ವಿಡಿಯೋ ಸ್ಟೋರಿ | ತುಕ್ಕು ಹಿಡಿಯುತ್ತಿವೆ ವಿಕಲಚೇತನರಿಗೆ ಸೇರಬೇಕಿದ್ದ ತ್ರಿಚಕ್ರ ವಾಹನ!

ವಿಕಲಚೇತನರ ಕಲ್ಯಾಣಕ್ಕೆ ಯಂತ್ರಚಾಲಿತ ತ್ರಿಚಕ್ರ ವಾಹನ ವಿತರಿಸುವುದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಆದರೆ, ಗದಗ ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಯೋಜನೆ ಹಳ್ಳ ಹಿಡಿಯುತ್ತಿದೆ ಎಂಬ ಆರೋಪ ಫಲಾನುಭವಿಗಳಿಂದ ಕೇಳಿಬಂದಿದೆ

ವಿಕಲಚೇತನರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಯಂತ್ರಚಾಲಿತ ತ್ರಿಚಕ್ರ ವಾಹನ ವಿತರಿಸುವ ಯೋಜನೆ ಜಾರಿಗೆ ತಂದಿದೆ. ಆದರೆ, ಗದಗ ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಹಳ್ಳ ಹಿಡಿಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ವಿಕಲಚೇತನರಿಗೆ ಸೇರಬೇಕಿದ್ದ ತ್ರಿಚಕ್ರ ವಾಹನಗಳು ತುಕ್ಕು ಹಿಡಿಯುತ್ತಿವೆ.

ವಿಕಲಚೇತನರಿಗೆ ವಿತರಣೆ ಮಾಡಲು 2017-18 ನೇ ಸಾಲಿಗೆ 138 ತ್ರಿಚಕ್ರ ವಾಹನಗಳು ಗದಗ ಜಿಲ್ಲೆಗೆ ಮಂಜೂರಾಗಿವೆ. ಇದರಲ್ಲಿ ಸದ್ಯ ಇಲಾಖೆಗೆ 60 ವಾಹನಗಳು ಬಂದಿವೆ. ಜನವರಿ ತಿಂಗಳಲ್ಲೆ ವಾಹನಗಳು ಬಂದಿದ್ದರೂ ಈವರೆಗೆ ವಿತರಣೆಯಾಗಿಲ್ಲ. ವಾಹನ ನೋಂದಣಿ ಮಾಡಿಸುವಷ್ಟರಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಾಯಿತು. ಇದರಿಂದ ಫಲಾನುಭವಿಗಳಿಗೆ ವಾಹನ ವಿತರಿಸುವುದನ್ನು ತಡೆಹಿಡಿಯಲಾಯಿತು. ಇದೀಗ ಚುನಾವಣೆ ಪ್ರಕ್ರಿಯೆ ಮುಗಿದು, ಸರ್ಕಾರ ರಚನೆಯಾದರೂ ವಾಹನ ವಿತರಣೆಗೆ ಮುಹೂರ್ತ ಕೂಡಿಬಂದಂತಿಲ್ಲ!

ಇದನ್ನೂ ಓದಿ : ಸಚಿವರು ನೀಡಿದ ಭರವಸೆಗಳು ಮಣ್ಣುಪಾಲು; ಬಯಲಿಗೆ ಬಂತು ಅಧಿಕಾರಿಗಳ ಹೊಣೆಗೇಡಿತನ
ವಾಹನಕ್ಕಾಗಿ ನಾವು ಅರ್ಜಿ ಸಲ್ಲಿಸಿ ಆರು ತಿಂಗಳಿಂದ ಕಾಯುತ್ತಿದ್ದೇವೆ. ಶಾಸಕರು ದಿನಾಂಕ ನೀಡದಿರುವುದನ್ನೇ ನೆಪವೊಡ್ಡಿ ವಾಹನ ವಿತರಣೆಯಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಸಾಹಿತ್ಯ ಭವನದಲ್ಲಿ ತುಕ್ಕು ಹಿಡಿಯುತ್ತಿರುವ ವಾಹನಗಳನ್ನು ಆಯ್ಕೆಯಾದ ಫಲಾನುಭವಿಗಳಿಗೆ ಇನ್ನಾದರೂ ವಿತರಿಸಲಿ.
ನಾಗರಾಜ್, ಫಲಾನುಭವಿ

60 ವಾಹನಗಳ ಪೈಕಿ ನರಗುಂದ ಕ್ಷೇತ್ರಕ್ಕೆ ಮಂಜೂರಾದ 18 ತ್ರಿಚಕ್ರ ವಾಹನಗಳನ್ನು ಶಾಸಕರಾಗಿದ್ದ ಬಿ ಆರ್ ಯಾವಗಲ್ ವಿತರಿಸಿದ್ದರು. ಆದರೆ, ಯಾವಗಲ್‌ ಅವರಂತೆ ಜಿಲ್ಲೆಯ ಉಳಿದ ಶಾಸಕರು ಈ ಬಗ್ಗೆ ಆಸಕ್ತಿ ತೋರದ ಪರಿಣಾಮ ಆರು ತಿಂಗಳಿಂದ ವಾಹನ ವಿತರಣೆಯಲ್ಲಿ ವಿಳಂಬವಾಗಿದೆ. ಹಾಗಾಗಿ ಶಿರಹಟ್ಟಿ, ಗದಗ, ರೋಣ ವಿಧಾನಸಭಾ ಕ್ಷೇತ್ರದಲ್ಲಿ ಹಂಚಿಕೆಯಾಗಿದ್ದ 42 ವಾಹನಗಳು ಸಾಹಿತ್ಯ ಭವನದ ಅಂಗಳದಲ್ಲೇ ತುಕ್ಕು ಹಿಡಿಯುತ್ತಿವೆ. ಫಲಾನುಭವಿಗಳು ಕೂಡ ಇಂದು ಕೊಟ್ಟಾರು, ನಾಳೆ ಕೊಟ್ಟಾರು ಎಂದು ಕಾಯುತ್ತಲೇ ಇದ್ದಾರೆ.

ಶಾಸಕರು ದಿನಾಂಕ ನೀಡದ ಕಾರಣ ವಾಹನ ವಿತರಣೆಯಲ್ಲಿ ವಿಳಂಬವಾಗಿದೆ. ನಮಗೂ ಕೂಡ ವಾಹನಗಳನ್ನು ಕಾಯುವುದು ಕಷ್ಟದ ಕೆಲಸವಾಗಿದೆ. ಶೀಘ್ರ ಶಾಸಕರ ದಿನಾಂಕ ಪಡೆದು ವಾಹನ ವಿತರಿಸುತ್ತೇವೆ.
ಆಶಾ ನದಾಫ್, ಜಿಲ್ಲಾ ವಿಕಲಚೇತನ ಇಲಾಖೆ ಅಧಿಕಾರಿ

ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ತೋರಿ ವಾಹನ ವಿತರಿಸಲು ಆಸಕ್ತಿ ತೋರಬೇಕಿತ್ತು. ಇಲ್ಲವೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾದರೂ ಜನಪ್ರತಿನಿಧಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿಸಿ ವಾಹನ ವಿತರಿಸುವಲ್ಲಿ ಆಸಕ್ತಿ ತೋರಬೇಕಿತ್ತು. ಆದರೆ ಈ ಎಡರೂ ವರ್ಗದ ಬೇಜವಾಬ್ದಾರಿಯಿಂದ ವಾಹನಗಳು ಕಳ್ಳಕಾಕರ ಪಾಲಾಗುವ ಕ್ಷಣಕ್ಕಾಗಿ ಕಾದು ಕುಳಿತಂತಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More