ನೀರಿನಲ್ಲಿ ಮುಳುಗುತ್ತಿರುವವರ ಪಾಲಿಗೆ ಸಂಜೀವಿನಿ ಆಗಲಿದೆ ಈ ಪುಟಾಣಿ ರೋಬೊ

ದೇಶದಲ್ಲೇ ಮೊದಲ ಬಾರಿಗೆ ಜೀವರಕ್ಷಕ ರೋಬೊದ ಪ್ರಾತ್ಯಕ್ಷಿಕೆಯೊಂದು ಸೋಮವಾರ ಮಂಗಳೂರಿನ ಉಳ್ಳಾಲ ಕಡಲ ತೀರದಲ್ಲಿ ನಡೆಯಿತು. ಸಾಮಾನ್ಯ ಟಯರ್ ಟ್ಯೂಬಿನಂತೆ ಕಾಣುವ ಈ ರೋಬೊ ಕೆಲಸಗಳು ಅಸಾಮಾನ್ಯವಾಗಿದ್ದು, ಇದನ್ನು ಜೀವರಕ್ಷಣೆಗೆ ಬಳಸುವ ಆಲೋಚನೆ ಇದೆ

ಮಂಗಳೂರಿನ ಉಳ್ಳಾಲದ ಕಡಲತಡಿಯಲ್ಲಿ ಸೂರ್ಯ ನೀರಿಗಿಳಿದು ಆಡುತ್ತಿದ್ದ ಹೊತ್ತು. ಕಡಲ ಸೊಬಗನ್ನು ಸವಿಯಲು ಸೇರಿದ್ದ ಪ್ರವಾಸಿಗರು. ಅವರೆಲ್ಲ ಅಚ್ಚರಿಪಡುವಂತೆ ಅಲ್ಲಿಗೆ ಬಂದ ಕರಾವಳಿ ಕಾವಲು ಪಡೆಯ ಸಿಬ್ಬಂದಿ, ಚೆನ್ನೈನ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯ (ಎನ್ಐಒಟಿ) ವಿಜ್ಞಾನಿಗಳು, ಗೃಹರಕ್ಷಕ ದಳದ ಸಿಬ್ಬಂದಿ, ಜಿಲ್ಲಾಡಳಿತದ ಪ್ರಮುಖರು ಪುಟ್ಟ ಪ್ರಯೋಗವೊಂದಕ್ಕೆ ಅಣಿಯಾಗುತ್ತಿದ್ದರು.

ಆ ತಂಡದ ಕೈಯಲ್ಲೊಂದು ವರ್ತುಲಾಕಾರದ ಟ್ಯೂಬ್. ಥಟ್ಟನೆ ನೋಡಿದರೆ, ಸಾಮಾನ್ಯ ಟಯರಿನ ಟ್ಯೂಬಿನಂತೆಯೇ ಇದೆ. ಆದರೆ, ಏರಿಬರುತ್ತಿದ್ದ ಅಲೆಗಳಿಗೆ ಎದುರಾಗಿ ತನ್ನಿಂತಾನೇ ಈಜಿಹೋಗಿ, ನೀರಿನ ಮಧ್ಯೆ ಅಪಾಯದಲ್ಲಿ ಇರುವವರ ಪಾಲಿಗೆ ಸಂಜೀವಿನಿಯಾಗುವುದು ಈ ಸಾಧನದ ಅಸಾಮಾನ್ಯ ಕೆಲಸ. ನದಿ, ಸಮುದ್ರ ದಂಡೆಯಲ್ಲಿ ಹಾಗೂ ಹಡಗು-ದೋಣಿಯಲ್ಲಿ ದುರ್ಘಟನೆ ಸಂಭವಿಸಿದಾಗ ಇದು ಅತ್ಯಂತ ಉಪಯುಕ್ತ. ನೀರಿಗೆಸೆದ ಕೂಡಲೇ ಇದನ್ನು ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸಬಹುದು. ವಿಜ್ಞಾನಿಗಳಿಂದ ಇದು ಪ್ರೀತಿಯಿಂದ ‘ರೋಬೊ ಕೋಸ್ಟಲ್ ಅಬ್ಸರ್ವರ್’ ಎಂದು ಕರೆಸಿಕೊಳ್ಳುತ್ತಿದೆ.

ಜಿಪಿಎಸ್ ಸಾಧನ ಹೊಂದಿರುವ ಈ ರೋಬೊ, ಮಬ್ಬುಗತ್ತಲಲ್ಲೂ ಹೊಳೆಯುವಂತೆ ಬೆಳಕಿನ ವಿನ್ಯಾಸ ಹೊಂದಿದೆ. ದೂರ ನಿಯಂತ್ರಕದಲ್ಲಿರುವ ಮೈಕ್ರೊ ಕಂಟ್ರೋಲರ್, ಟ್ರಾನ್ಸ್‌ಮೀಟರ್ ವ್ಯವಸ್ಥೆಯಿಂದಾಗಿ ನಾಲ್ಕು ಕಿಮೀ ದೂರದವರೆಗೆ ಇದನ್ನು ನೀರಿನಲ್ಲಿ ತೇಲುತ್ತ ಹೋಗುವಂತೆ ಮಾಡುವುದು ಸಾಧ್ಯ. ಜೊತೆಗೆ ಕ್ಯಾಮೆರಾ ವ್ಯವಸ್ಥೆ ಉಂಟು. ಐದು ಗಂಟೆಗಳಿಗೂ ಹೆಚ್ಚುಕಾಲ ಕಾರ್ಯನಿರ್ವಹಿಸಬಲ್ಲ ಬ್ಯಾಟರಿ ಇದರಲ್ಲಿ ಅಡಕವಾಗಿದೆ. ಈ ಸಾಧನಗಳನ್ನು ಟ್ಯೂಬಿಗೆ ಜೋಡಿಸಿರುವ ಜಲನಿರೋಧಕ ಪೆಟ್ಟಿಗೆಯೊಳಗೆ ಅಳವಡಿಸಲಾಗಿರುತ್ತದೆ. ಅಲ್ಲದೆ, ಐದು ನಾಟಿಕಲ್ ಮೈಲು ವೇಗದಲ್ಲಿ ಚಲಿಸುವಂತಹ ತಿರುಗಣಿಗಳನ್ನು ರೋಬೊ ಹೊಂದಿದೆ.

ಇದನ್ನೂ ಓದಿ : ರೋಬೊ ಸೋಫಿಯಾ ಜೊತೆ ಹಾಲಿವುಡ್ ನಟ ವಿಲ್‌ ಸ್ಮಿತ್ ಡೇಟಿಂಗ್‌ ಸಂಭ್ರಮ!

ಜೀವರಕ್ಷಣೆಗಾಗಿ ಮಾತ್ರವಲ್ಲದೆ ಸಾಗರದ ಅನೇಕ ವಿದ್ಯಮಾನಗಳನ್ನು ಮಾಪನ ಮಾಡಲು ಕೂಡ ಇದನ್ನು ಬಳಸಬಹುದು. ತೈಲ ವಿಸರ್ಜನೆ, ಸಮುದ್ರಮಾಲಿನ್ಯದ ಅಳತೆಗೋಲಾಗಿಯೂ ಇದು ಸಹಾಯಕ್ಕೆ ಬರಲಿದೆ. ಈ ಮೊದಲು ಇದನ್ನು ಇಂತಹ ಉದ್ದೇಶಗಳಿಗಾಗಿಯೇ ಸಾಗರ ತಂತ್ರಜ್ಞಾನ ಸಂಸ್ಥೆ ಬಳಸುತ್ತಿತ್ತು. ಆದ್ದರಿಂದಲೇ ಇದನ್ನು ಕೋಸ್ಟಲ್ ಅಬ್ಸರ್ವರ್ ಎಂದು ಕರೆಯಲಾಗುತ್ತಿತ್ತು. ಆದರೆ, ಇದಕ್ಕೆ ಜೀವರಕ್ಷಣೆಯ ಶಕ್ತಿಯೂ ಇದೆ ಎಂಬುದನ್ನು ಉನ್ನತ ಹಂತದ ಪ್ರಯೋಗಗಳ ಮೂಲಕ ಕಂಡುಕೊಳ್ಳಲಾಯಿತು.

“ವಾಣಿಜ್ಯೀಕರಣದ ಉದ್ದೇಶದಿಂದ ರೋಬೊ ತಂತ್ರಜ್ಞಾನವನ್ನು ಎನ್ಐಒಟಿ ಬೆಂಗಳೂರಿನ ಸಿಟಿ ಕಂಟ್ರೋಲ್ ಟೆಕ್ನಾಲಜಿಗೆ ವಹಿಸಿದೆ. ಕಡಿಮೆ ಬೆಲೆಗೆ ಸಾಧನ ದೊರೆಯುವುದರಿಂದ ಸಾಮಾನ್ಯ ಮೀನುಗಾರರು, ಜೀವರಕ್ಷಕ ಸಿಬ್ಬಂದಿ ಇದರ ಸೌಲಭ್ಯ ಪಡೆಯಬಹುದು,” ಎನ್ನುತ್ತಾರೆ ಸಿಟಿ ಕಂಟ್ರೋಲ್ ಟೆಕ್ನಲಾಜಿ ಸಂಸ್ಥೆಯ ಆರ್ ಸುಮಂತ್. ಚೆನ್ನೈನಲ್ಲಿ ವಿನ್ಯಾಸ ಮಾಡಲಾಗಿದ್ದರೂ ದೇಶದಲ್ಲೇ ಮೊದಲ ಬಾರಿಗೆ ಮಂಗಳೂರಿನ ಕಡಲದಂಡೆಯಲ್ಲಿ ಪ್ರಾತ್ಯಕ್ಷಿಕೆ ನಡೆದದ್ದು ವಿಶೇಷ.

ಛಾಯಾಗ್ರಹಣ: ಗುರುಪ್ರಸಾದ್ ಅತ್ತಾವರ

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More