ವಿಡಿಯೋ ಸ್ಟೋರಿ | ನಿದ್ರೆಗೆ ಜಾರಿದ ನಗರಸಭೆ, ಸೊಳ್ಳೆ ಕಾಟಕ್ಕೆ ಬೆಚ್ಚಿದ ಬೀದರ್

ಕೆಲ ವರ್ಷಗಳ ಹಿಂದೆ ಬೀದರ್ ನಗರವು ದೇಶದ ಸ್ವಚ್ಛ ಸುಂದರ ನಗರಗಳ ಪೈಕಿ ಒಂದೆಂದು ಸ್ಥಾನ ಪಡೆದುಕೊಂಡಿತ್ತು. ಆದರೆ, ಈಗ ಚಿತ್ರಣ ಬದಲಾಗಿದೆ. ನಗರದ ಒಳಚರಂಡಿಗಳು ತ್ಯಾಜ್ಯ ತುಂಬಿಕೊಂಡು ಅನಾರೋಗ್ಯಕ್ಕೆ ಕಾರಣ ಆಗುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ

ದೇಶದೆಲ್ಲೆಡೆ ನಾನಾ ಕಾರಣಕ್ಕೆ ಸ್ವಚ್ಛ ಭಾರತ ಸಂದೇಶ ಕೇಳಿಬರುತ್ತಿರುತ್ತದೆ. ಇದೀಗ ಬೀದರ್ ಸರದಿ. ಆದರೆ, ಬೀದರ್ ನಗರ ಸುದ್ದಿ ಆಗುತ್ತಿರುವುದು ಮಾತ್ರ ಒಳ್ಳೆಯ ಕಾರಣಕ್ಕಲ್ಲ! ಹೌದು, ಸ್ವಚ್ಛ ನಗರಗಳ ಪೈಕಿ ಒಂದಾಗಿದ್ದ ಬೀದರ್ ನಗರ ಈಗ ಸೊಳ್ಳೆ ನಗರವಾಗಿದೆ. ನಗರವಿಡೀ ಹರಡಿರುವ ಸೊಳ್ಳೆಗಳ ಕಾಟದಿಂದ ಜನರು ತತ್ತರಿಸಿದ್ದಾರೆ. ಸಂಜೆಯಾದರೆ ಮನೆಯಿಂದ ಹೊರಗೆ ಬರಲು ಕೂಡ ಜನ ಹೆದರುತ್ತಿದ್ದಾರೆ. ನಗರಸಭೆ ಮಾತ್ರ ಇದರ ಬಗ್ಗೆ ಚಿಂತೆಯೇ ಇಲ್ಲವೆನ್ನುವಂತೆ ನಿದ್ದೆ ಮಾಡುತ್ತಿದೆ.

ಕೆಲ ವರ್ಷಗಳ ಹಿಂದೆ ಬೀದರ್ ನಗರವು ದೇಶದ ಸ್ವಚ್ಛ ಸುಂದರ ನಗರಗಳ ಪೈಕಿ ಒಂದೆಂದು ಸ್ಥಾನ ಪಡೆದುಕೊಂಡಿತ್ತು. ಆದರೆ ಈಗ ನಗರದ ಒಳಚರಂಡಿಗಳು ತ್ಯಾಜ್ಯ ತುಂಬಿಕೊಂಡು ವಾಸನೆ ಹೊಡೆಯುತ್ತಿವೆ. ಯಾವ ಕಾಲನಿಗೆ ಹೋದರೂ ಚರಂಡಿಗಳ ಈ ಅವ್ಯವಸ್ಥೆಯ ಜೊತೆಗೆ ಸೊಳ್ಳೆ ಕಾಟ ತಪ್ಪಿದ್ದಲ್ಲ. ಸರ್ಕಾರ ಸ್ವಚ್ಛತೆಗಾಗಿ ಕೋಟಿಗಟ್ಟಲೆ ಅನುದಾನ ನೀಡಿದರೂ ನಗರಸಭೆ ಅಧಿಕಾರಿಗಳು ಅದನ್ನು ಬಳಸುವ ಗೋಜಿಗೆ ಹೋಗಿಲ್ಲ ಎಂಬುದು ಸ್ಥಳೀಯರ ಆರೋಪ.

“ಬೀದರ್‌ನ ಪ್ರತಿ ಬೀದಿಯಲ್ಲಿಯೂ ಕಸ ತುಂಬಿಕೊಂಡಿದೆ. ಚರಂಡಿಗಳು ಕಟ್ಟಿಕೊಂಡಿವೆ. ಆದರೆ, ನಗರಸಭೆ ಅಧ್ಯಕ್ಷರಾಗಲೀ ಅಥವಾ ಅಧಿಕಾರಿಗಳಾಗಲೀ ಇತ್ತ ಗಮನಹರಿಸಿಲ್ಲ. ಬೀದರ್‌ನಲ್ಲಿ ಸಾಕಷ್ಟು ಡೆಂಘೆ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಜಿಲ್ಲಾಡಳಿತಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದೇವೆ,” ಎನ್ನುತ್ತಾರೆ ಬೀದರ್ ನಿವಾಸಿ ವಿದ್ಯಾಸಾಗರ್.

ಆದರೆ, ನಗರಸಭೆ ಈ ಆರೋಪವನ್ನು ತಳ್ಳಿಹಾಕಿದೆ. ಬೀದರ್ ನಗರದಲ್ಲಿ ಈಗಾಗಲೇ ಆರು ಫಾಗಿಂಗ್ ಯಂತ್ರಗಳಿವೆ. ಪ್ರತೀ ವಾರ್ಡ್‌ನಲ್ಲೂ ಫಾಗಿಂಗ್ ಮಾಡಲು ಎರಡು ತಂಡ ನಿಯೋಜಿಸಲಾಗಿದೆ. ಅಲ್ಲದೆ, ಸೊಳ್ಳೆಗಳ ತಡೆಗೆ ರಾಸಾಯನಿಕ ಹುಡಿಯನ್ನೂ ಬಳಸಲಾಗುತ್ತಿದೆ. ನಗರದಲ್ಲಿ ಹೆಚ್ಚಾಗಿರುವ ಸೊಳ್ಳೆಗಳನ್ನು ನಿವಾರಿಸಲು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆ,” ಎಂದಿದ್ದಾರೆ ಬೀದರ್ ನಗರಸಭೆ ಆಯುಕ್ತ ಮನೋಹರ್.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಗಂಗೂಬಾಯಿ ಹಾನಗಲ್ ಅವರ ನಿವಾಸ ಈಗ ಹಾಳುಕೊಂಪೆ!

ನಗರದ ಮೈಲೂರು, ಪ್ರತಾಬ್ ನಗರ, ನೌಬಾದ, ವಿದ್ಯಾನಗರ, ಶೀವನಗರ, ಆದರ್ಶ ಕಾಲೋನಿ ಸೇರಿದಂತೆ ಬಹುತೇಕ ಕಾಲೋನಿಯ ಚರಂಡಿಗಳುನ್ನು ಸ್ವಚ್ಛಗೊಳಿಸದೆ ವರ್ಷಗಳೇ ಕಳೆದಿವೆ. ರಾತ್ರಿ ವಿದ್ಯುತ್ ಕೈಕೊಟ್ಟರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.

ಕ್ಷೇತ್ರದ ಶಾಸಕ ರಹೀಂ ಖಾನ್ ಅವರನ್ನು ಪ್ರಶ್ನಿಸಿದರೆ, ಸರ್ಕಾರ ಸ್ವಚ್ಛತೆಗೆ ಮತ್ತು ಅಭಿವೃದ್ಧಿಗೆ ನೀಡಿದ ಹಣದ ಲೆಕ್ಕ ಹೇಳುತ್ತಾರೆ. “ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ. ಆದರೆ ಅಧಿಕಾರಿಗಳು ಅದನ್ನು ವಿನಿಯೋಗಿಸಿಲ್ಲ,” ಎನ್ನುವ ಉತ್ತರ ಶಾಸಕರದು.

“ಬೀದರ್‌ನಲ್ಲಿ ನಗರಸಭೆ ಇದೆಯೋ ಇಲ್ಲವೋ ಎಂಬ ಸಂಶಯ ಬರುತ್ತಿದೆ. ಸಂಜೆ ಐದು ಗಂಟೆಯಾದರೆ ಸೊಳ್ಳೆಗಳ ಕಾಟ ಆರಂಭವಾಗುತ್ತದೆ. ನಗರಸಭೆಯಲ್ಲಿ ಸೊಳ್ಳೆ ಓಡಿಸುವ ಹೊಗೆ ಹಾಕುವ ಯಂತ್ರಗಳಿರುತ್ತವೆ. ಸ್ವಚ್ಛತೆಗಾಗಿ ಅನುದಾನಗಳಿರುತ್ತವೆ. ಆದರೆ, ಅವುಗಳು ಯಾವುವೂ ಬೀದರ್ ನಗರದಲ್ಲಿ ಬಳಕೆಯಾಗಿಲ್ಲ. ಚರಂಡಿಗಳೂ ಸ್ವಚ್ಛವಾಗಿಲ್ಲ,” ಎಂಬುದು ಸ್ಥಳೀಯ ನಿವಾಸಿ ಓಂಕಾರ್ ಅವರ ದೂರು. ಇನ್ನು, ಶಾಸಕ ರಹೀಂ ಖಾನ್ ಅವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲದೆ, ಈಗಾಗಲೇ ಒಳಚರಂಡಿ ವ್ಯವಸ್ಥೆ ಸುಧಾರಿಸುವ ಕಾರ್ಯ ನಡೆಯುತ್ತಿದೆ ಎಂದೂ ತಿಳಿಸಿದ್ದಾರೆ.

“ಸೊಳ್ಳೆಗಳ ನಿಯಂತ್ರಣಕ್ಕೆ ತಕ್ಷಣವೇ ನಾನು ನಗರಸಭೆಯ ಆಯುಕ್ತರಿಗೆ ಸೂಚನೆ ನೀಡುತ್ತೇನೆ. ಸೊಳ್ಳೆಗಳಿಗೆ ಕಾರಣವಾಗುತ್ತಿರುವ ಒಳಚರಂಡಿ ವ್ಯವಸ್ಥೆಯನ್ನೂ ಸರಿಪಡಿಸಲು ಗಮನಹರಿಸಲಾಗುವುದು. ಈಗಾಗಲೇ ಯುಜಿಡಿ ಮತ್ತು ಒಳಚರಂಡಿ ಕೆಲಸ ಮಾಡುತ್ತಿದ್ದೇವೆ. ಶೀಘ್ರದಲ್ಲೇ ಸಮಸ್ಯೆ ಪರಿಹಾರವಾಗಲಿದೆ,” ಎಂದು ಶಾಸಕ ರಹೀಂ ಖಾನ್ ಭರವಸೆ ನೀಡಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More