ವಿಡಿಯೋ ಸ್ಟೋರಿ | ನಿರಂತರ ಮಳೆಗೆ ಕೊಡಗಿನಲ್ಲಿ ಜನಜೀವನ ಅಸ್ತವ್ಯಸ್ತ, ನೆಲಕಚ್ಚಿದ ವ್ಯಾಪಾರ

ಕೊಡಗಿನಲ್ಲಿ ಸಾಮಾನ್ಯವಾಗಿ ಜುಲೈ ತಿಂಗಳಿನ ಮಧ್ಯಭಾಗದ ನಂತರ ಮಳೆ ಬಿರುಸು ಪಡೆದುಕೊಳ್ಳುತ್ತದೆ. ಆದರೆ, ಈ ವರ್ಷ ಜೂನ್ ತಿಂಗಳಿನ ಮೊದಲ ವಾರದಲ್ಲೇ ಹೆಚ್ಚು ಮಳೆ ಆಗಿದ್ದು, ನಂತರ ಅಲ್ಪ ಬಿಡುವು ನೀಡಿತ್ತು. ಇದೀಗ ಪುನಃ ಜುಲೈ ತಿಂಗಳಿನ ಮೊದಲಿನ ವಾರದಲ್ಲೇ ಹಚ್ಚು ಮಳೆ ಬೀಳುತ್ತಿದೆ

ಕಳೆದ ಒಂದು ವಾರದಿಂದ ಬಿರುಸುಗೊಂಡಿರುವ ಮಳೆಯಿಂದಾಗಿ ಕೊಡಗು ಜಿಲ್ಲೆ ತತ್ತರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಜೂನ್ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 150ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿತ್ತು ಮತ್ತು ಇಬ್ಬರು ಬಲಿಯಾಗಿದ್ದರು. ಆದರೆ, ಈ ಬಾರಿ ಮಳೆಯ ತೀವ್ರತೆ ಹೆಚ್ಚಾಗಿರುವುದರಿಂದ ನಷ್ಟದ ಅಂದಾಜನ್ನೂ ಮಾಡಲು ಸಾಧ್ಯವಾಗಿಲ್ಲ.

ಜಿಲ್ಲೆಯಲ್ಲಿನ ಬಿರುಸಿನ ಮಳೆಯಿಂದಾಗಿ ಜನರು ಅದರಲ್ಲೂ, ಗ್ರಾಮೀಣ ಭಾಗದ ಜನರು ಹೆಚ್ಚು ಕಷ್ಟನಷ್ಟಕ್ಕೆ ಈಡಾಗಿದ್ದರೆ ಮತ್ತೊಂದೆಡೆ ಬೆಂಗಳೂರು, ಮೈಸೂರು, ಮಂಡ್ಯ ಮತ್ತು ತಮಿಳುನಾಡಿನ ಕಾವೇರಿ ನದಿಪಾತ್ರದ ಜನರು ಹರ್ಷಗೊಂಡಿದ್ದಾರೆ. ಈಗಾಗಲೇ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 115 ಅಡಿ ತಲುಪಿದ್ದು, ಧಾರಾಕಾರ ಮಳೆಯಿಂದಾಗಿ ಈ ವರ್ಷ ಜಲಾಶಯ ಗರಿಷ್ಠ ಮಟ್ಟ ತಲುಪುವುದು ಖಚಿತ ಎಂದು ನೀರಾವರಿ ತಜ್ಞರು ಹೇಳುತ್ತಾರೆ. ಅಲ್ಲದೆ, ಈ ತಿಂಗಳ ಅಂತ್ಯಕ್ಕೆ ವಾರ್ಷಿಕ ಮಳೆಯ ಪ್ರಮಾಣದಷ್ಟೇ ಮಳೆ ಆಗಲಿದೆ ಎಂದೂ ತಜ್ಞರು ಹೇಳುತಿದ್ದು, ಹಾಗಾದಲ್ಲಿ, ಕಳೆದ ವರ್ಷದ ಮಳೆಗಿಂತಲೂ ಈ ವರ್ಷ ಮಳೆಯ ಪ್ರಮಾಣ ಶೇ.25ರಿಂದ 50ರಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ.

ಕೊಡಗಿನಲ್ಲಿ ಮಳೆಯು ಸಾಮಾನ್ಯವಾಗಿ ಜುಲೈ ತಿಂಗಳಿನ ಮಧ್ಯ ಭಾಗದ ನಂತರ ಬಿರುಸು ಪಡೆದುಕೊಳ್ಳುತ್ತದೆ. ಆದರೆ, ಈ ವರ್ಷ ಜೂನ್ ತಿಂಗಳಿನ ಮೊದಲ ವಾರದಲ್ಲೇ ಹೆಚ್ಚು ಮಳೆ ಆಗಿದ್ದು ನಂತರ ಅಲ್ಪ ಬಿಡುವು ನೀಡಿತ್ತು. ಇದೀಗ ಪುನಃ ಜುಲೈ ತಿಂಗಳಿನ ಮೊದಲಿನ ವಾರದಲ್ಲೇ ಹಚ್ಚು ಮಳೆ ಬೀಳುತ್ತಿದೆ. ಈ ಮಳೆಯಲ್ಲಿ ಜನರಿಗೆ ಅಲ್ಪ ಸಮಾಧಾನಕರವಾಗಿರುವ ಅಂಶ ಎಂದರೆ, ಈ ತನಕ ಮಳೆ ಜೊತೆಗೆ ಜೋರುಗಾಳಿ ಇಲ್ಲದಿರುವುದು.

ಆದರೆ, ಬಿಡುವಿಲ್ಲದ ಮಳೆ ಕೊಡಗಿನ ವ್ಯಾಪಾರ ವಹಿವಾಟಿನ ಮೇಲೆ ತೀವ್ರ ದುಷ್ಪರಿಣಾಮ ಆಗುತ್ತಿದ್ದು, ವ್ಯಾಪಾರ ಬಹುತೇಕ ಕುಸಿದಿದೆ. ಏಕೆಂದರೆ, ಮಳೆ ಇದ್ದಾಗ ಜನರು ಮನೆಯಿಂದಲೇ ಹೊರಗೆ ಬರುವುದಿಲ್ಲ. “ಇತ್ತೀಚೆಗೆ ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದುಬರುತ್ತಿರುವುದರಿಂದ ಮಳೆಗಾಲದಲ್ಲೂ ಹೋಂಸ್ಟೇ, ಹೋಟೆಲ್‌ಗಳಿಗೆ ಒಂದಷ್ಟು ವ್ಯಾಪಾರ ಆಗುತ್ತಿದೆಯಾದರೂ, ಬೇಸಿಗೆಯಲ್ಲಿ ಆಗುವ ವ್ಯಾಪಾರಕ್ಕೆ ಹೋಲಿಸಿದರೆ ಶೇ.50ರಷ್ಟೂ ವ್ಯಾಪಾರ ಇಲ್ಲ,” ಎನ್ನುತ್ತಾರೆ ಮಡಿಕೇರಿಯ ಹೋಟೆಲ್ ಮಾಲೀಕ ನಾರಾಯಣ.

ಜಿಲ್ಲೆಯಲ್ಲಿ ಈ ವರ್ಷದ ಜನವರಿಯಿಂದ ಜು.11ರವರೆಗೆ ಸರಾಸರಿ 1,950.55 ಮಿಲಿಮೀಟರ್ ಮಳೆ ಆಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 940 ಮಿಮೀ ಮಾತ್ರ ಮಳೆ ಆಗಿತ್ತಷ್ಟೆ. ಹಾರಂಗಿ ಜಲಾಶಯ ಈ ಬಾರಿ ಜು.8ಕ್ಕೇ ಗರಿಷ್ಟ ಮಟ್ಟ 2,859 ಅಡಿ ತುಂಬಿದ್ದು, ಕಳೆದ ವರ್ಷ ಜು.24ರಂದು ಭರ್ತಿ ಆಗಿತ್ತು.

ಭಾರಿ ಮಳೆಯಿಂದಾಗಿ ಕೊಡಗಿನಲ್ಲಿ ಗ್ರಾಮೀಣ ಭಾಗದ ರಸ್ತೆಗಳು ತುಂಬಾ ಹಾನಿಗೀಡಾಗಿವೆ. ಅನೇಕ ಕಡೆ ರಸ್ತೆಯ ಮೇಲೆ ನೀರು ಹರಿಯುವುದರಿಂದ ರಸ್ತೆ ಬಹುಬೇಗನೆ ಹಾಳಾಗುತ್ತಿದೆ. ಸರ್ಕಾರ ಅನೇಕ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದೆಯಾದರೂ ಶೇ.90ರಷ್ಟು ರಸ್ತೆಗಳು ಡಾಂಬರಿನವೇ ಆಗಿದ್ದು, ಹಾಳಾಗಿವೆ. ತೀವ್ರ ಮಳೆಯ ಹಿನ್ನೆಲೆಯಲ್ಲಿ ಸೋಮವಾರಪೇಟೆ, ಮಡಿಕೇರಿ, ಸುಂಟಿಕೊಪ್ಪ ಮತ್ತಿತರ ಕಡೆಗಳಲ್ಲಿ ಭೂಮಿ 12.53ಕ್ಕೆ ಕಂಪಿಸಿದ್ದು ಇದರಿಂದ ಯಾವುದೇ ಹಾನಿ ಆಗಿಲ್ಲ. ವೀರಾಜಪೇಟೆ ತಾಲೂಕಿನ ಕುಟ್ಟ-ಪೂಜೆಕಲ್ಲು ರಸ್ತೆ ತೀವ್ರ ಹಾಳಾಗಿದೆ. ಸಿದ್ದಾಪುರ, ಕರಡಿಗೋಡು ಭಾಗದಲ್ಲಿ ಕಾವೇರಿ ನದಿ ತೀರದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ನಿವಾಸಿಗಳು ಮನೆ ತೆರವು ಮಾಡಿದ್ದಾರೆ.

ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಜಿಲ್ಲಾಡಳಿತ ದೋಣಿ ವ್ಯವಸ್ಥೆ ಮಾಡಿದ್ದು, ರಸ್ತೆಯಲ್ಲಿ ಸುಮಾರು 4 ಅಡಿಗಳಷ್ಟು ನೀರು ನಿಂತಿದೆ. ಅಯ್ಯಂಗೇರಿ ನಿವಾಸಿಗಳು ದೋಣಿ ಬಳಸಿಕೊಂಡೇ ಮಡಿಕೇರಿಗೆ ಬರಬೇಕಿದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ ಜೆ ಜಾರ್ಜ್, ಪ್ರತಿವರ್ಷವೂ ಮುಳುಗಡೆ ಆಗುವ ಭಾಗಮಂಡಲಕ್ಕೆ ಸುಮಾರು 16 ಕೋಟಿ ರು. ವೆಚ್ಚದಲ್ಲಿ ಫ್ಲೈಓವರ್ ನಿರ್ಮಿಸುವುದಾಗಿ ಭರವಸೆ ಕೊಟ್ಟು 4 ವರ್ಷ ಕಳೆದರೂ ಯಾವುದೇ ಸುದ್ದಿ ಇಲ್ಲ. ಭಾಗಮಂಡಲಕ್ಕೆ ಪ್ರವಾಸಿಗರ ಸಂಖ್ಯೆಯೂ ಕಡಿಮೆ ಆಗಿದ್ದು, ನಿತ್ಯವೂ ಕಿಕ್ಕಿರಿಯುತಿದ್ದ ಪ್ರವಾಸಿ ವಾಹನಗಳ ದಂಡು ಕಾಣುತ್ತಿಲ್ಲ. ಆದರೆ, ಜಿಲ್ಲಾಡಳಿತ ಮುಂಜಾಗರೂಕತಾ ಕ್ರಮವಾಗಿ ರ್ಯಾಫ್ಟಿಂಗ್ ಬೋಟ್ ಮತ್ತು ಮುಳುಗು ತಜ್ಞರು, ಪೋಲೀಸರನ್ನೂ ಸ್ಥಳದಲ್ಲಿ ನಿಯೋಜಿಸಿದೆ.

ಮಡಿಕೇರಿಯ ಪ್ರಮುಖ ಪ್ರವಾಸಿ ಆಕರ್ಷಣೆ ರಾಜಾ ಸೀಟು ಮತ್ತು ಅಬ್ಬಿ ಫಾಲ್ಸ್‌ನಲ್ಲೂ ಪ್ರವಾಸಿಗರ ಸಂದಣಿ ಕಡಿಮೆ ಆಗಿದೆ. ಈ ಮಹಾಮಳೆಗೆ ಕೊಡಗಿನ ಗಡಿಭಾಗದ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ರಸ್ತೆ ಬದಿಯಲ್ಲೇ ಇರುವ ತೆರೆದ ಬಾವಿಯೊಂದು ಸಂಪೂರ್ಣ ಕುಸಿದಿದ್ದು, ಇದರ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : ಕೊಡಗಿನಲ್ಲಿ ಮುಂದುವರಿದ ಮಳೆ ಹಾನಿ; ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಅಸಮಾಧಾನ

ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿದ್ದು, ಅನೇಕ ಹಳ್ಳಿಗಳು ಕತ್ತಲಲ್ಲಿ ಮುಳುಗಿವೆ. ವಿದ್ಯುತ್ ಕಂಬಗಳೂ ಮುರಿದುಬಿದ್ದಿವೆ. ಇವುಗಳ ದುರಸ್ಥಿಗೆ ಒಂದು ವಾರಕ್ಕೂ ಹೆಚ್ಚು ಸಮಯ ಬೇಕಾಗಲಿದೆ ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಡಳಿತ 24/7 ಕಂಟ್ರೋಲ್ ರೂಂ ಅನ್ನು ಮಡಿಕೇರಿಯಲ್ಲಿ ತೆರೆದಿದ್ದು, ನಾಗರಿಕರು ಯಾವುದೇ ಸಮಯದಲ್ಲಿ ನೆರವಿಗಾಗಿ ಕರೆ ಮಾಡಬಹುದು ಎಂದು ಸೂಚಿಸಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More