ಗೌರಿ ಲಂಕೇಶ್ ಹತ್ಯೆ ಆರೋಪಿ ವಾಗ್ಮೊರೆ ಪರ ಪ್ರಚಾರಕ್ಕಿಳಿದ ಶ್ರೀರಾಮ ಸೇನೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿ ಪರಶುರಾಮ್ ವಾಗ್ಮೊರೆ ಪರ ವಿಜಯಪುರ ಜಿಲ್ಲೆಯ ಶ್ರೀರಾಮ ಸೇನೆ ಘಟಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಸದ್ಯ, ವಾಗ್ಮೊರೆ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ಪರವಾಗಿ ಶ್ರೀರಾಮಸೇನೆ ಮತ್ತಿತರ ಹಿಂದೂ ಸಂಘಟನೆಗಳ ನಾಯಕರು ಸಮರ್ಥನೆಗೆ ಇಳಿದಿದ್ದಾರೆ. ಅದರಲ್ಲೂ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಿಜಯಪುರ ಜಿಲ್ಲೆಯ ಸಿಂದಗಿ ಮೂಲದ ಪರಶುರಾಮ್ ವಾಗ್ಮೊರೆ ಪರವಾಗಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ಮಾಡುತ್ತಿದ್ದು, ಪರಶುರಾಮ್ ವಾಗ್ಮೊರೆ ಧರ್ಮ ರಕ್ಷಕ ಎಂಬ ಪೋಸ್ಟ್‌ಗಳನ್ನು ವೈರಲ್ ಮಾಡುತ್ತಿದ್ದಾರೆ. ಆರಂಭದಲ್ಲಿ ಗೌರಿ ಹಂತಕರಿಗೂ ನಮಗೂ ಸಂಬಂಧವಿಲ್ಲ ಎಂದಿದ್ದ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹಾಗೂ ಅವರ ಬೆಂಬಲಿಗರು, ಕಟ್ಟಾ ಹಿಂಬಾಲಕರು, ಶ್ರೀರಾಮ ಸೇನೆ ಮುಖಂಡರು, ಇದೀಗ ಪರಶುರಾಮ್ ಪರವಾಗಿ ವಾದಕ್ಕಿಳಿದಿದ್ದು, ಈ ಸಂಘಟನೆಯ ನಾಯಕರ ಇಬ್ಬಗೆಯ ನೀತಿ ಜಗಜ್ಜಾಹೀರಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧನ ಮಾಡಿದ್ದೆ ತಡ, ಮುತಾಲಿಕ್ ಹಾಗೂ ಅವರ ಬೆಂಬಲಿಗರು ಸಿಐಡಿ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದು, ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ ಎಂದು ವಾದ ಮಾಡುತ್ತಿದ್ದರು. ಆದರೆ, ಇದೀಗ ಅದೇ ಸಂಘಟನೆಯ ಮುಖಂಡರು ಪರಶುರಾಮ್ ವಾಗ್ಮೊರೆಗೆ ಬೆಂಬಲ ನೀಡುತ್ತಿದ್ದು, ಸಿಐಡಿ ಅಧಿಕಾರಿಗಳು ಹೇಳಿದ್ದು ಸತ್ಯ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.

ವಿಜಯಪುರ ಜಿಲ್ಲೆಯ ಶ್ರೀರಾಮ ಸೇನೆ ಘಟಕ ಪರಶುರಾಮ್ ವಾಗ್ಮೊರೆ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಪರಶುರಾಮ್ ವಾಗ್ಮೊರೆ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ವಿಜಯಪುರ ಜಿಲ್ಲಾ ಶ್ರೀರಾಮಸೇನೆ ಘಟಕದ ಅಧ್ಯಕ್ಷ ರಾಕೇಶ್ ಮಠ, ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಪರಶುರಾಮ್ ಒಬ್ಬ ಧರ್ಮ ರಕ್ಷಕ, ಇದೀಗ ಆತನ ಕುಟುಂಬ ಸಂಕಷ್ಟದಲ್ಲಿದೆ, ಧನ ಸಹಾಯ ಮಾಡುವ ಮೂಲಕ ನಾವೆಲ್ಲ ಅವರ ಬೆಂಬಲಕ್ಕೆ ನಿಲ್ಲೋಣ ಎಂದು ಮನವಿ ಮಾಡಲಾಗಿದೆ. ಶ್ರೀರಾಮ ಸೇನೆಯ ಮತ್ತೊಬ್ಬ ಮುಖಂಡ ಹಾಗೂ ಪ್ರಮೋದ್ ಮುತಾಲಿಕ್ ಅವರ ಬಲಗೈ ಬಂಟ ನೀಲಕಂಠ ಕಂದಗಲ್ಲ ಅವರು ವಾಗ್ಮೋರೆ ಅವರ ಪ್ರಾಣವು ಧರ್ಮ ರಕ್ಷಣೆಗೆ ಮುಡಿಪಾಗಿದೆ ಎಂದಿದ್ದಾರೆ. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ರಾಮ್ ಸೇನಾ ಎಂಬ ಹಿಂದೂ ಸಂಘಟನೆಯ ನಾಯಕಿ ಮಂಜಾಲೇಶ್ವರಿ, ಹಿಂದೂ ಧರ್ಮ ರಕ್ಷಣೆಗಾಗಿ ಪ್ರತಿ ಮನೆಯಲ್ಲೂ ಒಬ್ಬ ಪರಶುರಾಮ್ ಹುಟ್ಟುತ್ತಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ಬುದ್ದಿ ಜೀವಗಳು ಲದ್ದಿಜೀವಿಗಳಾಗಿದ್ದಾರೆ ಎನ್ನುವ ಮೂಲಕ ವಿವಾದ ಮಾಡಿಕೊಂಡಿದ್ದಾರೆ.

ಪರಶುರಾಮ್ ಕುಟುಂಬದ ಜೊತೆ ಶ್ರೀರಾಮ ಸೇನಾ ನಾಯಕರು

ಇದೆಲ್ಲಕ್ಕಿಂತ ಆಘಾತಕಾರಿ ವಿಷಯವೆಂದರೆ, ಪರಶುರಾಮ್ ವಾಗ್ಮೊರೆಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಮಹಾನ್ ಪುರುಷ ಎಂಬಂತೆ ಬಿಂಬಿಸುತ್ತಿದ್ದಾರೆ. ಜೈ ಪರಶುರಾಮ್, ಜೈ ಮಂಗಲ್ಪಾಂಡೆ, ಜೈ ನಾಥೂರಾಮ್ ಗೋಡ್ಸೆ, ಜೈ ಹಿಂದೂ ರಾಷ್ಟ್ರ ಅಂತ ಘೋಷಣೆಗಳನ್ನು ಬರೆದು ಜಿಲ್ಲೆಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಇದು ಜನರ ಪರ-ವಿರೋಧಕ್ಕೆ ಕಾರಣವಾಗಿದೆ. ಇದರ ಜೊತೆಗೆ ಶ್ರೀರಾಮ ಸೇನೆ ರಾಜ್ಯ ಮುಖಂಡರು ಎರಡು ದಿನಗಳ ಹಿಂದೆ ವಾಗ್ಮೊರೆ ಕುಟುಂಬವನ್ನು ಭೇಟಿ ಮಾಡಿ, ಬೆಂಬಲ ನೀಡಿದ್ದಾರೆ.

ಅಫ್ಜಲ್ ಗುರು ಸಂಸತ್ತಿನ ಮೇಲೆ ದಾಳಿ ಮಾಡಿದಾಗ ಆತನಿಗೆ ನೀಡಿದ ಶಿಕ್ಷೆಯನ್ನು ಪ್ರಶ್ನೆ ಮಾಡಿ, ಆತನ ಪರವಾಗಿ ಬುದ್ದಿಜೀವಿಗಳು ವಾದ ಮಾಡಿದರು. ಇದೀಗ ಪರಶುರಾಮ್ ಪರವಾಗಿ ನಾವು ವಾದ ಮಾಡಿದರೆ ತಪ್ಪೇ? ಅಷ್ಟಕ್ಕೂ ಪರಶುರಾಮ್ ಕೇವಲ ಆರೋಪಿ, ಅಪರಾಧಿಯಲ್ಲ.
ಮಂಜಾಲೇಶ್ವರಿ, ಹಿಂದೂ ಸಂಘಟನೆಯ ನಾಯಕಿ
ಇದನ್ನೂ ಓದಿ : ಗೌರಿ ಲಂಕೇಶ್ ಹತ್ಯೆ ಆರೋಪಿ ಪರಶುರಾಮ್‌ಗೆ ರಾಯಚೂರು ಜಿಲ್ಲೆಯೊಂದಿಗೂ ನಂಟು

ಸುಳ್ಳು ಹೇಳಿದರಾ ಮುತಾಲಿಕ್?

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪರಶುರಾಮ್ ಬಂಧನವಾದಾಗ, ಆತ ಶ್ರೀರಾಮ ಸೇನೆಗೆ ಸೇರಿದವನೆಂದು ಪೊಲೀಸರು ಹೇಳಿದ ತಕ್ಷಣ ಮುತಾಲಿಕ್ ಅವರು ಮಾಧ್ಯಮಗಳ ಮುಂದೆ ಬಂದು, ಆತ ತಮ್ಮ ಸಂಘಟನೆಗೆ ಸೇರಿಲ್ಲ ಎಂದು ವಾದ ಮಾಡಿದರು. ಆದರೆ, ಯಾವಾಗ ಪರಶುರಾಮ್ ವಾಗ್ಮೊರೆ ತಾಯಿ ಜಾನಕಿಬಾಯಿ ತಮ್ಮ ಮಗ ಶ್ರೀರಾಮ ಸೇನೆಯಲ್ಲಿ ಗುರುತಿಸಿಕೊಂಡಿದ್ದ ಎಂದು ಹೇಳಿಕೆ ನೀಡಿದರೋ ಆವಾಗಿನಿಂದ ಮುತಾಲಿಕ್ ಸುಮ್ಮನಾಗಿದ್ದಾರೆ. ಸಿಂದಗಿ ತಾಲೂಕಿನಲ್ಲಿ ಶ್ರೀರಾಮಸೇನೆಯನ್ನು ಬೆಳೆಸಿದ್ದೇ ಈ ಪರಶುರಾಮ್ ವಾಗ್ಮೊರೆ ಅನ್ನೋದು ಇಡೀ ತಾಲೂಕಿನ ಜನತೆಗೆ ಗೊತ್ತಿರುವ ವಿಚಾರ. ಅಷ್ಟೇ ಅಲ್ಲ, 2012ರಲ್ಲಿ ಸಿಂದಗಿ ತಹಶೀಲ್ದಾರ ಕಚೇರಿ ಬಳಿ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಶ್ರೀರಾಮ ಸೇನೆಯ 6 ಆರೋಪಿಗಳಲ್ಲಿ ಈತ 5ನೇ ಆರೋಪಿಯಾಗಿದ್ದ. ಕಳೆದ ವಾರ ಶ್ರೀರಾಮ ಸೇನೆ ರಾಜ್ಯ ಮುಖಂಡ ಆನಂದ್ ಶೆಟ್ಟಿ ಅಡ್ಯಾರ್, ವಾಗ್ಮೊರೆ ಕುಟುಂಬಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇಷ್ಟೆಲ್ಲ ಇರುವಾಗಲೂ ಆತ ನಮ್ಮ ಸಂಘಟನೆಗೆ ಸೇರಿಲ್ಲ ಎಂದು ಮುತಾಲಿಕ್ ಹೇಳಿದ್ದು ಏಕೆ ಅನ್ನೋ ಪ್ರಶ್ನೆ ಅವರ ಕಾರ್ಯಕರ್ತರಲ್ಲೇ ಮೂಡುತ್ತಿದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನವನಾದ ಪರಶುರಾಮ್, ಆರು ವರ್ಷಗಳ ಹಿಂದೆ ಸಿಂದಗಿಗೆ ಬಂದು ಸೈಬರ್ ಕೆಫೆ ನಡೆಸುತ್ತಿದ್ದನಂತೆ. ಆದರೆ, ಅದರಿಂದ ಕುಟುಂಬ ನಿರ್ವಹಣೆ ಕಷ್ಟವಾದ ಕಾರಣ, ಅದನ್ನು ಬಿಟ್ಟು ತಂದೆ-ತಾಯಿ ಜೊತೆ ಪಾತ್ರೆ ಮಾರಾಟ ಮಾಡುತ್ತ ಜೀವನ ನಡೆಸುತ್ತಿದ್ದ. ಜೊತೆಗೆ ಶ್ರೀರಾಮ ಸೇನೆಯನ್ನು ತಾಲೂಕಿನಲ್ಲಿ ಕಟ್ಟಿ ಬೆಳೆಸಿದ. ಇದೀಗ ಆತನನ್ನು ಪೊಲೀಸ್ ಅಧಿಕಾರಿಗಳು ಕರೆದುಕೊಂಡು ಹೋದ ಬಳಿಕ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಹಿಂದೂ ಸಂಘಟನೆಗಳ ನಾಯಕರು ಮಾತ್ರ, “ಪರಶುರಾಮ ಧರ್ಮರಕ್ಷಣೆಗೆ ಪ್ರಾಣ ನೀಡುತ್ತಾನೆ, ಆತ ಧರ್ಮ ರಕ್ಷಕ,” ಅಂತೆಲ್ಲ ಪ್ರಚಾರ ಮಾಡುತ್ತಿವೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More