ಗ್ರಾಮ ವಾಸ್ತವ್ಯ | ಧಾರವಾಡ ಜಿಲ್ಲೆ ಹಿರೇಹೊನ್ನಿಹಳ್ಳಿಯ ಅರಳಿಕಟ್ಟೆ ಸತ್ಯಗಳು

ಹಿರೇಹೊನ್ನಿಹಳ್ಳಿ ಕಲಘಟಗಿ ತಾಲೂಕಿನ ದೊಡ್ಡ ಹಳ್ಳಿಗಳಲ್ಲಿ ಒಂದು. ಸುಮಾರು 5 ಸಾವಿರ ಜನರಿದ್ದಾರೆ. ಆದರೂ ಅಭಿವೃದ್ಧಿಯಿಂದ ಮಾತ್ರ ತೀರಾ ಹಿಂದುಳಿದಿದೆ. ಸದ್ಯ ಗ್ರಾಮದ ಸುತ್ತಮುತ್ತೆಲ್ಲ ಹಸಿರು ಹಾಸುಹೊಕ್ಕಾಗಿದೆ. ಆದರೆ, ಕುಡಿಯುವ ನೀರಿನ ಸಮಸ್ಯೆಗೆ ಎಲ್ಲರೂ ಹೈರಾಣಾಗಿದ್ದಾರೆ

‘ಹಸಿರು ಸೀರೆಗೆ ಸಾಗರವೇ ಸೆರಗು’ ಎಂಬುವಂತೆ ‘ಮಲೆನಾಡಿನ ಸೆರಗು ಧಾರವಾಡ’ ಎಂಬ ಮಾತಿದೆ. ಈ ಮಾತಿಗೆ ಇಂಬು ನೀಡುವಂತೆ ಧಾರವಾಡ ಜಿಲ್ಲೆ ಅಲ್ಲಲ್ಲಿ ಹಸಿರು ಹೊತ್ತು ನಿಂತು ಬೇಸಿಗೆ ಕಳೆದಿರುವ ಈ ಹೊತ್ತಿನಲ್ಲಿ ಧಾರವಾಡದ ಜನತೆಗೆ ಮೈಯೆಲ್ಲ ಕಾದು ಬೆವರಿಳಿದ ಅನುಭವ. ಖಾರದ ಮೆಣಸಿನಕಾಯಿ, ಮಿರ್ಚಿ, ಬಳ್ಳೊಳ್ಳಿ ಚುರುಮುರಿ, ಗಿರ್ಮಿಟ್, ಬಿಸಿ - ಬಿಸಿ ಖಡಕ್ ಚಹಾ, ಸೂರ್ಯ ಅಸ್ತವಾಗುವಾಗ, ಉದಯವಾಗುವಾಗ ಮನೆ-ಮನಗಳಲ್ಲಿ ಸಂಭ್ರಮಿಸುತ್ತಿರುತ್ತವೆ. ಸೂರ್ಯ ತನ್ನ ಬೆಳಗುವ ಕಾಯಕಕ್ಕೆ ಹಾಜರಿ ಹಾಕಬೇಕು ಎನ್ನುವಷ್ಟರಲ್ಲಿಯೇ ಕಲಘಟಗಿ ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಮನೆಗಳೆಲ್ಲಲ್ಲ ಶುರವಾಗಿತ್ತು ರೊಟ್ಟಿಯ ಬಡಿತದ ಅಬ್ಬರ, ಎಲ್ಲೆಲ್ಲೂ ಪಟ್, ಪಟ್, ಪಟ್!

ಬೆಳಗಿನ 5 ಗಂಟೆಗೆ ಹತ್ತು ರೊಟ್ಟಿ ತಿಂದ 80ರ ಗಟ್ಟಿ ಜೀವವೊಂದು ಗ್ರಾಮದ ಮಧ್ಯದ ಅರಳಿಕಟ್ಟೆ ಮೇಲೆ ಕುಳಿತಿತ್ತು. “ಯಾಕ್ರೋ ಇಷ್ಟ್ ಲಗುನ್ ಬಂದಿರೆಲ್ಲಾ, ನಿಮ್ಮ್ ವಾರ್ಗಿ ಹುಡುಗುರ್ ಏಳುದ್ ಹತ್ ಗಂಟೆಕ್ ಅಲ್ವಾ?” ಎಂದು ಆ ಹಿರಿಯ ಜೀವ ಬೇಸರ ಹಾಗೂ ಕಾಳಜಿಯ ಮಾತುಗಳಿಂದ ನಮ್ಮನ್ನೇ ಮಾತನಾಡಿದರು. ಅಷ್ಟರಲ್ಲಿಯೇ ಕೈಯಲ್ಲಿ ಕೋಲು ಹಿಡಿದು ಬಂದು ಕುಳಿತರು ಅದೇ ವಯಸ್ಸಿನ ನಾಲ್ಕಾರು ಹಿರಿಯರು. ಉತ್ತರ ಕರ್ನಾಟಕ ಭಾಗದ ಯಾವ ಜಿಲ್ಲೆಯಲ್ಲಿ ಮಳೆ ಕೈ ಕೊಟ್ಟರೂ ಧಾರವಾಡಕ್ಕೆ ಮಾತ್ರ ರೈತರ ಬೊಗಸೆ ತುಂಬುವಷ್ಟು ಮಳೆ, ಬೆಳೆ ಸಿಗುತ್ತಿತ್ತು. ಆದರೆ, ಕಳೆದ ಹತ್ತಾರು ವರ್ಷಗಳಿಂದ ಧಾರವಾಡ ಜಿಲ್ಲೆಗೂ ಬರಗಾಲ ಪರಿಚಯವಾಗಿದೆ. ಯುವಕರೆಲ್ಲ, ಬೆಳಗಿನ ಸಮಯಕ್ಕೆ ಎದ್ದು, ಕೃಷಿ ಕಾಯಕ ಇಲ್ಲವೇ ತಮ್ಮ ಇನ್ನಿತರ ಉದ್ಯೋಗ ಪ್ರಾರಂಭಿಸಬೇಕು. ಆದರೆ, ಯುವಕರಿಗೆ ಬೆಳಗ್ಗೆ ಎಂದರೆ ಹತ್ತು ಗಂಟೆ ಎಂಬಂತಾಗಿದೆ. ಹೀಗಾಗಿಯೇ ಬರಗಾಲ ನಮ್ಮನ್ನು ಆವರಿಸಿದೆ ಎಂಬುದು ಆ ವಯೋವೃದ್ಧರ ನೋವು. ಅದಕ್ಕಾಗಿ ಬೆಳಗಿನ 5 ಗಂಟೆಗೆ ಹೋದ ನಮ್ಮನ್ನು ಸಂತಸದೊಂದಿಗೆ ಆಶ್ಚರ್ಯದಿಂದ ಆ ವಯೋವೃದ್ಧರು ಕಂಡರು.

ಹಿರೇಹೊನ್ನಳ್ಳಿ ಕಲಘಟಗಿ ತಾಲೂಕಿನ ದೊಡ್ಡ ಹಳ್ಳಿಗಳಲ್ಲಿ ಒಂದು. ಸುಮಾರು 5 ಸಾವಿರದಷ್ಟು ಜನರು ಇದ್ದಾರೆ. ಹೀಗಾಗಿ ರಾಜಕೀಯವಾಗಿಯೂ ಈ ಗ್ರಾಮ ಮಹತ್ವ ಪಡೆದುಕೊಂಡಿದೆ. ಆದರೆ ಅಭಿವೃದ್ಧಿಯಿಂದ ಮಾತ್ರ ತೀರಾ ಹಿಂದುಳಿದಿದೆ. ಮಲೆನಾಡ ಸೆರಗಿನ ಅಂಚಿನಲ್ಲಿರುವ ಈ ಗ್ರಾಮದಲ್ಲಿ ಕುಡಿಯುವ ನೀರು ಪ್ರಮುಖ ಬೇಡಿಕೆ. ಸದ್ಯ ಗ್ರಾಮದ ಸುತ್ತಮುತ್ತೆಲ್ಲ ಹಸಿರು ಹಾಸುಹೊಕ್ಕಾಗಿದೆ. ಆದರೆ, ಪ್ರತಿಯೊಂದು ಮನೆಯಲ್ಲಿ ಮಾತ್ರ ಕುಡಿಯುಲು ನೀರಿಲ್ಲ. ಎಲ್ಲಿ ಕೊರೆಯಿಸಿದರೂ ಗಂಗೆ ಚಿಮ್ಮುತ್ತಿಲ್ಲ. ಪವಾಡವೆಂಬಂತೆ ಅಲ್ಲಲ್ಲಿ ಬೀಳುವ ಕೊಳವೆ ಬಾವಿಗಳಲ್ಲಿ ಕೂಡ ಅಷ್ಟಕಷ್ಟೇ ನೀರು. ಹೀಗಾಗಿ, ಬರುವ ಪ್ರತಿಯೊಬ್ಬ ಜನಪ್ರತಿನಿಧಿಗಳಲ್ಲಿಯೂ, “ಕುಡಿಯಲು ನೀರು ಕೊಡಿ, ನಿಮ್ಮಿಂದ ಮತ್ತ್ಯಾವ ಸಹಾಯವೂ ಬೇಡ,” ಎಂದು ಮನವಿ ಮಾಡುತ್ತಾರೆ ಗ್ರಾಮದ ಜನತೆ. ಈಗಲೂ ಅದು ಮುಂದುವರಿದಿದೆಯಾದರೂ ಕುಡಿಯುವ ನೀರು ಮಾತ್ರ ಕನಸಾಗಿಯೇ ಉಳಿದಿದೆ.

ಮಧ್ಯಾಹ್ನದ ಹೊತ್ತಿಗೆ ಮೋಡವೆಲ್ಲ ಸರಿದು ಸೂರ್ಯ ಇಣುಕುತ್ತಿದ್ದ. ತೊಯ್ದ ಭೂಮಿಯ ಮೇಲೆ ಬಿದ್ದಿದ್ದ ಸೂರ್ಯನ ಕಿರಣ ಆಗಾಗ ಬಿದ್ದ ಮಳೆಯ ನೀರನ್ನೆಲ್ಲ ಆಪೋಶನ ಮಾಡುತ್ತಿತ್ತು. ಮತ್ತದೇ ಸೆಕೆ ಗ್ರಾಮದ ಜನರ ಮೈಯನ್ನೆಲ್ಲ ಆವರಿಸಿತ್ತು. ಅಷ್ಟರಲ್ಲಿಯೇ ಧಾರವಾಡ ಹಾಗೂ ಹುಬ್ಬಳ್ಳಿಗೆ ತಮ್ಮ-ತಮ್ಮ ಕೆಲಸಕ್ಕೆ ತೆರಳಬೇಕೆಂದು ಬಂದಿದ್ದ ಮಹಿಳೆಯರೆಲ್ಲ ಬಸ್ಸಿಗಾಗಿ ಕಾಯ್ದು, ಸೂರ್ಯನ ಬಿಸಿಲಿಗೆ ನೆತ್ತಿಯ ಮೇಲೆ ಸೀರೆಯ ಸೆರಗು ಹೊತ್ತು ಕುಳಿತರು. ಬರೋಬ್ಬರಿ 2 ಗಂಟೆ ಅವರು ಕಾಯ್ದರೂ ಬಸ್ ಬರಲೇ ಇಲ್ಲ. ಬದಲಾಗಿ ಯಾವುದೋ ಟಂಟಂ ವಾಹನ ಬಂತು. ಬಸ್ಸು, ಕಾರು ಹತ್ತಿದವರಂತೆ ಸರಸರನೇ ಟಂಟಂ ಏರಿ ಹತ್ತಿ ಕುಳಿತರು ಮಹಿಳೆಯರು. ಅದನ್ನು ಕಂಡ ಯುವಕ ಗೊಣಗಿದ: “ನಾವು ಲಾಡ್ ಸಾಹೇಬ್ರ್ ಇದ್ದಾಗಿಂದ್ಲೂ ಬಸ್ ಬಿಡ್ರಿ ಅಂತ್ ಹೇಳಾಕತ್ತೇವಿ. ಆದರೂ ಬಸ್ ಮೂರ್ನಾಲ್ಕು ತಾಸಿಗೊಮ್ಮೆ ಬರಾಕತ್ತಾವ್. ಈಗ ಅವ್ರ ಮನಿಗೆ ಹೋದ್ರು, ಇನ್ನೊಬ್ಬರ್ ಬಂದಾರ್, ಇನ್ನೂ ಬಸ್ ಟೈಂ ಹಿಂಗ್ ಐತಿ...”

ಇದನ್ನೂ ಓದಿ : ಗ್ರಾಮ ವಾಸ್ತವ್ಯ | ವಿಡಿಯೋ | ಮುಳುಗಿದ ನಂತರವೂ ಬದುಕಿದ ಶೆಟ್ಟಿಹಳ್ಳಿ

ಹತ್ತಿ, ಹೆಸರು, ಶೇಂಗಾ, ಕಬ್ಬು ಸೇರಿದಂತೆ ಹಲವು ಬೀಜಗಳನ್ನು ಭೂಮಿಗೆ ಉಣಿಸಿದ್ದ ರೈತರು, ಒಬ್ಬಬ್ಬರಾಗಿ ಗ್ರಾಮದ ಅರಳಿಕಟ್ಟೆಯ ಹತ್ತಿರ ಬರತೊಡಗಿದರು. “ನಾಲ್ಕೈದು ವರ್ಷ ಮಳೆ ನಂಬಿ ಭೂಮಿಗೆ ಬೀಜ ಬಿತ್ತಿದ್ದೆವು. ಸಾಲ ನಮ್ಮನ್ನು ತಿಂದಿತೇ ಹೊರತು, ನಾವು ಮಾತ್ರ ಭೂಮಿಯಿಂದ ಏನನ್ನು ಪಡೆಯಲಿಲ್ಲ. ಆದರೆ, ಈ ವರ್ಷ ಪ್ರಾರಂಭದಲ್ಲಿಯೇ ಮಳೆ ನಂಬಿ ಬಿತ್ತನೆ ಮಾಡಿದ್ದೇವೆ. ಈಗಂತೂ ಬೆಳೆ ಹಸಿರಾಗಿ ನಗುತ್ತಿದೆ. ಮುಂದೆಯೂ ಹೀಗೆ ಇದ್ದರೆ ಸಾಕು. ಸಾಲ ಮನ್ನಾ ಮಾಡುತ್ತೇವೆ ಎಂಬ ಮಾತು ಹೇಳುತ್ತಿದ್ದರು. ಆದರೆ, ಬ್ಯಾಂಕಿನವರು ಮನೆ ಹತ್ತಿರ ಬರುವುದು ಇನ್ನೂ ನಿಲ್ಲಿಸಿಲ್ಲ,” ಎಂದರೊಬ್ಬರು.

“ನಾಲ್ಕೈದು ವರ್ಷಗಳಿಂದ ಮಳೆಯಾಗುತ್ತಿದ್ದಂತೆ ಕೆಲಸಕ್ಕಾಗಿ ದೂರದ ಊರಿಗೆ ಹೋದವರನ್ನು ಕರೆಸುತ್ತಿದ್ದೆವು. ಆದರೆ, ಈ ಬಾರಿ ಕರೆಸುವುದಿಲ್ಲ. ನಾವೇ ನಮಗೆ ಕೈಲಾದಷ್ಟು ಕೆಲಸ ಮಾಡುತ್ತೇವೆ. ಇಲ್ಲವಾದರೆ, ಅವರೊಂದಿಗೆ ನಾವು ಗುಳೆ ಹೋಗುವ ಪರಿಸ್ಥಿತಿ ಬರುತ್ತದೆ. ಮಂಗಳೂರು ಮೀನು ಮಾರುಕಟ್ಟೆ, ಬೆಂಗಳೂರು, ಹೈದರಾಬಾದ್, ಗೋವಾ ಸೇರಿದಂತೆ ಹಲವು ನಗರಗಳಿಗೆ ಯುವಕರು ಕೆಲಸಕ್ಕೆ ಹೋಗಿದ್ದಾರೆ. ಇಲ್ಲಿ ಕೆಲಸದ ತೊಂದರೆ ಸಾಕಷ್ಟಿದೆ. ಹೊಲದಲ್ಲಿ ಕೆಲಸ ಮಾಡಬೇಕೆಂದರೆ, 200 ರು. ಕೂಲಿ ನೀಡುತ್ತಾರೆ. ಇದು ಯಾವುದಕ್ಕೂ ಸಾಕಾಗುವುದಿಲ್ಲ. ಕಲಘಟಗಿ, ಹುಬ್ಬಳ್ಳಿ, ಧಾರವಾಡದಲ್ಲಿ ಕೆಲಸ ಸೃಷ್ಟಿ ಮಾಡುತ್ತೇವೆ ಎಂದು ಹೇಳುತ್ತಾರೆಯೇ ಹೊರತು, ಕೆಲಸ ಮಾತ್ರ ಇಲ್ಲ. ಹೀಗಾಗಿ, ದೂರದ ಊರಿಗೆ ಮಕ್ಕಳನ್ನು ಕಳುಹಿಸಿದ್ದೇವೆ. ಹೇಗೋ ಜೀವನ ಮಾಡುತ್ತಿದ್ದೇವೆ,” ಎಂದು ಬೇಸರದಿಂದ ಹೇಳಿದರು ಗ್ರಾಮದ ರೈತರೊಬ್ಬರು.

ಮಧ್ಯವಯಸ್ಸಿನ ಹಾಗೂ ಹಿರಿಯ ವೃದ್ಧರು ಬೇಸರಪಡುವುದು ಗ್ರಾಮದಲ್ಲಿ ಸಾಮಾನ್ಯವಾಗಿತ್ತು. ವಿದ್ಯುತ್ ಯಾವಾಗ ಬರುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಹಲವು ಉಳ್ಳವರು ಗ್ರಾಮದಲ್ಲಿ ಬೋರ್‌ವೆಲ್ ಕೊರೆಸಿದ್ದಾರೆ. ಅವರೇ ಪಂಚಾಯಿತಿಯಿಂದ ದುಡ್ಡು ಪಡೆದು ಗ್ರಾಮದ ಎಲ್ಲ ಮನೆಗಳಿಗೆ ನೀರು ಸರಬರಾಜು ಮಾಡುತ್ತಾರೆ. “ಅವರೆಷ್ಟು ಬಿಡುತ್ತಾರೆ, ನಾವೆಷ್ಟು ಪಡೆಯುತ್ತೇವೆಯೋ, ಊಹುಂ... ದನಕ್ಕೆ ಮೇವು ಹಾಕಬೇಕು,” ಎಂದು ಹೊರಟರು ವೃದ್ಧ ರೈತರೊಬ್ಬರು.

ಏನು ಅಂದವೋ! ಅಹಹ! ಎನಿತು ಚೆಂದವೋ!
ಬಟ್ಟ ಬಯಲು ಅತ್ತ ಇತ್ತ
ಹಸಿರು ಹುಲ್ಲು ಮೊತ್ತ ಮೊತ್ತ
ಪಚ್ಚೆಪಯಿರು ಸುತ್ತಮುತ್ತ
ಏನು ಅಂದವೋ! ಅಹಹ! ಎನಿತು ಚೆಂದವೋ!!

-ಬೇಂದ್ರೆಯವರ ಈ ಸಾಲುಗಳು ಈಗ ಕೇಳಲಷ್ಟೇ ಚಂದ ಎನಿಸಿತು ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮ ನೋಡಿದ ಮೇಲೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More