ಕೊಡಗು ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸಿದ ಉಸ್ತುವಾರಿ ಸಚಿವ ಸಾ ರಾ ಮಹೇಶ್

ಕೊಡಗು ಜಿಲ್ಲೆಗೆ ಭೇಟಿ ನೀಡಿದ ಉಸ್ತುವಾರಿ ಸಚಿವ ಸಾ ರಾ ಮಹೇಶ್ ಅವರು ಜಡ್ಡುಗಟ್ಟಿದ್ದ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸಿದ್ದಾರೆ. ಹೀಗಾಗಿ, ಹೆಲಿ ಟೂರಿಸಂ ಆದಿಯಾಗಿ ನಿಧಾನಗತಿಯಲ್ಲಿ ಸಾಗುತ್ತಿದ್ದ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಯೋಜನೆಗಳು ಚುರುಕಾಗುವ ಸಾಧ್ಯತೆ ಇದೆ

ನೂತನವಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್ ಅವರು, ತಮ್ಮ ಮೊದಲ ಭೇಟಿಯಲ್ಲೇ ಜಿಲ್ಲೆಯ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ. ಬಹಳ ವರ್ಷಗಳಿಂದ ಇಲ್ಲೇ ಝಾಂಡಾ ಹೂಡಿರುವ ಕಿರಿಯ ನೌಕರರೂ ಈಗ ಒಂದಷ್ಟು ಚುರುಕಾಗಿದ್ದಾರೆ.

ಕೊಡಗು ಜಿಲ್ಲೆಗೆ ಶುಕ್ರವಾರ ಭೇಟಿ ನೀಡಿದ ಸಚಿವರು, ಮೊದಲು ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯವನ್ನು ಉದ್ಘಾಟಿಸಿದರು. ಸಚಿವರು ಮಡಿಕೇರಿಯಲ್ಲಿ ಮದ್ಯಾಹ್ನ ಎರಡು ಗಂಟೆಗೆ ಅಧಿಕಾರಿಗಳ ಸಭೆ ಕರೆದಿದ್ದರು. ಸಭೆಯಲ್ಲಿ ಜನಪ್ರತಿನಿಧಿಗಳ ಕುಂದುಕೊರತೆಗಳನ್ನು ಆಲಿಸಿದ ಸಚಿವರು, ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಕೆಲಸ ಮಾಡದಿದ್ದರೆ ಅಮಾನತು ಖಚಿತ ಎಂಬ ಸಂದೇಶ ನೀಡಿದ ಅವರು, ಜಿಲ್ಲೆಗೆ ವರ್ಗವಾಗಿ ಬರುವ ಯಾವುದೇ ಅಧಿಕಾರಿ ಬಗ್ಗೆ ತಮ್ಮಿಂದ ಅಭಿಪ್ರಾಯವನ್ನು ಪಡೆದೇ ನೇಮಕ ಮಾಡಲಾಗುತ್ತದೆ ಎಂದು ತಿಳಿಸಿ, ಜನಪರ ಕೆಲಸ ಮಾಡುವಂತೆ ಆದೇಶ ನೀಡಿದರು.

ಜಿಲ್ಲೆಯಲ್ಲಿ, ಮುಖ್ಯವಾಗಿ ಮಡಿಕೇರಿ ನಗರದಲ್ಲಿ ಹಳೆ ಮನೆ ಕೆಡವಿ ಹೊಸ ಮನೆಗಳನ್ನು ನಿರ್ಮಿಸುವಾಗ ಯೋಜನಾ ಇಲಾಖೆಯ ಅಧಿಕಾರಿಗಳು ಮನೆಯ ನಿವೇಶನವನ್ನು ಪರಿವರ್ತನೆ ಮಾಡಿಸಿಕೊಂಡು ಬಂದ ನಂತರ ಅನುಮತಿ ನೀಡುವ ಹೊಸ ನಿಯಮವನ್ನು ಜಾರಿಗೊಳಿಸಿರುವ ಬಗ್ಗೆ ಶಾಸಕರಾದ ಎಂ ಪಿ ಅಪ್ಪಚ್ಚು ರಂಜನ್ ಮತ್ತು ಕೆ ಜಿ ಬೋಪಯ್ಯ ಅವರು ಗಮನ ಸೆಳೆದರು. ಇದಕ್ಕೆಉತ್ತರಿಸಿದ ಸಚಿವರು, 1976ಕ್ಕಿಂತ ಮೊದಲು ಕಟ್ಟಿದ ಮನೆಗಳನ್ನು ಕೆಡವಿ ನೂತನ ಮನೆ ನಿರ್ಮಿಸುವವರಿಗೆ ಪರಿವರ್ತನೆ ಮಾಡಿಸುವ ನಿಯಮದಿಂದ ವಿನಾಯ್ತಿ ನೀಡುವಂತೆ ಆದೇಶ ನೀಡಿದರು. ಸಚಿವರ ಈ ಆದೇಶ ನಾಗರಿಕರಿಗೂ ಒಂದಷ್ಟು ನೆಮ್ಮದಿ ನೀಡಿದೆ.

ಜಿಲ್ಲೆಯಲ್ಲಿ ಮಿತಿಮೀರಿರುವ ಹೋಂಸ್ಟೇಗಳಿಗೆ ಕಡಿವಾಣ ಹಾಕಲು ಪ್ರವಾಸೋದ್ಯಮ ಇಲಾಖೆಯು ಹೋಂಸ್ಟೇಗಳ ಮಾಲೀಕರು ನೋಂದಾಯಿಸಿಕೊಳ್ಳುವಂತೆ ಆಗಸ್ಟ್ 2ರವರೆಗೂ ಗಡುವು ನೀಡಿತ್ತು. ಆದರೆ, ಗಡುವು ಮೀರಿದರೂ ಕೇವಲ 532 ಹೋಂಸ್ಟೇ ಮಾಲೀಕರು ಮಾತ್ರ ನೋಂದಾಯಿಸಿಕೊಂಡಿದ್ದು, ಇನ್ನುಳಿದ ಸುಮಾರು 2500 ಹೋಂಸ್ಟೇಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಇಲಾಖೆಯಿಂದ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದರು.

ಇದನ್ನೂ ಓದಿ : ಕೊಡಗು ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅರ್ಧಕ್ಕೂ ಹೆಚ್ಚು ಹುದ್ದೆಗಳು ಖಾಲಿ!

ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟಂತೆ ಜನತೆಯ ಬೇಡಿಕೆಯನ್ನೇ ನೋಡುವುದಾದರೆ, ಕೊಡಗಿಗೆ ಮೊದಲು ಆಗಬೇಕಿರುವುದು ಮಡಿಕೇರಿಯಲ್ಲಿ ಪ್ರವಾಸಿ ಮಾಹಿತಿ ಕೇಂದ್ರ. ನಿತ್ಯವೂ ಸಾವಿರಾರು ಪ್ರವಾಸಿಗರು ಬರುತ್ತಿದ್ದು, ಇವರಿಗೆ ಮಾಹಿತಿಯೇ ಇಲ್ಲವಾಗಿದೆ. ಈ ಹಿಂದೆ ಮಡಿಕೇರಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಸಿಟಿ ಬಸ್ ಸೇವೆ ಆರಂಬಿಸಲಾಗಿತ್ತು. ಇದು ನೂರಾರು ಪ್ರವಾಸಿಗರಿಗೂ ಅನುಕೂಲವಾಗಿತ್ತು. ಅದನ್ನು ನಂತರ ನಿಲ್ಲಿಸಲಾಗಿದ್ದು, ಪುನರ್ ಆರಂಬಿಸಲು ಒತ್ತಾಯವಿದೆ. ಕೊಡಗಿನಲ್ಲಿ ಹೆಲಿ ಟೂರಿಸಂ ಆರಂಭದೊಂದಿಗೆ ಕುಶಾಲನಗರ ಸಮೀಪದ ಅಲುವಾರದಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಬೇಕಿದೆ. ರಾಜಾಸೀಟಿಗೆ ನಿತ್ಯವೂ ಜನಜಂಗುಳಿ ಹೆಚ್ಚಾಗುತ್ತಿದ್ದು, ಇದರ ವಿಸ್ತೀರ್ಣಕ್ಕೆ ಮೀಸಲಿಟ್ಟ ಜಾಗವನ್ನು ಬಳಸಿಕೊಂಡು ರಾಜಾಸೀಟಿನ ವಿಸ್ತರಣೆ ಮಾಡಬೇಕಿದೆ.

ಈಗ ನಿರ್ಮಾಣ ಹಂತದಲ್ಲಿರುವ ಕೊಡವ ಹೆರಿಟೇಜ್ ಸೆಂಟರನ್ನು ಪೂರ್ಣಗೊಳಿಸಬೇಕಿದೆ. ಅಬ್ಬಿ ಫಾಲ್ಸ್‌ನಲ್ಲೂ ವಿಸ್ತರಣೆ ಕಾರ್ಯ ಕೈಗೆತ್ತಿಕೊಳ್ಳಬೇಕಿದೆ. ಕೊಡಗಿನಲ್ಲಿ ಚಾರಣಿಗರಿಗೆ ಕೋಟೆ ಬೆಟ್ಟ ಮತ್ತು ತಡಿಯಂಡಲೋಳ್ ಬೆಟ್ಟದಲ್ಲಿ ಟೆಂಟ್ ಸೌಲಭ್ಯ ಕಲ್ಪಿಸಬೇಕಿದೆ. ತಲಕಾವೇರಿ-ಭಾಗಮಂಡಲ ರಸ್ತೆ ಕಿರಿದಾಗಿದ್ದು, ಇದನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ದಿಪಡಿಸಬೇಕಿದೆ. ಮಲ್ಲಳ್ಳಿ ಫಾಲ್ಸ್‌ನಲ್ಲಿ ರೋಪ್ ವೇ ನಿರ್ಮಾಣ; ಕೇರಳದ ಮಟ್ಟನೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತೆರೆಯಲಿದ್ದು, ಇಲ್ಲಿಗೆ ತೆರಳುವ ರಸ್ತೆ ಅಭಿವೃದ್ದಿ ಅಗಬೇಕಿದೆ. ಇದೆಲ್ಲದರ ನದುವೆ, ಜಿಲ್ಲೆಯಲ್ಲಿ ಪ್ರತಿವರ್ಷ ಕೊಡಗು ಉತ್ಸವ ನಡೆಸುವ ಮೂಲಕ ಅಭಿವೃದ್ದಿಗೆ ಒತ್ತು ನೀಡಬಹುದಾಗಿದೆ ಎಂಬ ಅಹವಾಲುಗಳು ಕೇಳಿಬಂದಿವೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More