ಜಮೀರ್ ಅಹ್ಮದ್‌ಗೆ ಹಾವೇರಿ ಉಸ್ತುವಾರಿ; ಫಲಿಸೀತೇ ಕಾಂಗ್ರೆಸ್ ಲೆಕ್ಕಾಚಾರ?

ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್ ಶಂಕರ್ ನೇಮಕಕ್ಕೆ ಬಹಳಷ್ಟು ಒತ್ತಡವಿತ್ತು. ಆದರೆ, ಮುಂಬರುವ ಸ್ಥಳೀಯ ಮತ್ತು ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಕಾಂಗ್ರೆಸ್ ಈ ಸ್ಥಾನವನ್ನು ಜಮೀರ್ ಅಹ್ಮದ್‌ಗೆ ನೀಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ

ಹಾವೇರಿ ಜಿಲ್ಲಾ ಉಸ್ತುವಾರಿ ನೋಡುವವರು ಯಾರು ಎನ್ನುವ ಕುತೂಹಲಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ನೀರಿಕ್ಷೆಯಂತೆ ಆರ್ ಶಂಕರ್‌ಗೆ ಜಿಲ್ಲಾ ಉಸ್ತುವಾರಿ ಹೊಣೆ ತಪ್ಪಿಸುವಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಯಶಸ್ವಿಯಾಗಿದ್ದು, ಸಚಿವ ಜಮೀರ್ ಅಹಮ್ಮದ್ ಅವರಿಗೆ ಜಿಲ್ಲೆಯ ಉಸ್ತುವಾರಿಯ ಹೊಣೆ ನೀಡಲಾಗಿದೆ. ಹಲವಾರು ರಾಜಕೀಯ ಲೆಕ್ಕಾಚಾರಗಳು ಈ ನೇಮಕದ ಹಿಂದಿರುವ ಸಾಧ್ಯತೆ ಕಂಡುಬರುತ್ತಿದೆ. ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಮತಬುಟ್ಟಿ ಗಟ್ಟಿ ಮಾಡಿಕೊಳ್ಳಲು ಈ ತಂತ್ರ ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹಾವೇರಿ ಜಿಲ್ಲೆಯ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ಆರ್ ಶಂಕರ್‌ ಅವರು ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದರೂ, ಜಿಲ್ಲೆಯ ಉಸ್ತುವಾರಿಯನ್ನು ಅವರಿಗೆ ನೀಡದೆ ಬೇರೆಯವರಿಗೆ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ. ಶಂಕರ್ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೋಡುವ ಮನಸ್ಸು ಜಿಲ್ಲಾ ಕಾಂಗ್ರೆಸ್ ಮುಖಂಡರಿಗೆ ಇರಲಿಲ್ಲ ಎಂಬ ಮಾತು ಗಟ್ಟಿಯಾಗಿ ಕೇಳಿಬರುತ್ತಿದೆ.

ರಾಣೆಬೆನ್ನೂರು ಕ್ಷೇತ್ರದ ಕೆಪಿಜೆಪಿ ಪಕ್ಷದ ಶಾಸಕ ಆರ್ ಶಂಕರ್‌ ಸಮ್ಮಿಶ್ರ ಸರಕಾರಕ್ಕೆ ಬೆಂಬಲ ಸೂಚಿಸಿ ಸಚಿವ ಸ್ಥಾನ ಪಡೆದಿದ್ದಾರೆ. ಅವರ ಹಿಡಿತಕ್ಕೆ ಜಿಲ್ಲೆ ಹೋದರೆ ಕೈ ನಾಯಕರಿಗೆ ಇರುಸುಮುರುಸು ಉಂಟಾಗುತ್ತಿತ್ತು. ಅಲ್ಲದೆ, ಶಂಕರ್ ಅವರು ಬೆಂಗಳೂರು ಮೂಲದವರಾಗಿದ್ದು, ಅವರಿಗೆ ಉಸ್ತುವಾರಿ ನೀಡಿದರೆ ಪಕ್ಷದವರೂ ಅಲ್ಲದ, ಜಿಲ್ಲೆಯವರೂ ಅಲ್ಲದವರೊಬ್ಬರು ಜಿಲ್ಲಾ ಉಸ್ತುವಾರಿ ಹೊಣೆ ಹೊರುವಂತಾಗುತ್ತಿತ್ತು. ಇದು ಪಕ್ಷ ಸಂಘಟನೆಯ ದೃಷ್ಟಿಯಿಂದ ಹಿನ್ನಡೆಗೆ ಕಾರಣವಾಗುತ್ತಿತ್ತು.

ಇದನ್ನೂ ಓದಿ : ಕರ್ನಾಟಕ ಚುನಾವಣಾ ಫಲಿತಾಂಶ |ಚಾಮರಾಜಪೇಟೆಯಲ್ಲಿ ಜಮೀರ್ ಅಹ್ಮದ್ ಗೆಲುವು

ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಏಕೈಕ ಕಾಂಗ್ರೆಸ್ ಶಾಸಕ ಬಿ ಸಿ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಿ ಎಂದು ಜಿಲ್ಲೆಯ ಎಲ್ಲ ನಾಯಕರು ಒಕ್ಕೊರಲಿನಿಂದ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದರು. ಅವರು ಸಚಿವರಾಗಿದ್ದರೆ ಉಸ್ತುವಾರಿಯೂ ಅವರ ಹೆಗಲಿಗೇರುತ್ತಿತ್ತು. ಇದರಿಂದ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ, ಪಕ್ಷದ ನಾಯಕರಿಗೆ ಮನ್ನಣೆ ಎಲ್ಲವೂ ಸಿಗುತ್ತದೆ ಎಂಬ ಚಿಂತನೆ ಜಿಲ್ಲೆಯ ಬಹುತೇಕ ನಾಯಕರದ್ದಾಗಿತ್ತು. ಆದರೆ, ಬಿ ಸಿ ಪಾಟೀಲ ಅವರಿಗೆ ಅದೃಷ್ಟ ಕೈಕೊಟ್ಟಿತ್ತು. ಶಂಕರ್ ಸಚಿವರಾದರು. ಹೀಗಾಗಿ, ಶಂಕರ್ ಹಾಗೂ ಜಿಲ್ಲೆಯ ಕಾಂಗ್ರೆಸ್ ನಾಯಕರ ನಡುವೆ ಉತ್ತಮ ಸಂಬಂಧ ಮೂಡುವ ಬಗ್ಗೆ ಅನುಮಾನವಿತ್ತು. ಅಂತಿಮವಾಗಿ ಇದೆಲ್ಲಕ್ಕೂ ತೆರೆ ಎಳೆಯುವಂತೆ, ಬೆಂಗಳೂರಿನ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್‌ಗೆ ಜಿಲ್ಲೆಯ ಉಸ್ತುವಾರಿ ಹೊಣೆ ನೀಡುವುದರೊಂದಿಗೆ ಸಂಘಟನೆ ಹಾಗೂ ಅಭಿವೃದ್ಧಿಯ ಎರಡೂ ಮಜಲುಗಳಲ್ಲಿ ಜಿಲ್ಲೆಯನ್ನು ನಿಭಾಯಿಸಿಕೊಂಡು ಹೋಗುವಂತೆ ಸೂಚಿಸಲಾಗಿದೆ.

ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಕಣ್ಣಿಟ್ಟೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾವೇರಿ ಲೋಕಸಭಾ ಕ್ಷೇತ್ರದಿಂದ ಈಗಾಗಲೇ ಎರಡು ಬಾರಿ ಸಲೀಂ ಅಹ್ಮದ್ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಈ ಸಾರಿಯೂ ಸಲೀಂ ಅವರು ಟಿಕೆಟ್‌ ಗಿಟ್ಟಿಸಿಕೊಳ್ಳಲು ದೆಹಲಿ ಮಟ್ಟದಲ್ಲಿ ಪೈಪೋಟಿಯಲ್ಲಿದ್ದಾರೆ. ಸಲೀಂ ಬದಲು ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೇನಾದರೂ ಲೋಕಸಭೆ ಟಿಕೆಟ್ ನೀಡಿದರೆ ಅಲ್ಪಸಂಖ್ಯಾತ ಮತಗಳು ವಿಭಜನೆಯಾಗುವ ಆತಂಕವೂ ಕೈ ಪಾಳೆಯಕ್ಕಿದೆ. ಇಂತಹ ಸಮಯದಲ್ಲಿ ಜಮೀರ್ ಅವರಿಗೆ ಜಿಲ್ಲೆಯ ಉಸ್ತುವಾರಿ ನೀಡುವುದರಿಂದ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮತಗಳನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಹೈಕಮಾಂಡ್‌ನದ್ದು ಎಂಬ ಸುದ್ದಿಗಳು ಕೇಳಿಬರುತ್ತಿವೆ.

ಚಿತ್ರ: ಜಮೀರ್‌ ಅಹ್ಮದ್‌, ಆರ್ ಶಂಕರ್‌

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More