ಕೊಡಗು ಜನರಿಗೆ ಎಲ್ಲ ದಿಕ್ಕಿನಿಂದಲೂ ನಿರಾಸೆಯನ್ನೇ ಮೂಡಿಸಿದ ರಾಜ್ಯ ಬಜೆಟ್

ಗುಡ್ಡಗಾಡು ಜಿಲ್ಲೆ ಆಗಿರುವ ಕೊಡಗು ಅಭಿವೃದ್ದಿಗೆ ಹೆಚ್ಚಿನ ಅನುದಾನ ಅತ್ಯವಶ್ಯ. ಇದನ್ನು ಮನಗಂಡೇ ಈ ಹಿಂದಿನ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು ಬಜೆಟ್‌ನಲ್ಲಿ ಕೊಡಗು ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿದ್ದವು. ಆದರೆ, ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ

ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಕೊಡಗನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂಬ ಭಾವನೆ ಜಿಲ್ಲಾದ್ಯಂತ ವ್ಯಕ್ತವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರಲ್ಲೂ ಈ ಬಜೆಟ್ ಅಸಮಾಧಾನಕ್ಕೆ ಕಾರಣವಾಗಿದೆ.

ಜಿಲ್ಲೆಯ ಪ್ರಮುಖ ಬೆಳೆ ಆಗಿರುವ ಕಾಫಿಯ ದರ 50 ಕೆಜಿ ಅರೇಬಿಕಾ ಪಾರ್ಚ್‍ಮೆಂಟ್‌ಗೆ ಕಳೆದ ವರ್ಷ 8,500 ರು.ನಷ್ಟು ದರ ಇದ್ದು, ಇದೀಗ 7,000 ರುಪಾಯಿಗಳ ಆಸುಪಾಸಿನಲ್ಲಿದೆ. ಕಾಫಿ ಜೊತೆಯೇ ಬೆಳೆಯುವ ಕಾಳುಮೆಣಸಿನ ಉತ್ತಮ ಧಾರಣೆಯಿಂದಾಗಿ ಕಾಫಿ ಬೆಳೆಗಾರರು ಒಂದಷ್ಟು ಉಸಿರಾಡಿಕೊಂಡಿದ್ದರು. ಆದರೆ, ವಿಯೆಟ್ನಾಂನಿಂದ ಅಗ್ಗದ ಕಾಳುಮೆಣಸನ್ನು ಕೆಜಿಯೊಂದಕ್ಕೆ 180 ರುಪಾಯಿಯಂತೆ ಕೊಂಡು ಶ್ರೀಲಂಕಾದ ಕಳ್ಳಮಾರ್ಗಗಳ ಮೂಲಕ ತೆರಿಗೆ ವಂಚಿಸಿ ದೇಶದೊಳಕ್ಕೆ ತರುವ ಹೊಸ ದಂಧೆ ಆರಂಭಗೊಂಡಾಗಿನಿಂದ ಕರಿ ಕಾಳುಮೆಣಸಿನ ದರವೂ ಕೆಜಿಯೊಂದಕ್ಕೆ 650ರಿಂದ 300 ರುಪಾಯಿಗೆ ಕುಸಿದಿದೆ. ಎರಡೂ ಪ್ರಮುಖ ಬೆಳೆಗಳ ದರ ಕುಸಿತದಿಂದಾಗಿ ಬೆಳೆಗಾರರು ಹೈರಾಣಾಗಿದ್ದಾರೆ.

ನಾಲ್ಕು ದಿನಗಳ ಹಿಂದೆ ಕೇಂದ್ರ ಸರ್ಕಾರ ಅನೇಕ ಕೃಷಿ ಬೆಳೆಗಳಿಗೆ ಉತ್ತಮ ಬೆಂಬಲ ಬೆಲೆಯನ್ನೇ ಘೋಷಿಸಿತು. ಜಿಲ್ಲೆಯ ಬೆಳೆಗಾರರೂ ಒಂದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಪ್ರಧಾನಿ ಮೋದಿ ಕಾಫಿ ಮತ್ತು ಕಾಳುಮೆಣಸಿಗೆ ಯಾವುದೇ ಬೆಂಬಲ ಬೆಲೆ ಘೋಷಿಸದೆ ನಿರಾಸೆಗೊಳಿಸಿದರು. ಅದರ ಬೆನ್ನಲ್ಲೇ, ರಾಜ್ಯ ಸರ್ಕಾರದ ಬಜೆಟ್ ಜನತೆಯಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಕೊಡಗಿನ ಬೆಳೆಗಾರರು ಸಂಪೂರ್ಣ ಸಾಲ ಮನ್ನಾದ ನಿರೀಕ್ಷೆಯಲ್ಲೇ ಇದ್ದರು. ಆದರೆ, ಅದೂ ಈಡೇರಿಲ್ಲ.

ಈ ಹಿಂದಿನ ಕಾಂಗ್ರೆಸ್ ಸರ್ಕಾರ ಇದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ 50 ಸಾವಿರ ರುಪಾಯಿವರೆಗಿನ ಸಾಲ ಮನ್ನಾ ಮಾಡಿದ್ದರು. ಕೊಡಗಿನಲ್ಲಿ ಸುಮಾರು 35 ಸಾವಿರ ರೈತರಿಗೆ ಇದರಿಂದ ಅನುಕೂಲ ಆಗಿತ್ತು. ಆದರೆ, ಈ ಹಿಂದೆ ಸಾಲ ಮನ್ನಾದ ಫಲಾನುಭವಿಗಳಿಗೆ ಈಗಿನ ಸಾಲ ಮನ್ನಾ ಅನ್ವಯಿಸುವುದಿಲ್ಲ ಎಂದು ಬಜೆಟ್‌ನಲ್ಲಿ ಘೋಷಿಸಿರುವುದರಿಂದಾಗಿ ರೈತರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ ಎನ್ನುವುದು ನಿಜಕ್ಕೂ ಆಘಾತಕಾರಿ ಸಂಗತಿ. ಏಕೆಂದರೆ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದು ಸುಸ್ತಿದಾರರಾಗಿರುವ ರೈತರ ಸಂಖ್ಯೆ ಕೇವಲ 168 ಎನ್ನುತ್ತಾರೆ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಅದ್ಯಕ್ಷ ಬಿ ಡಿ ಮಂಜುನಾಥ್. ಈ ಹಿಂದೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆದ ರೈತರ ಸಾಲವನ್ನು ಮನ್ನಾ ಮಾಡಿರಲಿಲ್ಲ. ಹಾಗಾಗಿ, ರಾಷ್ಟ್ರೀಕೃಕ ಬ್ಯಾಂಕಿನಲ್ಲಿ ಈ ಬಾರಿ ಎರಡು ಲಕ್ಷ ರುಪಾಯಿಗಳವರೆಗಿನ ಸಾಲವನ್ನು ಮನ್ನಾ ಮಾಡಲಾಗಿರುವುದರಿಂದ ಅವರಿಗೆ ಒಂದಷ್ಟು ಅನುಕೂಲ ಆಗಬಹುದು.

ಇನ್ನು, ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆ 1-4-2009ರಿಂದ 31-12-2018ರವರೆಗಿನ ಅವಧಿಯಲ್ಲಿ ಸುಸ್ತಿದಾರರಾದ ರೈತರಿಗೆ ಮಾತ್ರ ಅನ್ವಯಿಸುವುದರಿಂದ ಸುಸ್ತಿದಾರರಲ್ಲದವರಿಗೆ ಏನೂ ಅನುಕೂಲವಿಲ್ಲ. ಯಾರಾದರೂ ರೈತರು ಚಿನ್ನ ಅಥವಾ ಆಸ್ತಿ ಮಾರಿ ಸಾಲ ಕಟ್ಟಿ ಋಣ ಮುಕ್ತರಾಗಿದ್ದರೆ ಅಂಥವರಿಗೆ ಏನೂ ಅನುಕೂಲ ದೊರೆಯುವುದಿಲ್ಲ.

ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ವಕ್ತಾರ ಕೆ ಕೆ ವಿಶ್ವನಾಥ್ ಅವರ ಪ್ರಕಾರ, “ಕಾಫಿ ಬೆಳೆಯುವ ಜಿಲ್ಲೆಗಳಾದ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಾಫಿ ಬೆಳೆಗಾರರು ಸುಮಾರು 3,817.35 ಕೋಟಿ ರುಪಾಯಿಗಳಷ್ಟು ಅವಧಿ ಮೀರಿದ ಸಾಲ ಉಳಿಸಿಕೊಂಡಿದ್ದಾರೆ. ಈ ಹೊಸ ಸಾಲ ಮನ್ನಾ ಯೋಜನೆಯಲ್ಲಿ ಎರಡು ಲಕ್ಷ ರುಪಾಯಿಗಳವರೆಗೆ ಒಂದು ಕುಟುಂಬಕ್ಕೆ ಸಾಲ ಮನ್ನಾ ಘೋಷಿಸಲಾಗಿದ್ದು, ಒಂದು ಕುಟುಂಬದಲ್ಲಿ ಯಾರಾದರೂ ಒಬ್ಬರಿಗೆ ಮಾತ್ರ ಸಾಲ ಮನ್ನಾ ಅನ್ವಯವಾಗುತ್ತದೆ. ಜೊತೆಗೆ, ಕಳೆದ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿದ ರೈತರು, ರಾಜ್ಯ ಸರ್ಕಾರಿ ನೌಕರರಿಗೆ ಸಾಲ ಮನ್ನಾದಿಂದ ಚಿಕ್ಕಾಸಿನ ಪ್ರಯೋಜನವೂ ಆಗುವುದಿಲ್ಲ.”

ಇದನ್ನೂ ಓದಿ : ಕೊಡಗು ಪ್ರತ್ಯೇಕ ರಾಜ್ಯದ ಬೇಡಿಕೆ ಬಗ್ಗೆ ರಾಜ್ಯ ಬಿಜೆಪಿಯ ಸ್ಪಷ್ಟ ನಿಲುವೇನು?

“ಕಾಂಗ್ರೆಸ್ ಸರ್ಕಾರದ ಬಜೆಟ್‌ನಲ್ಲಿ ವನ್ಯಜೀವಿ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಪ್ರತಿ ತಿಂಗಳೂ ಎರಡು ಸಾವಿರ ರೂಪಾಯಿಯಂತೆ 5 ವರ್ಷ ಮಾಸಾಶನ ಕೊಡುವ ನಿರ್ಧಾರ ಮಾಡಿದ್ದು ಜನತೆಗೆ ಅನುಕೂಲವಾಗಿತ್ತು. ತಲಕಾವೇರಿ-ಭಾಗಮಂಡಲ ರಸ್ತೆ ಯೋಜನೆಗೆ 10 ಕೋಟಿ ರುಪಾಯಿಗಳನ್ನು ನೀಡಲಾಗಿತ್ತು. ಆದರೆ, ಈ ಬಜೆಟ್ ನಿರಾಶಾದಾಯಕ ಅಷ್ಟೇ ಅಲ್ಲ, ರೈತರ ಮೂಗಿಗೆ ತುಪ್ಪ ಸವರಿದಂತೆ,” ಎಂದು ಕಾಫಿ ಬೆಳೆಗಾರರ ಒಕ್ಕೂಟದ ಅದ್ಯಕ್ಷ ಮೋಹನ್ ಬೋಪಣ್ಣ ಆಕ್ರೋಶ ವ್ಯಕ್ತಪಡಿಸುತ್ತಾರೆ.

“ಜಿಲ್ಲೆಯಲ್ಲಿ ಬೆಳೆಗಾರರು ಈ ರೀತಿಯ ಸಂಕಷ್ಟ ಅನುಭವಿಸುತ್ತಿದ್ದು, ಬಜೆಟ್‌ಗೆ ಮುನ್ನಾದಿನ ಕಾಫಿ ಬೆಳೆಗಾರರ ಸಾಲವನ್ನು ಮನ್ನಾ ಮಾಡಲು ಒತ್ತಾಯಿಸಿ ಅಮ್ಮತ್ತಿಯಲ್ಲಿ ದೊಡ್ಡ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮಗೆ ಎಲ್ಲಿ ಮತ ಬಿದ್ದಿದೆಯೋ ಅಲ್ಲಿನ ಜನತೆಗೆ ಮಾತ್ರ ಅನುಕೂಲ ಮಾಡಿಕೊಟ್ಟಿದ್ದಾರೆ,” ಎಂದು ಅಸಮಾಧಾನ ವ್ಯಕ್ತಪಡಿಸಿದವರು ಸೋಮವಾರಪೇಟೆಯ ಕಾಫಿ ಬೆಳೆಗಾರ ಎಂ ಎ ಶ್ಯಾಮ್ ಪ್ರಸಾದ್.

ಕೊಡಗಿನ ಜನತೆಯ ಬಹಳ ವರ್ಷದ ಬೇಡಿಕೆಯಾದ ಕುಶಾಲನಗರ ಮತ್ತು ಪೊನ್ನಂಪೇಟೆ ನೂತನ ತಾಲೂಕುಗಳ ರಚನೆ ಬಗ್ಗೆಯೂ ಬಜೆಟ್‌ನಲ್ಲಿ ಚಕಾರ ಎತ್ತದಿರುವುದು ಕೊಡವರ ತೀವ್ರ ಟೀಕೆಗೆ ಗುರಿಯಾಗಿದೆ. ಕುಶಾಲನಗರದಿಂದ ಕಾವೇರಿ ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷ ವಿ ಪಿ ಶಶಿಧರ್ ಕೂಡ ನಿಯೋಗದೊಂದಿಗೆ ತೆರಳಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ತಾಲೂಕು ರಚನೆಯ ಅವಶ್ಯಕತೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಬಜೆಟ್‌ನಲ್ಲಿ ಅದಕ್ಕೂ ಬೆಲೆ ಕೊಡಲಿಲ್ಲ ಎಂಬ ನಿರಾಶೆ ಕೊಡಗಿನಲ್ಲಿ ಆವರಿಸಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More