ಒಂದೂವರೆ ವರ್ಷವಾದರೂ ಗದಗದ ಫಲಾನುಭವಿಗಳಿಗೆ ಸಿಕ್ಕಿಲ್ಲ ಟ್ಯಾಕ್ಸಿ ಭಾಗ್ಯ!

ಪರಿಶಿಷ್ಟ ಪಂಗಡಗಳಿಗೆ ಉದ್ಯೋಗ ಒದಗಿಸಲು ಪ್ರವಾಸಿ ವಾಹನ ಚಾಲಕರಾಗಲು ಟ್ಯಾಕ್ಸಿ ನೀಡುವ ಯೋಜನೆ ಜಾರಿಯಾಗಿ 2 ವರ್ಷಗಳೇ ಆಗಿವೆ. ಫಲಾನುಭವಿಗಳ ಆಯ್ಕೆಯಾಗಿ ಅಂತಿಮ ಪಟ್ಟಿ ಪ್ರಕಟಿಸಲಾಗಿದ್ದರೂ, ಪ್ರವಾಸೋದ್ಯಮ ಇಲಾಖೆಯಿಂದ ಟ್ಯಾಕ್ಸಿ ವಿತರಣೆಯೇ ನಡೆದಿಲ್ಲ

ಪ್ರವಾಸೋದ್ಯಮ ಇಲಾಖೆ ಹಿಂದುಳಿದ ವರ್ಗಗಳ ಯುವಜನರಿಗೆ ಪ್ರವಾಸಿ ವಾಹನ ಚಾಲಕರಾಗಲು ಟ್ಯಾಕ್ಸಿ ನೀಡುವ ಯೋಜನೆ ಜಾರಿಗೆ ತಂದು ಎರಡು ವರ್ಷಗಳೇ ಕಳೆದಿದೆ. ಸರ್ಕಾರವೇನೋ ಯೋಜನೆಗಳನ್ನು ಜಾರಿಗೆ ತಂದುಬಿಡುತ್ತದೆ. ಆದರೆ ಅವುಗಳು ಎಷ್ಟರ ಮಟ್ಟಿಗೆ ಫಲಾನುಭವಿಗಳಿಗೆ ತಲುಪಿವೆ ಎನ್ನುವುದರ ಮೇಲೆ ಯೋಜನೆಯ ಯಶಸ್ಸು ನಿಂತಿರುತ್ತದೆ. ಒಂದು ವೇಳೆ, ಅಧಿಕಾರಿಗಳು ಆಡಳಿತದಲ್ಲಿ ನಿರ್ಲಕ್ಷ್ಯ ತೋರಿಸಿದರೆ ಮಹತ್ವಾಕಾಂಕ್ಷಿ ಯೋಜನೆಗಳು ಮಣ್ಣುಪಾಲಾಗುತ್ತವೆ. ಇದಕ್ಕೆ ಗದಗ ಜಿಲ್ಲೆಯಲ್ಲಿನ ಪ್ರವಾಸೋದ್ಯಮ ಇಲಾಖೆ ಸಾಕ್ಷಿ ಎನ್ನುತ್ತಿದ್ದಾರೆ ಜಿಲ್ಲೆಯ ಜನ.

ವರ್ಷದ ಹಿಂದೆಯೇ ಟ್ಯಾಕ್ಸಿ ಪಡೆಯಲು ಫಲಾನುಭವಿಗಳ ಆಯ್ಕೆಯಾಗಿ ಅಂತಿಮ ಪಟ್ಟಿ ಪ್ರಕಟಿಸಲಾಗಿದ್ದರೂ, ಪ್ರವಾಸೋದ್ಯಮ ಇಲಾಖೆಯಿಂದ ನೀಡಬೇಕಾದ ಟ್ಯಾಕ್ಸಿ ವಿತರಿಸಿಲ್ಲ. ಇದರಿಂದ ನಿರುದ್ಯೋಗಿ ಯುವಕರಿಗೆ ಉದ್ಯೋಗದ ಭದ್ರತೆ ಒದಗಿಸಬೇಕು ಎನ್ನುವ ಯೋಜನೆಗೆ ಹಿನ್ನಡೆ ಆದಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಇಲಾಖೆಯ ಬದಲಾಗುವ ನಿಯಮಗಳಿಂದ ಒಂದೂವರೆ ವರ್ಷದಿಂದ ಟ್ಯಾಕ್ಸಿ ವಿತರಣೆ ಮಾಡದೆ ಇರುವುದು ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಟ್ಯಾಕ್ಸಿ ವಿತರಿಸಬೇಕು ಎನ್ನುವಷ್ಟರಲ್ಲಿ ವಿಧಾನಸಭಾ ಚುನಾವಣಾ ನೀತಿಸಂಹಿತೆ ಜಾರಿಯಾಯಿತು. ಜೊತೆಗೆ ಇಲಾಖೆಯ ಬದಲಾದ ಮಾರ್ಗಸೂಚಿಯಿಂದಾಗಿ ಟ್ಯಾಕ್ಸಿ ವಿತರಣೆ ವಿಳಂಬವಾಗಿದೆ. ಕೆಲ ದಿನದೊಳಗಾಗಿ ಟ್ಯಾಕ್ಸಿ ವಿತರಿಸಲಾಗುವುದು. 
ಶರಣು ಗೊಗೇರಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ

ಪ್ರವಾಸೋದ್ಯಮ ಇಲಾಖೆಯಿಂದ 2016 17ನೇ ಸಾಲಿಗೆ ಸಾಮಾನ್ಯ ವರ್ಗಕ್ಕೆ 40, ಪರಿಶಿಷ್ಠ ಜಾತಿಗೆ 15, ಪರಿಶಿಷ್ಠ ಪಂಗಡಕ್ಕೆ 04, ಒಟ್ಟು 59 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 2016-17ನೇ ಸಾಲಿನಿಂದ ಈವರೆಗೆ ಟ್ಯಾಕ್ಸಿ ವಿತರಿಸಿಲ್ಲ. ಇದರಿಂದ ಆಯ್ಕೆಯಾದ ಫಲಾನುಭವಿಗಳು ಕಾದು ಸುಸ್ತಾಗಿದ್ದಾರೆ. 2017ರ ಸೆಪ್ಟೆಂಬರ್ ತಿಂಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಅಂತಿಮ ಆಯ್ಕೆ ಪಟ್ಟಿ ಕೂಡ ಪ್ರಕಟಿಸಲಾಗಿತ್ತು. 2017ರ ಮಾರ್ಚ್‌ನಲ್ಲಿಯೇ ವಾಹನ ವಿತರಿಸಬೇಕಿತ್ತು. ಆದರೆ, ಈತನಕ ವಿತರಣೆ ಮಾಡದಿರುವ ವಿಳಂಬ ಧೋರಣೆಗೆ ಫಲಾನುಭವಿಗಳು ಬೇಸತ್ತಿದ್ದಾರೆ.

ಈ ನಡುವೆ, ಫಲಾನುಭವಿಗಳು ಇಲಾಖೆಯ ಅಧಿಕಾರಿ ಪರವಾಗಿಯೇ ಮಾತನಾಡಿ, ಇತರರ ಲೋಪವೇ ಇದಕ್ಕೆ ಕಾರಣ ಎನ್ನುತ್ತಾರೆ. “ಪ್ರವಾಸೋದ್ಯಮ ಇಲಾಖೆಗೆ ಪೂರ್ಣಾವಧಿ ಅಧಿಕಾರಿ ಇಲ್ಲ. ಶಿಕ್ಷಣ ಇಲಾಖೆಯಲ್ಲಿದ್ದ ಅಧಿಕಾರಿ ಶರಣು ಗೊಗೇರಿ ಅವರಿಗೆ ಪ್ರಭಾರಿ ಅಧಿಕಾರಿಯ ಜವಾಬ್ದಾರಿ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಜೊತೆಗೆ ಶರಣು ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊಣೆ ಕೂಡ ನೀಡಲಾಗಿದೆ. ಒಬ್ಬ ಅಧಿಕಾರಿ ಮೂರು ಇಲಾಖೆ ನೋಡಿಕೊಳ್ಳಲು ಹೇಗೆ ಸಾಧ್ಯ? ಇದರಿಂದ ಮೂರು ಇಲಾಖೆಗೂ ನ್ಯಾಯ ಒದಗಿಸುವುದು ಕಷ್ಟಸಾಧ್ಯವಾಗಿದೆ,” ಎನ್ನುತ್ತಾರೆ ಫಲಾನುಭವಿ ಮಂಜುಪ್ಪ.

ಯೋಜನೆ ಜಾರಿಯಾಗಿ ಹಣ ಬಿಡುಗಡೆಯಾದರೂ ಫಲಾನುಭವಿಗಳಿಗೆ ಮಾತ್ರ ಟ್ಯಾಕ್ಸಿ ವಿತರಿಸದಿರುವುದು ವಿಪರ್ಯಾಸ. ಈ ಮೂಲಕ ಯೋಜನೆ ಲಾಭ ಪಡೆಯಲು ನಿರುದ್ಯೋಗಿಗಳು ಬಕಪಕ್ಷಿಯಂತೆ ಕಾಯುವಂತಾಗಿದೆ. ಇನ್ನಾದರೂ ಕೂಡಲೇ ಟ್ಯಾಕ್ಸಿ ವಿತರಿಸಿ ನಿರುದ್ಯೋಗಿಗಳಿಗೊಂದು ಉದ್ಯೋಗದ ಭದ್ರತೆ ನೀಡಬೇಕು ಎನ್ನುವುದು ಫಲಾನುಭವಿಗಳ ಒತ್ತಾಯ.

ಚಿತ್ರ: ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಶರಣು ಗೊಗೇರಿ

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More