ಕಿರಿದಾದ ರಸ್ತೆಗಳಲ್ಲಿ ಕಿಕ್ಕಿರಿದ ವಾಹನಗಳು; ಕೊಡಗಿನಲ್ಲಿ ಈಗ ಹೊಸ ತಲೆನೋವು

ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ಮಾಲಿನ್ಯ ಪ್ರಮಾಣ ಏರುತ್ತಿದ್ದು, ಪ್ರವಾಸಿಗರ ಸಂಖ್ಯೆ ನಿರ್ಬಂಧಿಸಬೇಕೆಂಬ ಒತ್ತಾಯ ಶುರುವಾಗಿದೆ. ಹೊಸ ಹೋಂಸ್ಟೇಗಳಿಗೆ ಅನುಮತಿ ನೀಡಬಾರದೆಂಬ ಕೂಗಿದೆ. ಈಗ ಹೆಚ್ಚು ತಲೆನೋವಿಗೆ ಕಾರಣವಾಗಿರುವುದು ಕಿರಿದಾದ ರಸ್ತೆಗಳು, ಕಿಕ್ಕಿರಿದ ವಾಹನಗಳು!

ಮೂರು ತಾಲೂಕುಗಳನ್ನು ಹೊಂದಿರುವ ಕೊಡಗು ಪುಟ್ಟ ಜಿಲ್ಲೆ ಆಗಿದ್ದರೂ ಇಲ್ಲಿನ ವಾಹನಗಳ ಭರಾಟೆ ಏನೂ ಕಡಿಮೆ ಇಲ್ಲ. ಇಲ್ಲಿನ ಜನಸಂಖ್ಯೆ 2011ರ ಜನಗಣತಿಯ ಪ್ರಕಾರ 5.58 ಲಕ್ಷ. ವಾಹನಗಳ ಸಂಖ್ಯೆ ಸುಮಾರು 1.75 ಲಕ್ಷದಷ್ಟಿದೆ. ಅಂದರೆ, ಸರಾಸರಿ ಮೂವರು ವ್ಯಕ್ತಿಗಳಿಗೆ ಒಂದು ವಾಹನ.

ಸುಮಾರು 30-40 ವರ್ಷಗಳ ಹಿಂದೆ ಕೊಡಗಿನಲ್ಲಿ ಕಾಫಿ ಪ್ಲಾಂಟರ್ ಎಂದರೆ ಬೆಂಗಳೂರು, ಮೈಸೂರು, ಮಂಗಳೂರಿಗರಲ್ಲಿ ಶ್ರೀಮಂತ ಎನ್ನುವ ಭಾವನೆ ಇತ್ತು. ಇಲ್ಲಿನ ಮಕ್ಕಳು ಹೊರಜಿಲ್ಲೆಗೆ ಓದಲು ಹೋದಾಗ ಸಹಜವಾಗೇ ಹೆಚ್ಚಿನ ಗೌರವ ದೊರಕುತ್ತಿತ್ತು. ಆದರೆ, ಕಾಲ ಕಳೆದಂತೆ ಈ ಭಾವನೆ ಹೊರಟುಹೋಗಿದೆ. ಸರ್ಕಾರ ಕಾಫಿಯನ್ನು ಮುಕ್ತ ಮಾರುಕಟ್ಟೆಗೆ ತಂದ ನಂತರ ಉತ್ತಮ ಬೆಲೆ ದೊರೆತು ಕೊಡಗಿನಲ್ಲಿ ಸಾವಿರಾರು ಜನರು ಶ್ರೀಮಂತರಾದರು. ಆದರೆ, ಬೆಲೆಯ ಏರಿಳಿತ ಮತ್ತು ಕುಟುಂಬಗಳಲ್ಲಿ ಆಸ್ತಿ ಪಾಲಾಗುತ್ತ ಬಂದು ದೊಡ್ಡ ಹಿಡುವಳಿಗಳು ಚಿಕ್ಕದಾಗುತ್ತ ಬಂದಿವೆ.

ಕುಟುಂಬಗಳ ಸಂಖ್ಯೆ ಹೆಚ್ಚಾದಂತೆ ಭೂಮಿಯ ವಿಸ್ತೀರ್ಣ ಏನೂ ಹೆಚ್ಚಾಗುವುದಿಲ್ಲವಲ್ಲ! ಹಾಗಾಗಿ, ಸಣ್ಣ ಕಾಫಿ ಬೆಳೆಗಾರರ ಸಂಖ್ಯೆ ಶೇ.95ರಷ್ಟಿದ್ದು ಇವರು ಜೀವನೋಪಾಯಕ್ಕಾಗಿ ಇತರ ಉದ್ಯೋಗಗಳನ್ನೂ ಅವಲಂಬಿಸಿದ್ದಾರೆ. ಬಹಳಷ್ಟು ಬೆಳೆಗಾರರು ಹೋಂಸ್ಟೇ ಮಾಡಿಕೊಂಡು ಕೈತುಂಬಾ ಸಂಪಾದಿಸುತ್ತಿದ್ದಾರೆ.

ಅಂದಹಾಗೆ, ಕೊಡಗಿನ ಜನಸಂಖ್ಯೆ 5.5 ಲಕ್ಷ ಇದ್ದರೂ ಇತ್ತೀಚಿನ ವರ್ಷಗಳಲ್ಲಿ ಇದು ಗೋವಾದಂತೆ ಸಂಪೂರ್ಣ ಪ್ರವಾಸಿ ಜಿಲ್ಲೆಯಾಗಿ ಪರಿವರ್ತನೆ ಆಗಿದ್ದು, ವರ್ಷಕ್ಕೆ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೇ 13ರಿಂದ 15ಲಕ್ಷ ಎನ್ನಲಾಗಿದೆ. ಇಷ್ಟೊಂದು ಪ್ರವಾಸಿಗರು ಬರುವುದೂ ವಾಹನಗಳಲ್ಲೇ. ಹಾಗಾಗಿ, ವಾಹನ ದಟ್ಟಣೆ ಹೆಚ್ಚೇ ಇರುತ್ತದೆ.

ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆಯಿಂದಾಗಿ ಒಂದೆಡೆ ಮಾಲಿನ್ಯ ಪ್ರಮಾಣ ಹೆಚ್ಚುತ್ತಿದ್ದು, ಜಿಲ್ಲೆಯ ಪರಿಸರವಾದಿಗಳು ಪ್ರವಾಸಿಗರ ಸಂಖ್ಯೆಯನ್ನು ನಿರ್ಬಂಧಿಸಬೇಕೆಂದು ಒತ್ತಾಯಿಸುತಿದ್ದಾರೆ. ಅಲ್ಲದೆ, ಸರ್ಕಾರ ಹೊಸ ಹೋಂಸ್ಟೇಗಳಿಗೆ ಅನುಮತಿ ನೀಡಬಾರದೆಂಬ ಕೂಗು ಕೂಡ ಇದೆ. ಇದಕ್ಕೆ ಹೊಂದಿಕೊಂಡಂತೆ ಹೊಸ ಸಮಸ್ಯೆಯೊಂದು ಸೃಷ್ಟಿಯಾಗಿದ್ದು, ಕಿರಿದಾದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಕಿರಿಕಿರಿ, ಗಲಾಟೆ ಜೋರಾಗಿಯೇ ನಡೆಯತೊಡಗಿದೆ.

ಮಡಿಕೇರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನೀಡಿರುವ ಅಂಕಿ-ಅಂಶಗಳ ಪ್ರಕಾರ, ಕೊಡಗಿನಲ್ಲಿ ಕಳೆದ ಮಾ.31ರವರೆಗೆ ಒಟ್ಟು 1,73,734 ವಾಹನಗಳಿವೆ. ಇವುಗಳಲ್ಲಿ ಅಗ್ರಸ್ಥಾನ ದ್ವಿಚಕ್ರ ವಾಹನಗಳದ್ದಾಗಿದ್ದು, ಒಟ್ಟು 86,018 ವಾಹನಗಳಿದ್ದು, ಕಾರು, ಲಘು ವಾಣಿಜ್ಯ ವಾಹನ ಮತ್ತು ಟ್ರಾಕ್ಟರುಗಳು ಸೇರಿದಂತೆ 66,499. ಜಿಲ್ಲೆಯಲ್ಲಿ ಬಸ್ ಹಾಗೂ ಸರಕು ಸಾಗಣೆ ವಾಹನಗಳ ಸಂಖ್ಯೆ ಇದೇ ಅವಧಿಗೆ 5,859 ಆಗಿದೆ. ಸಾರಿಗೆ ಇಲಾಖೆಯು ಜಿಲ್ಲೆಯಲ್ಲಿ 2017-18 ನೇ ಸಾಲಿನಲ್ಲಿ 5,791.52 ಲಕ್ಷ ರುಪಾಯಿಗಳ ವಾಹನ ತೆರಿಗೆ ಸಂಗ್ರಹಿಸಿ ಶೇ.107ರಷ್ಟು ಗುರಿ ಸಾಧಿಸಿದೆ.

ಜಿಲ್ಲೆಯಲ್ಲಿ 2015-16 ನೇ ಸಾಲಿನಲ್ಲಿ 3,946.56 ಲಕ್ಷ ರುಪಾಯಿಗಳ ತೆರಿಗೆ ಸಂಗ್ರಹದ ಗುರಿಯನ್ನು ಹಾಕಿಕೊಂಡಿದ್ದು, ಆಗ 4,677.58 ಲಕ್ಷ ರೂಪಾಯಿಗಳ ತೆರಿಗೆ ಸಂಗ್ರಹಿಸಿ, ರಾಜ್ಯದಲ್ಲೇ ಎರಡನೇ ಸ್ಥಾನಕ್ಕೆ ಏರಿತ್ತು. ಆ ಹಣಕಾಸು ವರ್ಷದಲ್ಲಿ ಶೇ.118ರಷ್ಟು ಗುರಿ ಸಾಧಿಸಿದ್ದು, ಆಗ ದಾಂಡೇಲಿ ಪ್ರಾದೇಶಿಕ ಸಾರಿಗೆ ಕಚೇರಿ ಅತ್ಯಧಿಕ ತೆರಿಗೆ ಸಂಗ್ರಹಿಸಿ ರಾಜ್ಯದಲ್ಲೇ ನಂಬರ್ ಒನ್ ಆಗಿತ್ತು. ಆಗ ಜಿಲ್ಲೆಯಲ್ಲಿದ್ದ ಒಟ್ಟು ವಾಹನಗಳ ಸಂಖ್ಯೆ 1,35,416. ಇದರಲ್ಲಿ 63,214 ದ್ವಿಚಕ್ರ ವಾಹನಗಳು, 54,223 ಲಘು ವಾಣಿಜ್ಯ ವಾಹನಗಳು ಮತ್ತು ಕಾರುಗಳು, 4825 ಲಾರಿ ಹಾಗೂ ಬಸ್‌ಗಳು ಇದ್ದವು.

ಜಿಲ್ಲೆಯಲ್ಲಿ ಈಗಲೇ 86 ಸಾವಿರ ದ್ವಿಚಕ್ರ ವಾಹನಗಳಿದ್ದು, ಮುಂದಿನ ಮಾರ್ಚ್ ವೇಳೆಗೆ ಇವುಗಳ ಸಂಖ್ಯೆ ಒಂದು ಲಕ್ಷ ಮೀರುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಜಿಲ್ಲೆಯ ಸೋಮವಾರಪೇಟೆ, ವೀರಾಜಪೇಟೆ, ಮಡಿಕೇರಿ, ಗೋಣಿಕೊಪ್ಪ ಪಟ್ಟಣಗಳಲ್ಲಿ ವಾರದ ದಿನಗಳಲ್ಲೇ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಮಡಿಕೇರಿಯಲ್ಲಿ ವೀಕೆಂಡ್‌ಗಳಲ್ಲಿ ರಾಜಾ ಸೀಟು ರಸ್ತೆಯಲ್ಲೂ ನೂರಾರು ಪ್ರವಾಸಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಪಾರ್ಕಿಂಗ್ ಮಾಡಲು ಸ್ಥಳ ದೊರೆಯುವುದು ದುಸ್ತರವಾಗುತ್ತಿದೆ. ಜಿಲ್ಲೆಯಲ್ಲಿ ವರ್ಷಕ್ಕೆ ಸುಮಾರು 12ರಿಂದ 15 ಸಾವಿರ ಹೊಸ ವಾಹನಗಳು ಬರುತ್ತಿದ್ದು, ತಿಂಗಳಿಗೆ ಸುಮಾರು 1 ಸಾವಿರಕ್ಕೂ ಅಧಿಕ ವಾಹನಗಳು ನೋಂದಣಿ ಆಗುತ್ತಿವೆ.

ಕೊಡಗು ಗುಡ್ಡಗಾಡು ಪ್ರದೇಶ ಆಗಿರುವುದರಿಂದ ಸಹಜವಾಗಿಯೇ ಇಲ್ಲಿ ವಿಶಾಲ ರಸ್ತೆಗಳ ನಿರ್ಮಾಣ ಕಷ್ಟ. ಹಾಗಾಗಿ ರಸ್ತೆಗಳು ಕಿರಿದಾಗಿವೆ. ಇದು ಸಂಚಾರ ದಟ್ಟಣೆ ಸಮಸ್ಯೆಯನ್ನು ಹೆಚ್ಚಿಸಿದೆ. ಕಿರಿದಾದ ರಸ್ತೆಗಳಲ್ಲಿ ಎಷ್ಟೋ ಪ್ರದೇಶಗಳಲ್ಲಿ ಎರಡು ವಾಹನಗಳು ಎದುರುಬದುರು ಬಂದಾಗ ದಾರಿ ಕೊಡುವುದೂ ಸಮಸ್ಯೆ ಆಗಿದೆ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಮಹಾಮಳೆಗೆ ತತ್ತರಿಸಿದ ಕೊಡಗು, ವೀರಾಜಪೇಟೆ-ಕೇರಳ ರಸ್ತೆ ಬಂದ್

ಕೊಡಗಿನ ಎಲ್ಲಾ ಪಟ್ಟಣಗಳಲ್ಲೂ ವಾರಕ್ಕೊಮ್ಮೆ ಸಂತೆ ನಡೆಯುತ್ತಿದ್ದು, ಸಂತೆ ದಿನದ ವಾಹನ ಸವಾರರ ಪರದಾಟ ಹೇಳತೀರದು. ಸೋಮವಾರಪೇಟೆಯಲ್ಲಿ ಸೋಮವಾರ, ಮಡಿಕೇರಿಯಲ್ಲಿ ಶುಕ್ರವಾರ, ವೀರಾಜಪೇಟೆಯಲ್ಲಿ ಬುಧವಾರ, ಕುಶಾಲನಗರದಲ್ಲಿ ಮಂಗಳವಾರ ಮತ್ತು ಗೋಣಿಕೊಪ್ಪದಲ್ಲಿ ಭಾನುವಾರ ನಡೆಯುವ ಸಂತೆದಿನದಂದು ವಾಹನ ನಿಲ್ಲಿಸಲು ಸ್ಥಳವೇ ಇರುವುದಿಲ್ಲ.

ಜಿಲ್ಲಾಡಳಿತ ಈ ಸಂಚಾರ ದಟ್ಟಣೆ ಸಮಸ್ಯೆ ನೀಗಿಸಲು ಗಂಭೀರ ಯತ್ನ ಮಾಡಬೇಕಿದೆ. ಜನನಿಬಿಡ ನಗರಗಳಲ್ಲಿ ಪಾರ್ಕಿಂಗ್ ಲಾಟ್ ನಿರ್ಮಿಸಿದಂತೆ ಇಲ್ಲೂ ಪಾರ್ಕಿಂಗ್ ಸ್ಥಳ ನಿರ್ಮಿಸಿದರೆ ಮಾತ್ರ ಸಮಸ್ಯೆ ಬಗೆ ಹರಿಯಲಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More