ವಿಡಿಯೋ ಸ್ಟೋರಿ | ಮಹಾಮಳೆಗೆ ತತ್ತರಿಸಿದ ಕೊಡಗು, ವೀರಾಜಪೇಟೆ-ಕೇರಳ ರಸ್ತೆ ಬಂದ್

ಕೊಡಗಿನಲ್ಲಿ ಭಾರಿ ಮಳೆಗೆ ರಸ್ತೆಗಳು ಹಾನಿಗೀಡಾಗಿದ್ದು, ಪೆರುಂಬಾಡಿ-ಮಾಕುಟ್ಟ ರಸ್ತೆಯಲ್ಲಿ ಜು.೧೩ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಬದಲಿಗೆ, ಗೋಣಿಕೊಪ್ಪ-ಪೊನ್ನಂಪೇಟೆ-ಶ್ರೀಮಂಗಲ-ಕುಟ್ಟ ಮಾರ್ಗವಾಗಿ ಕೇರಳಕ್ಕೆ ತೆರಳುವಂತೆ ವಾಹನ ಚಾಲಕರಿಗೆ ಸೂಚಿಸಲಾಗಿದೆ

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಹಾಮಳೆಗೆ ತೊಯ್ದ ಗುಬ್ಬಚ್ಚಿಯಂತಾಗಿದೆ ಕೊಡಗು. ಜನಜೀವನ ಅಸ್ತವ್ಯಸ್ತಗೊಂಡಿದೆ. ಸಾಮಾನ್ಯವಾಗಿ ಜೂನ್ ಅಂತ್ಯದಿಂದ ಜುಲೈ ಪೂರಾ ಕಾಣಿಸಿಕೊಳ್ಳುತಿದ್ದ ಧಾರಾಕಾರ ಮಳೆ ಈ ಬಾರಿ ಒಂದು ವಾರ ಮೊದಲೇ ಬಂದಿದೆ. ಭಾರತೀಯ ಹವಾಮಾನ ಇಲಾಖೆಯು ಮೇ ತಿಂಗಳ ಮಧ್ಯಭಾಗದಲ್ಲೇ ಪ್ರಕಟಣೆ ನೀಡಿ ರಾಜ್ಯಕ್ಕೆ ಮೇ ೨೮ರಂದೇ ಮುಂಗಾರು ಪ್ರವೇಶವಾಗಲಿದೆ ಎಂದು ಸೂಚನೆ ನೀಡಿತ್ತು. ರಾಜ್ಯದ ಕರಾವಳಿಯಲ್ಲಿ ಆ ದಿನದಿಂದಲೇ ಮಳೆ ಬರತೊಡಗಿದರೂ ಕೊಡಗಿನಲ್ಲಿ ಮೋಡ ಕವಿದ ವಾತಾವರಣ ಇತ್ತು. ಆದರೆ, ಒಂದು ವಾರದ ಬಳಿಕ ಕೊಡಗಿನಲ್ಲಿ ವರ್ಷಧಾರೆ ಸುರಿಯತೊಡಗಿದ್ದು, ಜನಜೀವನ, ವ್ಯಾಪಾರ, ವಹಿವಾಟಿಗೆ ಧಕ್ಕೆ ಆಗಿದೆ.

ಮಳೆಗಾಲವೆಂಬುದು ಕೊಡಗಿಗೆ ಅಪರಿಚಿತವೇನೂ ಅಲ್ಲ. ಸುಮಾರು ೫೦ ವರ್ಷಗಳ ಹಿಂದೆ ಕೊಡಗಿನಲ್ಲಿ ಮಳೆಗಾಲ ಆರಂಭವಾಗಿದೆ ಎಂದರೆ, ಮೂರು ತಿಂಗಳು ದೈನಂದಿನ ಕೆಲಸಗಳು ಹಿನ್ನಡೆ ಆಗುತಿತ್ತು. ಆದರೆ, ಹವಾಮಾನ ವೈಪರೀತ್ಯದಿಂದಲೋ ಏನೋ ಈಗಿನ ಮಳೆಗಾಲ ಹಲವು ಬಿಡುವಿನೊಂದಿಗೆ ಸಾಗುತ್ತಿದೆ. ಕೆಲ ವರ್ಷಗಳಲ್ಲಿ ಮಳೆಗಾಲದಲ್ಲಿ ಬಿಸಿಲು ಬಂದು ಮಳೆ ಇಲ್ಲದೆ ರೈತರು ಕಂಗಾಲಾಗಿದ್ದೂ ಇದೆ. ಕೊಡಗಿನ ರೈತರಷ್ಟೇ ಅಲ್ಲ, ರಾಜ್ಯದ ಮತ್ತು ತಮಿಳುನಾಡಿನ ಲಕ್ಷಾಂತರ ಜನರ ಜೀವನಾಡಿ ಕಾವೇರಿ ನದಿಗೆ ಜೀವ ತುಂಬುವುದೂ ಕೊಡಗಿನ ಮಳೆಯೇ.

ಕೊಡಗಿನ ಮೂರು ತಾಲೂಕುಗಳ ಪೈಕಿ ಈಗಿನ ಮಳೆಯಿಂದಾಗಿ ಹೆಚ್ಚಿನ ಹಾನಿ ಆಗಿರುವುದು ವೀರಾಜಪೇಟೆ ತಾಲೂಕಿನಲ್ಲಿ. ಸೋಮವಾರಪೇಟೆ ತಾಲೂಕಿನಲ್ಲಿ ಸುಮಾರು ೧೭ ಮನೆಗಳಿಗೆ ಹಾನಿಯಾಗಿದೆಯಾದರೂ ಜೀವಹಾನಿ ಆಗಿಲ್ಲ. ವಿದ್ಯುತ್ ಇಲಾಖೆಗೆ ೧೨ ಲಕ್ಷ ರು. ನಷ್ಟ ಆಗಿರಬಹುದೆಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಮಡಿಕೇರಿ ತಾಲೂಕಿನಲ್ಲಿ ಸುಮಾರು ೮ ಮನೆಗಳಿಗೆ ಹಾನಿ ಆಗಿದ್ದು, ತಲಕಾವೇರಿ ಮತ್ತು ಭಾಗಮಂಡಲಕ್ಕೆ ತೆರಳುವ ಪ್ರವಾಸಿಗರಿಗೆ ತೀವ್ರ ಅನನುಕೂಲ ಆಗಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ರಸ್ತೆಯಿಂದ ಎರಡು ಅಡಿ ಮೇಲೆ ನೀರು ಹರಿಯುತಿದ್ದು, ಜಿಲ್ಲಾಡಳಿತ ದೋಣಿ ಸೌಲಭ್ಯ ಒದಗಿಸಿದೆ. ಆದರೆ, ವೀರಾಜಪೇಟೆ ತಾಲೂಕಿನ ಗಡಿ ಭಾಗವಾದ ಕಾನೂರು, ಕುಟ್ಟ ಹಾಗೂ ಮಾಕುಟ್ಟ ಗ್ರಾಮಗಳಲ್ಲಿ ರಸ್ತೆಯ ಮೇಲೆಯೇ ನೀರು ಹರಿಯುತ್ತಿದ್ದು, ಜನಜೀವನ ಸಂಪೂರ್ಣ ಸ್ಥಗಿತಗೊಂಡಿದೆ. ಇಲ್ಲಿ ಪ್ರವಾಹಕ್ಕೆ ಸಿಲುಕಿ ಬುಧವಾರ ಲಾರಿಯೊಂದರ ಸಹಾಯಕ ಚಾಲಕ ಕೂಡ ಮೃತಪಟ್ಟಿದ್ದಾನೆ. ಕಳೆದ ವಾರ ಗಾಳಿಯಿಂದಾಗಿ ಮರದ ಕೊಂಬೆ ತಲೆ ಮೇಲೆ ಬಿದ್ದು ಸಿದ್ದಾಪುರದ ತೋಟದ ಮಾಲೀಕರೊಬ್ಬರು ಮೃತಪಟ್ಟಿದ್ದರು. ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು ಎರಡು ಜೀವ ಹಾನಿ ಅಗಿದೆ.

ಪ್ರತಿ ವರ್ಷವೂ ಜಿಲ್ಲಾಡಳಿತ ಮಳೆಗಾಲದ ಅಪಘಾತಗಳನ್ನು ಎದುರಿಸಲು ಸುಸಜ್ಜಿತವಾದ ಪ್ರಯತ್ನಗಳನ್ನು ಮಾಡಿರುತ್ತದೆ ಎಂಬುದು ನಿಜಕ್ಕೂ ಸಂತ್ರಸ್ತರಿಗೆ ನೆಮ್ಮದಿ ತಂದಿದೆ. ಈ ಬಾರಿಯೂ ಜಿಲ್ಲಾಡಳಿತ ರ‍್ಯಾಫ್ಟಿಂಗ್ ಬೋಟುಗಳನ್ನು ಸನ್ನದ್ಧವಾಗಿ ಇರಿಸಿದ್ದು, ಸಿದ್ದಾಪುರ, ಕರಡಿಗೋಡು, ಮಾಕುಟ್ಟ ಮುಂತಾದೆಡೆ ಗಂಜಿ ಕೇಂದ್ರಗಳನ್ನು ತೆರೆಯಲೂ ಸಿದ್ದತೆ ಮಾಡಿಕೊಂಡಿದೆ. ಟಾರ್ಪಾಲಿನ್‌ಗಳನ್ನೂ ಇಟ್ಟುಕೊಂಡಿದ್ದು, ಸಂತ್ರಸ್ಥರಿಗೆ ತುರ್ತು ವಸತಿ ವ್ಯವಸ್ಥೆ ಮಾಡಲು ಯೋಜನೆ ಹಾಕಿಕೊಂಡಿದೆ.

ಈ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ಡಿ ಎಂ ಸತೀಶ್ ಕುಮಾರ್ ಅವರನ್ನು ‘ದಿ ಸ್ಟೇಟ್’ ಮಾತಾಡಿಸಿದಾಗ, “ಕಳೆದ ಬಾರಿಗಿಂತ ಈ ಬಾರಿ ಮಳೆ ಹಾನಿ ಹೆಚ್ಚಾಗಿದೆ. ಸಿದ್ದಾಪುರದಲ್ಲಿ ಮರದ ಕೊಂಬೆ ಮುರಿದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ೫ ಲಕ್ಷ ರೂಪಾಯಿ ಪರಿಹಾರವನ್ನು ವಿತರಿಸಲಾಗಿದ್ದು, ನಿನ್ನೆ ಮೃತಪಟ್ಟ ಲಾರಿಯ ಸಹಾಯಕ ಚಾಲಕ ಕೇರಳ ನಿವಾಸಿ ಆಗಿದ್ದು ಸೂಕ್ತ ದಾಕಲಾತಿಗಳನ್ನು ಪಡೆದ ನಂತರ ಕೇರಳದ ಜಿಲ್ಲಾಧಿಕಾರಿಗಳ ಹೆಸರಿಗೆ ೫ ಲಕ್ಷ ರು. ಪರಿಹಾರದ ಚೆಕ್ ನೀಡಲಾಗುವುದು,” ಎಂದು ತಿಳಿಸಿದರು. “ಜಿಲ್ಲೆಯಲ್ಲಿ ಇಂದಿನವರೆಗೂ ಸುಮಾರು ೯೭ ಮನೆಗಳು ಹಾನಿಯಾಗಿರುವ ಕುರಿತು ಕಂದಾಯ ಇಲಾಖೆಗೆ ಅರ್ಜಿಗಳು ಸಲ್ಲಿಕೆ ಆಗಿದ್ದು, ಅರ್ಜಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಷ್ಟವನ್ನು ಅಂದಾಜು ಮಾಡುತಿದ್ದು, ಅದರ ಆಧಾರದಲ್ಲಿ ಹಾನಿಗೀಡಾದ ಮನೆ ದುರಸ್ಥಿಗೆ ಸೂಕ್ತ ಪರಿಹಾರ ನೀಡಲಾಗುವುದು,” ಎಂದು ವಿವರಿಸಿದರು.

“ವೀರಾಜಪೇಟೆ-ಕೇರಳ ಸಂಪರ್ಕ ರಸ್ತೆಯು ಕುಸಿದಿದ್ದು, ಗ್ರಾಮದಲ್ಲಿ ಹಲವಾರು ಮನೆಗಳು ಹಾನಿಗೀಡಾಗಿವೆ. ಸುಮಾರು ಗದ್ದೆಗಳಲ್ಲಿ ಬರೆ ಕುಸಿದು ಅಪಾರ ಹಾನಿ ಸಂಭವಿಸಿದೆ. ಟಿ ಶೆಟ್ಟಿಗೇರಿ, ಬಿರುನಾಣಿ, ಕುಟ್ಟ, ಶ್ರೀಮಂಗಲದಲ್ಲಿ ಹಲವಾರು ಗದ್ದೆ-ತೋಟಗಳಲ್ಲಿ ಮಣ್ಣು ಕೊಚ್ಚಿಹೋಗಿದ್ದು, ಅಪಾರ ಬೆಳೆ ನಷ್ಟ ಸಂಬವಿಸಿದೆ. ಮಳೆ ಕಡಿಮೆಯಾದ ಬಳಿಕ ನಿಖರ ಮಾಹಿತಿ ಸಿಗಲಿದೆ. ಮಳೆಗಾಲದ ಆರಂಭದಲ್ಲೇ ಇಷ್ಟು ಪ್ರಮಾಣದ ಹಾನಿ ಆಗಿರುವುದು ಇದೇ ಮೊದಲು. ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕ ಕೆ ಜಿ ಬೋಪಯ್ಯ ಅವರೂ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ,” ಎನ್ನುತ್ತಾರೆ ಮಾಕುಟ್ಟ ನಿವಾಸಿ ದಿನೇಶ್ ಕಾರಿಯಪ್ಪ. ರಸ್ತೆ ಹಾನಿಗೀಡಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪೆರುಂಬಾಡಿ-ಮಾಕುಟ್ಟ ರಸ್ತೆಯಲ್ಲಿ ಜುಲೈ ೧೩ರವರೆಗೆ ಒಂದು ತಿಂಗಳ ಕಾಲ ವಾಹನ ಸಂಚಾರ ನಿಷೇಧಿಸಿದೆ. ಬದಲಿಗೆ, ಗೋಣಿಕೊಪ್ಪ-ಪೊನ್ನಂಪೇಟೆ-ಶ್ರೀಮಂಗಲ-ಕುಟ್ಟ ಮಾರ್ಗವಾಗಿ ಕೇರಳಕ್ಕೆ ತೆರಳುವಂತೆ ವಾಹನ ಚಾಲಕರಿಗೆ ಸೂಚಿಸಿದೆ.

ಇದನ್ನೂ ಓದಿ : ಮಳೆಗೆ ಶಿಥಿಲ ಸೇತುವೆಗಳು ಮುರಿದು ಸಂಪರ್ಕ ಕಡಿದುಕೊಂಡ ಬೀದರ್‌ ಗ್ರಾಮಗಳು

ಗುರುವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ೮೫.೦೬ ಮಿ.ಮೀ ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ ೨೩.೪೮ ಮಿ.ಮೀ., ಜನವರಿಯಿಂದ ಇಲ್ಲಿವರೆಗಿನ ೧೦೩೪.೭೨ ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ ೪೪೬.೬೪ ಮಿ.ಮೀ ಮಳೆಯಾಗಿತ್ತು.

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಯಾಗಿದ್ದು, ಇಂದಿನ ನೀರಿನ ಮಟ್ಟ ೨೮೨೩.೫೮ ಅಡಿಗೇರಿದೆ. ಕಳೆದ ವರ್ಷ ಇದೇ ದಿನ ೨೮೧೧.೬೨ ಅಡಿ ಇತ್ತು. ಹಾರಂಗಿಯಲ್ಲಿ ಬಿದ್ದ ಮಳೆ ೨೫ ಮಿ.ಮೀ. ಕಳೆದ ವರ್ಷ ಇದೇ ದಿನ ೧.೮೦ ಮಿ.ಮೀ. ಮಳೆ ಆಗಿತ್ತು. ಇಂದಿನ ನೀರಿನ ಒಳ ಹರಿವು ೩,೬೬೩ ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು ೬೮೦ ಕ್ಯುಸೆಕ್.

ವೀರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಹಾಗೂ ಮಡಿಕೇರಿ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ಅವರು ಗುರುವಾರ ತಮ್ಮ ಕ್ಷೇತ್ರಗಳ ವಿವಿಧ ಭಾಗಗಳಿಗೆ ಅಧಿಕಾರಿಗಳೊಂದಿಗೆ ತೆರಳಿ ಮಳೆ ಹಾನಿ ವೀಕ್ಷಿಸಿದ್ದು, ಶೀಘ್ರ ಪರಿಹಾರದ ಭರವಸೆ ನೀಡಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More