ವಿಡಿಯೋ ಸ್ಟೋರಿ | ಏಳೂರ ಕರಿಹರಿಯುವ ಹಬ್ಬ ಕಾರ ಹುಣ್ಣಿಮೆ

ರೈತ ತನ್ನೆರಡು ಕಂಗಳಂತೆ ಪ್ರೀತಿಸುವ ಎತ್ತುಗಳನ್ನು ಕರಿ ಹರಿಸುವುದು ಅಥವಾ ಎತ್ತಿಗೆ ಸಿಂಗಾರ ಮಾಡಿ ಊರು ತುಂಬಾ ಓಡಿಸುವುದೇ ಕಾರ ಹುಣ್ಣಿಮೆ ರೈತರ ಹಬ್ಬ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ರೀತಿಯಲ್ಲಿ ಕಾಖಂಡಗಿ ಗ್ರಾಮದಲ್ಲಿ ಎತ್ತುಗಳನ್ನು ಓಡಿಸಲಾಗುತ್ತದೆ 

ರೈತರಿಗೆ ಕಾರಹುಣ್ಣಿಮೆ ದೊಡ್ಡ ಹಬ್ಬ. ಇದು ಅನ್ನದಾತರ ಹಬ್ಬ. ಉತ್ತರ ಕರ್ನಾಟಕದ ಭಾಗದಲ್ಲಿ ಇದರ ಆಚರಣೆ ಬಲುಜೋರಾಗಿರುತ್ತದೆ. ಹಬ್ಬಗಳಿಗೆ ಬಾಗಿಲು ತೆಗೆಯುವ ಹಬ್ಬ ಎಂದು ಇದನ್ನು ಕರೆಯಲಾಗುತ್ತದೆ. ರೈತ ತನ್ನೆರಡು ಕಂಗಳಂತೆ ಪ್ರೀತಿಸುವ ಎತ್ತುಗಳನ್ನು ಕರಿ ಹರಿಸುವುದು ಅಥವಾ ಎತ್ತಿಗೆ ಸಿಂಗಾರ ಮಾಡಿ ಊರು ತುಂಬಾ ಓಡಿಸುವುದನ್ನು ಕಾರ ಹುಣ್ಣಿಮೆ ಎನ್ನಲಾಗುತ್ತಿದೆ. ಈ ಹಬ್ಬ ಬೇರೆ ಬೇರೆ ಜಿಲ್ಲೆಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ವಿಶೇಷ ಇದ್ದೇ ಇರುತ್ತದೆ. ವಿಜಯಪುರ ಜಿಲ್ಲೆಯ ಕಾಖಂಡಕಿ ಗ್ರಾಮದಲ್ಲಿ ನಡೆಯುವ ಕಾರಹುಣ್ಣಿಮೆಗೂ ತನ್ನದೇ ಆದ ವಿಶೇಷತೆಯಿದೆ.

ತಮಿಳುನಾಡಿನಲ್ಲಿ ಜಲ್ಲಿಕಟ್ಟು ರೀತಿಯಲ್ಲಿ ಕಾಖಂಡಗಿ ಗ್ರಾಮದಲ್ಲಿ ಎತ್ತುಗಳನ್ನು ಓಡಿಸಲಾಗುತ್ತದೆ. ಇಡೀ ಕರ್ನಾಟಕದಲ್ಲಿಯೇ ಅತ್ಯಂತ ವಿಶೇಷವಾಗಿ ನಡೆಯುವ ಕಾಖಂಡಕಿ ಕರಿಹರಿಯುವ ಹಬ್ಬ ರೈತರ ಹಬ್ಬವಾಗಿದೆ. ರಾಜ್ಯಾದ್ಯಂತ ಕಾರಹುಣ್ಣಿಮೆ ಆದ ಏಳನೇ ದಿನಕ್ಕೆ ನಡೆಯುವ ಕರಿ ಹರಿಯುವ ಉತ್ಸವದಲ್ಲಿ ಒಂದೊಂದು ಎತ್ತಿಗೆ ಎಂಟರಿಂದ ಹತ್ತು ಹಗ್ಗಗಳನ್ನು ಕಟ್ಟಿ ಎತ್ತನ್ನು ಎಳೆಯಲಾಗುತ್ತದೆ. ಇದಕ್ಕೂ ಮೊದಲು ಯುವಕನೊಬ್ಬ ಒಂದು ಕಟ್ಟಿಗೆಗೆ ಬಟ್ಟೆ ಕಟ್ಟಿ ಎತ್ತಿಗೆ ತೋರಿಸುವ ಮೂಲಕ ಎತ್ತನ್ನು ರೊಚ್ಚಿಗೆಬ್ಬಿಸುತ್ತಾನೆ. ಹೀಗೆ ರೊಚ್ಚಿಗೆದ್ದ ಎತ್ತು ನೆರೆದಿದ್ದ ಜನರತ್ತ ಓಡಲು ಶುರು ಮಾಡುತ್ತದೆ. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿರುವ ಜನರು ದಿಕ್ಕಾಪಾಲಾಗಿ ಓಡುತ್ತಾರೆ. ಎತ್ತುಗಳ ಕರಿ ಹರಿಯುವ ಸಂದರ್ಭದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ನಿಲ್ಲಬೇಕೆಂದರೆ ಗುಂಡಿಗೆ ಗಟ್ಟಿ ಇರಬೇಕು. ಯಾಕಂದರೆ ಯಾವಾಗ ಎತ್ತುಗಳು ಮೈಮೇಲೆ ಎಗರಿ ಏನು ಅನಾಹುತ ಸಂಭವಿಸುತ್ತದೋ ಗೊತ್ತಾಗುವುದಿಲ್ಲ. ಹೀಗೆ ಓಡಾಡುವಾಗ ಸಾಕಷ್ಟು ಬಾರಿ ಸಣ್ಣಪುಟ್ಟ ಅವಘಡಗಳು ನಡೆದಿವೆ. ರೊಚ್ಚಿಗೆದ್ದ ಎತ್ತುಗಳು ಮನಸ್ಸಿಗೆ ಬಂದಂತೆ ಮೈಮೇಲೆ ಎಗರುವುದನ್ನು ನೋಡಲೆಂದೇ ಜನರು ಕಾದು ಕುಳಿತಿರುತ್ತಾರೆ. ಗ್ರಾಮದ ಚಾವಡಿ ಕಟ್ಟಯಿಂದ ಬಸ್ ನಿಲ್ದಾಣದವರೆಗೂ ಎತ್ತುಗಳನ್ನು ಓಡಿಸಲಾಗುತ್ತದೆ. ಮದ್ಯಾಹ್ನ 3 ಗಂಟೆ ವೇಳೆಗೆ ಆರಂಭವಾಗುವ ಈ ಎತ್ತುಗಳ ಆಟ 5 ಗಂಟೆಯವರೆಗೂ ನಡೆಯುತ್ತದೆ. ಸುಮಾರು ಎರಡು ಗಂಟೆಗಳ ಕಾಲ ನಡೆಯುವ ಈ ಎತ್ತುಗಳ ಆಟದಲ್ಲಿ ಗ್ರಾಮದ ನೂರಾರು ಯುವಕರು ಭಾಗವಹಿಸಿರುತ್ತಾರೆ.

ನಾನು ಹಲವು ವರ್ಷಗಳಿಂದ ಇಲ್ಲಿ ಎತ್ತುಗಳ ಓಟವನ್ನು ನೋಡಲು ಬರುತ್ತೇನೆ. ಗ್ರಾಮದ ಯುವಕರು ಮದವೇರಿದ ಎತ್ತುಗಳನ್ನು ಹಿಡಿಯುವುದನ್ನು ನೋಡಿದರೆ ಭಯವಾಗುತ್ತದೆ. ಗ್ರಾಮದ ಬಹುತೇಕ ಯುವಕರು, ಹಿರಿಯರು ಎತ್ತುಗಳನ್ನು ಹಿಡಿಯುವ ಸಾಹಸ ಮೆಚ್ಚುವಂತದ್ದು. ಆದರೆ ಸ್ವಲ್ಪ ಮೈಮರೆತರೆ ಅಪಾಯ ಗ್ಯಾರಂಟಿ. 
ಅಪ್ಪುಗೌಡ, ಎತ್ತಿನ ಓಟ ನೋಡಲು ಬಂದ ಮಹಾರಾಷ್ಟ್ರ ನಿವಾಸಿ
ಇದನ್ನೂ ಓದಿ : ವಿಡಿಯೋ ಸ್ಟೋರಿ | ರಥದ ಮೇಲಿಂದ ಪುಟ್ಟ ಮಕ್ಕಳನ್ನು ಕೆಳಗೆಸೆಯುವ ಜಾತ್ರೆ!

ಕಾಖಂಡಕಿ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಕರಿ ಹರಿಯುವ ಆಟಕ್ಕೂ ಒಂದು ಇತಿಹಾಸವಿದೆ. ಜನಪದರು ಹೇಳುವ ಪ್ರಕಾರ, ಹಿಂದೆ ಗ್ರಾಮದ ಯುವಕನೊಬ್ಬ ಕಾರ ಹುಣ್ಣಿಮೆ ದಿನ ಮನೆಯಲ್ಲಿ ಊಟಕ್ಕೆ ಕುಳಿತಾಗ ತಾಯಿಗೆ “ಬೇಗ ಊಟ ಕೊಡು” ಎಂದು ಹೇಳುತ್ತಾನಂತೆ. ಈ ವೇಳೆ ತಾಯಿ “ಇಷ್ಟು ಅವಸರ ಮಾಡ್ತಿಯಲ್ಲ, ನೀ ಏನ್ ಏಳೂರು ಕರಿ ಹರಿದು ಬಂದಿಯೇನು” ಎಂದು ತಾಯಿ ಕೇಳುತ್ತಾಳಂತೆ. ಅದರಿಂದ ಕುಪಿತಗೊಂಡ ಯುವಕ ಊಟವನ್ನು ಅಲ್ಲಿಯೇ ಬಿಟ್ಟು ಕರಿ ಹರಿಯಲು ಎದ್ದುಹೋಗಿ ಬಿಡುತ್ತಾನೆ. ಹೀಗೆ ಹೋಗಿದ್ದವ ಏಳು ದಿನಗಳ ಬಳಿಕ ಏಳೂರಿನ ಕರಿ ಹರಿದು ತರುತ್ತಾನೆ. ಹೀಗಾಗಿಯೇ ಅಂದಿನಿಂದಲೂ ಕೂಡ ಈ ಗ್ರಾಮದಲ್ಲಿ ಕರಿ ಹರಿಯುವ ಆಟ ಅತ್ಯಂತ ಪ್ರಸಿದ್ಧಿ ಹಾಗೂ ರೋಮಾಂಚನಕಾರಿಯಾಗಿ ನಡೆಯುತ್ತಿದೆ.

ಇಲ್ಲಿ ಎತ್ತುಗಳನ್ನು ರೊಚ್ಚಿಗೆಬ್ಬಿಸಿ ಅವುಗಳನ್ನು ಓಡಾಡಿಸುವುದನ್ನು ನೋಡಲೆಂದೇ ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಕರ್ನಾಟಕದ ಮೂಲೆ ಮೂಲೆಗಳಿಂದ ಜನರು ಬಂದಿರುತ್ತಾರೆ. ಕರಿ ಹರಿಯುವ ಆಟದಲ್ಲಿ 40ಕ್ಕೂ ಹೆಚ್ಚು ಎತ್ತುಗಳೊಂದಿಗೆ ಯುವಕರು ಭಾಗವಹಿಸಿರುತ್ತಾರೆ. ಕಾರಹುಣ್ಣಿಮೆ ಆಚರಿಸಲು ಇನ್ನೊಂದು ವಿಶೇಷವೂ ಇದೆ. ಮುಂಗಾರು ಆರಂಭವಾಗುವ ವೇಳೆ ಎತ್ತುಗಳಿಗೆ ಶೃಂಗಾರ ಮಾಡಿ ಓಡಿಸಲಾಗುತ್ತದೆ. ರೈತರಿಗೆ ಬಿತ್ತನೆ ಮಾಡಲು ಎತ್ತುಗಳ ಕಾಲುಗಳಿಗೆ ಶಕ್ತಿ ಬಂದಂತಾಗಿ ಅನುಕೂಲವಾಗಲು ಎಂದು ಹೀಗೆ ಮಾಡಲಾಗುತ್ತದೆ. ಊರ ಗೌಡರ ಎತ್ತುಗಳನ್ನು ಅವರ ಮನೆಯಿಂದ ಊರತುಂಬ ಮೆರವಣಿಗೆ ಮಾಡಲಾಗುತ್ತದೆ. ಆ ಬಳಿಕ ನಡೆಯುವ ಎತ್ತುಗಳನ್ನು ಆಡಿಸುವ ಮೂಲಕ ಆಟ ಭರ್ಜರಿಯಾಗಿರುತ್ತದೆ.

ಈ ಎತ್ತುಗಳ ಓಟದಲ್ಲಿ ರೈತಾಪಿ ವರ್ಗದಲ್ಲಿ ವಿಶಿಷ್ಟವಾದ ನಂಬಿಕೆಯೊಂದು ಇದೆ. ಒಂದಕ್ಕೆ ಮುಂಗಾರಿ ಇನ್ನೊಂದಕ್ಕೆ ಹಿಂಗಾರಿ ಎಂದು ಹೆಸರಿಟ್ಟು ಊರ ಗೌಡರು ತೆಂಗಿನಕಾಯಿ ಎಸೆದು ಓಟಕ್ಕೆ ಚಾಲನೆ ನೀಡುತ್ತಾರೆ. ಯಾವ ಎತ್ತು ಮೊದಲು ಕರಿ ಹರಿಯುತ್ತದೆಯೋ ಆ ಬೆಳೆ ಚೆನ್ನಾಗಿ ಬರುತ್ತದೆ ಎಂಬುದು ರೈತರ ಬಲವಾದ ನಂಬಿಕೆ. ಓಡುವ ಎತ್ತುಗಳನ್ನು ನೂರಾರು ಸಂಖ್ಯೆಯಲ್ಲಿ ಸೇರಿದ ಜನ ಹುರಿದುಂಬಿಸುತ್ತಾರೆ. ಕರಿ ಹರಿಯುವ ಆಟದಲ್ಲಿ ಕೆಂಪೆತ್ತು ಮುಂದೆ ಬಂದ್ರೆ ಗೋಧಿ, ತೊಗರಿ ಸೇರಿದಂತೆ ಕೆಂಪು ಕಾಳುಗಳ ಬೆಳೆ ಉತ್ತಮವಾಗಿ ಬರುತ್ತವೆ. ಹಾಗೂ ಬಿಳಿ ಎತ್ತು ಮುಂದೆ ಬಂದ್ರೆ ಜೋಳ ಚೆನ್ನಾಗಿ ಬೆಳೆಯುತ್ತದೆ ಎನ್ನುವ ನಂಬಿಕೆ ಇಲ್ಲಿನ ರೈತರದ್ದು.

ನಮ್ಮ ಗ್ರಾಮದಲ್ಲಿ ಎತ್ತುಗಳ ಓಟದಲ್ಲಿ ಹಲವು ಜನರು ಗಾಯಗೊಂಡಿದ್ದಾರೆ. ಆದರೆ ಯಾರು ಅದಕ್ಕೆ ಭಯ ಪಡುವುದಿಲ್ಲ. ಇದು ನಮ್ಮ ಗ್ರಾಮದ ಐತಿಹಾಸಿಕ ಕ್ರೀಡೆ. ಪ್ರತಿವರ್ಷ ನಾನು ಎಲ್ಲೇ ಇದ್ದರೂ ತಪ್ಪದೆ ಈ ದಿನ ನಮ್ಮೂರಿಗೆ ವಾಪಸ್ ಬಂದು ಎತ್ತುಗಳನ್ನು ಹಿಡಿಯುತ್ತೇನೆ.
ಮಲ್ಲಿಕಾರ್ಜುನ, ಗ್ರಾಮಸ್ಥರು

ಸಂಪ್ರದಾಯದ ಹೆಸರಲ್ಲಿ ಹಿಂಸೆ

ಈ ಕಾರಹುಣ್ಣಿಮೆ ಆಚರಣೆ ರೈತರ ಹಬ್ಬ. ಹಿಂದೆ ರೈತರು ತಮ್ಮ ಸಂಪ್ರದಾಯವಾಗಿ ಇದನ್ನು ಆಚರಣೆ ಮಾಡುತ್ತಿದ್ದರು. ಆದರೆ ಕಾಲ ಬದಲಾದಂತೆ ಇಲ್ಲಿ ನಡೆಯುವ ಆಚರಣೆಯಲ್ಲೂ ಬದಲಾವಣೆ ಕಂಡು ಬಂದಿದೆ. ಈ ಕ್ರಿಡೆಯಲ್ಲಿ ಭಾಗವಹಿಸುವ ಎತ್ತುಗಳಿಗೆ ಸಾರಾಯಿ ಕುಡಿಸಲಾಗುತ್ತದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಎತ್ತಿಗೆ ಮದವೇರಲು ಈ ರೀತಿ ಮಾಡಲಾಗುತ್ತಿದೆ ಎಂದು ಹಲವು ಪ್ರಾಣಿ ಪ್ರಿಯರು ಅಸಮಾಧಾನ ಹೊರಹಾಕಿದ್ದಾರೆ. ಆದರೆ ಇದುವರೆಗೂ ಯಾರು ಈ ಬಗ್ಗೆ ಅಧಿಕೃತವಾಗಿ ಕಾನೂನು ಹೋರಾಟ ಮಾಡಿಲ್ಲ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More