ವಿಡಿಯೋ ಸ್ಟೋರಿ | ಬೀದರ್ ಜಿಲ್ಲೆಯಲ್ಲಿ ೧೮ ಕನ್ನಡ ಶಾಲೆಗಳಿಗೆ ಬೀಗ

ಶಿಕ್ಷಣ ಸಚಿವ ಎಚ್ ಮಹೇಶ್ ಅವರು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಪದೇಪದೇ ಹೇಳುತ್ತಲೇ ಬಂದಿದ್ದಾರೆ. ಆದರೆ, ಮತ್ತೊಂದೆಡೆ ಮಕ್ಕಳು ಕಡಿಮೆ ಇರುವ ನೆಪ ಮಾಡಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಬೀದರ್ ಜಿಲ್ಲೆಯಲ್ಲಿ ೧೮ ಶಾಲೆಗಳನ್ನು ಮುಚ್ಚಿದ್ದಾರೆ

ಬೀದರ್‌ ಜಿಲ್ಲೆಯಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸುಮಾರು ೧೮ ಕನ್ನಡ ಶಾಲೆಗಳಿಗೆ ಬೀಗ ಜಡಿಯಲಾಗಿದೆ. ಶಿಕ್ಷಣ ಸಚಿವ ಎಚ್ ಮಹೇಶ್ ಅವರು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ, ಮತ್ತೊಂದೆಡೆ ಮಕ್ಕಳು ಕಡಿಮೆ ಇರುವ ನೆಪ ಮಾಡಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗಳನ್ನು ಮುಚ್ಚುವುದನ್ನು ಮುಂದುವರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬೀದರ್‌ನ ಪ್ರಭಾರಿ ಡಿಡಿಪಿಐ ಇನಾಯತ ಅಲಿ, "ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಕ್ಕಳ ಶೂನ್ಯ ದಾಖಲಾತಿ ಹಿನ್ನೆಲೆಯಲ್ಲಿ ಒಟ್ಟು 18 ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇನ್ನೂ ಒಂದು ತಿಂಗಳಲ್ಲಿ ಮಕ್ಕಳು ಪ್ರವೇಶ ಪಡೆದರೆ, ದಾಖಲಾತಿಗಳು ಬಂದರೆ ಬಂದ್ ಆಗಿರುವ ಶಾಲೆಗಳನ್ನು ಮತ್ತೆ ಪ್ರಾರಂಭಿಸಲಾಗುವುದು. ಜೊತೆಗೆ ಸರ್ಕಾರವೇ ರಾಜ್ಯದ ಎಲ್ಲ ಸರಕಾರಿ ಶಾಲೆಗಳ ದಾಖಲಾತಿಗಳನ್ನು ಆನ್‌ಲೈನ್‌ನಲ್ಲೇ ಲಭ್ಯವಿರುವಂತೆ ಮಾಡಿದೆ. ಬೀದರ್‌ನ ೧೮ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇರುವ ಮಾಹಿತಿ ಆನ್‌ಲೈನಲ್ಲಿಯೇ ಇದೆ. 18 ಶಾಲೆಗಳ ಪೈಕಿ ಬಹುತೇಕ ಶಾಲೆಗಳು ಗಡಿಭಾಗದ ಗ್ರಾಮಗಳಲ್ಲಿದ್ದು, ಔರಾದ್‌, ಭಾಲ್ಕಿ ಹಾಗೂ ಬಸವಕಲ್ಯಾಣಗಳಲ್ಲೇ ಹೆಚ್ಚು ಶಾಲೆಗಳನ್ನು ಮುಚ್ಚಲಾಗಿದೆ. ನಾವು ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳಿಗೆ ಎಲ್ಲ ಸೌಲಭ್ಯ ನೀಡುತ್ತಿದ್ದೇವೆ. ಆದರೂ ಗಡಿಭಾಗದಲ್ಲಿ ಮಕ್ಕಳು ಸರ್ಕಾರಿ ಶಾಲೆಯತ್ತ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಮುಚ್ಚಬೇಕಾಗಿ ಬಂದಿದೆ," ಎಂದು ಹೇಳಿದ್ದಾರೆ.

ಇದನ್ನೂ ಓದಿ : ಏಕತಾರಿ | ಕನ್ನಡ ಶಾಲೆ ಬಗ್ಗೆ ಅಮ್ಮ ಬಚ್ಚಿಟ್ಟಿದ್ದ ಗುಟ್ಟೊಂದು ಗೊತ್ತಾಯಿತು!

ಸದ್ಯ, ಔರಾದ್‌ ತಾಲೂಕಿನಲ್ಲಿ 8, ಬಸವಕಲ್ಯಾಣ ತಾಲೂಕಿನಲ್ಲಿ 3, ಭಾಲ್ಕಿಯಲ್ಲಿ 6 ಹಾಗೂ ಹುಮನಾಬಾದ್‌ನಲ್ಲಿ 1 ಶಾಲೆಯನ್ನು ಮುಚ್ಚಲಾಗಿದೆ. ಗಡಿಭಾಗದ ಕೆಲವು ಶಾಲೆಗಳಲ್ಲಿ ಬಹಿರಂಗವಾಗಿ ಕನ್ನಡ ಮಾಧ್ಯಮ ಎನ್ನುವ ಬೋರ್ಡ್‌ಗಳಿವೆ. ಆದರೆ, ವಾಸ್ತವದಲ್ಲಿ ಒಳಗೆ ಬೇರೆ ಮಾಧ್ಯಮದ ಶಾಲೆಗಳು ನಡೆಯುತ್ತಿವೆ ಎನ್ನುವ ಆರೋಪವನ್ನೂ ಗ್ರಾಮಸ್ಥರು ಮಾಡಿದ್ದಾರೆ.

ಗಡಿಭಾಗದಲ್ಲಿ ಕನ್ನಡ ಅಭಿವೃದ್ಧಿಗಾಗಿ ಸರ್ಕಾರಿ ಗಡಿ ಅಭಿವೃದ್ದಿ ಪ್ರಾಧಿಕಾರ, ಗಡಿ ರಕ್ಷಣಾ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜೊತೆಗೆ ಕನ್ನಡದ ಅಭಿವೃದ್ದಿಗಾಗಿ ಹತ್ತು ಹಲವು ಸಂಘ-ಸಂಸ್ಥೆಗಳು ಇವೆ. ಹೀಗಿದ್ದರೂ ಕನ್ನಡ ಶಾಲೆಗಳಿಗೆ ಉತ್ತಮ ಶಿಕ್ಷಕರು ಸಿಗುತ್ತಿಲ್ಲ. ಶಾಲೆಗಳನ್ನು ಮುಚ್ಚಬೇಕಾಗಿ ಬರುತ್ತಿದೆ. ಆದರೆ ೧೮ ಶಾಲೆಗಳು ಮುಚ್ಚಿದರೂ ಕನ್ನಡ ಹೋರಾಟಗಾರರಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಮುಖ್ಯವಾಗಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಬೀದರ್ ಜಿಲ್ಲೆಯಲ್ಲಿ ವ್ಯಾಪಕವಾಗಿ ಬೆಳೆಯುತ್ತಿರುವುದು ಸರ್ಕಾರಿ ಶಾಲೆಗಳಿಗೆ ಹೊಡೆತ ನೀಡಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು, ಸಿಬ್ಬಂದಿ ಮತ್ತು ಇತರ ಮೂಲಸೌಕರ್ಯಗಳ ಕೊರತೆ ಇದೆ. ಆದರೆ, ಖಾಸಗಿ ಸಂಸ್ಥೆಗಳು ಬಹುತೇಕ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಇಂಗ್ಲಿಷ್ ಮಾಧ್ಯಮದ ಶಿಕ್ಷಣದ ಬಗ್ಗೆ ಮಕ್ಕಳು ಮತ್ತು ಪೋಷಕರಿಗೆ ಇರುವ ಆಸಕ್ತಿಯೂ ಇದಕ್ಕೆ ಕಾರಣ ಎನ್ನಲಾಗಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More