ವಿಡಿಯೋ ಸ್ಟೋರಿ | ಹೇಮಾವತಿ ಜಲಾಶಯ ಭರ್ತಿ, ಅಣೆಕಟ್ಟೆಯಿಂದ ನದಿಗೆ ನೀರು

ಆರೂ ಕ್ರೆಸ್ಟ್ ಗೇಟ್ ತೆರೆದು ಗೊರೂರು ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಹಾಗಾಗಿ, ಭೋರ್ಗರೆಯುತ್ತ ನೊರೆಯುಕ್ಕಿಸಿಕೊಂಡು ಹೊರನುಗ್ಗುವ ಜಲವೈಭವ ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೊರೂರಿನತ್ತ ಬರಲಾರಂಭಿಸಿದ್ದಾರೆ

ಹೇಮಾವತಿ ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕುಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಗೊರೂರಿನಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹೇಮಾವತಿ ಜಲಾಶಯವು ಭರ್ತಿಯಾಗಿದ್ದು, ಅಣೆಕಟ್ಟೆಯಿಂದ ನದಿಗೆ ನೀರು ಹೊರಬಿಡಲಾಗುತ್ತಿದೆ.

ಶನಿವಾರದಿಂದ ನದಿಗೆ 15,000 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿತ್ತು, ಆದರೆ, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾದ ಕಾರಣ ಹೊರಹರಿವಿನ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಸೋಮವಾರ ಜು.16ರಂದು ಬೆಳಗ್ಗೆ ಜಲಾಶಯಕ್ಕೆ 30,919 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ನಾಲೆಗಳಿಗೂ ಸೇರಿದಂತೆ 31,900 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 2,922 ಅಡಿಗಳ ಗರಿಷ್ಠ ಮಟ್ಟದ ಅಣೆಕಟ್ಟೆಯಲ್ಲಿ 2,920 ಅಡಿಗಳಷ್ಟು ನೀರು ಸಂಗ್ರಹ ಉಳಿಸಿಕೊಂಡು ಉಳಿದ ನೀರನ್ನು ನದಿಗೆ ಮತ್ತು ನಾಲೆಗಳಿಗೆ ಹರಿಸಲಾಗುತ್ತಿದೆ.

ಗೊರೂರು ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವುದರಿಂದ ಭೋರ್ಗರೆಯುತ್ತ ನೊರೆಯುಕ್ಕಿಸಿಕೊಂಡು ಹೊರನುಗ್ಗುವ ಜಲವೈಭವನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೊರೂರಿನತ್ತ ಬರಲಾರಂಭಿಸಿದ್ದಾರೆ. ಅಣೆಕಟ್ಟೆಯ ಆರೂ ಕ್ರೆಸ್ಟ್ ಗೇಟ್ ಗಳನ್ನು ತೆರೆದು ನೀರು ಹೊರಬಿಡುತ್ತಿರುವುದರಿಂದ ರಭಸದಿಂದ ಧುಮುಕುವ ಜಲಧಾರೆಯ ದೃಶ್ಯ ಕಂಡು ಪ್ರವಾಸಿಗರು ಕುಣಿದು ಕುಪ್ಪಳಿಸಿ ಸಂತೋಷಪಡುವ ದೃಶ್ಯ ಸಾಮಾನ್ಯವಾಗಿದೆ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಆಲಮಟ್ಟಿ ಜಲಾಶಯ ಪಕ್ಕದಲ್ಲೇ ಇದ್ದರೂ ನೀರಿಗೆ ಪರದಾಟ!

ಗೊರೂರು ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್ (ರೋಸರಿ ಚರ್ಚ್) ಸಂಪೂರ್ಣ ಮುಳುಗಿದ್ದು, ಗೋಪುರವಷ್ಟೇ ಕಾಣುತ್ತಿದೆ. ಇಲ್ಲಿಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಮಲೆನಾಡಿನಲ್ಲಿ ಮಳೆವೈಭವ, ಜಲ ಅವಾಂತರಗಳು ಮರುಕಳಿಸಿದ್ದು, ಸಣ್ಣಪುಟ್ಟ ಜಲಪಾತಗಳೂ ಭೋರ್ಗರೆಯಲಾರಂಭಿಸಿವೆ. ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿದೆ. ಜಲಾಶಯದಿಂದ ನದಿಗೆ ನೀರು ಬಿಡುತ್ತಿರುವುದರಿಂದ, ಹೊಳೆನರಸೀಪುರ ತಾಲೂಕಿನ ಶ್ರೀರಾಮದೇವರಕಟ್ಟೆಯು ಸಹ ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಕಾವೇರಿ ನದಿಯ ಮುಖ್ಯ ಉಪನದಿಗಳಲ್ಲೊಂದಾದ ಹೇಮಾವತಿಯು ಚಿಕ್ಕಮಗಳೂರು ಜಿಲ್ಲೆ ಜಾವಳಿಯ ಪಶ್ಚಿಮಘಟ್ಟಗಳಲ್ಲಿ ಉಗಮಿಸಿ ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹರಿದು ಕೆ ಆರ್ ಪೇಟೆಯ ಸಂಗಮದ ಬಳಿ ಕಾವೇರಿ ನದಿಯನ್ನು ಸೇರುತ್ತದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More