ವಿಡಿಯೋ ಸ್ಟೋರಿ | ಎರಡು ನದಿ ಹರಿಯುವ ರಾಯಚೂರು ಮರಳು ಮಾಫಿಯಾ ಸ್ವರ್ಗ

ಕೃಷ್ಣಾ ಮತ್ತು ತುಂಗಭದ್ರಾ ನದಿ ಹರಿಯುವ ರಾಯಚೂರಿನಲ್ಲಿ ಪರ್ಮಿಟ್‌ ಮೀರಿ ಮರಳು ಅಗೆಯುವ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಪೊಲೀಸರು ಅಕ್ರಮ ಮರಳುಗಾರಿಕೆ ಸಂಬಂಧಿಸಿ ಲಾರಿಗಳನ್ನು ಜಫ್ತಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ತೂಕಡಿಸುತ್ತಿದೆ ಎಂಬ ಆರೋಪವಿದೆ

ಬಲಭಾಗದಲ್ಲಿ ವಿಶಾಲವಾಗಿರುವ ಹರಿಯುತ್ತಿರುವ ಕೃಷ್ಣಾ ನದಿ ಹಾಗೂ ಎಡಭಾಗದಲ್ಲಿ ತುಂಗಭದ್ರಾ ನದಿ ಇರುವ ರಾಯಚೂರು ಜಿಲ್ಲೆ ‘ದೋ ಅಬ್ ಪ್ರದೇಶ’ವೆಂದು ಖ್ಯಾತಿ ಪಡೆಯಿದೆ. ಜಿಲ್ಲೆಯ ಬಹುತೇಕ ನದಿಗಳು ಹರಿಯುವ ಕಾರಣದಿಂದ ಅತಿಹೆಚ್ಚು ಮರಳು ಇಲ್ಲಿ ದೊರೆಯುತ್ತದೆ. ಇಲ್ಲಿ ದೊರೆಯುವ ಮರಳಿಗೆ ರಾಜಧಾನಿ ಬೆಂಗಳೂರು, ಹೈದರಾಬಾದ್, ಮಹಾರಾಷ್ಟ್ರದಲ್ಲಿ ಸಾಕಷ್ಟು ಬೇಡಿಕೆ ಇದ್ದು, ಗುಣಮಟ್ಟದ ಮರಳು ಸಿಗುವ ಪ್ರದೇಶವೆಂದು ಗುರುತಿಸಲಾಗಿದೆ.

ಸರ್ಕಾರದ ನಿಯಮ ಪ್ರಕಾರ ಮರಳಿನ ಪರ್ಮಿಟ್ ಪಡೆದುಕೊಂಡು ನಿಯಮಾನುಸಾರ ಮರಳು ತೆಗೆಯಬೇಕು. ಆದರೆ ನಾಮಕವಾಸ್ತೆ ಪರ್ಮಿಟ್ ಪಡೆದುಕೊಂಡು ಹಗಲು-ಇರಳು ಎನ್ನದೇ ಎಗ್ಗಿಲ್ಲದೇ ಮರಳು ದಂಧೆ ನಡೆಸಲಾಗುತ್ತಿದ್ದು, ಅಕ್ರಮಕ್ಕೆ ಕಡಿವಾಣ ಹಾಕಲು ಮಾತ್ರ ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಆರ್‌ಟಿಒ ಇಲಾಖೆ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿದೆ.

ಜಿಲ್ಲಾಡಳಿತ ಮರಳು ನೀತಿ ಪ್ರಕಾರ ಮರಳು ಗಣಿಯನ್ನು ಸೂಚಿಸಿ, ಗುತ್ತಿಗೆದಾರರಿಗೆ ಟೆಂಡರ್ ನೀಡಿದೆ. ಆದರೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮ್ಯಾದರಗೋಳ ಗ್ರಾಮದ ಬಳಿ ಜೆಸಿಬಿಯಿಂದ ನದಿಯ ಒಡಲಿನಲ್ಲಿರುವ ಮರಳು ಸಂಗ್ರಹ ಮಾಡಿ ನೂರಾರು ಲಾರಿಗಳ ಮೂಲಕ ಅಕ್ರಮವಾಗಿ ಮರಳು ಸಾಗಣಿಕೆ ಮಾಡಲಾಗುತ್ತಿತ್ತು. ಸರ್ಕಾರದ ನಿಯಮದ ಪ್ರಕಾರ ಮರಳನ್ನು ಸಾಗಿಸದೆ, ಪರವಾನಗಿ ನೀಡಿದ್ದಕ್ಕಿಂತ ದುಪ್ಪಟ್ಟು ಮರಳನ್ನು ಆಗೆದು ಲಾರಿಗಳ ಮೂಲಕ ಸಾಗಿಸಿ, ಸರ್ಕಾರಕ್ಕೆ ವಂಚನೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ದೂರು ಸಹ ನೀಡಲಾಗಿತ್ತು. ಆದರೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

ನಿಯಮದ ಪ್ರಕಾರ ನದಿಯಿಂದ ಆಂದಾಜು ನಾಲ್ಕು ಅಡಿಯಷ್ಟು ಮಾತ್ರ ಮರಳು ತೆಗೆಯಬೇಕು. ಆದರೆ, ಅಕ್ರಮವಾಗಿ ಜೆಸಿಬಿ ಯಂತ್ರಗಳ ಸಹಾಯದಿಂದ ಸುಮಾರು 8ರಿಂದ 10 ಅಡಿಯಷ್ಟು ಮರಳು ತೆಗೆಯಲಾಗುತ್ತಿದೆ. 2018 ಜೂನ್ 20ರಂದು 5 ಲಕ್ಷ 21 ಸಾವಿರ ಮೌಲ್ಯದ 1021 ಮೆಟ್ರಿಕ್ ಟನ್ ಲಿಂಗಸೂಗೂರು ತಾಲೂಕಿನ ಮೇದಿನಾಪುರ ಗ್ರಾಮದಲ್ಲಿ ಇತ್ತೀಚೆಗೆ ಜಪ್ತಿ ಮಾಡಿ, ಆಕ್ವಾಟೇಕ್ ಕಂಪನಿಯ ಮ್ಯಾನೇಜರ್ ಹಾಗೂ ಜಮೀನು ಮಾಲೀಕ ಯಲ್ಲಮ್ಮ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಇಂತಹ ಹಲವು ಪ್ರಕರಣಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದರೂ ದಾಖಲಾತಿಗೆ ಮಾತ್ರ ಸೀಮಿತವಾಗಿದೆಯೇ ವಿನಾ ಕ್ರಮ ಜರುಗಿಸಿರುವುದು ವಿರಳ. ಈ ಅಕ್ರಮ ಮರಳುಗಾರಿಕೆಗೆ ಚುನಾಯಿತ ಪ್ರತಿನಿಧಿಗಳು, ರಾಜಕಾರಣಿಗಳ ಬೆಂಬಲಿಗರು ಮತ್ತು ಅಧಿಕಾರಿ ವರ್ಗದ ಬೆಂಬಲವೂ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ, ಸರ್ಕಾರ ಎಷ್ಟೇ ನಿಯಮಾವಳಿ ತಂದರೂ ಮರುಳುಗಾರಿಕೆಗೆ ಕಡಿವಾಣ ಹಾಕಲು ವಿಫಲವಾಗಿದೆ.

ಇದನ್ನೂ ಓದಿ : ತುಮಕೂರು ಜಿಲ್ಲೆಯಾದ್ಯಂತ ಮತ್ತೆ ಚುರುಕುಗೊಂಡ ಮರಳು ದಂಧೆ

ರಾಯಚೂರು ಜಿಲ್ಲೆಯ ಕೃಷ್ಣಾ ನದಿಯಿಂದ, ತಿಂಥಿಣಿ ಬ್ರೀಜ್ ಬುಂಕಲದೊಡ್ಡಿ, ಚಿಂಚೋಡಿ, ಲಿಂಗದಳ್ಳಿ, ಮುಂದುಗೋಟು, ಬಾಗರು, ಹೇರುಂಡಿ, ನಿಲವಜ್ಜಿ, ಅಂಚೆಸೂಗೂರು, ಗೂಗಲ್, ಕರ್ಕಿಹಳ್ಳಿ, ಬಸವಂತಪುರ, ಅಪ್ರಾಳ್, ಕೊಪ್ಪರ, ಶಾವಂತಗೇರಾ, ಗಬ್ಬೂರು, ಶಕ್ತಿನಗರ, ಅರಶಿಣಗಿ ಸೇರಿದಂತೆ ಹಲವು ಗ್ರಾಮಗಳಿಗೆ ಸಾಗಣಿಕೆ ಮಾಡಲಾಗುತ್ತಿದೆ. ರಾಯಚೂರು ಜಿಲ್ಲೆಯ ತಾಲೂಕಿನ ತುಂಗಭದ್ರಾ ನದಿಯಿಂದ ಚಿಕಲಪರ್ವಿ, ಪೋತ್ನಾಳ, ಸಿಂಧನೂರು ಪಟ್ಟಣ, ರಾಜೋಳ್ಳಿ ಸೇರಿದಂತೆ ಹಲವು ಗ್ರಾಮಗಳಿಂದ ಸೇರಿದಂತೆ ಹಲವು ಗ್ರಾಮಗಳ ನದಿ ತೀರದಿಂದ ಹೇರಳವಾಗಿ ಮರಳನ್ನು ನೂರಾರು ಟಿಪ್ಪರ್ ಹಾಗೂ ಟ್ರಾಕ್ಟರ್ ಮೂಲಕ ನಿತ್ಯ ಸಾಗಣಿಕೆ ಮಾಡಲಾಗುತ್ತಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More