ಅನುಮಾನಗಳಿಗೆ ಎಡೆಮಾಡಿಕೊಟ್ಟ ಮಾಲೂರಿನ ಬಾಲಕಿ ಕೊಲೆ ಪ್ರಕರಣ

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಬಿಗಿಯಾಗುತ್ತಿರುವ ಹೊತ್ತಲ್ಲೇ ಮಾಲೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿ ಕೊಲೆ ಪ್ರಕರಣ ನಡೆದಿದೆ. ಈ ಸಂಬಂಧ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು 2 ದಿನದಿಂದ ಪ್ರತಿಭಟನೆ ನಡೆಸಿದ್ದು, ಅ.6ರಂದು ತಾಲೂಕು ಬಂದ್ ಕರೆಗೆ ನೀಡಲು ಮುಂದಾಗಿವೆ

ಬಾಲಕಿಯರ ಮೇಲಿನ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನುಗಳು ಬಿಗಿಯಾಗುತ್ತಿರುವ ಹೊತ್ತಲ್ಲೇ ನಾಗರಿಕ ಸಮಾಜ ನಾಚಿಕೆಪಡುವಂತಹ ಘಟನೆಗಳು ಮತ್ತೆ-ಮತ್ತೆ ವರದಿಯಾಗುತ್ತಲೇ ಇವೆ. ಎರಡು ದಿನಗಳ ಹಿಂದೆ ಮಾಲೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಎರಡು ದಿನದಿಂದ ಪ್ರತಿಭಟನೆ ನಡೆಸಿದ್ದು, ಅ.೬ರಂದು ತಾಲೂಕು ಬಂದ್‌ಗೆ ಕರೆ ನೀಡಲು ಮುಂದಾಗಿವೆ.

ಬುಧವಾರ (ಅ.೨) ಕ್ರೀಡಾಕೂಟ ಮುಗಿಸಿ ಮನೆಗೆ ತೆರಳುತ್ತಿದ್ದ ೧೫ ವರ್ಷದ ಬಾಲಕಿಯನ್ನು ಎಳೆದೊಯ್ದು ಕೊಲೆ ಮಾಡಲಾಗಿತ್ತು. ಕೊಲೆಗೂ ಮುನ್ನ ಅತ್ಯಾಚಾರಕ್ಕೆ ಯತ್ನಿಸಲಾಗಿದ್ದು, ಆಯುಧ ಬಳಸಿ ಭೀಕರವಾಗಿ ಹೊಡೆದು ಕೊಲೆ ಮಾಡಿರುವುದರ ಹಿಂದೆ ಅನುಮಾನಗಳು ಹುಟ್ಟಿಕೊಂಡಿವೆ.

ವಿದ್ಯಾರ್ಥಿನಿಯು ಮಾಲೂರಿನ ಇಂದಿರಾ ನಗರದ ನಿವಾಸಿ ಎನ್ನಲಾಗಿದ್ದು, ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ. ಆರೋಪಿಯು ವಿದ್ಯಾರ್ಥಿನಿಯನ್ನು ಅಪಹರಿಸಿ ಮಾಲೂರು ರೈಲ್ವೆ ಅಂಡರ್‌ಪಾಸ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾನೆ. ಘಟನೆಯಿಂದ ಹೆದರಿದ ಮೃತ ಬಾಲಕಿಯ ಸ್ನೇಹಿತೆ ಸ್ಥಳದಿಂದ ಓಡಿಹೋಗಿದ್ದಾಳೆ. ಸಂಜೆಯಾದರೂ ಮಗಳು ಮನೆಗೆ ಬಾರದಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಹುಡುಕಿಕೊಂಡು ಬಾಲಕಿಯ ತಂದೆ, ಆಕೆ ನಿತ್ಯ ಓಡಾಡುವ ಕಾಲುದಾರಿಯಲ್ಲಿ ಹುಡುಕಾಡಿದಾಗ, ಪೊದೆ ಸಮೀಪ ಮಗಳ ಶವ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗುರುವಾರ ಕೋಲಾರದ ಆರ್‌ ಎಲ್‌ ಜಾಲಪ್ಪ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಪರೀಕ್ಷೆ ಬಳಿಕ ನಿಖರ ಮಾಹಿತಿ ತಿಳಿಯಬೇಕಿದೆ.

ಆರೋಪಿಯನ್ನು ಶುಕ್ರವಾರ ಮಾಲೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರಂಜಿತ್‌ (22) ಎಂದು ಗುರುತಿಸಲಾಗಿದ್ದು, ಈತ ಸಹ ಮಾಲೂರಿನ ನಿವಾಸಿಯಾಗಿದ್ದು, ಮೃತ ಬಾಲಕಿಯ ಮನೆ ಸಮೀಪವೇ ಗಾರೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ರೇಖಾಚಿತ್ರದ ಆಧಾರದಲ್ಲಿ ರಂಜಿತ್ ಬಂಧನವಾಗಿದ್ದು, ಕೊಲೆಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಸದ್ಯ ರಂಜಿತ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಪೋಲೀಸರು ನಿರ್ಧರಿಸಿದ್ದಾರೆ.

ಇದನ್ನೂ ಓದಿ : ಸ್ವಚ್ಛ ಭಾರತದ ಸಾಧನೆಯ ಗರಿಗೆ ಇನ್ನೆಷ್ಟು ‘ಅನ್ನಪೂರ್ಣ’ರು ಬಲಿಯಾಗಬೇಕು?

“ಆರೋಪಿಯು ಬಾಲಕಿಯನ್ನು ಶಾಲೆಯಿಂದಲೇ ಹಿಂಬಾಲಿಸಿ ಬಂದು ಕೃತ್ಯ ಎಸಗಿರುವ ಶಂಕೆ ಇದೆ. ಹೀಗಾಗಿ, ಶಾಲಾ ಪ್ರವೇಶ ಭಾಗದ ಹಾಗೂ ವಿದ್ಯಾರ್ಥಿನಿ ನಡೆದುಹೋದ ಮಾರ್ಗದಲ್ಲಿನ ವಿವಿಧ ಕಟ್ಟಡಗಳು ಮತ್ತು ವೃತ್ತಗಳಲ್ಲಿ ಇರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಲಾಗುತ್ತಿದೆ,” ಎಂದು ಕೇಂದ್ರ ವಲಯ ಐಜಿಪಿ ಬಿ ದಯಾನಂದ್ ಹೇಳಿಕೆ ನೀಡಿದ್ದಾರೆ.

ಹಂತಕನ ಬಂಧನಕ್ಕೆ ಆಗ್ರಹಿಸಿ ಮಾಲೂರಿನಲ್ಲಿ ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ರಸ್ತೆಗಿಳಿದು ಶುಕ್ರವಾರವೂ ಪ್ರತಿಭಟನೆ ನಡೆಸಿವೆ. ಮೂರು ದಿನಗಳ ಬೆಳವಣಿಗೆಯಲ್ಲಿ ನಿಜವಾದ ಆರೋಪಿ ಯಾರೆಂಬುದು ಇನ್ನೂ ತಿಳಿದುಬಂದಿಲ್ಲ ಹಾಗೂ ಮರಣೋತ್ತರ ಪರೀಕ್ಷೆಯ ಮಾಹಿತಿಯೂ ಹೊರಬಂದಿಲ್ಲ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More