ವಿಜಯಪುರ, ಬಾಗಲಕೋಟೆಯಲ್ಲಿ ಪರಿಷತ್ ಚುನಾವಣೆಗೆ ಸಿದ್ಧವಾಗಿದೆ ಅಖಾಡ

ಮೇಲ್ಮನೆಗೆ ಪಕ್ಷೇತರರಾಗಿ ಆಯ್ಕೆಯಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆ ಚುನಾವಣೆಗೂ ಮುನ್ನ ರಾಜಿನಾಮೆ ನೀಡಿದ್ದರಿಂದ ಎರಡು ತಿಂಗಳಿಂದ ಈ ಸ್ಥಾನ ಖಾಲಿ ಉಳಿದಿದ್ದು, ಆರು ತಿಂಗಳ ಒಳಗಾಗಿ ಚುನಾವಣೆ ನಡೆಯಬೇಕಿದೆ. ಹಾಗಾಗಿ ಇಲ್ಲಿ ಮತ್ತೆ ಚುನಾವಣಾ ಕಾವು ಏರತೊಡಗಿದೆ

ರಾಜ್ಯ ವಿಧಾನಸಭೆ ಚುನಾವಣೆ ಬಳಿಕ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಇದೀಗ ಮತ್ತೊಂದು ಚುನಾವಣಾ ಹಣಾಹಣಿಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ಅವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಮತಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇದೀಗ ಆ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಮೂರೂ ಪಕ್ಷಗಳ ಆಕಾಂಕ್ಷಿಗಳು ಟಿಕೆಟ್‌ಗಾಗಿ ಲಾಬಿ ಮಾಡುತ್ತಿದ್ದಾರೆ.

ಮೇಲ್ಮನೆಗೆ ಪಕ್ಷೇತರರಾಗಿ ಆಯ್ಕೆಯಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್, ವಿಧಾನಸಭೆ ಚುನಾವಣೆಗೂ ಮುನ್ನ ರಾಜಿನಾಮೆ ನೀಡಿದ್ದರಿಂದ ಎರಡು ತಿಂಗಳಿಂದ ಈ ಸ್ಥಾನ ಖಾಲಿ ಉಳಿದಿದ್ದು, ಆರು ತಿಂಗಳೊಳಗಾಗಿ ಚುನಾವಣೆ ನಡೆಯಬೇಕಿದೆ. ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲವಾದರೂ, ರಾಜಕೀಯ ಪಕ್ಷಗಳ ಆಕಾಂಕ್ಷಿಗಳು ಬಿರುಸಿನ ತಯಾರಿ ನಡೆಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಬಾದಾಮಿಯಿಂದ ಶಾಸಕರಾಗಿರುವ ಕಾರಣ ಈ ಬಾರಿಯ ಚುನಾವಣೆ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ.

ಕಳೆದ ಬಾರಿ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನ ಪರಿಷತ್‌ಗೆ ಪಕ್ಷೇತರರಾಗಿ ಆಯ್ಕೆಯಾಗಿದ್ದರು. ಆದರೆ, ಈ ಸಲ ಅವರು ಬಿಜೆಪಿಯಲ್ಲಿರುವುದರಿಂದ ಚುನಾವಣೆ ಕುತೂಹಲ ಕೆರಳಿಸಿದೆ. ಮೂರು ಪಕ್ಷಗಳಲ್ಲಿ ಹತ್ತಾರು ಅಭ್ಯರ್ಥಿಗಳು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಅದರಲ್ಲೂ, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಪಟ್ಟಿ ದೊಡ್ಡದಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಎರಡು ಜಿಲ್ಲೆಗಳ ಮಾಜಿ ಶಾಸಕರು ಪರಿಷತ್ ಮೂಲಕ ಮತ್ತೆ ಅಧಿಕಾರ ಪಡೆಯಲು ಹವಣಿಸುತ್ತಿದ್ದಾರೆ. ಬಿಜೆಪಿಯಲ್ಲೂ ಟಿಕೆಟ್‌ವಂಚಿತ ಹಾಗೂ ಮಾಜಿ ಶಾಸಕರು ವಿಧಾನ ಪರಿಷತ್ ಪ್ರವೇಶಿಸಲು ಯತ್ನ ನಡೆಸಿದ್ದಾರೆ.

ಜೆಡಿಎಸ್ ಕೂಡ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಚಿಂತನೆ ನಡೆಸಿದೆ. ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ 9 ಸಾವಿರಕ್ಕೂ ಅಧಿಕ ಮತದಾರರಿದ್ದಾರೆ. 6 ವರ್ಷಗಳ ಅವಧಿಯಲ್ಲಿ ಈಗಾಗಲೇ ಯತ್ನಾಳ್ ಎರಡು ವರ್ಷ ಪೂರೈಸಿದ್ದು, ಉಳಿದ ನಾಲ್ಕು ವರ್ಷಗಳ ಅವಧಿಗೆ ಅಧಿಕಾರ ಪಡೆಯಲು ಮೂರೂ ಪಕ್ಷಗಳು ಪೈಪೋಟಿ ನಡೆಸಿವೆ. ಆದರೆ, ಅಂತಿಮವಾಗಿ ರಾಜಕೀಯ ನಾಯಕರ ಕೊಡುಕೊಳ್ಳುವಿಕೆ ಆಧಾರದ ಮೇಲೆ ಚುನಾವಣೆ ಫಲಿತಾಂಶ ಬರಲಿದೆ.

ಒಳಒಪ್ಪಂದಗಳೇ ನಿರ್ಣಾಯಕ?

ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳು ರಾಜಕೀಯ ಪಕ್ಷಗಳಿಂದ ಇಲ್ಲಿ ಟಿಕೆಟ್ ಪಡೆಯುವುದು ಕೇವಲ ಹೆಸರಿಗೆ ಮಾತ್ರ ಎನ್ನುವಂತಾಗಿದ್ದು, ಅಭ್ಯರ್ಥಿಗಳ ವೈಯಕ್ತಿಕ ಸಾಮರ್ಥ್ಯ, ವಿರೋಧ ಪಕ್ಷಗಳ ನಾಯಕರ ಜೊತೆಗೆ ಒಳಒಪ್ಪಂದಗಳೇ ಚುನಾವಣೆ ವೇಳೆ ನಿರ್ಣಾಯಕವಾಗಲಿವೆ. ಕಳೆದ ಸಲ ಎಸ್‌ ಆರ್ ಪಾಟೀಲ್ ಹಾಗೂ ಬಸನಗೌಡ ಪಾಟೀಲ್ ಅವರನ್ನು ಪಕ್ಷ ಬೇದ ಮರೆತು ಒಳ ಒಪ್ಪಂದದ ಮೂಲಕ ಗೆಲ್ಲಿಸಲಾಗಿತ್ತು. ಈ ಸಲವೂ ಅದೇ ತಂತ್ರ ಇಲ್ಲಿ ನಡೆಯುವ ಸಾಧ್ಯತೆ ಇದೆ. ಮಾಜಿ ಸಚಿವ, ಹಾಲಿ ಶಾಸಕ ಎಂ ಬಿ ಪಾಟೀಲ್, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಇಬ್ಬರೂ ಕಳೆದ ಚುನಾವಣೆಯಲ್ಲಿ ರಾಜಕೀಯ ಚದುರಂಗದಾಟ ಆಡಿದ್ದರು. ಈ ಸಲ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರಿಂದಾಗಿ ಕಣ ರಂಗೇರಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತ ನಾಯಕರು ಯಡಿಯೂರಪ್ಪ ವಿರುದ್ಧ ಗರಂ ಆಗಿದ್ದು, ಈ ಚುನಾವಣೆಯಲ್ಲಿ ಅದಕ್ಕೆ ಉತ್ತರ ನೀಡಲು ಒಂದಾಗಿದ್ದಾರೆ. ಆದರೆ, ಹೇಗಾದರೂ ಮಾಡಿ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವುದು ಯಡಿಯೂರಪ್ಪ ಅವರಿಗೆ ಅನಿವಾರ್ಯವಾಗಿದೆ. ಚುನಾವಣೆಯಲ್ಲಿ ಬಿಜೆಪಿ ಸೋತರೆ ಅವರ ವಿರೋಧಿಗಳ ಕೈ ಮೇಲಾಗಲಿದೆ. ಇನ್ನು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಬಾದಾಮಿ ಕ್ಷೇತ್ರ ಕೂಡ ಅವಳಿ ಜಿಲ್ಲೆಯಲ್ಲಿರುವುದರಿಂದ ಈ ಸಲದ ಚುನಾವಣೆ ರಂಗೇರಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಇರುವ ಏಕೈಕ ವಿಧಾನಸಭೆ ಸದಸ್ಯ ಸಿದ್ದರಾಮಯ್ಯ ಮಾತ್ರ. ಹಾಗಾಗಿ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸಿದ್ದರಾಮಯ್ಯ ನಾಯಕತ್ವದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಕಾಂಗ್ರೆಸ್ ಕೂಡ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದೆ.

ಒಂದು ಕಡೆ ಬಿಜೆಪಿ ಟಿಕೆಟ್ ವಂಚಿತ ಹಾಗೂ ಬಿಎಸ್‌ವೈ ವಿರೋಧಿಸುವ ನಾಯಕರ ಬಣ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿದ್ದರೆ, ಮತ್ತೊಂದೆಡೆ, ಯತ್ನಾಳ್ ತಮ್ಮ ಆಪ್ತರನ್ನು ಆ ಜಾಗಕ್ಕೆ ತರಲು ಯತ್ನಿಸುತ್ತಿದ್ದಾರೆ. ಇಂತಹ ಬಿಜೆಪಿ ಬಣ ರಾಜಕೀಯ ಆ ಪಕ್ಷಕ್ಕೆ ಮುಳುವಾಗಿದೆ. ಕಾಂಗ್ರೆಸ್‌ನಲ್ಲೂ ಇದೇ ರೀತಿಯ ಬಣ ರಾಜಕೀಯವಿದೆ. ಮಾಜಿ ಸಚಿವ ಎಂ ಬಿ ಪಾಟೀಲ್ ವಿರೋಧಿ ಬಣಗಳು ಈ ಸಲದ ಚುನಾವಣೆಯಲ್ಲಿ ಒಂದಾಗಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. ಸಚಿವ ಶಿವಾನಂದ ಪಾಟೀಲ್, ದೆಹಲಿ ವಿಶೇಷ ಪ್ರತಿನಿಧಿಯಾಗಿದ್ದ ಸಿ ಎಸ್ ನಾಡಗೌಡ ಸೇರಿದಂತೆ ಹಲವು ನಾಯಕರು ಎಂಬಿ ಪಾಟೀಲ್ ಅವರನ್ನು ದೂರವಿಟ್ಟು ತಮ್ಮ ಗುಂಪಿನವರನ್ನೇ ಗೆಲ್ಲಿಸಲು ಪಣತೊಟ್ಟಿದೆ.

ಅವಳಿ ಜಿಲ್ಲೆಗಳ ವಿಧಾನ ಪರಿಷತ್ ಚುನಾವಣೆಗೆ ನಾನು ಟಿಕೆಟ್ ಆಕಾಂಕ್ಷಿಯಾಗಿಲ್ಲ. ಟಿಕೆಟ್ ನೀಡುವಂತೆ ಯಾವುದೇ ಲಾಬಿ ಮಾಡಿಲ್ಲ. ಬಿಜೆಪಿ ನಾಯಕರು ಇದುವರೆಗೂ ಈ ಬಗ್ಗೆ ನನ್ನನ್ನು ಸಂಪರ್ಕಿಸಿಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ದ. ಮುಂದಿನ ರಾಜಕೀಯ ನಡೆಗಳ ಬಗ್ಗೆ ಈಗಲೇ ಏನು ಹೇಳವುದಿಲ್ಲ. ಮುಂದಿನ ದಿನಗಳಲ್ಲಿ ಉತ್ತರ ನೀಡುತ್ತೇನೆ.
ಅಪ್ಪಾಸಾಹೇಬ್ ಪಟ್ಟಣಶೆಟ್ಟಿ, ಬಿಜೆಪಿಯ ಮಾಜಿ ಸಚಿವ
ಇದನ್ನೂ ಓದಿ : ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕತ್ವ ಹೊಣೆ ಹೊರುವವರು ಯಾರು?  

ಮೈತ್ರಿಗೆ ಜೆಡಿಎಸ್ ನಾಯಕರ ಕಸರತ್ತು?

ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ಒಟ್ಟು ಎರಡು ವಿಧಾನ ಪರಿಷತ್ ಸ್ಥಾನಗಳಿದ್ದು, ಈಗಾಗಲೇ ಒಂದು ಸ್ಥಾನ ಎಸ್ ಆರ್ ಪಾಟೀಲ್ ಪಾಲಾಗಿದೆ. ಉಳಿದ ಒಂದು ಸ್ಥಾನಕ್ಕೆ ಬೇಡಿಕೆ ಇಡುವ ಬಗ್ಗೆ ಜೆಡಿಎಸ್ ನಾಯಕರು ಚಿಂತನೆ ನಡೆಸಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರುವ ಕಾರಣ, ಈ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡು ತಮ್ಮ ಪಕ್ಷಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡಬಹುದು ಎನ್ನುವುದು ಜೆಡಿಎಸ್ ಲೆಕ್ಕಾಚಾರ. ಆದರೆ, ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಸದಸ್ಯರ ಸಂಖ್ಯೆ ಕಡಿಮೆ ಇರುವುದರಿಂದ ಹಾಗೂ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ವಿಷಯ ಆಗಿರುವುದರಿಂದ ಜೆಡಿಎಸ್‌ನ ಈ ಲೆಕ್ಕಾಚಾರ ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎನ್ನುವುದನ್ನು ಕಾದುನೋಡಬೇಕು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More