ವಿಡಿಯೋ ಸ್ಟೋರಿ | ಮಲೆನಾಡು, ಕರಾವಳಿಯಲ್ಲಿ ನಿಲ್ಲದ ಮಳೆ; ಸಂಚಾರ ಅಸ್ತವ್ಯಸ್ತ

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಗುರುವಾರ ಕಳಸ- ಹೊರನಾಡು- ಕುದುರೆಮುಖಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಹೆಬ್ಬಾಳೆ ಸೇತುವೆ ಮುಳುಗಿ, ಮಂಗಳೂರಿಗೆ ಇದ್ದ ಪರ್ಯಾಯ ಮಾರ್ಗವೂ ಬಂದ್ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಸಂಚಾರ ಸ್ಥಗಿತಗೊಳಿಸಲಾಗಿದೆ

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಗುರುವಾರ ಕಳಸ- ಹೊರನಾಡು- ಕುದುರೆಮುಖಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಹೆಬ್ಬಾಳೆ ಸೇತುವೆ ಮುಳುಗಿ ಮಂಗಳೂರಿಗೆ ಇದ್ದ ಪರ್ಯಾಯ ಮಾರ್ಗವೂ ಬಂದ್ ಆಗಿದೆ. ಸೇತುವೆ ಕಾಣದಂತೆ ನೀರು ಹರಿಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಚಾರ್ಮಾಡಿಯಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಶೃಂಗೇರಿ- ಕಾರ್ಕಳ ಪರ್ಯಾಯ ಮಾರ್ಗದ ಮೂಲಕ ಸಂಚರಿಸುವಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಸೂಚಿಸಿದ್ದರು. ಘಟ್ಟದ ಎರಡೂ ಮಾರ್ಗಗಳು ಸ್ಥಗಿತಗೊಂಡಿರುವ ಕಾರಣ ಮಂಗಳೂರಿನಿಂದ ಸಂಪಾಜೆ ಮಾರ್ಗವಾಗಿ ಬೆಂಗಳೂರು ಮತ್ತಿತರ ಕಡೆಗಳಿಗೆ ಪ್ರಯಾಣಿಕರು ತೆರಳುತ್ತಿದ್ದು, ಅಲ್ಲಿಯೂ ಸಂಚಾರ ದಟ್ಟಣೆ ಹೆಚ್ಚಾಗಿದೆ.

ಚಾರ್ಮಾಡಿಯಲ್ಲಿ ಗುರುವಾರ ಸಂಜೆ ಹೊತ್ತಿಗೆ ರಸ್ತೆ ಸಂಚಾರ ಮುಕ್ತವಾಗಬಹುದು ಎನ್ನಲಾಗುತ್ತಿದ್ದರೂ, ಮತ್ತೆ ಮಳೆ ಬಂದರೆ ಭೂಕುಸಿತ ಸಂಭವಿಸುವ ಭೀತಿ ಇದೆ ಎನ್ನಲಾಗುತ್ತಿದೆ. 10 ಹಿಟಾಚಿ, 13 ಜೆಸಿಬಿ ಹಾಗೂ ಹಲವು ಲಾರಿಗಳು ತೆರವು ಕಾರ್ಯಾಚರಣೆಯಲ್ಲಿ ಮಗ್ನವಾಗಿವೆ. ಸದ್ಯ ಏಕಮುಖ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಇದನ್ನೂ ಓದಿ : ಓಕಿ ಚಂಡಮಾರುತದ ಕಾರಣ ಮುಂಬೈನಲ್ಲಿ ಭಾರಿ ಗಾತ್ರದ ಆಲಿಕಲ್ಲು ಮಳೆ ಸುರಿಯಿತೇ?

ಇತ್ತ, ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ ಬಿದ್ದ ಪರಿಣಾಮ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ಗುರುವಾರ ಬೆಳಿಗ್ಗೆಯೇ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ರಸ್ತೆಗಳು ಜಲಾವೃತವಾಗಿದ್ದ ದೃಶ್ಯ ಕಂಡುಬಂತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಈ ಬಾರಿ ಶೇ.144ರಷ್ಟು ಹೆಚ್ಚು ಮಳೆಯಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 7 ಮಂದಿ ಮೃತಪಟ್ಟಿದ್ದಾರೆ. 167 ಎಕರೆ ತೋಟಗಾರಿಕಾ ಭೂಮಿ ನಾಶವಾಗಿದ್ದು, 748 ಮನೆಗಳಿಗೆ ಹಾನಿಯಾಗಿದೆ. 155 ಕಿಮೀ ಉದ್ದದ ರಸ್ತೆ ಹಾನಿಗೀಡಾಗಿದ್ದು, 4.5 ಕೋಟಿ ರುಪಾಯಿ ನಷ್ಟ ಸಂಭವಿಸಿದೆ. ಬಂಟ್ವಾಳದ ತುಂಬೆ ಅಣೆಕಟ್ಟಿನಲ್ಲಿ ನೇತ್ರಾವತಿಯ ನೀರಿನ ಮಟ್ಟ 6.8 ಮೀಟರಿನಷ್ಟಿದೆ (ಗರಿಷ್ಠ ಮಿತಿ 8.5 ಮೀ). ಪುತ್ತೂರಿನ ಕುಮಾರಧಾರಾ ನದಿಗೆ ಕಟ್ಟಿರುವ 28.5 ಮೀಟರ್ ಸಾಮರ್ಥ್ಯದ ಅಣೆಕಟ್ಟಿನಲ್ಲಿ ಈಗಾಗಲೇ 22 ಮೀ ನೀರು ಹರಿದುಬಂದಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More