ರಾಷ್ಟ್ರೀಯ ಹೆದ್ದಾರಿ 206 ಅಗಲೀಕರಣ; ಭೂಸ್ವಾಧೀನ ಸಂಬಂಧ ಧರಣಿಗೆ ರೈತರ ತಯಾರಿ

ತುಮಕೂರು-ತಿಪಟೂರು ನಡುವಿನ ಬೆಂಗಳೂರು-ಹೊನ್ನಾವರ ರಸ್ತೆಯಲ್ಲಿ ಹೆದ್ದಾರಿ ಪ್ರಾಧಿಕಾರವು ತರಾತುರಿಯಲ್ಲಿ ಅಗಲೀಕರಣ ಕಾಮಗಾರಿ ನಡೆಸುತ್ತಿದೆ. ಇದಕ್ಕಾಗಿ ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ವೈಜ್ಞಾನಿಕ ಪರಿಹಾರ ನೀಡಿಲ್ಲವಾದ ಕಾರಣ ಪ್ರತಿಭಟನೆಯ ಎಚ್ಚರಿಕೆ ನೀಡಲಾಗಿದೆ

ತುಮಕೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಕಡಿಮೆ ಪರಿಹಾರ ನೀಡುವ ಸರ್ಕಾರದ ಕ್ರಮಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ತುಮಕೂರಿನ ಹೆಗ್ಗೆರೆಯಿಂದ ಹೊನ್ನಾವರದವರೆಗೆ ಚತುಷ್ಪಥ ರಸ್ತೆಯ ಅಗಲೀಕರಣ ಕಾರ್ಯ ಭರದಿಂದ ನಡೆಯುತ್ತಿದೆ. ಈಗಾಗಲೇ ಬಹುತೇಕ ಕಡೆ ರಸ್ತೆಯ ಅಗಲೀಕರಣ ಬೇಕಾಬಿಟ್ಟಿ ಮಾಡಲಾಗಿದೆ. ಹೆದ್ದಾರಿ ಪ್ರಾಧಿಕಾರದ ರೈತ ವಿರೋಧಿ ನೀತಿಗೆ ರಾಷ್ಟ್ರೀಯ ಹೆದ್ದಾರಿ-206 ಸಂತ್ರಸ್ಥರ ಹೋರಾಟ ಸಮಿತಿ ಮತ್ತು ರೈತ-ಕೃಷಿ ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಚತುಷ್ಪಥ ರಸ್ತೆ ಅಗಲೀಕರಣಕ್ಕಾಗಿ ಒಂದು ಸಾವಿರಕ್ಕೂ ಹೆಚ್ಚು ಎಕರೆ ಜಮೀನು ವಶಪಸಿಕೊಳ್ಳಲಾಗಿದೆ. ಹೆದ್ದಾರಿ ಪ್ರಾಧಿಕಾರ ತುಮಕೂರು, ಗುಬ್ಬಿ, ತಿಪಟೂರು ತಾಲೂಕಿನ ನೂರಾರು ಗ್ರಾಮಗಳಲ್ಲಿ ಹಾದುಹೋಗುವ ರಸ್ತೆಯಲ್ಲಿ ಅಗಲೀಕರಣ ಕಾಮಗಾರಿಯನ್ನು ತರಾತುರಿಯಲ್ಲಿ ನಡೆಸಲಾಗುತ್ತಿದೆ. ಈಗ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ವೈಜ್ಞಾನಿಕ ಬೆಲೆ ನೀಡಬೇಕು, ಮಾರುಕಟ್ಟೆ ಬೆಲೆ ನೀಡದಿದ್ದರೆ ಜೂ.28ರಂದು ತಿಪಟೂರಿನಲ್ಲಿ ಧರಣಿ ಮತ್ತು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ. ಈ ಸಂಬಂಧ ಸಭೆ ನಡೆಸಿರುವ ಸಂಘಟನೆಗಳ ಪದಾಧಿಕಾರಿಗಳು, ಹೆದ್ದಾರಿ ಪ್ರಾಧಿಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ.

“ನಗರದಿಂದ ಸ್ವಲ್ಪವೇ ದೂರದಲ್ಲಿರುವ ಹುಚ್ಚಗೊಂಡನಹಳ್ಳಿ ವ್ಯಾಪ್ತಿಯಲ್ಲಿ ಗುಂಟೆಗೆ 6 ಸಾವಿರ ನೀಡಿದ್ದರೆ, ಮಾದಿಹಳ್ಳಿ ವ್ಯಾಪ್ತಿಯಲ್ಲಿ 11 ಸಾವಿರ ಘೋಷಣೆ ಮಾಡಲಾಗಿದೆ. ಇದು ತಾರತಮ್ಯದಿಂದ ಕೂಡಿದೆ. ಅಲ್ಲದೆ ಈ ಭಾಗದಲ್ಲಿ ಪ್ರತಿ ಗುಂಟೆಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತದೆ. ಸಾರ್ವಜನಿಕ ಉದ್ದೇಶ ಹೆಸರಿನ ರಾಷ್ಟ್ರೀಯ ಹೆದ್ದಾರಿ-206ರ ಅಗಲೀಕರಣ ಯೋಜನೆಯು ವಾಸ್ತವದಲ್ಲಿ ಖಾಸಗಿ ಉದ್ಯಮದ ಯೋಜನೆಯಾಗಿದೆ,” ಎನ್ನುತ್ತಾರೆ ರೈತ-ಕೃಷಿ-ಕಾರ್ಮಿಕ ಸಂಘಟನೆಯ ಸಂಚಾಲಕ ಲೋಕೇಶ್. “ಖಾಸಗಿ ಉದ್ಯಮಿಗಳು ರಸ್ತೆ ಅಭಿವೃದ್ಧಿಪಡಿಸಿ, ನಂತರ ಟೋಲ್ ಸಂಗ್ರಹಿಸಿ ಯಥೇಚ್ಚ ಲಾಭ ಮಾಡಿಕೊಳ್ಳುತ್ತಾರೆ. ಈ ಬಂಡವಾಳಿಗರ ಯೋಜನೆಗೆ ನಮ್ಮ ಭೂಮಿ ಕಸಿದುಕೊಳ್ಳಲು ಸರ್ಕಾರವೇ ಮಧ್ಯವರ್ತಿಯಾಗಿ ಟೊಂಕಕಟ್ಟಿ ನಿಂತಿದೆ. ನಾಳೆ ರಸ್ತೆ ನಿರ್ಮಾಣವಾದರೆ ಅಲ್ಲಿ ಟೋಲ್ ಶುಲ್ಕ ಎಷ್ಟಿರಬೇಕು ಎಂಬ ನಿರ್ಧಾರದ ಹಕ್ಕು ಉದ್ಯಮಿಗಳಿಗೆ ಇದೆ. ಆದರೆ, ರೈತರ ಜೀವನಾಧಾರವಾಗಿರುವ ಜಮೀನಿಗೆ ಬೆಲೆ ಎಷ್ಟಿರಬೇಕು ಎಂದು ನಿರ್ಧಾರ ಮಾಡುವ ಹಕ್ಕು ನಮ್ಮ ರೈತರಿಗಿಲ್ಲವೇ?” ಎಂಬ ಪ್ರಶ್ನೆ ರೈತ ಕೃಷಿ ಕಾರ್ಮಿಕ ಸಂಘಟನೆಯ ಹೋರಾಟಗಾರರದ್ದು.

ಇದನ್ನೂ ಓದಿ : ಮುದ್ದಿ ಕಿ ಬಾತ್ | ಅಸಮಾಧಾನಗೊಂಡವರಿಗೆ ನಿರ್ಮಿಸಬೇಕಿದೆ ಪ್ರತ್ಯೇಕ ರಸ್ತೆ!

ರಾಷ್ಟ್ರೀಯ ಹೆದ್ದಾರಿ 206 ಹಾದುಹೋಗುವ ನಗರ-ಪಟ್ಟಣಗಳ ಬಳಿ ಬೈಪಾಸ್ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಗುಬ್ಬಿ ಪಟ್ಟಣ ಬರುವ ಮೊದಲೇ ಸಿಂಗೋನಹಳ್ಳಿಯ ಬಳಿ ಬೈಪಾಸ್ ರಸ್ತೆ ನಿರ್ಮಿಸಲಾಗುತ್ತದೆ. ಅದೇ ರೀತಿ, ತಿಪಟೂರಿಗೂ ಮೊದಲು ಹುಚ್ಚಗೊಂಡನಹಳ್ಳಿ ಸಮೀಪ ಬೈಪಾಸ್ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಹೀಗೆ ಬೈಪಾಸ್ ರಸ್ತೆಗಳನ್ನು ನಗರ ಮತ್ತು ಪಟ್ಟಣ ವ್ಯಾಪ್ತಿಯಲ್ಲಿ ಮಾತ್ರ ಮಾಡುತ್ತಿದ್ದು, ಮನೆಗಳು, ಜಮೀನು, ಸೈಟುಗಳು ಮತ್ತು ಸಾವಿರಾರು ಮರಗಳಿಗೆ ಕೊಡಲಿಪೆಟ್ಟು ಬೀಳಲಿದೆ. “ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಆಯಾ ಭಾಗದಲ್ಲಿ ಖರೀದಿಯಾಗಿರುವ ಭೂಮಿಗೆ ಯಾವ ಬೆಲೆಗೆ ಮಾರಾಟವಾಗಿದೆ ಎಂಬುದನ್ನು ಪರಿಶೀಲಿಸಿ ದರ ನಿಗದಿ ಮಾಡಲಾಗುತ್ತದೆ ಎಂಬುದು ಅಧಿಕಾರಿಗಳ ವಾದ. ಈಗ ಅಧಿಕಾರಿಗಳು ಹೇಳುವ ದರ ಅತ್ಯಂತ ಕಡಿಮೆ ಇದೆ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ,” ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ 206 ಸಂತ್ರಸ್ಥರ ಹೋರಾಟ ಸಮಿತಿಯ ಎಸ್ ಎನ್ ಸ್ವಾಮಿ.

ಈ ಹೆದ್ದಾರಿ ಅಗಲೀಕರಣದಿಂದ ಹಲವು ತೋಟಗಳು ಕೂಡ ನಾಶವಾಗಲಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಲಿದೆ. ಹೀಗಾಗಿ, ಹೆದ್ದಾರಿ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರ ರೈತರಿಗೆ ವೈಜ್ಞಾನಿಕ ಮತ್ತು ಮಾರುಕಟ್ಟೆ ಬೆಲೆ ನೀಡಬೇಕೆಂಬುದು ಭೂಮಿ ಕಳೆದುಕೊಂಡಿರುವ ರೈತರ ಆಗ್ರಹವಾಗಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More