ಫೋಟೋ ಸ್ಟೋರಿ | ಬಂಜರು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದ ರೈತ ಗುರುನಾಥ

ತಮ್ಮ ಕೃಷಿ ಭೂಮಿಯಲ್ಲಿ ಕಬ್ಬು ಬೆಳೆದು ಕೈ ಸುಟ್ಟುಕೊಂಡಿದ್ದ ರೈತ ಗುರುನಾಥ, ಕೃಷಿ ಭೂಮಿ ಮಾರಾಟ ಮಾಡುವ ಬದಲು, ಹಸಿ ಶುಂಠಿ ಬೆಳೆದು ಯಶಸ್ಸು ಕಂಡರು. ೫ ಲಕ್ಷ ರುಪಾಯಿ ಖರ್ಚಿನಲ್ಲಿ ಬೆಳೆದ ಬಾಳೆಹಣ್ಣು, ಪಪ್ಪಾಯಿ ಹಣ್ಣುಗಳು ೨೫ ಲಕ್ಷ ರುಪಾಯಿ ಆದಾಯ ತಂದುಕೊಟ್ಟಿವೆ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೋನಮೇಳಕುಂದಾ ಗ್ರಾಮದ ಗುರುನಾಥ ಕನಶೆಟ್ಟಿ ಜನ್ಮತಃ ಕಲಾವಿದ. ಚಿತ್ರಕಲಾ ಶಿಕ್ಷಕನಾಗಬೇಕೆಂದು ಕನಸು ಕಂಡವರು. ಆದರೆ, ಹಣದ ಕೊರತೆಯಿಂದ ಚಿತ್ರಕಲೆಯಲ್ಲಿ ಹೆಚ್ಚಿನ ಸಾಧನೆ ಮಾಡುವುದು ಅಥವಾ ಶಿಕ್ಷಕನಾಗುವ ವಿದ್ಯಾಭ್ಯಾಸ ಪಡೆಯುವುದು ಸಾಧ್ಯವಾಗಲಿಲ್ಲ. ಪೂರ್ವಜರಿಂದ ಬಂದ ಕೃಷಿಭೂಮಿಯಲ್ಲೂ ಹೆಚ್ಚು ಆದಾಯವಿರಲಿಲ್ಲ.

ಕೊನೆಗೆ, ಒಂಬತ್ತು ಜನರ ಮಕ್ಕಳ ಶಿಕ್ಷಣ ಮತ್ತು ಮದುವೆಯ ಸಾಲದ ಶೂಲೆಗೆ ಬಿದ್ದರು. ಆರು ಜನ ಹೆಣ್ಣುಮಕ್ಕಳ ಮದುವೆ ಮತ್ತು ಗಂಡು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ೪ ಎಕರೆ ಕೃಷಿಭೂಮಿಯನ್ನು ಮಾರಾಟ ಮಾಡಿ ಹೈದರಾಬಾದಿನಲ್ಲಿ ಕೂಲಿ ಕೆಲಸಕ್ಕೆ ಹೋಗಲು ಸಿದ್ಧರಾಗಿ ನಿಂತರು. ಆದರೆ, ಗುರುನಾಥ ಅವರ ಪತ್ನಿ ಸುಶೀಲಾಬಾಯಿ ಅದಕ್ಕೆ ಅವಕಾಶ ಕೊಡಲಿಲ್ಲ. ಅಂಗನವಾಡಿ ಕಾರ್ಯಕರ್ತೆಯಾಗಿರುವ ಸುಶೀಲಾಬಾಯಿ, “ಸಾಲಕ್ಕೆ ಹೆದರಿ ಕೃಷಿಭೂಮಿ ಮಾರಾಟ ಮಾಡುವ ಬದಲು ಕೃಷಿಯಲ್ಲೇ ಆದಾಯ ಹುಡುಕಿ,” ಎಂದು ಪತಿಗೆ ಸಲಹೆ ನೀಡಿದರು. ಹೀಗೆ, ಶಿಕ್ಷಕರಾಗುವ ಕನಸು ಹೊತ್ತ ಗುರುನಾಥ ಕೊನೆಗೆ ಕೃಷಿಕರಾದರು.

ಇದನ್ನೂ ಓದಿ : ಮಹಿಳೆಯರ ಆರ್ಥಿಕ ಪ್ರಗತಿಗೆ ಸಹಾಯಕವಾದ ಮನೆಯಂಗಳದ ಡೇರೆ ಕೃಷಿ

ನಾಲ್ಕು ಜನ ಹೆಣ್ಣುಮಕ್ಕಳ ಮದುವೆಗಾಗಿ ಸುಮಾರು ೧೦ ಲಕ್ಷ ಸಾಲ ಮಾಡಿದ್ದರು. ತಮ್ಮ ಕೃಷಿಭೂಮಿಯಲ್ಲಿ ಕಬ್ಬು ಬೆಳೆದು ಕೈ ಸುಟ್ಟುಕೊಂಡಿದ್ದರು. ಹೀಗಾಗಿ, ಮತ್ತೆ ಅದೇ ಬೆಳೆಗೆ ಇಳಿಯಲು ಅವರು ಸಿದ್ಧರಿರಲಿಲ್ಲ. ಹೀಗಾಗಿ, ಕೃಷಿಭೂಮಿ ಮಾರಾಟ ಮಾಡುವ ಬದಲು, ಅದರಲ್ಲೇ ಬೇರೆ ಫಸಲು ತೆಗೆಯುವ ನಿರ್ಧಾರಕ್ಕೆ ಬಂದರು.

ಆದರೆ, ಬಂಜರು ಭೂಮಿಯಲ್ಲಿ ನೀರು ಹುಡುಕುವುದೇ ದೊಡ್ಡ ಸವಾಲಾಗಿತ್ತು. ಬೋರ್‌ವೆಲ್ ತೋಡಿದರೆ ಇಲ್ಲಿ ನೀರು ಸಿಗುವುದು ಕಷ್ಟ. ಹೀಗಾಗಿ, ದೊಡ್ಡ ಬಾವಿಯೊಂದನ್ನು ತೋಡುವ ನಿರ್ಧಾರ ಮಾಡಿದರು. ಭೂಮಿಯಲ್ಲಿದ್ದ ಕಲ್ಲುಗಳನ್ನೆಲ್ಲ ತೆಗೆದು ಭೂಮಿಯನ್ನು ಕೃಷಿಗೆ ಸಿದ್ಧ ಮಾಡಲಾಯಿತು. ಆಳವಾದ ಬಾವಿ ತೋಡಿ ನೀರನ್ನೂ ಪಡೆದರು. ಈಗ ಗುರುನಾಥರ ಕೃಷಿಗೆ ಈ ಬಾವಿಯ ನೀರೇ ಆಧಾರ.

ಮೊದಲಿಗೆ ಶುಂಠಿ ಬೆಳೆದು ಯಶಸ್ಸು ಕಂಡರು. ಅದಾದ ನಂತರ ಪಪ್ಪಾಯ ಬೆಳೆಯುವ ನಿರ್ಧಾರಕ್ಕೆ ಬಂದರು. ೫ ಲಕ್ಷ ರು. ಖರ್ಚಿನಲ್ಲಿ ಬೆಳೆದ ಬಾಳೆಹಣ್ಣು, ಪಪ್ಪಾಯ ಗುರುನಾಥರಿಗೆ ೨೫ ಲಕ್ಷ ರುಪಾಯಿ ಆದಾಯ ತಂದುಕೊಟ್ಟಿದೆ.

“ಗುರುನಾಥ ಅವರ ಕೃಷಿ ಸಾಧನೆಯನ್ನು ನೋಡಿ ಗ್ರಾಮದ ಇತರ ರೈತರೂ ತಮ್ಮ ಬೆಳೆಗಳನ್ನು ಬದಲಿಸಲು ಆರಂಭಿಸಿದ್ದಾರೆ. ಆಧುನಿಕ ಕೃಷಿ ಮಾಡಲು ಮುಂದಾಗುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಮತ್ತು ತೋಟಗಾರಿಕೆ ಇಲಾಖೆಯೂ ಸಾಕಷ್ಟು ನೆರವು ನೀಡುತ್ತಿದೆ,” ಎನ್ನುತ್ತಾರೆ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಶಶಿಧರ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More