ಕಾರ್ಗಿಲ್ ಯುದ್ದದಲ್ಲಿ ಬಲಿದಾನ ಮಾಡಿದ ಕೊಡಗಿನ ವೀರಯೋಧರನ್ನು ನೆನೆಯುತ್ತಾ

ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದವರು ಕೊಡಗಿನ ಇಬ್ಬರು ವೀರರು. ಒಬ್ಬರು ಮಡಿಕೇರಿಯ ನಾಯಕ್ ಕಾವೇರಪ್ಪ, ಇನ್ನೊಬ್ಬರು ಸೋಮವಾರಪೇಟೆ ತಾಲ್ಲೂಕು ಐಗೂರಿನ ಸುಬೇದಾರ್ ಎಸ್ ಕೆ ಮೇದಪ್ಪ ಅವರು. ಕಾರ್ಗಿಲ್ ವಿಜಯ ದಿವಸದ(ಜು. ೨೬) ಸಂದರ್ಭದಲ್ಲಿ ಈ ಇಬ್ಬರು ಯೋಧರರ ನೆನಪು

ಕೊಡಗು ವೀರಯೋಧರ ನಾಡೆಂದು ರಾಷ್ಟ್ರದಲ್ಲೇ ಹೆಸರುವಾಸಿ ಆಗಿದೆ. ಈ ಪುಟ್ಟ ಜಿಲ್ಲೆಯ ಪ್ರತಿ ಮನೆಯಲ್ಲೂ ಒಬ್ಬ ಯೋಧ ಹುಟ್ಟುತ್ತಾನೆ ಎಂಬುದು ಜನಜನಿತ ಮಾತು. ಅದಕ್ಕೆ ಜಿಲ್ಲೆ ಅಪವಾದವೇನಲ್ಲ. ‘ಕೊಡವತಿ ಹೆತ್ತರೆ ಸ್ವರ್ಗ ಯುದ್ದದಲ್ಲಿ ಗಂಡು ಸತ್ತರೆ ಸ್ವರ್ಗ’ ಎಂಬ ನಾಣ್ಣುಡಿಯೂ ಇದೆ. ಕೊಡಗಿನಲ್ಲಿ ಅಂದಾಜು 10 ಸಾವಿರ ನಿವೃತ್ತ ಯೋಧರಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರೆಲ್ಲರಿಗೂ ಸ್ಫೂರ್ತಿ, ಪ್ರೇರಕ ಶಕ್ತಿ ಆಗಿರುವುದು ಇಬ್ಬರು ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಮತ್ತು ಜನರಲ್ ತಿಮ್ಮಯ್ಯ.

ದೇಶ ಮಾಡಿರುವ ಎಲ್ಲ ಯುದ್ದಗಳಲ್ಲೂ ಕೊಡಗಿನ ವೀರ ಯೋಧರು ಬಲಿದಾನ ಮಾಡಿದ್ದಾರೆ. ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದವರು ಇಬ್ಬರು. ಒಬ್ಬರು ಮಡಿಕೇರಿಯ ನಾಯಕ್ ಕಾವೇರಪ್ಪ ಆಗಿದ್ದರೆ ಇನ್ನೊಬ್ಬರು ಸೋಮವಾರಪೇಟೆ ತಾಲ್ಲೂಕು ಐಗೂರಿನ ಸುಬೇದಾರ್ ಎಸ್ ಕೆ ಮೇದಪ್ಪ ಅವರು. ಕಾರ್ಗಿಲ್ ವಿಜಯ ದಿವಸದ(ಜು. ೨೬) ಸಂದರ್ಭದಲ್ಲಿ ಈ ಇಬ್ಬರು ಯೋಧರರ ನೆನಪು ಮತ್ತೆ ಹಸಿರಾಗುತ್ತಿದೆ.

ಸುಬೇದಾರ್ ಮೇದಪ್ಪ ಅವರದು ತುಂಬು ಕುಟುಂಬದಲ್ಲಿ 1957 ರಲ್ಲಿ ಜನಿಸಿದ ಮೇದಪ್ಪ ಅವರು ಎಸ್ ಎಂ ಕುಟ್ಟಪ್ಪ ಹಾಗೂ ಅಮ್ಮವ್ವ ದಂಪತಿಗಳ 6 ಜನ ಮಕ್ಕಳಲ್ಲಿ ಮೂರನೆಯವರು. ಇವರ ಓರ್ವ ಸಹೋದರ ಬುದ್ದಿ ಮಾಂದ್ಯ. ಸುಮಾರು 24 ವರ್ಷ ಮರಾಠಾ ಲೈಟ್ ಇನ್ಫಾಂಟ್ರಿಯಲ್ಲಿ ಸೇವೆ ಸಲ್ಲಿಸಿದ್ದ ಮೇದಪ್ಪ ಅವರಿಗೆ ಪತ್ನಿ ಮತ್ತು ಓರ್ವ ಪುತ್ರನೂ ಇದ್ದಾನೆ. ಅದು 1999 ರ ಮೇ ತಿಂಗಳ 31 ನೇ ತಾರೀಖು ಬೆಳಿಗ್ಗೆ 8 ಘಂಟೆಗೇ ದುರ್ವಾರ್ತೆಯೊಂದು ತುಂಬು ಕುಟುಂಬದ ನೆಮ್ಮದಿಯನ್ನೇ ನಾಶ ಮಾಡಿತು. ಅದು ಸ್ನೇಹ ಜೀವಿ, ವೀರ ಯೋಧ ಮೇದಪ್ಪ ಕಾರ್ಗಿಲ್ ಯುದ್ದದಲ್ಲಿ ಶತ್ರುಗಳ ಗುಂಡಿಗೆ ಬಲಿಯಾಗಿ ಹುತಾತ್ಮನಾದ ದಿವಸ.

ಈ ಕುರಿತು ಮಾತನಾಡಿದ ಮೇದಪ್ಪ ಅವರ ಹಿರಿಯ ಸಹೋದರ ಜೋಯಪ್ಪ ಅವರು ಸಹೋದರನ ನೆನೆದು ಕಣ್ಣೀರಾದರು. ತಾವೇ ಕಾಶ್ಮೀರಕ್ಕೆ ತೆರಳಿ ವಿಧಿ ವಿಧಾನಗಳನ್ನು ಪೂರೈಸಿ ಸಹೋದರನ ಶವವನ್ನು ತಂದ ಬಗ್ಗೆಯೂ ಅವರು ಹೇಳಿದರು. ಯಾವತ್ತೂ ಊರಿಗೆ ಬರುತಿದ್ದಾಗ ಮರೆಯದೆ ತಂದೆ, ತಾಯಿ ಮತ್ತು ಬುದ್ಧಿ ಮಾಂದ್ಯ ಸಹೋದರನಿಗೆ ಬಟ್ಟೆ ತರುತಿದ್ದ ಮೇದಪ್ಪ ಆತನಿಗೆ ತಪ್ಪದೇ ಹಣವನ್ನೂ ಕಳಿಸುತಿದ್ದರು.

1997 ರಲ್ಲಿ ಮೇದಪ್ಪ ಅವರು ಹುಟ್ಟೂರಿನಲ್ಲಿ ಮನೆಯೊಂದನ್ನೂ ನಿರ್ಮಿಸತೊಡಗಿದ್ದರು. ಒಂದು ವರ್ಷದ ಕಳೆದಿದ್ದರೆ ಸೇನೆಯಲ್ಲಿ 25 ವರ್ಷ ಸೇವೆ ಪೂರ್ಣಗೊಳಿಸಿ ಅವನೇ ಪತ್ನಿ ಮಗನ ಜತೆ ಈ ಮನೆಯಲ್ಲಿ ವಾಸ ಮಾಡುತಿದ್ದ ಎಂದು ಜೋಯಪ್ಪ ಹೇಳಿದರು. ಆದರೆ ಅವನ ಕನಸಿನ ಮನೆ ಪೂರ್ಣಗೊಳಿಸಲು ಇನ್ನೂ ಕೂಡ ಆಗಿಲ್ಲ.

ಸೇನೆ ಹಾಗೂ ದಾನಿಗಳಿಂದ ಸುಮಾರು 30 ಲಕ್ಷ ರೂಪಾಯಿಗಳಷ್ಟು ಹಣ ಮೇದಪ್ಪ ಅವರ ಪತ್ನಿಯ ಕೈ ಸೇರಿದ್ದು, ಅವರು ಬೆಂಗಳೂರಿನಲ್ಲಿ ಮನೆ ಖರೀದಿಸಿ ಅಲ್ಲೇ ನೆಲೆಸಿದ್ದಾರೆ. ಪುತ್ರನಿಗೆ ಆರ್ಮಿ ಕೋಟಾದಲ್ಲಿ ರೈಲ್ವೇ ಯಲ್ಲಿ ಕೆಲಸ ಸಿಕ್ಕಿದೆ. ಅವನು ಅಲ್ಪ ಸ್ವಲ್ಪ ಸಹಾಯ ಮಾಡುತ್ತಾನೆ ಎಂದು ಜೋಯಪ್ಪ ಹೇಳಿದರು.

ಮೇದಪ್ಪ ಕುಟುಂಬಕ್ಕೆ ಲಕ್ಷಗಟ್ಟಲೆ ಹಣ ಬರುತಿದ್ದಂತೆ ಕುಟುಂಬದ ಸಾಮರಸ್ಯಕ್ಕೂ ಧಕ್ಕೆ ಆಗಿದೆ. 2010ರಲ್ಲಿ ಮೇದಪ್ಪನ ತಂದೆ ಮೃತಪಟ್ಟಿದ್ದು ತಾಯಿ 2016 ರಲ್ಲಿ ಮೃತಪಟ್ಟಿದ್ದಾರೆ. ಅಪೂರ್ಣಗೊಂಡಿರುವ ಮನೆಯ ಜಾಗವು ಮೇದಪ್ಪನ ತಾಯಿಯ ಹೆಸರಿನಲ್ಲಿದ್ದು ಈ ಜಾಗವು ತಮಗೆ ಸೇರಬೇಕು ಎಂದು ಮೇದಪ್ಪನ ಹಿರಿಯ ಸಹೋದರ ಎಸ್ ಕೆ ಕುಶಾಲಪ್ಪ ಅವರ ಕುಟುಂಬ ನ್ಯಾಯಾಲಯದ ಮೊರೆ ಹೋಗಿದೆ.

ಇದನ್ನೂ ಓದಿ : ವೈರಲ್ ವಿಡಿಯೋ | ಬೈಕ್ ಸ್ಟಂಟ್, ವಿಶ್ವದಾಖಲೆ ಬರೆದ ಭಾರತೀಯ ಯೋಧ

ಇನ್ನು ಮಡಿಕೇರಿಯಲ್ಲಿ ನೆಲೆಸಿರುವ ಮತ್ತೊಬ್ಬ ವೀರ ಯೋಧ ನಾಯಕ್ ಕಾವೇರಪ್ಪ ಅವರು 1967 ರಲ್ಲಿ ವೀರಾಜಪೇಟೆ ತಾಲ್ಲೂಕಿನ ಮೈತಾಡಿಯಲ್ಲಿ ಜನಿಸಿದ್ದು 1986 ರಲ್ಲಿ ಸೇನೆಯ ಆರ್ಟಿಲ್ಲರಿ ವಿಭಾಗಕ್ಕೆ ಸೇರ್ಪಡೆಗೊಂಡರು. ನಮ್ಮ ಜತೆ ಮಾತನಾಡಿದ ಪತ್ನಿ ಶೋಭಾ ಅವರು ಪತಿಯ ಅಗಲುವಿಕೆಯನ್ನು ಈಗಲೂ ನಂಬುವುದಕ್ಕೆ ಆಗುವುದಿಲ್ಲ ಅವರೊಂದಿಗೆ ಪಂಜಾಬ್ , ಜಮ್ಮು , ಉಧಂಪುರ ದಲ್ಲೂ ಕೆಲ ವರ್ಷ ಇದ್ದರು. ಆದರೆ ಮದುವೆ ಆಗಿ ಕೇವಲ 7 ವರ್ಷಕ್ಕೇ ನನ್ನ ಮಾಂಗಲ್ಯ ಭಾಗ್ಯ ನಾಶವಾಗುತ್ತದೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ದುಖಃ ತಪ್ತರಾಗಿ ಕಣ್ಣೀರು ಒರೆಸಿಕೊಂಡರು. ಪತಿಯ ಅಗಲಿಕೆಯ ನೋವು ನನ್ನ ಕೊನೆ ಉಸಿರು ಇರುವವರೆಗೂ ಇರುತ್ತದೆ ಎಂದರು. ಶೋಭಾ ಅವರು ಪತಿಗೆ ಬಂದ ಹಣದಲ್ಲಿ ಮಗಳ ಮದುವೆ ಮಾಡಿದ್ದು ಮಡಿಕೇರಿಯ ಸುದರ್ಶನ ಸರ್ಕಲ್ ಬಳಿ ಮನೆ ಖರೀದಿಸಿ ನೆಮ್ಮದಿಯ ಜೀವನ ನಡೆಸುತಿದ್ದಾರೆ.

ಈ ಇಬ್ಬರು ವೀರಪುತ್ರರ ತ್ಯಾಗ ಮತ್ತು ಬಲಿದಾನ ಜಿಲ್ಲೆಗೆ ಹೆಮ್ಮೆಯ ವಿಷಯವೂ ಹೌದು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More