ಸೇತುವೆ ಇದೆ,ರಸ್ತೆಯೇ ಇಲ್ಲ; ಹಾವೇರಿ ಜಿಲ್ಲೆ ಮಳಗಿ ಗ್ರಾಮದ ವಿಚಿತ್ರ ಕಥೆ

ಸಂಪರ್ಕ ರಸ್ತೆಗಳೇ ಇಲ್ಲ. ಕುಮುದ್ವತಿ ನದಿ ಈಗ ತುಂಬಿ ಹರಿಯುತ್ತಿರುವುದರಿಂದ ನದಿ ದಾಟಿಯೇ ಗ್ರಾಮಸ್ಥರು ರಟ್ಟೀಹಳ್ಳಿಗೆ ಹೋಗಬೇಕು. ಮಳಗಿ ಗ್ರಾಮಸ್ಥರ ಬಹುದಿನದ ಆಸೆಯಂತೆ ನದಿಗೆ ಸೇತುವೆ ನಿರ್ಮಾಣವಾಗಿದೆ. ಆದರೆ ಸೇತುವೆಗೆ ಮುಂಭಾಗದ ರಸ್ತೆಯನ್ನೇ ನಿರ್ಮಿಸದ ಕಾರಣ ಸೇತುವೆ ಇದ್ದೂ ಇಲ್ಲದಂತಾಗಿದೆ

ಮಳೆಗಾಲ ಬಂದರೆ ಸಾಕು ಊರ ಜನ ಮುಗಿಲತ್ತ ಮುಖ ಮಾಡುತ್ತಾರೆ. ಎಲ್ಲಿ ದೊಡ್ಡ ಮಳೆ ಬರುತ್ತೋ ಎನ್ನುವ ಭಯದ ನೆರಳಲ್ಲೇ ದಿನಗಳೆಯುತ್ತಾರೆ. ಇಡೀ ಜಗತ್ತೆ ಮಳೆಗಾಗಿ ಕಾಯುತ್ತಿದ್ದರೆ ಇವರಿಗೆ ಮಾತ್ರ ಮಳೆ ಎಂದರೆ ಮೈ ನಡುಗುತ್ತೆ. ಜೀವ ಅಂಗೈಲಿ ಹಿಡಿದು ಬದುಕುತ್ತಾರೆ. ಇದು ಮಳಗಿ ಗ್ರಾಮದ ಜನರ ದಶಕದ ಬವಣೆ.

ಹಾವೇರಿ ಜಿಲ್ಲೆಯ ಹೀರೆಕೆರೂರು ತಾಲೂಕಿನ ರಟ್ಟಿಹಳ್ಳಿ ಹೋಬಳಿಯ ಮಳಗಿ ಗ್ರಾಮಕ್ಕೆ ಸೇತುವೆ, ಸಂಪರ್ಕ ರಸ್ತೆಗಳೇ ಇಲ್ಲ. ಪಕ್ಕದಲ್ಲೇ ಇರುವ ಕುಮುದ್ವತಿ ನದಿ ಈಗ ತುಂಬಿ ಹರಿಯುತ್ತಿರುವುದರಿಂದ ನದಿಯನ್ನು ದಾಟಿಯೇ ಗ್ರಾಮಸ್ಥರು ರಟ್ಟೀಹಳ್ಳಿಗೆ ಹೋಗಬೇಕು. ಮಳಗಿ ಗ್ರಾಮಸ್ಥರ ಬಹುದಿನದ ಆಸೆಯಂತೆ ಕುಮದ್ವತಿ ನದಿಗೆ ಸೇತುವೆ ನಿರ್ಮಾಣವಾಗಿದೆ. ಆದರೆ ಸೇತುವೆಗೆ ಮುಂಭಾಗದ ರಸ್ತೆಯನ್ನೇ ನಿರ್ಮಿಸದ ಕಾರಣ ಸೇತುವೆ ಇದ್ದೂ ಇಲ್ಲದಂತಾಗಿದೆ. ಇದರಿಂದ ಅನಿವಾರ್ಯವಾಗಿ ಗ್ರಾಮಸ್ಥರು ಹರಿಯುವ ನದಿಯಲ್ಲೇ ತೆಪ್ಪದ ಮೂಲಕ ಹೋಗಬೇಕಾಗಿದೆ.

ಅತ್ಯಂತ ಚಿಕ್ಕ ಗ್ರಾಮವಾದ ಮಳಗಿಯಿಂದ ರಟ್ಟೀಹಳ್ಳಿಗೆ ಕೇವಲ ಅರ್ಧ ಕಿ.ಮೀ. ದೂರವಿದೆ. ಎರಡು ಗ್ರಾಮಗಳ ನಡುವೆ ಕುಮುದ್ವತಿ ನದಿ ಇದೆ. ಶಿಕಾರಿಪುರ ಭಾಗದಲ್ಲಿ ಹೆಚ್ಚಿನ ಮಳೆಯಾದರೆ ಮದಗ ಕೆರೆಗೆ ಹೆಚ್ಚಿನ ನೀರು ಬರುತ್ತದೆ. ಅಲ್ಲಿಂದ ನೀರು ಕುಮದ್ವತಿ ನದಿಗೆ ಹರಿದು ಬರುತ್ತದೆ. ಮಳೆಗಾಲದಲ್ಲಿ ತುಂಬಿ ಹರಿಯುವ ಸಮಯದಲ್ಲಿ ರಟ್ಟೀಹಳ್ಳಿಗೆ ಬರಬೇಕಾದರೆ ಸುಮಾರು 10-15 ಕಿ.ಮೀ. ದೂರ ಸುತ್ತುವರೆದು ಬರಬೇಕು. ಇಲ್ಲಿಯೂ ರಸ್ತೆಗಳು ಸರಿ ಇಲ್ಲ. ಮಳಗಿ ಗ್ರಾಮದಲ್ಲಿ 5ನೇ ತರಗತಿಯ ವರೆಗೆ ಮಾತ್ರ ಶಾಲೆ ಇದೆ. ಮುಂದಿನ ವಿದ್ಯಾಭ್ಯಾಸಕ್ಕೆ ಈ ಗ್ರಾಮದ ವಿದ್ಯಾರ್ಥಿಗಳು ಬೇರೆಡೆ ಹೋಗಬೇಕಾದ ಅನಿವಾರ್ಯತೆ ಇದೆ. ಪ್ರತಿ ದಿನ ಶಾಲೆಗೆ ಹೋಗಬೇಕಾದರೆ ನೀರಿನ ಹರಿವು ಕಡಿಮೆ ಇದ್ದಾಗ ನದಿ ದಾಟಿ ಹೋಗಬೇಕು. ಮಳೆಗಾಲದಲ್ಲಿ ಈ ನದಿಯಲ್ಲಿ ಹೆಚ್ಚಿನ ನೀರು ಇದ್ದಾಗ ಇಲ್ಲಿನ ವಿದ್ಯಾರ್ಥಿಗಳು ತೆಪ್ಪದ ಮೂಲಕ ನದಿ ದಾಟಿ ಶಾಲೆಗೆ ಹೋಗಬೇಕಾಗುತ್ತದೆ. ಇನ್ನು ನೀರಿಳಿಯುವವರೆಗೆ ವೃದ್ಧರು ಊರು ಬಿಟ್ಟು ಕದಲಲಾರದ ಸ್ಥಿತಿ. ಪ್ರತಿ ವರ್ಷ ಮಳಗಿ ಗ್ರಾಮಸ್ಥರಿಗೆ ಮಳೆಗಾಲವೆಂದರೆ ಶಾಪವಾಗಿ ಪರಿಣಮಿಸಿದೆ.

ಸೇತುವೆ ಮುಂಭಾಗದ ರಸ್ತೆ ಕಾಮಗಾರಿಗೆ ಈಗಾಗಲೇ ಅನುದಾನ ಮಂಜೂರಾಗಿದೆ. ಕಾಮಗಾರಿಗೂ ಭೂಮಿ ಪೂಜೆ ನೆರವೇರಿಸಲಾಗಿದೆ‌. ರಸ್ತೆ ನಿರ್ಮಾಣಕ್ಕೆ ಇರುವ ತೊಂದರೆಗಳನ್ನು ನಿವಾರಿಸಿ ಶೀಘ್ರ ಕೆಲಸ ಆರಂಭಿಸಲಾಗುವುದು
ಪ್ರಸನ್ನಕುಮಾರ್, ತಹಶೀಲ್ದಾರ್

ಇನ್ನು ಕುಮುದ್ವತಿ ನದಿಗೆ ಗ್ರಾಮದ ಬಳಿ ಸೇತುವೆ ನಿರ್ಮಾಣವಾಗಬೇಕೆಂದು ಸುಮಾರು ವರ್ಷಗಳಿಂದ ಗ್ರಾಮಸ್ಥರು ಬೇಡಿಕೆ ಇತ್ತು. 4 ವರ್ಷದ ಹಿಂದೆ ಗ್ರಾಮಸ್ಥರ ಬೇಡಿಕೆಯಂತೆ ನಬಾರ್ಡ್‌ 18ರ ಯೋಜನೆಯಲ್ಲಿ 4.90 ಕೋಟಿ ರೂ. ಅನುದಾನ ಸೇತುವೆ ನಿರ್ಮಾಣಕ್ಕೆ ಮಂಜೂರಾಗಿತ್ತು. ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಿರೇಕೆರೂರು ತಾಲೂಕಿಗೆ ಆಗಮಿಸಿ, ಸೇತುವೆ ನಿರ್ಮಾಣಕ್ಕೆ ಚಾಲನೆ ಸಹ ನೀಡಿದ್ದರು. ಈ ವೇಳೆ ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿತ್ತು. ತಮ್ಮ ಬವಣೆ ನೀಗಬಹುದೆಂಬ ನಿರೀಕ್ಷೆ ಇತ್ತು. ಈಗ ಸೇತುವೆ ಕಾಮಗಾರಿ ಸಂಪೂರ್ಣ ಮುಗಿದಿದೆ. ಆದರೆ ಸೇತುವೆ ಮುಂಭಾಗದ ರಸ್ತೆ ನಿರ್ಮಾಣವಾಗದ ಕಾರಣಕ್ಕೆ ಸೇತುವೆ ಇದ್ದೂ ಅದರಿಂದ ಉಪಯೋಗವಿಲ್ಲದಂತಾಗಿದೆ. ಶಾಲಾಮಕ್ಕಳು ತುಂಬಿ ಹರಿಯುತ್ತಿರುವ ನದಿಯಲ್ಲಿಯೇ ಭಯದಿಂದಲೇ ತೆಪ್ಪದಲ್ಲಿ ಓಡಾಟ ನಡೆಸಿದ್ದಾರೆ. ಇನ್ನು ಈ ಗ್ರಾಮದಲ್ಲಿ ರೋಗಿಗಳ ಪಾಡಂತು ಹೇಳತೀರದು.

ಇದನ್ನೂ ಓದಿ : ಗುಡ್ ನ್ಯೂಸ್ | ಸ್ವಂತ ಖರ್ಚಿನಲ್ಲಿ ಗದಗ ಜನರ ದಾಹ ನೀಗಿಸುತ್ತಿರುವ ಡಾಕ್ಟರ್ ನೀತಾ

ಸದ್ಯ ಮಳೆಗಾಲವಾಗಿದ್ದು, ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಅನ್ಯಮಾರ್ಗವಿಲ್ಲದೆ, ಅಪಾಯವನ್ನು ಸಹ ಲೆಕ್ಕಿಸದೇ ಜನರು, ಶಾಲಾ ಮಕ್ಕಳು ನದಿ ದಾಟುತ್ತಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More