ವಿಡಿಯೋ ಸ್ಟೋರಿ | ಅಭಿವೃದ್ಧಿಯನ್ನೇ ಕಾಣದ ತಿಕೋಟಾ ತಾಂಡಾದಲ್ಲಿದೆ ಆರು ಹೆಲಿಪ್ಯಾಡ್‌!

ವಿಜಯಪುರ ಜಿಲ್ಲೆಯ ತಿಕೋಟಾ ಬಳಿಯ ಸೋಮದೇವರ ಹಟ್ಟಿ ತಾಂಡಾದಲ್ಲಿ ಬಸ್ ನಿಲ್ದಾಣ ಸಿಗುವುದು ಕಷ್ಟ. ಆದರೆ, ಅಭಿವೃದ್ಧಿಯೇ ಕಾಣದ ಈ ಗ್ರಾಮದಲ್ಲಿ ದೇವಿಯ ಆಶಿರ್ವಾದ ಪಡೆಯಲು ದೇಶದ ಮೂಲೆಮೂಲೆಯಿಂದ ಬರುವ ದೊಡ್ಡ ಮನುಷ್ಯರಿಗಾಗಿ ಕನಿಷ್ಠ ೬ ಹೆಲಿಪ್ಯಾಡ್‌ಗಳು ನಿರ್ಮಾಣವಾಗಿವೆ!

ನಮ್ಮ ರಾಜ್ಯದಲ್ಲಿ ಇಂದಿಗೂ ಜಿಲ್ಲಾ ಮಟ್ಟದಲ್ಲೇ ಕಾಯಂ ಹೆಲಿಪ್ಯಾಡ್ ಕಾಣುವುದು ಕಷ್ಟ. ಆಯಾ ಸಂದರ್ಭಗಳಿಗೆ ತಕ್ಕಂತೆ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತದೆ. ಆದರೆ, ವಿಜಯಪುರ ಜಿಲ್ಲೆಯ ತಿಕೋಟಾ ಬಳಿಯ ಸೋಮದೇವರ ಹಟ್ಟಿ ತಾಂಡಾ ಮಾತ್ರ ಈ ಮಾತಿಗೆ ಅಪವಾದ.

ಈ ಲಂಬಾಣಿ ತಾಂಡಾದಲ್ಲಿ ಬಸ್ ನಿಲ್ದಾಣ ಸಿಗುವುದು ಕಷ್ಟ. ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳೂ ನೋಡಲು ಸಿಗುವುದಿಲ್ಲ. ಆದರೆ, ಊರಿಡೀ ಸುತ್ತಿದರೆ ಕನಿಷ್ಠ 6 ಹೆಲಿಪ್ಯಾಡ್‌ಗಳು ಸಿಗುತ್ತವೆ. ಈ ತಾಂಡಾದಲ್ಲಿ ಹುಡುಕಿದರೆ ಸಿಗುವುದು 2ರಿಂದ 3 ಸಾವಿರ ಜನ. ಹೇಳಿಕೊಳ್ಳುವಂಥ ಸೌಲಭ್ಯಗಳನ್ನು ಹೊಂದಿರದ ಸಾಧಾರಣ ಬಂಜಾರಾ ತಾಂಡಾ ಇದು.  ಕನಿಷ್ಠ ಸೌಲಭ್ಯಗಳೂ ಲಭ್ಯವಿಲ್ಲದ, ಕುಗ್ರಾಮ ಎಂದು ಕರೆಸಿಕೊಳ್ಳುವ ಬಂಜಾರಾ ತಾಂಡಾದಲ್ಲಿ ಹೈಟೆಕ್ ಹೆಲಿಪ್ಯಾಡ್‌ಗಳಿವೆ. ವರ್ಷಕ್ಕೆ ಹತ್ತಾರು ಬಾರಿ ಇಲ್ಲಿ ಹೆಲಿಕಾಪ್ಟರ್ ಬಂದಿಳಿಯುತ್ತದೆ. ಇದು ಆಶ್ವರ್ಯವಾದರೂ ನಿಜ.

ಈ ಗ್ರಾಮದ ದುರ್ಗಾದೇವಿ ಜಾತ್ರೆಗೆ ಪ್ರತಿವರ್ಷ ಕೇಂದ್ರ ಸಚಿವರಿಂದ ಹಿಡಿದು, ಶಾಸಕರು, ಸಂಸದರು, ದೊಡ್ಡ-ದೊಡ್ಡ ಉದ್ಯಮಿಗಳು, ನ್ಯಾಯಮೂರ್ತಿಗಳು ಹಾಗೂ ದುಬೈನಂತಹ ಮುಸ್ಲಿಂ ರಾಷ್ಟ್ರಗಳಿಂದ ಶೇಖ್‌ಗಳು ಬರುತ್ತಾರೆ. ಇದೇ ಕಾರಣಕ್ಕಾಗಿ ಈ ತಾಂಡಾದಲ್ಲಿ 6 ಕಡೆ ಕಾಯಂ ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಲಾಗಿದೆ. ವಿಶೇಷವೆಂದರೆ, ರಾಜ್ಯದಲ್ಲಿ ಕೋಟಿ ಕೋಟಿ ಆದಾಯ ಗಳಿಸುವ ಹತ್ತಾರು ಧಾರ್ಮಿಕ ಕ್ಷೇತ್ರಗಳಿವೆ. ಆದರೆ, ಕೆಲವು ಧಾರ್ಮಿಕ ಕ್ಷೇತ್ರಗಳಲ್ಲಿ ಒಂದೊಂದು ತಾತ್ಕಾಲಿಕ ಹೆಲಿಪ್ಯಾಡ್‌ಗಳಿವೆ. ಆದರೆ, ಈ ತಾಂಡಾದಲ್ಲಿರುವ 6 ಹೆಲಿಪ್ಯಾಡ್‌ಗಳನ್ನು ಇಲ್ಲಿನ ದೇವಸ್ಥಾನ ಸಮಿತಿಯೇ ನಿರ್ಮಿಸಿದ್ದು, ಇವು ಕಾಯಂ ಹೆಲಿಪ್ಯಾಡ್‌ಗಳಾಗಿವೆ. ಇನ್ನು, ಇಲ್ಲಿನ ದೇವಸ್ಥಾನಕ್ಕೆ ಹೂವು ಹಾಕೋದು ಕೂಡ ಹೆಲಿಕಾಪ್ಟರ್ ಮೂಲಕವೇ!

ವಿಜಯಪುರದಿಂದ ಸುಮಾರು 50 ಕಿಲೋಮಿಟರ್ ದೂರವಿರುವ ಈ ಸೋಮದೇವರ ಹಟ್ಟಿ ತಾಂಡಾ, ಕರ್ನಾಟಕದ ಗಡಿ ಪ್ರದೇಶ. ಸದಾ ಬರಗಾಲದಿಂದಾಗಿ ಇಲ್ಲಿನ ಜನ ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ದುಡಿಯಲು ಗುಳೆ ಹೋಗುತ್ತಾರೆ. ತಾಂಡಾದಲ್ಲಿ ಸಾಕ್ಷರತೆಯ ಪ್ರಮಾಣ ಕೂಡ ಕಡಿಮೆ ಇದೆ. ಹೀಗಾಗಿ, ವಯೋವೃದ್ಧರು, ಮಕ್ಕಳು ಹೆಚ್ಚಾಗಿದ್ದು, ಜನ ಸಂಚಾರ ವಿರಳ. ಇದೇ ಕಾರಣದಿಂದಲೋ ಏನೋ ಈ ಗ್ರಾಮಕ್ಕೆ ಬರಲು ರಸ್ತೆಗಳೇ ಇಲ್ಲ. ಇರುವ ರಸ್ತೆಯೂ ಹಾಳಾಗಿದ್ದು, ವಾಹನ ಸವಾರರು ಪರದಾಡುತ್ತಾರೆ.

ಹಲವು ವರ್ಷಗಳ ಹಿಂದೆ ಈ ತಾಂಡಾಗೆ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಜನಸಾಮಾನ್ಯರು ಬರಲೂ ಹಿಂದೇಟು ಹಾಕುತ್ತಿದ್ದರು. ಇಲ್ಲಿನ ಗ್ರಾಮ ಪಂಚಾಯತ್‌ ಕೂಡ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕ್ರಮೇಣ ಇಲ್ಲಿನ ದೇವರ ಮಹಿಮೆ ರಾಜಕಾರಣಿಗಳಿಗೆ ತಿಳಿಯುತ್ತಿದ್ದಂತೆ, ರಸ್ತೆ ಹೇಗಾದರೂ ಪರವಾಗಿಲ್ಲ, ಜಾತ್ರೆಯಲ್ಲಿ ಭಾಗವಹಿಸಿದರೆ ಸಾಕು ಎಂದು ಸ್ವಯಂಪ್ರೇರಣೆಯಿಂದ ಆಗಮಿಸುತ್ತಿದ್ದರು. ಬಳಿಕ ಈ ಕ್ಷೇತ್ರಕ್ಕೆ ಬರುತ್ತಿದ್ದವರು, ಅಧಿಕಾರಕ್ಕೆ ಬಂದ ಮೇಲೆ ಹೆಲಿಕಾಪ್ಟರ್‌ನಲ್ಲಿ ಬರಲು ಶುರು ಮಾಡಿದರು. ಅವರಿಗಾಗಿ ಮೊದಲು ತಾತ್ಕಾಲಿಕವಾಗಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಯಿತು. ಕ್ರಮೇಣ ಹೆಲಿಕಾಪ್ಟರ್‌ನಲ್ಲಿ ಆಗಮಿಸುವವರ ಸಂಖ್ಯೆ ಅಧಿಕವಾದ ಕಾರಣ, ಕಾಯಂ ಹೆಲಿಪ್ಯಾಡ್‌ಗಳನ್ನು ಮಾಡಲಾಗಿದ್ದು, ಇದೀಗ ಸುಮಾರು ಐದು ಹೆಲಿಕಾಪ್ಟರ್‌ಗಳು ಒಂದೇ ಸಮಯಕ್ಕೆ ಲ್ಯಾಂಡಿಂಗ್‌ ಆಗಬಹುದಾಗಿದೆ.

ಇದನ್ನೂ ಓದಿ : ಸಾಲಕ್ಕೇ ಸಾಲದಾಯಿತು ಅನುದಾನ; ಇನ್ನೆಲ್ಲಿ ನಗರ, ಪಟ್ಟಣಗಳ ಅಭಿವೃದ್ಧಿ?

ಅತಿ ಹೆಚ್ಚಿನ ಪ್ರಮಾಣದಲ್ಲಿ ಬಂಜಾರ ಸಮುದಾಯದವರೇ ಇರುವ ಈ ಕ್ಷೇತ್ರ ಇಂದು ದೇಶದಲ್ಲೇ ಹೆಸರು ಮಾಡಿದೆ. ಇತರ ರಾಜ್ಯಗಳಲ್ಲಿ ನೆಲೆಸಿರುವ ಬಂಜಾರ ಸಮುದಾಯದವರಿಂದ ಈ ಕ್ಷೇತ್ರದ ಬಗ್ಗೆ ಮಾಹಿತಿ ಪಡೆಯುವ ರಾಜಕಾರಣಿಗಳು, ಉದ್ಯಮಿಗಳು, ಶ್ರೀಮಂತರು, ಜಾತಿಬೇಧವಿಲ್ಲದೆ ಇಂದಿಗೂ ಈ ತಾಣಕ್ಕೆ ಭೇಟಿ ನೀಡುತ್ತಾರೆ. ಹೀಗಾಗಿ, ಈ ತಾಂಡಾದಲ್ಲಿರುವ ದೇವಸ್ಥಾನ ಸಮಿತಿ ದೇಶಾದ್ಯಂತ ತನ್ನ ಪ್ರಭಾವ ಹೊಂದಿದೆ. ಅದ್ಧೂರಿಯಾಗಿ ನಡೆಯುವ ಜಾತ್ರೆಯೂ ಐತಿಹಾಸಿಕವೇ. ಸೋಮದೇವರ ಹಟ್ಟಿ ತಾಂಡಾದ ಬಂಜಾರ ಸಮುದಾಯದವರು ಮೊದಲಿಂದಲೂ ತಿರುಪತಿ ತಿಮ್ಮಪ್ಪನ ಭಕ್ತರು.

ಸರಿಸುಮಾರು 300 ವರ್ಷಗಳ ಹಿಂದೆ ಕೀರು ಚವ್ಹಾಣ ಅನ್ನುವ ಬಂಜಾರ ಸಮುದಾಯದ ಹಿರಿಯರು ಪ್ರತಿವರ್ಷ ತಿರುಪತಿಗೆ ಪಾದಯಾತ್ರೆ ಹೋಗುವ ಪದ್ಧತಿ ಇಟ್ಟುಕೊಂಡಿದ್ದರು. ಸಾವಿರ ಕಿಲೋಮಿಟರ್ ಪಾದಯಾತ್ರೆ ಮೂಲಕ ಸಾಗಿ ಭಕ್ತಿಯಿಂದ ಬಾಲಾಜಿಯ ದರ್ಶನ ಪಡೆದು ವಾಪಸಾಗುತ್ತಿದ್ದರು. ಇದೇ ಸ್ಥಳದಲ್ಲಿ ನೆಲೆ ನಿಂತಿದ್ದ ಶಕ್ತಿದೇವತೆ ಕೀರು ಚವ್ಹಾಣ ಜೊತೆ ಬರೋದಾಗಿ ಹೇಳಿಕೊಂಡಿದ್ದಳು. ಆದರೆ ಕೀರು ಮಾತ್ರ ನಿರಾಕರಿಸಿದ್ದರು. ಎರಡು ವರ್ಷ ಹೀಗೇ ನಡೆದಾಗ ಮೂರನೇ ವರ್ಷ ಕೀರು ಚವ್ಹಾಣ ಒಪ್ಪದೆ ಇದ್ದರೂ ಅವರ ಜೊತೆಗೆ ದೇವತೆ ಬಂದಿದ್ದಳು. ಅಶರೀರವಾಣಿಯ ಮೂಲಕ ಈ ವಿಚಾರ ತಿಳಿದ ಮೇಲೆ ಬಂಜಾರ ಸಮುದಾಯದ ಹಿರಿಯರು ಅಲ್ಲಿ ಧ್ವಜವನ್ನ ನೆಟ್ಟು ಪೂಜಿಸೋಕೆ ಆರಂಭಿಸಿದರು. ಅಂದಿನಿಂದಲೂ ಸಹಸ್ರಾರು ಪವಾಡಗಳು ಈ ಕ್ಷೇತ್ರದಲ್ಲಿ ನಡೆಯುತ್ತಿವೆ ಎನ್ನುವುದು ಭಕ್ತರ ನಂಬಿಕೆ. 300 ವರ್ಷಗಳ ಹಿಂದಿನ ಬಿದಿರಿನ ನಿಶಾನೆಯನ್ನು ಇಂದಿಗೂ ಪೂಜಿಸಲಾಗುತ್ತಿದೆ.

ಹೀಗೆ ದೇವಿಯ ಆಶಿರ್ವಾದ ಪಡೆಯಲು ದೇಶದ ಮೂಲೆ-ಮೂಲೆಯಿಂದ ಹೆಲಿಕಾಪ್ಟರ್‌ ಗಣ್ಯರು, ಸಿರಿವಂತರು ಈ ತಾಂಡಾಗೆ ಬರುತ್ತಾರೆ. ಹಾಗಿದ್ದರೂ ತಾಂಡಾ ಮಾತ್ರ ಈವರೆಗೆ ಅಭಿವೃದ್ಧಿ ಕಂಡಿಲ್ಲ ಎಂಬುದು ವಿಪರ್ಯಾಸ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More