999 ವರ್ಷ ಅರಣ್ಯಭೂಮಿ ಲೀಸ್‌ಗೆ ಪಡೆದು ಮಾರುವ ಯತ್ನ, ಚುರುಕುಗೊಂಡ ತನಿಖೆ

ಕೇರಳ ಮೂಲದ ಕಂಪನಿಯೊಂದು ಕೊಡಗಿನ ಮಾಕುಟ್ಟ ಮೀಸಲು ಅರಣ್ಯದಲ್ಲಿ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು 999 ವರ್ಷಗಳ ಅವಧಿಗೆ ಕೃಷಿ ಮಾಡಲು ಪಡೆದಿತ್ತು. ಅದನ್ನು ‘999 ವರ್ಷಗಳಿಗೆ ಲೀಸ್’ ಎಂದು ತಿದ್ದಿಕೊಂಡಿರುವ ಆರೋಪ ಎದುರಾಗಿದ್ದು, ಇದೀಗ ತನಿಖೆ ನಡೆಯುತ್ತಿದೆ

ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಮಾಕುಟ್ಟ ಮೀಸಲು ಅರಣ್ಯದ ಭೂಮಿಯನ್ನು ಲೀಸ್‌ಗೆ ಪಡೆದುಕೊಂಡಿದ್ದ ಕೇರಳ ಮೂಲದ ಕಂಪನಿಯೊಂದು ಸುಮಾರು 118 ಎಕರೆ ಭೂಮಿಯನ್ನು ಅಕ್ರಮವಾಗಿ ಕೇರಳಿಗರಿಗೆ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ರಾಜ್ಯ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಅವರು ಕೊಡಗು ಜಿಲ್ಲಾಧಿಕಾರಿಗೆ ಆಮೂಲಾಗ್ರ ತನಿಖೆಗೆ ಆದೇಶ ನೀಡಿದ್ದಾರೆ ಎಂದು ‘ದಿ ಸ್ಟೇಟ್’ ಜೊತೆ ಮಾತನಾಡಿದ ಕೊಡಗು ಜಿಲ್ಲಾಧಿಕಾರಿ ಪಿ ಐ ಶ್ರೀವಿದ್ಯಾ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ತನಿಖೆ ಮುಂದುವರಿದಿದೆ ಎಂದು ತಿಳಿಸಿರುವ ಜಿಲ್ಲಾಧಿಕಾರಿ, “ಈ ಅಕ್ರಮ ಮಾರಾಟ 2004ನೇ ಇಸವಿಯಲ್ಲಿ ನಡೆದಿದ್ದೆಂದು ಹೇಳಲಾಗಿದೆ. ಕಂದಾಯ ಇಲಾಖೆ ಅರಣ್ಯಭೂಮಿಗೆ ಖಾತಾ ಮಾಡಿಕೊಟ್ಟಿದ್ದು ತಪ್ಪಾಗಿದೆ. ತನಿಖೆ ಪೂರ್ಣಗೊಂಡ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಲಾಗುವುದು,” ಎಂದರು.

ವಾಸ್ತವದಲ್ಲಿ ಬ್ರಿಟಿಷರ ಕಾಲದಲ್ಲಿ ಕೇರಳ ಮೂಲದ ಕಂಪನಿಯೊಂದು ಕೊಡಗಿನ ಮಾಕುಟ್ಟ ಮೀಸಲು ಅರಣ್ಯದಲ್ಲಿ ಸುಮಾರು 1288.75 ಎಕರೆ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು 6.10.1913ರಂದು 999 ವರ್ಷಗಳ ಅವಧಿಗೆ ಕೃಷಿ ಮಾಡಲು ಪಡೆದುಕೊಂಡಿತ್ತು. ಸದರಿ ಕರಾರನ್ನು ಪಡೆದವರು ‘999 ವರ್ಷಗಳಿಗೆ ಲೀಸ್’ ಎಂದು ತಿದ್ದಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದ ವಿಚಾರಣೆ ಈಗ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಲೀಸ್‌ನಲ್ಲಿ ಮಾಡಿಕೊಳ್ಳಲಾಗಿರುವ ಒಪ್ಪಂದದ ಪ್ರಕಾರ, ವೀರಾಜಪೇಟೆ ತಾಲೂಕು ಬೆಟೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಗ್ಗುಳ ಗ್ರಾಮದ ಸರ್ವೆ ನಂಬರ್ 211/1ರಲ್ಲಿ 88.27 ಎಕರೆ, ಸರ್ವೆ ನಂ 211/2ರಲ್ಲಿ 566.34 ಎಕರೆ, ಸರ್ವೆ ನಂ 211/3ರಲ್ಲಿ 444.70 ಎಕರೆ, ಸರ್ವೆ ನಂ 211/4 ರಲ್ಲಿ 115.24 ಎಕರೆ, ಸರ್ವೆ ನಂ 211/5ರಲ್ಲಿ 18.40 ಎಕರೆ, ಸರ್ವೆ ನಂ 211/6 ರಲ್ಲಿ 21.90 ಎಕರೆ, ಸರ್ವೆ ನಂ 211/15ರಲ್ಲಿ 3.30 ಎಕರೆ ಹಾಗೂ ಸರ್ವೆ ನಂ 211/16 ರಲ್ಲಿ 30.60 ಎಕರೆಯನ್ನು ಪೋಟರ್ಲ್ಯಾಂಡ್ ರಬ್ಬರ್ ಕಂಪನಿಗೆ ಗೇಣಿಗೆ ನೀಡಲಾಗಿತ್ತು. 1936ರಲ್ಲಿ ಸದರಿ ಭೂಮಿಯ ಗೇಣಿ ಹಕ್ಕನ್ನು ಎ ವಿ ಥೊಮಸ್ ಕೂಗರ್ ರಬ್ಬರ್ ಕಂಪನಿಗೆ ವರ್ಗಾವಣೆ ಮಾಡಿಕೊಡಲಾಗಿತ್ತು. ಪುನಃ ಸದರಿ ಹಕ್ಕನ್ನು 1944 ಜೂನ್ 20ರಂದು ಕೆ ಗೋಪಾಲ್ ಪಿಳ್ಳೆ ಪೋಟರ್ಲ್ಯಾಂಡ್ ರಬ್ಬರ್ ಎಸ್ಟೇಟ್ ಇವರಿಗೆ ಗೇಣಿ ಹಕ್ಕನ್ನು ವರ್ಗಾವಣೆ ಮಾಡಲಾಗಿದೆ. ಆದರೆ, ಗೇಣಿ ಹಕ್ಕನ್ನು ಮಾತ್ರ ಪಡೆದುಕೊಂಡಿರುವ ಕಂಪೆನಿ ಗೇಣಿಗೆ ನೀಡಲಾಗಿದ್ದ ಸರ್ವೇ ನಂ 211/1ರ 88.27 ಎಕರೆ, ಸರ್ವೆ ನಂ 211/16ರ ಒಟ್ಟು 30.60 ಎಕರೆ ಜಾಗವನ್ನು ವಿ ಸಿ ಪೌಲೋಸ್, ಯೂ ಮ್ಯಾಥ್ಯೂ, ಶ್ರೀಮತಿ ಚಿನ್ನಮ್ಮ ಮ್ಯಾಥ್ಯೂ ಅವರಿಗೆ ಮರುಗೇಣಿ ನೀಡಿದೆ. ಸದರಿ ಭೂಮಿಯನ್ನು 1994ರಲ್ಲಿ ಕೆ ವಿ ಹಂಸ, ಜಾಜರ್ ಕುಟ್ಟಿ, ಜೋಸೆಫ್ ಮತ್ತು ಅನಿಲ್ ಅವರಿಗೆ ಅಕ್ರಮ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಈ ಅಕ್ರಮ ಮಾರಾಟವನ್ನು ಪತ್ತೆಹಚ್ಚಿದ್ದ ಅಂದಿನ ವಲಯ ಅರಣ್ಯಾಧಿಕಾರಿ ಅಚ್ಚಯ್ಯ ಅವರು ವೀರಾಜಪೇಟೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ 2004ರ ಜೂ.14ರಂದು ಪತ್ರ ಬರೆದು ಕಾನೂನು ಕ್ರಮಕ್ಕಾಗಿ ಒತ್ತಾಯಿಸಿದ್ದರು. ಅಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಡಿಕೇರಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವರದಿ ಮಾಡಿ ಕ್ರಮದ ಬಗ್ಗೆ ಕೋರಿದ್ದರೂ ಇನ್ನೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಲ್ಲದೆ, ಈ ಅರಣ್ಯಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದ್ದರೂ ಕಂದಾಯ ಇಲಾಖೆ ಈ ಭೂಮಿಯನ್ನು ಖರೀದಿಸಿದವರ ಹೆಸರಿಗೆ ಖಾತೆ ಮಾಡಿಕೊಟ್ಟಿದೆ ಎಂದೂ ಆರೋಪಿಸಲಾಗಿದೆ. ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ಯಾವುದೇ ರೀತಿಯ ನಿರ್ಮಾಣ ಮಾಡಬಾರದು ಎಂಬ ಪೂರ್ವ ಷರತ್ತು ಇದ್ದರೂ, ಕೊಡಗು-ಕೇರಳ ರಾಷ್ಟ್ರೀಯ ಹೆದ್ದಾರಿ ಪಕ್ಕದ ಈ ಭೂಮಿಯಲ್ಲಿ ಅಕ್ರಮವಾಗಿ ಕಾರ್ಮಿಕರ ವಸತಿಗೃಹ, ದಿನಸಿ ಅಂಗಡಿ ಮತ್ತು ಹೋಟೆಲ್ ನಿರ್ಮಿಸಲಾಗಿದೆ ಎಂದು ಅರೋಪಿಸಲಾಗಿದೆ. ಕೋಟ್ಯಂತರ ರುಪಾಯಿ ಬೆಲೆ ಬಾಳುವ ಈ ಭೂಮಿಯು ಗಡಿಭಾಗವಾದ ಕೂಟುಹೊಳೆಗೆ ಸಮೀಪದಲ್ಲಿದ್ದು, ಮೀಸಲು ಅರಣ್ಯದ ಪ್ರಾಣಿಗಳ ಮುಕ್ತ ಸಂಚಾರಕ್ಕೂ ಅಡಚಣೆ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ : ಅಕ್ರಮ ಗಣಿಗಾರಿಕೆ ಹಗರಣ: ಸಿಬಿಐ ತನಿಖೆಗೆ ಶಿಫಾರಸಾದ ಕಡತಗಳೇ ನಾಪತ್ತೆ!

ಈ ಕುರಿತು ಪ್ರತಿಕ್ರಿಯಿಸಿದ ಪರಿಸರವಾದಿ ಪಿ ಎ ಮುತ್ತಣ್ಣ, “ಮೇಲ್ನೋಟಕ್ಕೆ ಇಲ್ಲಿ ಲೀಸ್ ಕರಾರು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಕೂಡಲೇ ಲೀಸ್ ಒಪ್ಪಂದ ರದ್ದು ಮಾಡಿ ಜಾಗವನ್ನು ಇಲಾಖೆ ವಶಕ್ಕೆ ಪಡೆಯಬೇಕಲ್ಲದೆ, ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶದಂತೆ ಎಕರೆಯೊಂದಕ್ಕೆ 50 ಲಕ್ಷ ರುಪಾಯಿ ದಂಡ ವಿಧಿಸಬೇಕು,” ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತು ರಾಜ್, ತಮ್ಮ ಕಚೇರಿಯಲ್ಲಿ ಇರುವ ದಾಖಲಾತಿಗಳ ವಿವರ ನೀಡಿದರು, “ರಾಜ್ಯ ಸರ್ಕಾರಕ್ಕೆ ಲೀಸ್ ಅವಧಿಯನ್ನು ಕಡಿಮೆ ಮಾಡುವ ಅಧಿಕಾರವಿದೆ. ಅದರಂತೆ, 2013ರಲ್ಲೇ ಲೀಸ್ ಅವಧಿಯನ್ನು 99 ವರ್ಷಗಳಿಗೆ ಮೊಟಕುಗೊಳಿಸಲಾಗಿದೆ. ಈ ಆದೇಶದ ವಿರುದ್ಧ ಲೀಸ್‌ದಾರರು ರಾಜ್ಯ ಹೈಕೋರ್ಟ್‌ನಿಂದ ತಡೆಯಾಜ್ಞೆಯನ್ನು ಪಡೆದುಕೊಂಡಿದೆ. ಮೊಕದ್ದಮೆ ವಿಚಾರಣೆಯ ಹಂತದಲ್ಲಿದೆ. ಆಲ್ಲದೆ, ಕಂದಾಯ ಇಲಾಖೆ ಅಧಿಕಾರಿಗಳು ಅರಣ್ಯ ಇಲಾಖೆಯ ಜಾಗದ ಮ್ಯುಟೇಶನ್ ಕಾಪಿಯನ್ನು ಅಕ್ರಮವಾಗಿ ಖಾಸಗಿಯವರಿಗೆ ವರ್ಗಾಯಿಸಿದ್ದು, ಈ ಕುರಿತು ತನಿಖೆ ಮಾಡಲಾಗುತ್ತಿದೆ,” ಎಂದರು.

ಈ ಅಕ್ರಮ ಖಾತೆ ವರ್ಗಾವಣೆಯ ಸುದ್ದಿ ಸ್ಥಳೀಯ ವಾರಪತ್ರಿಕೆಯೊಂದರಲ್ಲಿ ಪ್ರಕಟವಾಗುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ರಾಜ್ಯ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಅವರಿಗೆ ಪತ್ರ ಬರೆದು ಕಠಿಣ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು, ತನಿಖೆಗೆ ಆದೇಶ ನೀಡಿ, ಪ್ರಕರಣದ ಅಮೂಲಾಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಪಿಐ ಶ್ರೀವಿದ್ಯಾ ಅವರಿಗೆ ಸೂಚಿಸಿದ್ದಾರೆ. ಈ ಪ್ರಕರಣದಲ್ಲಿ 2004ರಲ್ಲಿದ್ದ ವೀರಾಜಪೇಟೆ ತಾಲೂಕು ಕಚೇರಿಯ ಗುಮಾಸ್ತರು, ಅಧಿಕಾರಿಗಳು ಹಾಗೂ ತಹಶಿಲ್ದಾರ್‌ ಕೈವಾಡ ಇರುವುದು ಕಂಡುಬಂದಿದ್ದು, ಇದರಲ್ಲಿ ಭಾಗಿಯಾದವರಿಗೆ ತಲೆದಂಡ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More