನಿ ಕೇರಳಕ್ಕೆ ವಿದ್ಯುತ್ ಮಾರ್ಗ ನಿರ್ಮಿಸಿತು. ಈ ಮಾರ್ಗ ನಿರ್ಮಾಣಕ್ಕೆ ಕೊಡಗಿನ ಸುಮಾರು 50 ಸಾವಿರಕ್ಕೂ ಮಿಕ್ಕಿ ಬೃಹತ್ ಮರಗಳು ಬಲಿಯಾದವು ಎಂದು ಪರಿಸರವಾದಿಗಳು ವಿಷಾದ ವ್ಯಕ್ತಪಡಿಸುತ್ತಾರೆ.

ಈ ವಿದ್ಯುತ್ ಮಾರ್ಗ ನಿರ್ಮಾಣ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಇದನ್ನು ವಿರೋಧಿಸಿ ಬೃಹತ್ ಹೋರಾಟವೇ ನಡೆಯಿತು ಅದರೆ ಕೊಡಗಿನ ಟಿಂಬರ್ ಮಾಫಿಯಾ ಮತ್ತು ಬಂಡವಾಳ ಶಾಹಿಗಳ ಪ್ರಭಾವದ ನಡುವೆ ಜನತೆಯ ಕೂಗು ಅರಣ್ಯ ರೋದನೆ ಆಯಿತಲ್ಲದೆ ಕೇರಳಕ್ಕೆ ವಿದ್ಯುತ್ ಮಾರ್ಗ ನಿರ್ಮಾಣ ಆಯಿತು.

ಇದನ್ನೂ ಓದಿ : ತಲಚೇರಿ- ಮೈಸೂರು ರೈಲು ಮಾರ್ಗಕ್ಕೆ ಕೊಡಗಿನಲ್ಲಿ ವ್ಯಾಪಕ ವಿರೋಧ 

ಇದೇ ರೀತಿ ಇದೀಗ ಮೈಸೂರಿನಿಂದ ತಲಚೇರಿಗೆ ರೈಲ್ವೇ ಮಾರ್ಗ ನಿರ್ಮಾಣಕ್ಕೆ ಕೇರಳ ಸರ್ಕಾರ ಒತ್ತಡ ಹಾಕುತ್ತಿದೆ. ಕೇರಳ ರಾಜ್ಯ ಸರ್ಕಾರದ ಈ ಯೋಜನೆ ಇಂದು ನಿನ್ನೆಯದಲ್ಲ. ಇದು ಸುಮಾರು 10 ವರ್ಷಗಳ ಹಿಂದಿನ ಯೋಜನೆ ಎನ್ನಲಾಗಿದೆ. ಕಳೆದ 2 ವರ್ಷದ ಹಿಂದೆ ಇದೇ ಯೋಜನೆ ಸಂಬಂಧ ಕೇರಳ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳ ನಿಯೋಗ ಬೆಂಗಳೂರಿನ ವಿಧಾನ ಸೌಧದಲ್ಲಿ ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಮೈಸೂರು ತಲಚೇರಿ ರೈಲು ಮಾರ್ಗಕ್ಕೆ ಅನುಮತಿ ಪಡೆದಿದೆ ಎಂದು ಕೇರಳದ ಆಂಗ್ಲ ಪತ್ರಿಕೆಗಳು ಪ್ರಕಟಿಸಿದ್ದವು. ಈ ಪತ್ರಿಕೆಗಳ ಮೂಲಕವೇ ಕೊಡಗಿನ ಜನತೆಗೂ ಮಾಹಿತಿ ಸಿಕ್ಕಿತ್ತು.

ಇದೀಗ ಸರ್ವೆ ಕಾರ್ಯಕ್ಕೆ ಮುಂದಾಗಿರುವ ಕೇರಳ ಸರ್ಕಾರದ ನಡೆಯಿಂದಾಗಿ ಕೇರಳವು ಇನ್ನೂ ಈ ಯೋಜನೆಯನ್ನು ಕೈಬಿಟ್ಟಿಲ್ಲ ಎಂದು ಸಾಬೀತಾಗಿದೆ. ಆದರೆ ಜಿಲ್ಲೆಯ ಜನತೆ ಹಿಂಸಾತ್ಮಕ ಹೋರಾಟಕ್ಕಿಳಿದಾದರೂ ಅರಣ್ಯ ನಾಶ ಆಗುವ ಈ ಯೋಜನೆಯನ್ನು ತಡೆಯಲು ಮುಂದಾಗಿದ್ದಾರೆ ಏಕೆಂದರೆ ಇದು ಜಿಲ್ಲೆಯ ಅಸ್ತಿತ್ವದ ಪ್ರಶ್ನೆಯಾಗಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More