ಬಣಗುಡುವ ಬದುಕನ್ನೇ ರೊಟ್ಟಿ ಮಾಡಿ ಬಡಿಸಿದ ಮಂಗಳೂರಿನ ಗಟ್ಟಿಗಿತ್ತಿಯ ಕತೆ ಇದು!

ಮಂಗಳೂರಿನ ಮೂಲೆಯೊಂದರಲ್ಲಿ ನಿಂತು ರೊಟ್ಟಿಯ ಘಮ ಚೆಲ್ಲುವ ‘ಹಳ್ಳಿಮನೆ ರೊಟ್ಟೀಸ್’ ಹೆಣ್ಣಿನ ಛಲವೊಂದರ ಪ್ರತೀಕ. ತನಗೆ ಸವಾಲೊಡ್ಡಿದ ವಿಧಿಗೆ ಎದುರು ನಿಂತ ಶಿಲ್ಪಾರ ಜನಪ್ರಿಯತೆ ಊರಿಂದ ಊರಿಗೆ ದಾಟಿದೆ. ಇದೀಗ ಅವರ ಕೈರುಚಿಗಾಗಿ ಸಾಲುಗಟ್ಟಿ ನಿಲ್ಲುತ್ತಾರೆ ಅನೇಕ ಮಂದಿ

ಮಂಗಳೂರಿನ ಮಣ್ಣಗುಡ್ಡೆಯಲ್ಲಿರುವ ಸಂಚಾರಿ ಹೋಟೆಲೊಂದರ ಎದುರು ನಿಂತರೆ ಕರಾವಳಿಗೆ ಅಪರೂಪವಾದ ಮುದ್ದೆ, ರಾಗಿರೊಟ್ಟಿ, ಜೋಳದ ರೊಟ್ಟಿಯ ಘಮ. ಬಯಲು ಸೀಮೆಯವರನ್ನಷ್ಟೇ ಅಲ್ಲ, ಮಂಗಳೂರಿಗರ ಮನಸ್ಸನ್ನೂ ಸೂರೆಗೊಂಡಿರುವ ಅದರ ಹೆಸರು ‘ಹಳ್ಳಿಮನೆ ರೊಟ್ಟೀಸ್.’ ಪಿಕಪ್ ವಾಹನದ ನಾಲ್ಕು ಚಕ್ರಗಳ ಮೇಲೆ ನಿಂತಿರುವ ಈ ಪುಟಾಣಿ ಹೋಟೆಲ್ ರೂಪುಗೊಂಡ ಹಿನ್ನೆಲೆ ರೋಚಕ. ಮುಳುಗುತ್ತಿದ್ದ ಬದುಕಿಗೆ ಸೆಡ್ಡು ಹೊಡೆದ ಹೆಣ್ಣುಮಗಳೊಬ್ಬರ ಛಲದ ರೂಪಕವಿದು.

ಹಾಸನ ಮೂಲದ ಶಿಲ್ಪಾ 2005ರಲ್ಲಿ ಮದುವೆಯಾಗಿ ಮಂಗಳೂರಿಗೆ ಬಂದರು. ತವರುಮನೆಯಲ್ಲೂ ಸುಖವಾಗಿ ಇದ್ದವರು; ಗಂಡನ ಮನೆಯಲ್ಲೂ ಏರಿಳಿತಗಳಿಲ್ಲದ ಬದುಕು. ಪತಿ ಸರಕು ಸಾಗಣೆ ಉದ್ಯಮದಲ್ಲಿ ತೊಡಗಿದ್ದರು. ಬಳ್ಳಾರಿಯ ಗಣಿ-ಧಣಿಗಳೊಂದಿಗೆ ವಹಿವಾಟು ನಡೆಸುತ್ತಿದ್ದರು. ಅನಾರೋಗ್ಯದ ಕಾರಣಕ್ಕಾಗಿ ಶಿಲ್ಪಾ ಹೆತ್ತವರು ಕೂಡ ಇಲ್ಲಿಯೇ ನೆಲೆಸಿದ್ದರು. ಅದೊಂದು ಘಟನೆ ನಡೆಯದಿದ್ದರೆ ಶಿಲ್ಪಾರ ಬದುಕಿನ ಸಮುದ್ರ ಪ್ರಶಾಂತವಾಗಿಯೇ ಇರುತ್ತಿತ್ತು.

ಒಂದು ದಿನ ಗಂಡ, “ಬೆಂಗಳೂರಿನಲ್ಲಿ ಹಣ ತರಲಿಕ್ಕಿದೆ. ಇನ್ನು, ನಮ್ಮದು ನೆಮ್ಮದಿಯ ಜೀವನ,” ಎಂದು ಹೇಳಿ ಹೋದವರು ಮರಳಲೇ ಇಲ್ಲ. ಎಲ್ಲಿ ಹೋದರು ಎಂಬ ಸುಳಿವೂ ಇಲ್ಲ. ಕಡೆಗೆ, ಸಾಧ್ಯವಾದ ಎಲ್ಲೆಡೆ ಹುಡುಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದೂ ಆಯಿತು. ಹೀಗೆ, ದಿನ ಉರುಳಿ ತಿಂಗಳಾದವು, ತಿಂಗಳು ಉರುಳಿ ವರ್ಷಗಳೇ ಕಳೆದವು. ಗಂಡ ವಾಪಸು ಬರಲೇ ಇಲ್ಲ. ಕೆಲವರು ಶಿಲ್ಪಾರನ್ನೇ ಅನುಮಾನದ ದೃಷ್ಟಿಯಿಂದ ನೋಡತೊಡಗಿದರು.

ಇತ್ತ ಹೆತ್ತವರು, ಇನ್ನೂ ವ್ಯಾಸಂಗ ಮಾಡುತ್ತಿದ್ದ ಸೋದರ ಹಾಗೂ ಕಂಕುಳಲ್ಲೊಂದು ಮಗುವಿನ ಜವಾಬ್ದಾರಿ; ಶಿಲ್ಪಾರಿಗೆ ದಿಕ್ಕೇ ತೋಚದ ಸ್ಥಿತಿ. ಬದುಕೊಂದು ಪ್ರಶ್ನಾರ್ಥಕ ಚಿಹ್ನೆ. ದಿನವೂ ಚಂದದ ಅಡುಗೆ ಮಾಡಿ ಬಡಿಸುತ್ತಿದ್ದವರಿಗೆ ಒಂದು ಹೊತ್ತಿನ ಊಟಕ್ಕೂ ಹಾಹಾಕಾರ. ಮಗುವಿಗೆ ಬಾಟಲಿಯಲ್ಲಿ ಬಿಸಿನೀರನ್ನೇ ಹಾಲೆಂದು ಕುಡಿಸಿದ ಎಷ್ಟೋ ದಿನಗಳಿದ್ದವು. ಇತ್ತ ಗಂಡನನ್ನು ಕಳೆದುಕೊಂಡ ಆಘಾತ ಖಿನ್ನತೆಗೆ ದೂಡಿತು. ಆಸ್ಪತ್ರೆ ಸೇರಿದ್ದ ಅವರು ಕೋಮಾಗೆ ಜಾರುವ ಹಂತ ತಲುಪಿದ್ದರು. ಕಡೆಗೆ, ಮಗನನ್ನು ಬೆಳೆಸುವ ಛಲವೊಂದೇ ಅವರ ಕೊಚ್ಚಿಹೋಗುತ್ತಿದ್ದ ಬದುಕಿಗೆ ಆಸರೆಯಾಯಿತು.

ಹೊಟ್ಟೆಪಾಡಿಗೆ ಸಣ್ಣಪುಟ್ಟ ದುಡಿಮೆ ಆರಂಭಿಸಿದರು. ಆದರೆ ಇಡೀ ಸಂಸಾರವನ್ನು ಸಾಕಲು ಅಷ್ಟು ಹಣ ಸಾಲುತ್ತಿರಲಿಲ್ಲ. ಕಡೆಗೊಮ್ಮೆ ತಮ್ಮ ಕೈರುಚಿಯನ್ನೇ ಏಕೆ ಬಂಡವಾಳ ಮಾಡಿಕೊಳ್ಳಬಾರದು ಅನ್ನಿಸಿತು. ಆದರೆ, ಹೋಟೆಲ್ ತೆರೆಯುವಷ್ಟು ದುಡ್ಡಿರಲಿಲ್ಲ. ಸಾಲಕ್ಕೆ ಅಡವಿಡಲು ಆಸ್ತಿಯೂ ಇರಲಿಲ್ಲ. ದೂರದ ಹಾಸನದಿಂದ ಬಂದವರನ್ನು ನಂಬಿ ಸಾಲ ಕೊಡಲು ಯಾರೂ ಮುಂದೆ ಬರಲಿಲ್ಲ. ಕೊನೆಗೆ ಯಾರೋ ಒಬ್ಬರು ನೆರವಿಗೆ ಧಾವಿಸಿದರು. ಬ್ಯಾಂಕಿನವರು ಶಿಲ್ಪಾರಿಗೆ ಹಣ ನೀಡುತ್ತ, “ಅಮ್ಮಾ, ಇದು ನಿಮ್ಮ ಆಪತ್ಕಾಲಕ್ಕೆ ಒದಗಿಬಂದ ಆಸರೆ. ಸರಿಯಾಗಿ ಉಪಯೋಗಿಸಿಕೊಳ್ಳಿ,” ಎಂದರು.

ಇಂಥ ನೂರೆಂಟು ಪ್ರೀತಿಯ ಮಾತುಗಳು, ಎಚ್ಚರಿಕೆಯ ಮಾರ್ಗದರ್ಶನಗಳು ಶಿಲ್ಪಾರನ್ನು ಮುಂದಡಿ ಇಡಿಸಿದವು. ಅವರ ಕೈರುಚಿ ದಿನೇದಿನೇ ಜನಪ್ರಿಯಗೊಳ್ಳತೊಡಗಿತು. ಮಂಗಳೂರಿನ ರಸ್ತೆಯಿಂದ ರಸ್ತೆಗೆ ಬದಲಾಗುತ್ತ ಹೋದ ಹೋಟೆಲ್, ಸದ್ಯ ಮಣ್ಣಗುಡ್ಡೆಯಲ್ಲಿ ನೆಲೆ ಕಂಡುಕೊಂಡಿದೆ. ಶಿಲ್ಪಾರ ಬದುಕಿಗೂ ನೆಲೆ ನೀಡಿದೆ. ಇತ್ತ, ಈ ಹೆಣ್ಣುಮಗಳ ಬದುಕಿನ ಕತೆ ಜೊತೆಗೆ ಯಶೋಗಾಥೆ ಕೂಡ ಊರೂರು ತಲುಪುತ್ತ ಮಹೀಂದ್ರಾ ಕಂಪನಿಯ ಸಿಇಒ ಆನಂದ್ ಮಹೀಂದ್ರ ಅವರ ಕಿವಿಗೂ ಬಿತ್ತು. ಕೂಡಲೇ ಅವರು ಪಿಕಪ್ ವಾಹನವೊಂದನ್ನು ದೇಣಿಗೆಯಾಗಿ ನೀಡಿ ಶಿಲ್ಪಾರ ಕನಸುಗಳಿಗೆ ಕಣ್ಣೊದಗಿಸಿದರು. ಇದೀಗ ನಗರದ ಕಂಕನಾಡಿ ಭಾಗದಲ್ಲಿ ಮತ್ತೊಂದು ಹೋಟೆಲ್ ತೆರೆಯಲು ಅವರ ಪ್ರೋತ್ಸಾಹ ಇಂಬು ನೀಡಿದೆ. ಪವರ್ ಬ್ಯುಸಿನೆಸ್ ಮಹಿಳಾ ಪುರಸ್ಕಾರ, ಮಹೀಂದ್ರಾ ಟ್ರಾನ್ಸ್‌ಪೋರ್ಟ್ ಎಕ್ಸಲೆನ್ಸ್ ಪ್ರಶಸ್ತಿ ಸೇರಿದಂತೆ ಹಲವು ಗೌರವಕ್ಕೆ ಈ ಯುವ ಉದ್ಯಮಿ ಪಾತ್ರರಾಗಿದ್ದಾರೆ.

ಇದನ್ನೂ ಓದಿ : ಅಡುಗೆ ಮಾಡೋ ಅಮ್ಮನೇ ಮೊದಲು ಊಟ ಮಾಡಬೇಕೆಂಬ ಟ್ವಿಟರ್ ಚರ್ಚೆಯ ಸ್ವಾರಸ್ಯ

ಕಡಿಮೆ ಬೆಲೆಗೆ ಮನೆಯೂಟ ನೆನಪಿಸುವ ತಿನಿಸುಗಳನ್ನು ಒದಗಿಸುವುದು ಶಿಲ್ಪಾ ಅವರ ಹೋಟೆಲಿನ ವಿಶೇಷ. ಶಿಲ್ಪಾರ ಕೈಯಿಂದಲೇ ಹದಗೊಂಡ ಅಡುಗೆ ಪದಾರ್ಥಗಳು ಸ್ವಾದಕ್ಕೆ ಮತ್ತಷ್ಟು ಮೆರಗು ನೀಡಿವೆ. ಹಾಗೆಂದೇ ಮಳೆ ಇರಲಿ, ಬಿಸಿಲಿರಲಿ, ಹೋಟೆಲಿನ ಮುಂದೆ ಇರುವೆ ಮುತ್ತಿದಂತೆ ಜನ. ಮೀನು-ಗಂಜಿಯೂಟವನ್ನೇ ತಿಂದು ಬೇಸತ್ತವರೂ ಇಲ್ಲಿ ಬಂದು ಶಿಲ್ಪಾರ ಕೈರುಚಿ ನೋಡುತ್ತಾರೆ.

ಶಿಲ್ಪಾ ತಮ್ಮ ಬದುಕಿನ ಕತೆ ಹೇಳಿ ಮುಗಿಸುವ ಹೊತ್ತಿಗೆ ಹತ್ತಾರು ರೊಟ್ಟಿಗಳು ಹೆಂಚಿನ ಹಬೆಯೊಂದಿಗೆ ಎದ್ದು ಬಂದು ಸವಿಯಲು ಬಯಸುವವರ ಹೊಟ್ಟೆ ಸೇರುತ್ತಿದ್ದವು; ಗಟ್ಟಿಗಿತ್ತಿಯೊಬ್ಬರು ಬದುಕನ್ನು ಹದಗೊಳಿಸಿಕೊಂಡ, ಚಂದಗೊಳಿಸಿಕೊಂಡ ಕತೆ ಹೇಳುತ್ತಿದ್ದವು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More