ಫಸಲ್ ಬಿಮಾ ಅತ್ಯುತ್ತಮವಾಗಿ ಅಳವಡಿಸಿದ ಜಿಲ್ಲೆಗೇ ಸಿಗಲಿಲ್ಲ ಯೋಜನೆಯ ಲಾಭ!

ಬೀದರ್‌ಗೆ ಭೇಟಿ ನೀಡಿದ ಸಂದರ್ಭ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ, ‘ದೇಶದಲ್ಲೇ ಫಸಲ್ ಬಿಮಾ ಯೋಜನೆಯ ಅತ್ಯುತ್ತಮ ಲಾಭ ಪಡೆದ ಜಿಲ್ಲೆ ಬೀದರ್’ ಎಂದು ಪ್ರಶಂಸಿಸಿದ್ದರು. ಆದರೆ, ಜಿಲ್ಲೆಯ ರೈತರು ವಿಮೆ ಹಣ ಸಿಗಲಿಲ್ಲ ಎಂದು ಸಾಮೂಹಿಕ ಆತ್ಮಹತ್ಯೆಯ ಬೆದರಿಕೆ ಒಡ್ಡಿ ಪ್ರತಿಭಟಿಸುತ್ತಿದ್ದಾರೆ!

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಚಾರಕ್ಕೆಂದು ಬೀದರ್‌ಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರು, “ಜಿಲ್ಲೆಯ ರೈತರು ಫಸಲ್ ಬಿಮಾ ಯೋಜನೆಯನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ,” ಎಂದು ಪ್ರಶಂಸಿಸಿದ್ದರು. ಆದರೆ, ಗುರುವಾರದಂದು ಬೀದರ್ ಜಿಲ್ಲೆಯ ನೂರಾರು ರೈತರು ಫಸಲ್ ಬಿಮಾ ಯೋಜನೆಯ ಹಣ ಬಾರದ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೀಕಿನ ಕೋಸಂ ಗ್ರಾಮದ ರೈತರು ಪ್ರತಿಭಟನೆ ನಡೆಸಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ಆದರೆ ಮುಂದಿನ ೧೫ ದಿನಗಳ ಒಳಗೆ ವಿಮೆ ಹಣ ಬಾರದೆ ಇದ್ದಲ್ಲಿ ಸಾಮೂಹಿಕವಾಗಿ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆಯನ್ನೂ ನೀಡಿದ್ದಾರೆ.

2016-17ರಲ್ಲಿ ಕೋಸಂ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋಸಂ, ಅಲಿಯಂಬರ್, ನಾಗೂರ, ಹಾಲಿಹಿಪ್ಪರರ್ಗಾ, ಖಾಶೆಂಪೂರ ಸೇರಿದಂತೆ 5 ಗ್ರಾಮದ ನೂರಾರು ರೈತರು 1 ಲಕ್ಷಕ್ಕೂ ಅಧಿಕ ಹಣವನ್ನು ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಲ್ಲಿ ವಿಮೆ ಕಟ್ಟಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಬೀದರ್ಗೆ ಭೇಟಿ ನೀಡಿದ ಸಂದರ್ಭ ದೇಶದಲ್ಲೇ ಫಸಲ್ ವಿಮೆ ಯೋಜನೆಯ ಅತ್ಯುತ್ತಮ ಲಾಭ ಪಡೆದ ಜಿಲ್ಲೆ ಬೀದರ್ ಎಂದು ಪ್ರಶಂಸಿಸಿದ್ದರು.

ಆದರೆ ಈಗ ವಿಮೆಯ ಲಾಭ ಪಡೆಯುವ ಸಂದರ್ಭ ಬಂದಾಗ ರೈತರಿಗೆ ನಿರಾಶೆಯಾಗಿದೆ. ಕೋಸಂ ಗ್ರಾಮ ಪಂಚಾಯತ್ಗೆ ಕೋಡ್ ನಂಬರ್ ಬಂದಿಲ್ಲ ಎನ್ನುವ ಕಾರಣ ನೀಡಿ ಬ್ಯಾಂಕ್ ಅಧಿಕಾರಿಗಳು ವಿಮೆ ಹಣ ಬಿಡುಗಡೆ ಮಾಡುತ್ತಿಲ್ಲ. ಕೋಸಂ ಹೊಸ ಗ್ರಾಮ ಪಂಚಾಯತಿಯಾಗಿರುವ ಕಾರಣ ಅದಕ್ಕೆ ಇನ್ನೂ ಕೋಡ್ ನಂಬರ್ ಬಂದಿಲ್ಲ ಎನ್ನುವುದು ಅಧಿಕಾರಿಗಳ ವಾದ. ಐದು ಗ್ರಾಮದ ರೈತರು ಕಳೆದ ಎರಡು ವರ್ಷಗಳಿಂದ ಗ್ರಾಮ ಪಂಚಾಯತ್ಗೆ ಕೋಡ್ ನಂಬರ್ ನೀಡುವಂತೆ ಮುಖ್ಯಮಂತ್ರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಬೇಡಿಕೆ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ ಸಚಿವರು ಶಾಸಕರು ಎಲ್ಲರಿಗೂ ಪಂಚಾಯತಿಗೆ ಕೋಡ್ ನೀಡುವಂತೆ ಆಗ್ರಹಿಸಲಾಗಿದೆ. ಹಾಗಿದ್ದರೂ ಬಾಕಿ ಇರುವ 1 ಕೋಟಿ ರೂಪಾಯಿ ವಿಮೆ ಹಣ ಬಿಡುಗಡೆಯಾಗಿಲ್ಲ. ಇದೀಗ ಐದು ಗ್ರಾಮಗಳ ರೈತರು ಫಸಲ್ ಬಿಮಾ ಯೋಜನೆಯ ವಿಮೆ ಹಣ ನೀಡದೆ ಇದ್ದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡುವ ಬೆದರಿಕೆ ಒಡ್ಡಿದ್ದಾರೆ.

ರೈತರು ಸಾಮೂಹಿಕ ಆತ್ಮಹತ್ಯೆಗೆ ಬ್ಯಾನರ್ ನೊಂದಿಗೆ ಪ್ರತಿಭಟನೆ ಮಾಡುತ್ತಿರುವ ಸುದ್ದಿ ತಿಳಿದು ಹೆಚ್ಚುವರಿ ಎಸ್ಪಿ ಹರಿಬಾಬು, ಭಾಲ್ಕಿ ಡಿವೈಎಸ್ಪಿ ವಿನಾಯಕ ಹಾಗೂ ಜಿಲ್ಲಾಪಂಚಾಯತ್ ಸಿಇಓ ಡಾ ಸೆಲ್ವಂಮಣಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅವರು ರೈತರ ಮನವೊಲಿಸಿ ಸಮಸ್ಯೆ ಪರಿಹರಿಸಲು 15 ದಿನಗಳ ಗಡುವು ಕೇಳಿದ್ದಾರೆ.

“ಬೀದರ್ ಜಿಲ್ಲೆಯಲ್ಲಿ ಈಗಾಗಲೇ ಒಂದೂವರೆ ಲಕ್ಷ ರೈತರಿಗೆ ೧೫೦ ಕೋಟಿ ವಿಮೆ ಹಣವನ್ನು ಹಂಚಲಾಗಿದೆ. ಆದರೆ ಹತ್ತು ಗ್ರಾಂ ಪಂಚಾಯತ್‌ಗಳು ಹೊಸದಾಗಿ ರಚನೆಯಾಗಿವೆ. ಹೀಗಾಗಿ ಈ ಗ್ರಾಮ ಪಂಚಾಯತ್‌ಗಳ ಕೋಡ್ ನಂಬರ್ ಇನ್ನೂ ಬಂದಿಲ್ಲ. ಈ ಗ್ರಾಮ ಪಂಚಾಯತ್‌ ವ್ಯಪ್ತಿಗೆ ಬರುವ ಸುಮಾರು ೪೦೦೦ ಸಾವಿರ ರೈತರಿಗೆ ೮ ಕೋಟಿ ಹಣ ವಿಮೆ ಬರಬೇಕು. ಈ ಸಮಸ್ಯೆಯನ್ನು ೧೫ ದಿನಗಳ ಒಳಗೆ ಪರಿಹರಿಸುವುದಾಗಿ ರೈತರಿಗೆ ಭರವಸೆ ನೀಡುತ್ತೇವೆ,” ಎಂದು ಜಿಲ್ಲಾಪಂಚಾಯತ್ ಸಿಇಒ ಸೆಲ್ವಮಣಿ ಹೇಳಿದ್ದಾರೆ.

ಇದನ್ನೂ ಓದಿ : ರೈತರ ನೀರಾವರಿ ಜಮೀನಿನ ಬೆಳೆವಿಮೆಗೆ ಕತ್ತರಿ ಹಾಕಿದ ಫಸಲ್ ಬಿಮಾ

ರೈತರ ಪ್ರತಿಭಟನೆಯ ನಂತರ ಕೋಸಂ ಗ್ರಾಮದಲ್ಲಿ ಗ್ರಾಮಸ್ಥರಿಗಿಂತ ಪೊಲೀಸರೇ ಹೆಚ್ಚು ಕಾಣಿಸುತ್ತಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು , ಭಾಲ್ಕಿ ಡಿವೈಎಸ್ಪಿ ಸೇರಿದಂತೆ ಸುಮಾರು 300ಕ್ಕೂ ಅಧಿಕ ಪೊಲೀಸರು ಗ್ರಾಮದಲ್ಲಿ ಬಿಡಾರ ಹೂಡಿದ್ದಾರೆ. ತಹಸೀಲ್ದಾರ್, ಜಿಲ್ಲಾ ಪಂಚಾಯತ್ ಸಿಇಓ, ತಾಪಂ ಅಧಿಕಾರಿಗಳೂ ಸೇರಿದಂತೆ ಹಲವು ಅಧಿಕಾರಿಗಳು ಕೋಸಂ ಗ್ರಾಮದಲ್ಲಿ ಠಿಕಾಣಿ ಹೂಡಿ ರೈತರ ಸಮಸ್ಯೆಯ ಬಗ್ಗೆ ಚರ್ಚಿಸುತ್ತಿದ್ದಾರೆ. ಅಧಿಕಾರಿಗಳು ಸಮಸ್ಯೆಗೆ ಶೀಘ್ರವೇ ಪರಿಹಾರ ಕಲ್ಪಿಸುವ ಭರವಸೆಯನ್ನೂ ನೀಡಿದ್ದಾರೆ.

ಬ್ಯಾನರ್ ಮೇಲೆ ‘ಸಾಮೂಹಿಕ ಆತ್ಮಹತ್ಯೆ’ ಎಂಬ ಅಕ್ಷರಗಳನ್ನು ತೆಗೆದುಬಿಡಿ ಎಂದು ಪೊಲೀಸರು ರೈತರ ಮೇಲೆ ಎಷ್ಟೇ ಒತ್ತಡ ಹಾಕಿದರೂ ರೈತರು ಬಗ್ಗಲಿಲ್ಲ. ನ್ಯಾಯ ಕೊಟ್ಟ ನಂತರವೇ ಬ್ಯಾನರ್ ತೆಗೆಯಲಾಗುವುದು ಎಂದು ರೈತರು ಹಠ ಹಿಡಿದಿದ್ದಾರೆ. ಈ ಬಾರಿ ಸಮಸ್ಯೆ ಪರಿಹಾರವಾಗದೆ ಇದ್ದಲ್ಲಿ ಬೆಂಗಳೂರಿನಲ್ಲಿ ವಿಧಾನಸೌದದ ಮುಂದೆ ಹೋರಾಟ ನಡೆಸುವುದಾಗಿ ರೈತರು ಹೇಳಿದ್ದಾರೆ.

ಚಿತ್ರ: ಇಂಡಿಯನ್ ಎಕ್ಸ್‌ಪ್ರೆಸ್

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More