ವಿಡಿಯೋ | ವೃದ್ಧೆ ಕಾಲು ಜಾರಿ ಬಿದ್ದು ಸತ್ತದ್ದಕ್ಕೆ ಕೆರೆ ಖಾಲಿ ಮಾಡಹೊರಟ ಗ್ರಾಮಸ್ಥರು!

ವೃದ್ಧೆಯೊಬ್ಬರು ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಕ್ಕೆ ಕೆರೆ ಮೈಲಿಗೆಯಾಗಿದೆ ಎಂದು ಗ್ರಾಮದ ಜನರು ನೀರು ಬಳಸುವುದನ್ನು ನಿಲ್ಲಿಸಿದ್ದರು. ಜೊತೆಗೆ, ಕೆರೆಯ ನೀರನ್ನು ಹೊರಹಾಕುವ ಕೆಲಸ ಆರಂಭಿಸಿದ್ದ ಗ್ರಾಮ ಪಂಚಾಯತ್ ಮತ್ತು ಗ್ರಾಮಸ್ಥರನ್ನು ಅಧಿಕಾರಿಗಳು ತಡೆದಿದ್ದಾರೆ

ಕನ್ನಡ ಡಿಂಡಮ ಬಾರಿಸಿದ ಕವಿ ಹುಯಿಲಗೋಳ ನಾರಾಯಣರಾಯರ ತವರು ಗದಗ ಜಿಲ್ಲೆ ಹುಯಿಲಗೋಳ ಗ್ರಾಮ. ಈ ಪುಟ್ಟ ಗ್ರಾಮ ಶತಶತಮಾನಗಳಿಂದಲೂ ಕುಡಿಯುವ ನೀರಿಗೆ ಕೆರೆಗಳನ್ನೇ ಆಶ್ರಯಿಸಿದೆ. ಇಡೀ ಗ್ರಾಮಕ್ಕೆ ಇಲ್ಲಿನ ಕೆರೆಯೇ ಜೀವಜಲ. ನಿತ್ಯ ಕುಡಿಯಲು ಕೆರೆ ನೀರನ್ನು ಬಳಸುತ್ತಿದ್ದ ಗ್ರಾಮದ ಜನರು ಕಳೆದ ಐದು ದಿನಗಳಿಂದ ಈ ನೀರನ್ನು ಬಳಕೆ ಮಾಡುತ್ತಿಲ್ಲ.

ಇತ್ತೀಚೆಗೆ ಕೆಲ ದಿನಗಳ ಹಿಂದೆ 60 ವರ್ಷದ ವೃದ್ಧೆಯೊಬ್ಬರು ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಳು. ಈ ಕಾರಣದಿಂದ ಕೆರೆ ಮೈಲಿಗೆಯಾಗಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಈ ಕೆರೆಯ ನೀರು ಮೈಲಿಗೆ ಆಗಿದೆ ಎಂದು ನೀರು ಬಳಸದೆ ಇರುವ ಕಾರಣದಿಂದ 20 ಎಚ್‌ಪಿ ಸಾಮರ್ಥ್ಯದ 7 ಮೋಟಾರ್ ಬಳಸಿ ಕೆರೆಯ ನೀರನ್ನು ಹೊರಹಾಕುವ ಕೆಲಸ ನಡೆಸಲಾಗಿದೆ.

ನಾಲ್ಕು ದಿನಗಳಿಂದ ಹುಯಿಲಗೋಳ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತಿ ಜೊತೆಯಾಗಿ ಕೆರೆ ಖಾಲಿ ಮಾಡುವ ಕಾರ್ಯ ನಡೆಸುತ್ತಿರುವ ಕಾರಣದಿಂದ ನೀರಿನ ಅಭಾವ ಎದುರಾಗಿದೆ. ಇದರಿಂದ ಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹುಯಿಲಗೋಳ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಆತಂಕವೂ ಇತ್ತು. ಒಂದು ವರ್ಷದ ಎಲ್ಲ ಮಳೆಗಳು ಉತ್ತಮವಾದರೆ ಮಾತ್ರ ಒಟ್ಟು 22 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆ ಸಂಪೂರ್ಣ ತುಂಬಲು ಸಾಧ್ಯ.

ಈ ಕೆರೆ ತುಂಬಿದರೆ ಗ್ರಾಮದ ಜನರಿಗೆ ಮೂರ್ನಾಲ್ಕು ವರ್ಷಗಳ ಕಾಲ ಎಂಥ ಬರಗಾಲವಿದ್ದರೂ ಕುಡಿಯುವ ನೀರಿಗೆ ಸಮಸ್ಯೆ ಇರುವುದಿಲ್ಲ. ಆದರೆ, ತುಂಬಿದ ಕೆರೆ ಬರಿದು ಮಾಡಿದರೆ ತಮ್ಮ ಪಾಡೇನು ಎನ್ನುವ ಚಿಂತೆಯೂ ಗ್ರಾಮಸ್ಥರಲ್ಲಿ ಆವರಿಸಿದೆ. ಉತ್ತಮ ಮಳೆಯಾದರೆ ಕೆರೆ ತುಂಬಬಹುದು ಎನ್ನು ಭರವಸೆಯಲ್ಲಿ ನೀರನ್ನು ಹೊರಹಾಕಲಾಗಿದೆ.

ಇದನ್ನೂ ಓದಿ : ರಾಜ್ಯಾದ್ಯಂತ ಒಣಗಿವೆ ಸಾವಿರ ಕೆರೆ; ಹೆಚ್ಚಲಿದೆಯೇ ನೀರಿನ ಅಭಾವ?

ಆದರೆ, 22 ಎಕರೆ ವಿಸ್ತಿರ್ಣ ಹೊಂದಿರುವ ಈ ಕೆರೆಯ ನೀರನ್ನು ಸಂಪೂರ್ಣ ಹೊರಹಾಕಲು ಕನಿಷ್ಠ 10 ದಿನಗಳಾದರೂ ಬೇಕು. ಈಗಾಗಲೇ ಕೆರೆ ಬರಿದಾಗುತ್ತಿರುವುದರಿಂದ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಸದ್ಯ ಗ್ರಾಮಸ್ಥರು ಗ್ರಾಮದ ಇನ್ನೊಂದು ಚಿಕ್ಕ ಕೆರೆ ಮತ್ತು ಅಕ್ಕಪಕ್ಕದ ಗ್ರಾಮದ ಕೆರೆಗಳ ಮೊರೆಹೋಗಿದ್ದಾರೆ. ಮುಂಬರುವ ದಿನಗಳನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆ ಗ್ರಾಮದ ಜನರನ್ನು ಕಾಡುತ್ತಿದೆ.

ಸಾಮಾನ್ಯವಾಗಿ ಕೆರೆಗಳ ನೀರಿನ ಶುದ್ಧತೆ ನೈಸರ್ಗಿಕವಾಗಿ ನಡೆಯುತ್ತದೆ. ಹೀಗಾಗಿ ಹುಯಿಲಗೋಳ ಕೆರೆಯಲ್ಲಿ ವೃದ್ಧೆ ಸಾವನ್ನಪ್ಪಿರುವುದರಿಂದ ಕೆರೆ ಶುದ್ಧತೆಗೆ ಮುಂದಾಗುವುದು ತಪ್ಪು. ಈ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ‌.
ಬಿ ಎಮ್ ಹೊನಕೇರಿ, ಜಿಲ್ಲಾ ಆರೋಗ್ಯಾಧಿಕಾರಿ

ಈ ವಿಷಯದ ಮಾಹಿತಿ ತಿಳಿದ ತಕ್ಷಣ ಉಪವಿಭಾಗಾಧಿಕಾರಿ ಮಂಜುನಾಥ್ ನೇತೃತ್ವದ ಅಧಿಕಾರಿಗಳ ತಂಡ ಹುಯಿಲಗೋಳ ಗ್ರಾಮಕ್ಕೆ ಭೇಟಿ ನೀಡಿ, ಕೆರೆಯ ನೀರನ್ನು ಹೊರಹಾಕದಂತೆ ಗ್ರಾಮಸ್ಥರಿಗೆ ತಾಕೀತು ಮಾಡಿದ್ದಾರೆ. ಜನಜಾನುವಾರುಗಳ ಹಿತದೃಷ್ಟಿಯಿಂದ ನೀರು ಬರಿದು ಮಾಡದಂತೆ ಸೂಚಿಸಿದರು.

ವೃದ್ಧೆಯ ಮರಣದಿಂದ ಕೆರೆಯ ನೀರು ಮೈಲಿಗೆಯಾಗಿರುವ ಕಾರಣ ಕೆರೆ ಸ್ವಚ್ಛ ಮಾಡಬೇಕು ಎನ್ನುವುದು ಗ್ರಾಮಸ್ಥರ ವಾದ. ಆದರೆ, ಅಧಿಕಾರಿಗಳು ಇದಕ್ಕೆ ಒಪ್ಪದೆ ನೀರು ಬರಿದು ಮಾಡುವುದನ್ನು ತಡೆದಿದ್ದಾರೆ. ಇದರಿಂದ ಈ ನೀರು ಕುಡಿಯಬೇಕೇ ಬೇಡವೇ ಎಂದು ಗ್ರಾಮಸ್ಥರು ಪೇಚಿಗೆ ಸಿಲುಕಿದ್ದಾರೆ. ಕೆರೆಯಲ್ಲಿ ವೃದ್ಧೆ ಬಿದ್ದು ಸತ್ತಿರುವುದು ಕಣ್ಣಾರೆ ಕಂಡು ನೀರು ಕುಡಿಯುವುದು ಹೇಗೆ ಎನ್ನುವ ಪ್ರಶ್ನೆ ಗ್ರಾಮಸ್ಥರದ್ದು. ಆದರೆ, ಅಧಿಕಾರಿಗಳು ಮಧ್ಯಪ್ರವೇಶಿಸಿದ ಕಾರಣ ಸದ್ಯ ನೀರು ಹೊರಹಾಕುವ ಕೆಲಸ ನಿಲ್ಲಿಸಿದ ಗ್ರಾಮಸ್ಥರು, ಆ ಕೆರೆಯ ನೀರನ್ನು ಬಳಸುತ್ತಿಲ್ಲ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More