ಗ್ರಾಮ ವಾಸ್ತವ್ಯ | ಮಲೆನಾಡು ಎನಿಸಿಕೊಂಡ ಈ ಹಳ್ಳಿಯಲಿ ಮಳೆಗಾಲದಲ್ಲೇ ನೀರಿಲ್ಲ!

ಇದು ಹೇಳಿಕೊಳ್ಳಲು ಮಾತ್ರ ಮಲೆನಾಡಿನ ಗ್ರಾಮ. ಆದರೆ, ಕುಡಿಯುವ ನೀರಿನ ಸರಬರಾಜು ಮಾತ್ರ 15-20 ದಿನಕ್ಕೊಮ್ಮೆ. ಮಳೆಗಾಲದಲ್ಲೇ ಕುಡಿಯುವ ನೀರಿನ ತತ್ವಾರ ಈ ಮಟ್ಟಿಗೆ ಇದ್ದರೆ, ಬೇಸಿಗೆಯಲ್ಲಿ ಗೋಳು ಹೇಳತೀರದು ಎಂದು ಅಲವತ್ತುಕೊಳ್ಳುತ್ತಾರೆ ದೇವರ ಹುಬ್ಬಳ್ಳಿ ಜನತೆ

“ಏ ಬಸು, ಚಕ್ಕಾ ವಚ್ಚಿ ಬಿದ್ದೈತೊ, ತುಗೊ ಹಂಗಾದರ್ ಕಾಯಿ ಹಣ್ಣ ಮಾಡ. 15 ದಿನ ಆತ್ರಿ ನಳಾ ಬಿಟ್ಟ್, ಮನ್ಯಾಗ ಹನಿ ನೀರ ಇಲ್ಲ. ನೀರ ತುಗೊಂಡ ಬರಿ ಅಂದ್ರ ಊರ ಅಗಸಿ ಕಟ್ಟಿ ಮ್ಯಾಲ ಕುಂತ ಚಕ್ಕಾ ಆಡಾಕತ್ತಾರ್ ನೋಡ್ರಿ. ಏ... ರೀ... ನೀರಾಡಿಸಿ ದನಾ ಒದರಾಕತ್ತಾವ್ ಒಂದ ಕೊಡಪಾನಾ ನೀರ ತಂಬರಿ...” -ಹೀಗೆ ಮಹಿಳೆಯೊಬ್ಬರು ನೀರಿಗಾಗಿ ಪರದಾಡುತ್ತಿದ್ದರೆ, ಅವರ ಪತಿ ಮಾತ್ರ ನಗುಮುಖ ಹೊತ್ತು ಊರ ಅಗಸಿಯ ಕಟ್ಟೆಯ ಮೇಲೆ ಚೌಕಾಬಾರ ಆಡುತ್ತಿದ್ದರು. ಇಲ್ಲಿ ಸಂತಸವೂ ಇತ್ತು, ನೋವು, ಹತಾಶೆ, ಬೇಸರಗಳೂ ಮನೆಮಾಡಿದ್ದವು.

ಇಂತಹ ಊರೇ ಧಾರವಾಡ ಜಿಲ್ಲೆಯ ದೇವರ ಹುಬ್ಬಳ್ಳಿ! ಈ ಊರಿನ ಹೆಸರಿನೊಂದಿಗೆ ದೇವರ ಹೆಸರು ಕೂಡ ಸೇರಿಕೊಂಡಿದೆ. ಹೆಸರಿಗೆ ತಕ್ಕಂತೆ ಗ್ರಾಮದಲ್ಲಿ ಬಸವಣ್ಣನವರ ಕಾಯಕದ ಮಾತು ಚಾಲ್ತಿಯಲ್ಲಿದೆ. ಈ ಗ್ರಾಮವನ್ನು ಮಲೆನಾಡು ಪ್ರದೇಶ ಎಂದು ಗುರುತಿಸುವುದು ಸಹಜ. ಹೀಗಾಗಿ, ಮಲೆನಾಡು ಪ್ರದೇಶದಲ್ಲಿ ಬೆಳೆಯುವ ಬೆಳೆಗಳನ್ನೇ ಹೆಚ್ಚಾಗಿ ಬೆಳೆಯುತ್ತಾರೆ. ಹೈನುಗಾರಿಕೆ ಪ್ರತಿಯೊಬ್ಬ ರೈತರ ಆದಾಯ ವೃದ್ಧಿಸಿದೆ.

ಧಾರವಾಡ ಜಿಲ್ಲೆ ಸಂಪೂರ್ಣವಾಗಿ ಬರಗಾಲಕ್ಕೆ ತುತ್ತಾದರೂ ಈ ಗ್ರಾಮದಲ್ಲಿ ಮಾತ್ರ ಹಸಿರು ನಳನಳಿಸುತ್ತಿರುತ್ತದೆ. ಹೀಗಾಗಿ, ಇಲ್ಲಿನ ರೈತರ ಬೊಗಸೆ ತುಂಬುವಷ್ಟಾದರೂ ಬೆಳೆ ಇದ್ದೇ ಇರುತ್ತದೆ. ಈ ಬಾರಿಯಂತೂ ಮಳೆರಾಯ ಭರ್ಜರಿಯಾಗಿ ರೈತರನ್ನು ಕೈಹಿಡಿದಿದ್ದಾನೆ. ಈ ಗ್ರಾಮದಲ್ಲಿ ಕೂಡ ಹೊಲಕ್ಕೆ ರೈತರು ತೆರಳಲಾರದಷ್ಟು ಮಳೆ ಸುರಿಯುತ್ತಿದೆ. ಹೀಗಾಗಿ, ಬಿತ್ತನೆ ಕಾರ್ಯ ಪೂರೈಸಿರುವ ರೈತರು, ಸಂತಸದಿಂದ ಗ್ರಾಮದಲ್ಲಿ ಸುತ್ತಾಡುತ್ತಿದ್ದರು. ಬೇಸರ ಕಳೆಯಲು ಕಟ್ಟೆಯ ಮೇಲೆ ಹರಟೆ, ಚೌಕಾಬಾರ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಚುನಾವಣೆಯಲ್ಲಿ ಇತ್ತೀಚೆಗೆ ಸೋತಿರುವ ಮಾಜಿ ಸಚಿವ ಹಾಗೂ ಈ ಕ್ಷೇತ್ರದ ಶಾಸಕರಾಗಿದ್ದ ವಿನಯ ಕುಲಕರ್ಣಿ ಅವರ ಸೋಲಿನ ಪರಾಮರ್ಶೆಯ ಚರ್ಚೆ ಭರ್ಜರಿಯಾಗಿಯೇ ನಡೆದಿತ್ತು.

ಆದರೆ, ಗ್ರಾಮದ ಮಹಿಳೆಯರ ಚಿಂತೆ ಮಾತ್ರ ದೇವರೇ ಬಲ್ಲ. ಇದು ಹೇಳಿಕೊಳ್ಳಲು ಮಾತ್ರ ಮಲೆನಾಡು. ಆದರೆ, ಕುಡಿಯುವ ನೀರಿಗಾಗಿ ಜನರು ಪಡುವ ಪಾಡಂತೂ ಹೇಳತೀರದು. ಬರೋಬ್ಬರಿ 15ರಿಂದ 20 ದಿನಗಳಿಗೊಮ್ಮೆ ಈ ಗ್ರಾಮಕ್ಕೆ ಕುಡಿಯುವ ನೀರಿನ ಸರಬರಾಜು ಆಗುತ್ತದೆ. ಮಳೆಗಾಲದ ಸಂದರ್ಭದಲ್ಲಿಯೇ ಕುಡಿಯುವ ನೀರಿನ ತತ್ವಾರ ಈ ಮಟ್ಟಿಗೆ ಇದ್ದರೆ, ಬೇಸಿಗೆಯಲ್ಲಂತೂ ಹೇಳತೀರದು. ಬೇಸಿಗೆಯಲ್ಲಿ ನೀರು ಸಂಗ್ರಹಿಸಲೆಂದೇ ಪ್ರತಿಯೊಂದು ಕುಟುಂಬದ ಒಬ್ಬರು ಸದಸ್ಯರು ಕೆಲಸ ಬಿಟ್ಟು ನಿಲ್ಲುತ್ತಾರೆ. ಅಷ್ಟರಮಟ್ಟಿಗೆ ಈ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರಿದೆ.

ಈ ಸಮಸ್ಯೆ ಇಂದು, ನಿನ್ನೆಯದಲ್ಲ; ಬರೋಬ್ಬರಿ ಒಂದು ದಶಕದ ಸಮಸ್ಯೆ. ಸಂಸದ, ಶಾಸಕ ಸೇರಿದಂತೆ ಪ್ರತಿಯೊಬ್ಬ ಜನಪ್ರತಿನಿಧಿಗೂ ಇಲ್ಲಿನ ಜನ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಿ ಎಂದು ಗೊಗರೆಯುತ್ತಾರೆ. ಆದರೂ ಕುಡಿಯುವ ನೀರಿನ ಸಮಸ್ಯೆ ಮಾತ್ರ ಸಮಸ್ಯೆಯಾಗಿಯೇ ಉಳಿದಿದೆ. ಹೀಗಾಗಿ, ಬೆಳಗ್ಗೆ 6 ಗಂಟೆಯಾದರೆ ಸಾಕು, ಸರ್ಕಾರಿ ನಲ್ಲಿಯ ಮುಂದೆ ಜನ ಸಾಲುಗಟ್ಟಿ ನೀರು ತರಲು ಸಿದ್ಧರಾಗುತ್ತಾರೆ. ಶಾಲೆ ಬಿಟ್ಟ ಕೂಡಲೇ ಮಕ್ಕಳು ಬಿಂದಿಗೆ ಹಿಡಿದು ನೀರು ತರಲು ಸಿದ್ಧರಾಗುತ್ತಾರೆ. ಇನ್ನು, ಗ್ರಾಮದ ರಸ್ತೆಗಳೆಲ್ಲ ಗತಕಾಲ ನೆನಪಿಸುತ್ತವೆ. ಅಷ್ಟರಮಟ್ಟಿಗೆ ರಸ್ತೆಗಳು ಹದಗೆಟ್ಟಿವೆ.

ಇದನ್ನೂ ಓದಿ : ಗ್ರಾಮ ವಾಸ್ತವ್ಯ | ದ್ವೀಪಕ್ಕೆ ಸಂಪರ್ಕ ಬೆಸೆದ ಸೇತುವೆ ಸೃಷ್ಟಿಸಿದ ಹಳವಂಡಗಳು

ಎಷ್ಟೇ ದೊಡ್ಡ ಶ್ರೀಮಂತರೇ ಇರಲಿ, ಪ್ರತಿಯೊಂದು ಕುಟುಂಬಸ್ಥರೂ ಊಟದ ಎಲೆಯನ್ನು ಸಿದ್ಧಪಡಿಸುತ್ತಾರೆ ಎಂಬುದು ಗ್ರಾಮದ ವಿಶೇಷತೆ. ಪ್ರತಿಯೊಬ್ಬರು ತಮ್ಮ ಹೊಲದ ಬದುವಿನುದ್ದಕ್ಕೂ ಮುತ್ತಲ ಸಸಿಯನ್ನು ನೆಟ್ಟು, ಅದರ ಎಲೆಯಿಂದ ಊಟದ ಎಲೆಯನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಮನೆಯಲ್ಲಿನ ಗೃಹಣಿಯರು ತಮ್ಮ ಕೆಲಸ ಕಾರ್ಯಗಳೆಲ್ಲ ಮುಗಿದ ನಂತರ ಊಟದ ಎಲೆಯನ್ನು ತಯಾರಿಸಿ ಕುಟುಂಬಕ್ಕೆ ಆಸರೆಯಾಗುತ್ತಾರೆ. ವಿದ್ಯಾರ್ಥಿಗಳು ಕೂಡ ಈ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಈ ಗ್ರಾಮದ ಬಹುತೇಕ ಮನೆಗಳಲ್ಲಿ ಪಾತ್ರೆಗಳಿಗಿಂತ ಎಲೆಯಲ್ಲಿಯೇ ಊಟ ಮಾಡುತ್ತಾರೆ.

ಗ್ರಾಮದಲ್ಲಿನ ಬಹುತೇಕ ವಿದ್ಯಾರ್ಥಿಗಳು ಪೈಲ್ವಾನರು. ಎಲ್ಲ ಹಳ್ಳಿ ಹಾಗೂ ನಗರದಂತೆ ಈ ಗ್ರಾಮದ ಯುವಕರು ದುಶ್ಚಟಗಳಿಗೆ ಬಲಿಯಾಗುವುದು ತೀರಾ ಕಡಿಮೆ. ಪ್ರತಿಯೊಬ್ಬರು ಚಿಕ್ಕವರಿರುವಾಗಲೇ ಗರಡಿಮನೆಗೆ ಹೋಗಿ ತಾಲೀಮು ಮಾಡುತ್ತಾರೆ. ಇಂತಹ ಪದ್ಧತಿಯೊಂದನ್ನು ಗ್ರಾಮದ ಹಿರಿಯರು ಯುವಕರಿಗೆ ಊಣಬಡಿಸಿದ್ದಾರೆ. ಹೀಗಾಗಿಯೇ, ಈ ಗ್ರಾಮದ ಯುವಕರು ದೇಹದಾರ್ಢ್ಯತೆಗೆ ಹೆಚ್ಚಿನ ಗಮನ ಹರಿಸುತ್ತಾರೆ. ಈ ಗ್ರಾಮವನ್ನು ಜಿಲ್ಲೆಯಲ್ಲಿ ಫೈಲ್ವಾನರ ಊರು ಎಂದು ಕರೆಯುತ್ತಾರೆ. ಆದರೆ, ಕುಡಿಯುವ ನೀರು, ಮೂಲಸೌಕರ್ಯಗಳು ಮಾತ್ರ ಇಲ್ಲಿ ಫೈಲ್ವಾನರನ್ನೂ ನಲುಗಿಸುತ್ತಿವೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More