4 ಬಾರಿ ಅರ್ಜಿ ಕೊಟ್ಟರೂ ಸಿಗದ ಆಶ್ರಯ ಮನೆ; ಇಳಿವಯಸ್ಸಿನಲ್ಲಿ ಮಹಿಳೆಯ ಪರದಾಟ

66 ವರ್ಷದ ಈ ತಾಯಿಗೆ ಹಾಸಿಗೆ ಹಿಡಿದ ಮಗನದ್ದೇ ಚಿಂತೆ. ತಾನು ಇಲ್ಲವಾದರೆ ಮಗನ ಕತೆ ಏನೆಂದು ನಿತ್ಯವೂ ಕಣ್ಣೀರಿಡುತ್ತಾರೆ. ವೃದ್ಧಾಪ್ಯವೇತನ, ಅಂಗವಿಕಲ ವೇತನದಿಂದಲೇ ಜೀವನ. ಸರ್ಕಾರದ ಸೂರಂತೂ ಗಗನಕುಸುಮ. ಜನಪ್ರತಿನಿಧಿಗಳು ಇನ್ನಾದರೂ ಈ ಗೋಳಾಟಕ್ಕೆ ಅಂತ್ಯ ಹಾಡುವರೇ?

ಬಾಲ್ಯದಿಂದಲೂ ಆಡಿ ಕುಣಿದು ಕುಪ್ಪಳಿಸಿದ ಮಕ್ಕಳ ತುಂಟಾಟದಲ್ಲಿ ತಂದೆ-ತಾಯಿಗೆ ಅದೆನೋ ಸಂಭ್ರಮ. ತುತ್ತುಣಿಸಿ, ಮಗನನ್ನು ಹೊತ್ತು ತಿರುಗಿಸಿದ ಹೆಗಲ ಭಾರಕ್ಕೆ ತನ್ನ ಮಗ ಹೆಗಲು ನೀಡುವ ನಿರೀಕ್ಷೆ. ಆದರೆ, 37 ವರ್ಷದವನಾದರೂ ಮಗ ಹೆಗಲಿಗೆ ಹೆಗಲು ಕೊಡುವುದಿರಲಿ, ಹಾಸಿಗೆ ಬಿಟ್ಟೇ ಮೇಲೆದ್ದಿಲ್ಲ. ತನ್ನ ನಿರೀಕ್ಷೆ ಹುಸಿಯಾಯಿತಲ್ಲ ಎಂದು ಮುನಿಸಿಕೊಂಡು ತಂದೆ ಮನೆ ತೊರೆದು ದಶಕವಾಯಿತು. ಪಾಪ ಬಡಜೀವ ತಾಯಿ, ಮುಪ್ಪಿನಲ್ಲಿ ಬೊಗಸೆಯಷ್ಟು ಆಸೆಯ ಮುಷ್ಟಿ ಗಟ್ಟಿ ಮಾಡಿ ಬದುಕುತ್ತಿದ್ದಾರೆ.

ಇದು ಗದಗ ತಾಲೂಕಿನ ಹುಲಕೋಟಿ ಗ್ರಾಮದ ಕುರಣಿ ಕುಟುಂಬದ ಕರಳು ಹಿಂಡುವ ಕತೆ. ತಂದೆ-ತಾಯಿಗೆ ಆಸರೆಯಾಗಬೇಕಿದ್ದ ಮಗ ಸುರೇಶ್ ಕುರಣಿ ಹಾಸಿಗೆ ಹಿಡಿದು 37 ವರ್ಷವಾಯಿತು. ಮಗನ ಸ್ಥಿತಿಯಿಂದ ಮುನಿದ ಆತನ ತಂದೆ ಮನೆ ಬಿಟ್ಟು ಹೋಗಿ ಹತ್ತು ವರ್ಷವಾಗಿದೆ. ಹೀಗಾಗಿ, ಕುಟುಂಬದ ಜವಾಬ್ದಾರಿಗೆ ವೃದ್ಧ ತಾಯಿಯೇ ಹೆಗಲು ಕೊಟ್ಟಿದ್ದಾರೆ. ಹುಲಕೋಟಿಯ ಗಣೇಶ ನಗರದ ಬಾಡಿಗೆ ಮನೆಯೊಂದರಲ್ಲಿ ಸುರೇಶ್ ಹಾಗೂ ಶಾರದಮ್ಮ ವಾಸಿಸುತ್ತಿದ್ದಾರೆ. 42 ವರ್ಷದ ಸುರೇಶನಿಗೆ ಹಾಸಿಗೆಯೇ ಪ್ರಪಂಚ. ಇದರಿಂದ ಬದುಕಿನ ಭರವಸೆ ಕಳೆದುಕೊಂಡಿದ್ದಾನೆ.

ಶಾರದಾ ಹಾಗೂ ನೀಲಕಂಠಪ್ಪರ ಮಗ ಸುರೇಶ 5 ವರ್ಷದವನಿದ್ದಾಗ ಕಾಣಿಸಿಕೊಂಡ ಜ್ವರದಿಂದ ಕೈ ಮತ್ತು ಕಾಲು ಸಾಧೀನ ಕಳೆದುಕೊಂಡವು. ಮಗನ ಚಿಕಿತ್ಸೆಗೆ ದಂಪತಿ ಇನ್ನಿಲ್ಲದ ಪ್ರಯತ್ನಪಟ್ಟರೂ ಪ್ರಯೋಜನ ಆಗಲಿಲ್ಲ. ಸದ್ಯ 66 ವರ್ಷದ ತಾಯಿಜೀವಕ್ಕೆ ಮಗನದ್ದೇ ಚಿಂತೆ. ತಾನು ಇಉಲ್ಲವಾದ ನಂತರ ಮಗನ ಕತೆ ಏನೆಂದು ನಿತ್ಯವೂ ಕಣ್ಣೀರಿಡುತ್ತಿದ್ದಾರೆ ಅವರು.

ಸೂರಿಗಾಗಿ ಸುತ್ತಿ ಸುಸ್ತು

ಈ ಇಬ್ಬರಿಗೂ ಸರ್ಕಾರದಿಂದ ಬರುವ ವೃದ್ಧಾಪ್ಯ ಹಾಗೂ ಅಂಗವಿಕಲ ಮಾಶಾಸನವಷ್ಟೆ ಈ ಬಡ ಕುಟುಂಬಕ್ಕೆ ಆಧಾರ. ಬರುವ 1,900 ರೂಪಾಯಿಯಲ್ಲೇ 1,100 ರು.ಗಳನ್ನು ಮನೆಯ ಬಾಡಿಗೆಗೆ ಖರ್ಚು ಮಾಡುತ್ತಾರೆ. ಕುಟುಂಬ ನಿರ್ವಹಣೆಗೆ‌ ಉಳಿಯುವುದು 800 ರುಪಾಯಿಯಷ್ಟೇ! ಇಷ್ಟು ವರ್ಷದಿಂದ ಸ್ವಂತ ಸೂರಿಗಾಗಿ ಸುತ್ತಿದರೂ ಏನೂ ಪ್ರಯೋಜನವಾಗಿಲ್ಲ. “ಕುಟುಂಬದ ಪರಿಸ್ಥಿತಿ ಗೊತ್ತಿದ್ದೂ, ಪಂಚಾಯತಿಯವರು ಮನೆ ಕೊಟ್ಟಿಲ್ಲ,” ಎಂದು ಅಸಹಾಯಕರಾಗಿ ಕಣ್ಣೀರಿಡುತ್ತಾರೆ ವೃದ್ಧ ತಾಯಿ ಶಾರದಮ್ಮ.

ಬುದ್ದಿ ಬಂದಾಗಿನಿಂದಲೂ ನಾನು ಹಾಸಿಗೆಯಲ್ಲಿದ್ದೇನೆ. ಶಕ್ತಿ ಇದ್ದಾಗ ನಮ್ಮವ್ವ ಕೂಲಿ ಮಾಡಿ ಸಾಕಿದಳು. ಈಗ ತನಗೆ ಮಂಡಿ ನೋವು, ರಕ್ತದೊತ್ತಡ ಇದ್ದರೂ ನನ್ನನ್ನು ಸಲಹುತ್ತಿದ್ದಾಳೆ. ಇಷ್ಟು ವರ್ಷದಿಂದ ನಾನು ನನ್ನ ತಾಯಿಗೆ ಕಣ್ಣೀರು ಬಿಟ್ಟರೆ ಬೇರೆನೂ ಕೊಟ್ಟಿಲ್ಲ.
ಸುರೇಶ್, ವಿಕಲಾಂಗ
ಆಶ್ರಯ ಮನೆಗಾಗಿ ನಾವು ನಾಲ್ಕು ಬಾರಿ ನನ್ನ ಮಗನ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದೇನೆ. ಅರ್ಜಿ ಸಲ್ಲಿಸಿದರೂ ಈತನಕ ನಮಗೆ ಮನೆ ಮಂಜೂರಾಗಿಲ್ಲ. ಒಂದೆಡೆ ಬಡತನ, ಮತ್ತೊಂದೆಡೆ ಮಗನ ಮುಂದಿನ ಭವಿಷ್ಯ ನೆನೆದು ದಿಕ್ಕು ತೋಚದಂತಾಗಿದೆ.
ಶಾರದಾ, ತಾಯಿ 
ಹುಲಕೋಟಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ 180 ಆಶ್ರಯ ಮನೆ ಮಂಜೂರಾಗಿವೆ. ಸದ್ಯ ಅರ್ಜಿ ಸಲ್ಲಿಕೆಯಾಗಿದ್ದು 110 ಮಾತ್ರ. ನಿವೇಶನ ಕೊರತೆಯಿಂದ ಗುರಿ ತಲುಪಲು ಸಾಧ್ಯವಾಗಿಲ್ಲ. ಕುರಣಿ ಕುಟುಂಬಕ್ಕೆ ನಿವೇಶನ ಇಲ್ಲದಿರುವುದರಿಂದ ಮನೆ ಮಂಜೂರು ಮಾಡಲು ವಿಳಂಬವಾಗಿದೆ. ಗ್ರಾಮ ಪಂಚಾಯಿತಿಯಿಂದ ಜಮೀನು ಖರೀದಿಸಿದ ಕೂಡಲೇ ಆಶ್ರಯ ಮನೆ ಮಂಜೂರು ಮಾಡಲಾಗುವುದು. 
ಭೂಸರಡ್ಡಿ, ಹುಲಕೋಟಿ ಗ್ರಾಪಂ ಪಿಡಿಒ
ಇದನ್ನೂ ಓದಿ : ಗುಡ್ ನ್ಯೂಸ್ | ಸ್ವಂತ ಖರ್ಚಿನಲ್ಲಿ ಗದಗ ಜನರ ದಾಹ ನೀಗಿಸುತ್ತಿರುವ ಡಾಕ್ಟರ್ ನೀತಾ

ಇಂದಿನ ದಿನಮಾನದಲ್ಲಿ ತಾಯಿ ಮತ್ತು ಮಗ ಇಬ್ಬರೇ ಇದ್ದರೂ, ಒಂದು ಬಡ ಕುಟುಂಬ 800 ರೂಪಾಯಿಯಲ್ಲಿ ಜೀವನ ಸಾಗಿಸುವುದು ಸಾಧ್ಯವೇ? ಗ್ರಾಮ ಪಂಚಾಯತಿ ಈತನಕ ಈ ಕುಟುಂಬಕ್ಕೆ ಮನೆ ನೀಡಿಲ್ಲ. ಕಣ್ಣೆದುರಿನ ಈ ಪ್ರಯಾಸದ ಬದುಕಿನ ಬಗ್ಗೆ ಗೊತ್ತಿದ್ದರೂ ಗ್ರಾಮದ ಆಡಳಿತ ನಡೆಸುವ ಗ್ರಾಮ ಪಂಚಾಯಿತಿಗೆ ಸ್ವಲ್ಪವೂ ಮಾನವೀಯತೆ ಇಲ್ಲದಂತಾಯಿತೇ ಎಂಬ ಪ್ರಶ್ನೆ ಎದ್ದಿದೆ. ನಾಲ್ಕು ದಶಕದ ಹೊಸ್ತಿಲಲ್ಲಿರುವ ಈ ಕುಟುಂಬದ ಗೋಳಾಟಕ್ಕೆ ಇನ್ನಾದರೂ ಮುಕ್ತಿ ಸಿಕ್ಕೀತೇ?

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More