ಇನ್ನಷ್ಟು ಜಟಿಲವಾಗುತ್ತಿದೆ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಪೂಜೆಯ ವಿವಾದ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ವಿವಾದ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇಗುಲದಲ್ಲಿ ರಸೀದಿ ಪಡೆದೇ ಸೇವೆ ಸಲ್ಲಿಸಬೇಕು ಎಂಬ ಆಡಳಿತ ಮಂಡಳಿ ನಿಲುವಿಗೆ ವಿರುದ್ಧವಾದ ಅಭಿಪ್ರಾಯ ಕೇಳಿಬಂದಿದ್ದು, ವಿವಾದ ತಾರಕಕ್ಕೇರಿದೆ

“ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೊರಗೆ ನಡೆಯುವ ನಾಗಪ್ರತಿಷ್ಠೆ, ಆಶ್ಲೇಷ ಬಲಿ, ಸರ್ಪ ಸಂಸ್ಕಾರ ಮುಂತಾದ ಪೂಜಾವಿಧಿಗಳು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವುದಿಲ್ಲ. ಹೀಗಾಗಿ, ಅದಕ್ಕೆ ತಡೆ ಒಡ್ಡಬಾರದು,” ಎಂದು ಕನ್ಯಾನ ಬಾಳಕೋಡಿಯ ಕಾಶಿ ಕಾಲಭೈರವೇಶ್ವರ ಕ್ಷೇತ್ರದ ಶಶಿಕಾಂತ ಮಣಿ ಸ್ವಾಮೀಜಿ ಅಭಿಪ್ರಾಯಪಡುವ ಮೂಲಕ ಮತ್ತೊಮ್ಮೆ ವಿವಾದ ಭುಗಿಲೆದ್ದಿದೆ.

ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಕುಮಾರಪರ್ವತದಿಂದ ಹಿಡಿದು ಕುಮಾರಧಾರಾ ನದಿಯವರೆಗೆ ಎಲ್ಲವೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಹೀಗಿರುವಾಗ, ದೇವಸ್ಥಾನದ ಹೊರಗೆ ನಡೆಯುವ ಪೂಜೆ ಸರ್ಕಾರದ ಕಾನೂನಿಗೆ ಒಳಪಡುವುದಿಲ್ಲ. ಹೀಗೆ, ತಡೆ ಒಡ್ಡುವುದು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ವಿಚಾರ. ದತ್ತಿ ಇಲಾಖೆ ಮುಖ್ಯಸ್ಥರೂ ಆಗಿರುವ ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.

“ವಿನಾಕಾರಣ ಸುಬ್ರಹ್ಮಣ್ಯ ಸಂಪುಟ ನರಸಿಂಹಸ್ವಾಮಿ ಮಠದ ವಿದ್ಯಾ ಪ್ರಸನ್ನ ಸ್ವಾಮೀಜಿ ಅವರನ್ನು ವಿವಾದದಲ್ಲಿ ಸಿಲುಕಿಸಲಾಗುತ್ತಿದೆ. ಸ್ವಾಮೀಜಿಯವರು ಇಂತಹ ಪೂಜೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ. ಇದು ಸರಿಯಲ್ಲ. ನರಸಿಂಹಸ್ವಾಮಿ ದೇವರು ಹಾಗೂ ಸುಬ್ರಹ್ಮಣ್ಯ ದೇವರ ರಥೋತ್ಸವಗಳು ಈ ಹಿಂದೆ ಒಟ್ಟಿಗೆ ನಡೆಯುತ್ತಿದ್ದವು. ಆದರೆ, ಕೆಲವು ಕಾರಣಗಳಿಗೆ ಅದನ್ನು ಕೈಬಿಡಲಾಗಿದೆ,” ಎಂದೂ ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನದ ಅಧೀನದಲ್ಲಿ ಯಾವುದೇ ಮಠ, ಮಂದಿರ ಇತರ ಶಾಖೆ ಉಪಶಾಖೆಗಳಿಲ್ಲ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ ಇತ್ತೀಚೆಗೆ ಹೇಳಿಕೆ ನೀಡಿತ್ತು. “ದೇವಳದ ಅಧಿಕೃತ ರಸೀದಿ ಹೊರತಾಗಿ ಯಾವುದೇ ಮಠ ಮಂದಿರ, ನದಿ ತೀರ, ಕಲ್ಯಾಣ ಮಂಟಪ ಇತ್ಯಾದಿ ಕಡೆಗಳಲ್ಲಿ ನಡೆಸುವ ಸೇವೆಗಳು ಖಾಸಗಿ. ಈ ಸೇವೆಗಳು ಸುಬ್ರಹ್ಮಣ್ಯ ದೇವರಿಗೆ ಸಂದಾಯವಾಗಲಾರದು,” ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿತ್ತು.

‘ದಿ ಸ್ಟೇಟ್’ ಜೊತೆ ಮಾತನಾಡಿದ ಆಡಳಿತ ಮಂಡಳಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, “ದೇವಸ್ಥಾನದಲ್ಲಿ ಅನಧಿಕೃತವಾಗಿ ಪೂಜೆಗಳು ನಡೆಯುತ್ತಿವೆ ಎಂದು ಮಾಧ್ಯಮಗಳಲ್ಲಿ ಈ ಹಿಂದೆ ಪ್ರಸಾರವಾಗಿತ್ತು. ಅದು ಸರ್ಕಾರಕ್ಕೆ ತಪ್ಪು ಸಂದೇಶ ನೀಡಿತು. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇಗುಲದಲ್ಲಿ ಅನಧಿಕೃತವಾಗಿ ಪೂಜೆ ನಡೆಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಯಿತು. ಕಡೆಗೆ, ಸುದ್ದಿಗೋಷ್ಠಿ ನಡೆಸಿ ನಾವು ಹೇಳಿಕೆ ನೀಡಿ, ಸುಬ್ರಹ್ಮಣ್ಯ ದೇವಸ್ಥಾನ ನೀಡುವ ಸೌಲಭ್ಯಗಳ ಕುರಿತು ವಿವರಿಸಿದ್ದೇವೆ. ಮಠದಲ್ಲಿ ನಡೆಯುವ ಪೂಜೆಯು ಮಠ, ದೇವರು ಹಾಗೂ ಭಕ್ತರಿಗೆ ಬಿಟ್ಟ ವಿಚಾರ,” ಎಂದು ಹೇಳಿದರು.

“ಪೂಜೆಗೆಂದು ಬರುವವರಿಗೆ ಸುಬ್ರಹ್ಮಣ್ಯ ದೇವಸ್ಥಾನ ಯಾವುದು, ಮಠ ಯಾವುದು ಎಂದು ಗೊತ್ತಿರುವುದಿಲ್ಲ. ಕೆಲವರು ಮಠದಲ್ಲಿ ಪೂಜೆ ಮಾಡಿದ ಬಳಿಕ ಇಲ್ಲಿ ಪೂಜೆ ಮಾಡಿದ್ದರೆ ಅನುಕೂಲವಾಗುತ್ತಿತ್ತು ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಹೀಗಾಗಿ, ಗೊಂದಲ ಬೇಡ ಎಂಬ ಕಾರಣಕ್ಕೆ ಈ ಹಿಂದೆ ಪತ್ರಿಕಾ ಹೇಳಿಕೆ ನೀಡಲಾಗಿತ್ತು. ಅಲ್ಲಿ ಪೂಜೆ ಮಾಡಬಾರದು ಎಂದು ನಾನು ಹೇಳಲು ಸಾಧ್ಯವೂ ಇಲ್ಲ, ಅದು ಸರಿಯೂ ಅಲ್ಲ. ಆದರೆ, ಭಕ್ತರಲ್ಲಿ ಗೊಂದಲ ಮೂಡಬಾರದು ಎಂಬ ಕಾರಣಕ್ಕೆ ನಾವು ಪತ್ರಿಕಾ ಹೇಳಿಕೆ ನೀಡಿದೆವು. ನಾವು ಯಾರ ವಿರುದ್ಧವೂ ಸಂಘರ್ಷಕ್ಕೆ ಇಳಿದಿಲ್ಲ. ಸ್ವಾಮೀಜಿಯವರೊಂದಿಗೂ ನಿರಂತರ ಮಾತುಕತೆ ಮಾಡುತ್ತಲೇ ಇರುತ್ತೇವೆ,” ಎಂದು ಹೇಳಿದ್ದಾರೆ.

“ದೇವಸ್ಥಾನದ ಆವರಣದಲ್ಲಿಯೇ ಸಂಪುಟ ನರಸಿಂಹ ಸ್ವಾಮಿ ಮಠ ಇದೆ. ನರಸಿಂಹ ಸ್ವಾಮಿ ರಥೋತ್ಸವ ನಡೆಸದೆ ಇರುವುದು ಈಗ ಕೈಗೊಂಡ ತೀರ್ಮಾನವಲ್ಲ. ಬಹಳಷ್ಟು ಹಿಂದಿನಿಂದಲೂ ದೇವಸ್ಥಾನ ಹಾಗೂ ಮಠದ ನಡುವೆ ವಿವಾದವಿದೆ. 1978ರಲ್ಲಿ ಎರಡೂ ಕಡೆಯವರು ಒಂದು ಇತ್ಯರ್ಥಕ್ಕೆ ಬಂದು ಗೊಂದಲ ಬಗೆಹರಿಸಲಾಗಿತ್ತು,” ಎಂದಿದ್ದಾರೆ.

‘ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ದೇವಸ್ಥಾನ ಒಳಪಟ್ಟ ಬಳಿಕ ಮಠಕ್ಕೆ ಆದಾಯ ಬರುವುದು ಕಡಿಮೆಯಾಯಿತು. ನಂತರ ಮಠವು ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಯಿತು’ ಎಂಬ ಮಾತುಗಳೂ ಕೇಳಿಬರುತ್ತಿವೆ. 'ದಿ ಸ್ಟೇಟ್’ ಈ ಬಗ್ಗೆ ಮಠಾಧೀಶ ವಿಶ್ವಪ್ರಸನ್ನ ಸ್ವಾಮೀಜಿಯವರನ್ನು ಪ್ರಶ್ನಿಸಿದಾಗ, “ಮಧ್ವಾಚಾರ್ಯರು ಸ್ಥಾಪನೆ ಮಾಡಿದ ಮಠಕ್ಕೆ ಎಂಟುನೂರು ವರ್ಷಗಳ ಪರಂಪರೆ ಇದೆ. ನೂರಾರು ವರ್ಷ ಮಠವೇ ದೇವಸ್ಥಾನದ ಆಡಳಿತ ನಡೆಸಿದೆ. ಈಗ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತಿದೆ ಎಂಬ ಕಾರಣಕ್ಕೆ ಮಠವನ್ನು ದ್ವೇಷ ಮಾಡಬಾರದು. ಕೆಲವರು ಮಠದ ಪೂಜೆ ಅನಧಿಕೃತ ಎಂಬ ಆರೋಪ ಮಾಡುತ್ತಿದ್ದಾರೆ. ಇಂತಹ ಪೂಜೆ ಈಗ ನಡೆದದ್ದಲ್ಲ. ನೂರಾರು ವರ್ಷಗಳ ನಂಬಿಕೆ, ಪರಂಪರೆಗಳು ಇದರಲ್ಲಿ ಹಾಸುಹೊಕ್ಕಾಗಿವೆ. ರಸೀದಿ ನೀಡುವುದರಿಂದ ಪೂಜೆ ಪುನಸ್ಕಾರಗಳು ಪಾರದರ್ಶಕವಾಗಿ ನಡೆಯುತ್ತಿವೆ. ಹೀಗಿರುವಾಗ ವ್ಯಕ್ತಿಗಳ ತೇಜೋವಧೆ ಮಾಡುವುದು ಸಂಸ್ಥಾನಕ್ಕೆ (ಮಠ) ಅಪಚಾರ ಎಸಗುವುದು ಸನಾತನ ಸಂಸ್ಕೃತಿಗೆ ಧಕ್ಕೆ ಉಂಟು ಮಾಡುತ್ತಿದೆ. ಇದರಿಂದ ನಮಗೆ ತುಂಬಾ ನೋವುಂಟಾಗಿದೆ,” ಎಂದು ಹೇಳಿದ್ದಾರೆ.

“ಸುಮ್ಮನೆ ವಿವಾದ, ಗೊಂದಲ ಏಕೆ ಎಂದು ನಾನು ಸುದ್ದಿಗೋಷ್ಠಿ ನಡೆಸುವ ಗೋಜಿಗೆ ಹೋಗಿರಲಿಲ್ಲ. ಮಠದ ವಿರುದ್ಧ ಹೆಚ್ಚುತ್ತಿರುವ ಅಪಪ್ರಚಾರದ ಬಗ್ಗೆ ನೊಂದಂತಹ ಅಭಿಮಾನಿಗಳು ಬೇಸರದಿಂದ ಪತ್ರಿಕಾಗೋಷ್ಠಿ ಮಾಡುತ್ತಿದ್ದಾರೆ,” ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

“ದೇವಸ್ಥಾನದವರು ಕೂಡ ದೇಗುಲದ ಒಳಗೆ ವಿಶೇಷ ಪೂಜೆಗಳನ್ನು ನಡೆಸುವುದಿಲ್ಲ. ಬದಿಯಲ್ಲಿರುವ ಶೃಂಗೇರಿ ಮಠದಲ್ಲಿ ಅಂತಹ ಪೂಜೆಗಳು ನಡೆಯುತ್ತವೆ. ಮಠವೂ ದೇವಸ್ಥಾನದ ಹೊರಗೆಯೇ ಪೂಜೆ ಮಾಡುತ್ತಿದೆ. ಹಾಗಿರುವಾಗ, ನಾವು ಮಾಡುವುದು ಮಾತ್ರ ತಪ್ಪು, ಬೇರೆಯವರು ಮಾಡುವುದು ಸರಿ ಎನ್ನುವುದಕ್ಕೆ ಕಾರಣ ಬೇಕು. ಸುಬ್ರಹ್ಮಣ್ಯ ಮಠ ಎಂದು ನಾವು ಉಲ್ಲೇಖಿಸಲು ಕೂಡ ಆಕ್ಷೇಪ ವ್ಯಕ್ತವಾಗುತ್ತಿದೆ. ಮೊದಲಿನಿಂದಲೂ ಮಠಗಳ ಹೆಸರು ಊರಿನೊಂದಿಗೆ ತಳಕು ಹಾಕಿಕೊಂಡಿದೆ. ಹೀಗಿರುವಾಗ ಸುಬ್ರಹ್ಮಣ್ಯ ಎಂಬುದು ಊರಿನ ಹೆಸರೇ ವಿನಾ ದೇಗುಲದ ಹೆಸರಲ್ಲ. ಜನ ವ್ಯವಹಾರದ ಅನುಕೂಲಕ್ಕಾಗಿ ಹೀಗೆ ಹೆಸರು ಬಳಸುತ್ತ ಬಂದಿದ್ದಾರೆಯೇ ಹೊರತು ಮಠಾಧೀಶರು ಇಟ್ಟ ಹೆಸರುಗಳಲ್ಲ ಇವು,” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಅವರು ಮಾಡುವ ಸೇವೆಯನ್ನೇ ನಾವೂ ಮಾಡಿದಾಗ ಸ್ಪರ್ಧೆ ನೀಡಿದಂತಾಗುತ್ತದೆ. ಅವರು ಮಾಡುವ ಸೇವೆಗಳು ಸಾಮೂಹಿಕವಾಗಿ ನಡೆಯುವಂತಹವು. ನಾವು ಪ್ರತ್ಯೇಕ ಪೂಜೆಗಳನ್ನು ನಡೆಸುತ್ತೇವೆಯೇ ವಿನಾ ಸಾಮೂಹಿಕಗೊಳಿಸುವುದಿಲ್ಲ. ಹೀಗಾಗಿ, ಜನಸಾಮಾನ್ಯರನ್ನು ದಿಕ್ಕು ತಪ್ಪಿಸುವುದು ಸಾಧ್ಯವೇ ಇಲ್ಲ. ಕುಕ್ಕೆಗೆ ಬರುವ ಭಕ್ತರಿಗೆ ಮಠಕ್ಕೂ ಮೊದಲೇ ದೇವಸ್ಥಾನ ಸಿಗುತ್ತದೆ. ಸಾಮಾನ್ಯ ಜ್ಞಾನ ಏನು ಎಂದರೆ ಕಡಿಮೆ ಖರ್ಚಿನಲ್ಲಿ ಪೂಜೆ ನಡೆಯುವ ಕಡೆಗೇ ಎಲ್ಲರೂ ಹೋಗುತ್ತಾರೆ ವಿನಾ ಹೆಚ್ಚಿನ ಹಣ ನೀಡಿ ಪೂಜೆ ಮಾಡಿಸಲು ಯಾರೂ ಮುಂದಾಗುವುದಿಲ್ಲ. ಹೆಚ್ಚಿನ ಖರ್ಚಾಗುತ್ತದೆ ಎಂದು ತಿಳಿದಿದ್ದವರಷ್ಟೇ ಮಠದಲ್ಲಿ ಪೂಜೆ ನಡೆಸುತ್ತಾರೆ ಹೊರತು, ಏಜೆಂಟರು-ಬ್ರೋಕರುಗಳನ್ನು ಇಟ್ಟು ಪೂಜೆ ಮಾಡಿಸುತ್ತೇವೆ ಎನ್ನುವುದು ಸುಳ್ಳು. ನಾವೆಲ್ಲೂ ಫಲಕಗಳನ್ನು ಹಾಕಿಲ್ಲ, ಗೊಂದಲ ಸೃಷ್ಟಿಸುತ್ತಿಲ್ಲ,” ಎನ್ನುತ್ತಾರೆ.

ಆದರೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ಮುಖಂಡ ಮೋನಪ್ಪ ಮಾನಾಡ್ ಮಂಡಿಸುವ ವಾದವೇ ಬೇರೆ. ಅವರು ಹೇಳುವಂತೆ, “ಆಶ್ಲೇಷ ಬಲಿ, ನಾಗ ಪ್ರತಿಷ್ಠೆ, ಸರ್ಪ ಸಂಸ್ಕಾರ ಎನ್ನುವುದು ಸುಬ್ರಹ್ಮಣ್ಯ ದೇವರಿಗೆ ಸಲ್ಲುವ ಸೇವೆ. ಈ ಮೂರು ಸೇವೆಗಳಿಗೆ ದೇವಸ್ಥಾನದಲ್ಲಿ 3,600 ರೂಪಾಯಿ ಮಾತ್ರ ಖರ್ಚಾಗುತ್ತದೆ. ಅದೇ ಪಕ್ಕದ ಮಠದಲ್ಲಿ 25ರಿಂದ 30 ಸಾವಿರ ದರ ನಿಗದಿಪಡಿಸಿ ಲೂಟಿ ಮಾಡಲಾಗುತ್ತಿದೆ. ಯಾವುದೇ ದೇವಸ್ಥಾನದಲ್ಲಿ ಪ್ರತ್ಯೇಕ ಸೇವೆ ನಡೆಸುವ ಅವಕಾಶವಿಲ್ಲ. ಹಾಗೇನಿದ್ದರೂ ಪ್ರತ್ಯೇಕ ಪೂಜೆ ಸಲ್ಲಿಸಬೇಕಿದ್ದರೆ ಅವರವರ ಮನೆಯಲ್ಲಿ ಮಾಡಬೇಕು. ಭಕ್ತರನ್ನು ಕರೆತರಲು ಪ್ರತ್ಯೇಕ ಬ್ರೋಕರುಗಳನ್ನು, ಏಜೆಂಟರುಗಳನ್ನಿರಿಸಿ ಪ್ರತಿ ಪೂಜೆಗೆ ಅವರಿಗೆ ಹಣ ಕೂಡ ನಿಗದಿ ಮಾಡಲಾಗಿದೆ. ಜ್ಯೋತಿಷಿಗಳು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ. ಇಷ್ಟೆಲ್ಲ ಖರ್ಚು ಮಾಡಿದರೂ ದೋಷ ನಿವಾರಣೆಯಾಗಲಿಲ್ಲ ಎಂದು ಭಕ್ತಾದಿಗಳು ಮತ್ತೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ. ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಅಷ್ಟಮಂಗಲದ ಪ್ರಶ್ನೆ ವೇಳೆ ಕೂಡ ‘ಬೇರೆಲ್ಲಿ ಪೂಜೆ ಮಾಡಿದರೂ ದೇವರಿಗೆ ತೃಪ್ತಿ ಇಲ್ಲ. ದೋಷ ನಿವಾರಣೆಯಾಗುವುದಿಲ್ಲ ಎಂಬ ಸಂದೇಶ ಬಂದಿದೆ. ನರಸಿಂಹ ದೇವರಿಗೆ ಸಲ್ಲಿಸುವ ಸೇವೆ ಸುಬ್ರಹ್ಮಣ್ಯ ದೇವರಿಗೆ ಸಲ್ಲುತ್ತದೆಯೇ ಎಂಬುದು ಸಾಮಾನ್ಯವಾಗಿ ಏಳುವ ಪ್ರಶ್ನೆ,” ಎನ್ನುತ್ತಾರೆ.

ಇದನ್ನೂ ಓದಿ : ಮತ್ತೆ ಚರ್ಚೆಗೆ ಬಂದ ಮಡೆಸ್ನಾನ ವಿವಾದ; ಸಮರ್ಥಕರ ಬತ್ತಳಿಕೆಯಲ್ಲಿ ಹೊಸ ಬಾಣ?

“ದೇವಸ್ಥಾನದಲ್ಲಿರುವ ಸೇವಾಪಟ್ಟಿ ಮಠದಲ್ಲಿ ಇಲ್ಲ. ಇದೊಂದು ಹಣ ಮಾಡುವ ದಂಧೆ. ಭಕ್ತರ ಸಂಕಷ್ಟದ ಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಮಠದ ಸ್ವಾಮೀಜಿ, ಅವರ ಸಹೋದರ ಸುದರ್ಶನ ಜೋಯಿಸ್ ಹಾಗೂ ಬೆಂಗಳೂರು ಮೂಲದ ಪ್ರಸನ್ನ ಎಂಬುವವರು ಸೇರಿಕೊಂಡು ಹಣ ಮಾಡುತ್ತಿದ್ದಾರೆ. ಏಜೆಂಟರನ್ನಿಟ್ಟು ಪೂಜೆ ನಡೆಸುತ್ತಿರುವುದಕ್ಕೆ ಸಾಕ್ಷ್ಯಗಳಿವೆ. ಇದರ ವಿರುದ್ಧ ಜನಜಾಗೃತಿ ಮೂಡಿಸಲು ನಮ್ಮ ವೇದಿಕೆ ರೂಪುಗೊಂಡಿದೆ. ನಾವು ಮಠ ಅಥವಾ ಸ್ವಾಮೀಜಿ ವಿರುದ್ಧ ಇಲ್ಲ. ಆದರೆ, ಸುಬ್ರಹ್ಮಣ್ಯ ದೇವರ ಹೆಸರಿನಲ್ಲಿ ವಂಚಿಸುವವರ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಇದರ ಬಗ್ಗೆ ಶೀಘ್ರದಲ್ಲಿಯೇ ದೊಡ್ಡ ಪ್ರತಿಭಟನೆ ನಡೆಸುತ್ತೇವೆ,” ಎಂದು ಎಚ್ಚರಿಕೆ ನೀಡಿದ್ದಾರೆ.

ವಿವಾದಗಳೇನೇ ಇರಲಿ, ಧಾರ್ಮಿಕ ಸೇವೆಗೆ ಬರುವವರನ್ನು ಯಾರೂ ಶೋಷಿಸಬಾರದು ಎಂಬುದು ಕೆಲವು ಭಕ್ತರ ಅಭಿಪ್ರಾಯ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More