ಬೀದರ್ ವೈದ್ಯಕೀಯ ಕಾಲೇಜಿನಲ್ಲಿ ಭ್ರಷ್ಟಾಚಾರ; ಹತ್ತು ಜನರ ವಿರುದ್ಧ ಎಫ್‌ಐಆರ್‌

ಬೀದರ್ ಜಿಲ್ಲೆಗೆ ಧರ್ಮಸಿಂಗ್ ಸರ್ಕಾರ ಮಂಜೂರು ಮಾಡಿದ ವೈದ್ಯಕೀಯ ಕಾಲೇಜಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಆದರೆ, ಬಡ ರೋಗಿಗಳಿಗೆ ಅನುಕೂಲಕ್ಕೆ ಬದಲಾಗಿ ನಿರ್ದೇಶಕರು, ವೈದ್ಯರು, ಸಿಬ್ಬಂದಿಗಳು ಸರ್ಕಾರದ ಹಣ ಕೊಳ್ಳೆ ಹೊಡೆಯುವ ಆರೋಪಗಳು ಬಂದಿವೆ

ಒಂದಲ್ಲ ಒಂದು ವಿವಾದಗಳಿಂದ ಸುದ್ದಿಯಾಗುತ್ತಿರುವ ಬ್ರಿಮ್ಸ್‌ನಲ್ಲಿ (ಬೀದರ್ ಮೆಡಿಕಲ್ ಕಾಲೇಜು) ಈ ಬಾರಿ ನಿರ್ದೇಶಕರು ಸೇರಿದಂತೆ ೧೦ ಜನರ ವಿರುದ್ಧ ಎಸಿಬಿ ಎಫ್ಐಆರ್ ದಾಖಲಿಸಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಈ ಸಂಬಂಧ ಪೂರ್ವಾನುಮತಿ ಕೋರಿ ಪತ್ರ ಬರೆದು ಎರಡು ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ರಾಜ್ಯದ ಹಿಂದುಳಿದ ಗಡಿ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿರುವ ಬೀದರ್ ಜಿಲ್ಲೆಗೆ ಧರ್ಮಸಿಂಗ್ ಸರ್ಕಾರ ವೈದ್ಯಕೀಯ ಕಾಲೇಜು ಮಂಜೂರು ಮಾಡಿತ್ತು. ನಂತರ ಈ ವೈದ್ಯಕೀಯ ಕಾಲೇಜಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನಗಳನ್ನೂ ನೀಡಲಾಗಿತ್ತು. ಆದರೆ, ಬಡ ರೋಗಿಗಳಿಗೆ ಅದರಿಂದ ಅನುಕೂಲವಾಗಿಲ್ಲ. ಬದಲಾಗಿ, ಬ್ರಿಮ್ಸ್‌ನಲ್ಲಿ ಅಧಿಕಾರ ನಡೆಸುತ್ತಿರುವ ನಿರ್ದೇಶಕರು, ವೈದ್ಯರು, ಸಿಬ್ಬಂದಿಗಳು ಸರ್ಕಾರದ ಹಣ ಕೊಳ್ಳೆ ಹೊಡೆಯುವ ಬಗ್ಗೆ ಆರೋಪಗಳು ಬಂದಿವೆ.

ಕಳೆದ ಎರಡು ವರ್ಷಗಳಲ್ಲಿ ನಡೆದ ಟೆಂಡರ್, ನೇಮಕಾತಿ, ಔಷಧಿ ಖರೀದಿ, ಪಿಠೋಪಕರಣ ಖರೀದಿ ಎಲ್ಲದರಲ್ಲೂ ಕಮಿಷನ್ ಪಡೆಯಲಾಗಿದೆ ಎಂದು ಎಸಿಬಿ ಆರೋಪಿಸಿದೆ. ಎಸಿಬಿ ಮಹಾನಿರ್ದೇಕರಾದ ಅಲೋಕ ಮಹೋನ ಅವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ, ಬ್ರಿಮ್ಸ್‌ನಲ್ಲಿ 20 ಕೋಟಿಗೂ ಅಧಿಕ ಹಣ ದುರ್ಬಳಕೆಯಾಗಿರುವ ಆರೋಪ ಹೊರಿಸಿದ್ದಾರೆ. ಹಾಲಿ ಬ್ರಿಮ್ಸ್ ನಿರ್ದೇಶಕರಾದ ಡಾ.ಸಿ ಚನ್ನಣ್ಣ ಅವರು ತಮಗೆ ಬೇಕಾದಂತೆ ವೈದ್ಯಕೀಯ ತಂಡ ರಚಿಸಿಕೊಂಡು ಹಣದ ದುರ್ಬಳಕೆ ಮಾಡಿದ ಆರೋಪ ಹೊತ್ತಿದ್ದಾರೆ. ಬ್ರಿಮ್ಸ್‌ನಲ್ಲಿ ನಡೆದ ಅಕ್ರಮಗಳ ಬಗ್ಗೆ ಸ್ಥಳೀಯರಾದ ಮಾರುತಿ ಕಂಟಿ ಎನ್ನುವವರು ಬೀದರ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ. ಬೀದರ್ ಎಸಿಬಿ ಕೂಲಂಕಶವಾಗಿ ತನಿಖೆ ನಡೆಸಿ ನಂತರ ಕಲಬುರ್ಗಿ ಎಸಿಬಿಗೆ ವರದಿ ನೀಡಿದೆ. ಕಲಬುರ್ಗಿ ಎಸಿಬಿ ಅವರು ಇನ್ನೊಮ್ಮೆ ತನಿಖೆ ನಡೆಸಿ ಭ್ರಷ್ಟಾಚಾರ ನಿಗ್ರಹದಳದ ಮುಖ್ಯಸ್ಥರಾದ ಅಲೋಕ ಮೋಹನ ಅವರಿಗೆ ವರದಿ ನೀಡಿದ್ದಾರೆ.

ಅವರು ಕೂಡ 2018ರ ಮಾ.೨೪ರಂದು ಆರೋಗ್ಯ ಇಲಾಖೆ ಮತ್ತು ಬೆಂಗಳೂರು ವೈದ್ಯಕೀಯ ಶಿಕ್ಷಣ ಇಲಾಖೆಯ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಎಫ್‌ಐಆರ್ ದಾಖಲಿಸಿ ತನಿಖೆ ಮಾಡಲು ಅನುಮತಿ ನೀಡಿ ಎಂದು ಪತ್ರ ಬರೆದು ಎರಡು ತಿಂಗಳು ಕಳೆದಿದೆ. ಆದರೆ ಸರ್ಕಾರದಿಂದ ಏನೂ ಉತ್ತರ ಬಂದಿಲ್ಲ.

ತನಿಖೆಗೆ ಅನುಮತಿ ಕೋರಿ ಎಸಿಬಿ ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರದ ಪ್ರತಿ
ಇದನ್ನೂ ಓದಿ : ಗೋಮಾಳ ಮಂಜೂರು; ಅಧಿಕಾರಿ ವಿರುದ್ಧ ಎಸಿಬಿ ತನಿಖೆ ಅಗತ್ಯವಿಲ್ಲ ಎಂದ ಎ.ಜಿ!

ಎಸಿಬಿ ವರದಿಯ ಪ್ರಕಾರ, ಟೆಂಡರ್‌ನಲ್ಲಿ ಅಕ್ರಮ ನಡೆದಿದೆ. ಅದನ್ನು ಹೊರತುಪಡಿಸಿ ಔಷಧಿ ಖರೀದಿ, ಹೊರಗುತ್ತಿಗೆ ನೇಮಕಾತಿಯಲ್ಲೂ ಅಕ್ರಮ ನಡೆದಿರುವುದಾಗಿ ಆರೋಪಿಸಲಾಗಿದೆ. ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಹಣ ಲೂಟಿ ಮಾಡಲಾಗಿದೆ. ಕೊಟೇಶನ್‌ನಲ್ಲೂ ಲೋಪ ಕಂಡುಬಂದಿದೆ. ಎನ್‌ಎಚ್‌ಎಂ ಯೋಜನೆ ಅಡಿಯಲ್ಲಿ ಔಷಧಿ ಖರೀದಿಯಲ್ಲೂ ಅಕ್ರಮ ನಡೆದಿರುವ ಆರೋಪವಿದೆ. ಎಸಿಬಿ ನಿರ್ದೇಶಕರು ಸಲ್ಲಿಸಿದ ದಾಖಲೆಗಳ ಪ್ರಕಾರ, ವಿವಿಧ ಪೀಠೋಪಕರಣ ಮಾರುಕಟ್ಟೆ ದರಕ್ಕಿಂತ 2-3 ಪಟ್ಟು ಜಾಸ್ತಿ ಬೆಲೆಯಲ್ಲಿ ಟೆಂಡರ್ ಕರೆದು ಖರೀದಿಸಲಾಗಿದೆ. 2015-16, 2016-17ರಲ್ಲಿ 10 ಕೋಟಿ ಹಣ ಇದಕ್ಕೆ ಬಿಡುಗಡೆ ಮಾಡಿದ್ದಾಗಿ ತಿಳಿಸಿದ್ದಾರೆ. ಆದರೆ, ಅದರಲ್ಲಿ ಖರೀದಿಸಿದ ಸಾಮಗ್ರಿಗಳ ಮೊತ್ತ ಮಾತ್ರ 4.88 ಕೋಟಿ ರುಪಾಯಿ. ಉಳಿದ 5 ಕೋಟಿ ಹಣ ಎಲ್ಲಿಗೆ ಹೋಯಿತು ಎನ್ನುವ ಪ್ರಶ್ನೆ ಎದ್ದಿದೆ.

ಎಸಿಬಿ ರಾಜ್ಯ ಸರ್ಕಾರಕ್ಕೆ ನೀಡಿದ ವರದಿಯಲ್ಲಿ, ಬ್ರಿಮ್ಸ್ ನಿರ್ದೇಶಕ ಡಾ.ಸಿ ಚನ್ನಣ್ಣ, ಬ್ರಿಮ್ಸ್ ಮುಖ್ಯ ಆಡಳಿತಾಧಿಕಾರಿ ಆನಂದಸಾಗರ ರೆಡ್ಡಿ, ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಶೆಟ್ಕರ್, ಆಡಳಿತಾಧಿಕಾರಿ ಶ್ರೀಮತಿ ಅನಸೂಯ, ಬ್ರಿಮ್ಸ್ ಕಚೇರಿ ಅಧೀಕ್ಷಕಪ್ರಕಾಶ ಮಡಿವಾಳ, ಕಚೇರಿ ಅಧೀಕ್ಷಕ ಬಾಬುಕೋಟೆ, ಪ್ರಥಮ ದರ್ಜೆ ಸಹಾಯಕ ಪ್ರಕಾಶ ಮಾಳಗೆ, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ವರ್ಷಾ, ನಿವೃತ ಕಚೇರಿ ಅಧೀಕ್ಷಕ ಮಾಚೆ ಕಲ್ಪಪ್ಪ, ಹೊರಗುತ್ತಿಗೆ ಸಹಾಯಕ ಶಿವಾಜಿ ಮೊದಲಾದವರ ಮೇಲೆ ಆರೋಪ ಹೊರಿಸಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More