ವಿಡಿಯೋ | ಮಾಯದಂಥ ಮಳೆಗೆ ತುಂಬಿ ಹರಿವ ಮದಗದ ಕೆರೆ ಸೌಂದರ್ಯ ನೋಡಬನ್ನಿ

ವರ್ಷಗಳಿಂದ ಮಳೆ ಮಾಯವಾಗಿದ್ದರಿಂದ ಕುಮದ್ವತಿ ನದಿಯಲ್ಲಿ ನೀರಿಲ್ಲದೆ ಮದಗದ ಕೆರೆ ಬಿಕೋ ಎನ್ನುತ್ತಿತ್ತು. ಈ ಬಾರಿ ಮಲೆನಾಡಿನಲ್ಲಿ ಉತ್ತಮ ಮಳೆಯಾಗಿ ಕೆರೆಗೆ ನೀರು ಹರಿದು ಬರುತ್ತಿದೆ. ತುಂಬಿ ಹರಿಯುತ್ತಿರುವ ಕುಮದ್ವತಿ ನದಿ, ಮದಗದ ಜಲಪಾತ ಮತ್ತೆ ಪ್ರವಾಸಿಗರನ್ನು ಆಹ್ವಾನಿಸುತ್ತಿವೆ

ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನಲ್ಲಿರುವ ಐತಿಹಾಸಿಕ ಮದಗ ಮಾಸೂರು ಕೆರೆ, ಮೈದುಂಬಿ ಹರಿಯುತ್ತಿರುವ ಕುಮುದ್ವತಿಯ ಮೋಹಕ ನೋಟ, ಸುತ್ತ ಹಚ್ಚಹಸಿರು ಗುಡ್ಡಗಳ ಸುಂದರ ದೃಶ್ಯವು ಚಾರಣಿಗರನ್ನು ಆಕರ್ಷಿಸುತ್ತಿದೆ. ಭರ್ತಿಯಾಗಿರುವ ವಿಶಾಲವಾದ ಮದಗದ ಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಸೊಬಗನ್ನು ಒಮ್ಮೆಯಾದರೂ ಸವಿಯಬೇಕು.

ಮೂರು-ನಾಲ್ಕು ವರ್ಷಗಳಿಂದ ಮಳೆ ಮಾಯವಾಗಿದ್ದರಿಂದ ಕೆರೆ ಹಾಗೂ ಕುಮದ್ವತಿ ನದಿಯಲ್ಲಿ ನೀರಿಲ್ಲದೆ ಬಿಕೋ ಎನ್ನುತ್ತಿದ್ದವು. ಕಳೆದ ವರ್ಷಕ್ಕಿಂತಲೂ ಈ ಬಾರಿ ಮಲೆನಾಡ ಭಾಗ ಶಿಕಾರಿಪುರ, ಹಿರೇಕೆರೂರ ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಲ್ಲಿನ ಕೆರೆಗೆ ನೀರು ಹರಿದುಬರುತ್ತಿದೆ. ದೊಡ್ಡ ಕೆರೆಯಾಗಿರುವ ಮದಗ ಕೆರೆಯಲ್ಲೂ ಸಾಕಷ್ಟು ಪ್ರಮಾಣದಲ್ಲಿ ನೀರು ಬಂದಿದ್ದು, ಎತ್ತರದಿಂದ ಧುಮುಕುತ್ತಿರುವ ಮದಗದ ಜಲಪಾತ, ಕುಮದ್ವತಿ ನದಿ ತುಂಬಿ ಹರಿಯುತ್ತಿರುವುದು ಮತ್ತೆ ಪ್ರವಾಸಿಗರನ್ನು ಆಹ್ವಾನಿಸುತ್ತಿದೆ.

ರಟ್ಟೀಹಳ್ಳಿಯಿಂದ ೧೮, ಹಿರೇಕೆರೂರ ಪಟ್ಟಣದಿಂದ ಸುಮಾರು ೨೦ ಕಿಮೀ, ರಾಣಿಬೆನ್ನೂರಿಂದ ೫೦ ಕಿಮೀ, ಶಿಕಾರಿಪುರದಿಂದ ೧೫ ಕಿಮೀ ದೂರದಲ್ಲಿರುವ ರಟ್ಟೀಹಳ್ಳಿ ತಾಲೂಕಿನ ಗಡಿ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಮದಗ ಮಾಸೂರು ಕೆರೆ ಸಂಕ್ರಾಂತಿಯ ದಿನ ಹೆಚ್ಚಾಗಿ ಪ್ರವಾಸಿಗರು ಆಕರ್ಷಿಸುತ್ತಿತ್ತು. ಇದೀಗ ಮೈದುಂಬಿ ನಯನ ಮನೋಹರವಾಗಿ ಹರಿಯುತ್ತಿರುವ ಭೋರ್ಗರೆಯುವ ಜಲಪಾತದ ಸೊಬಗು ಚಾರಣಿಗರನ್ನು ಕೈಬೀಸಿ ಕರೆಯುತ್ತಿದೆ. ಪ್ರಸಿದ್ಧ ಪ್ರವಾಸಿ ತಾಣವಾಗುವ ಎಲ್ಲಾ ಅರ್ಹತೆಗಳು ಈ ಕೆರೆಗಿದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮಳೆ ಇಲ್ಲದೆ ಮಂಕಾಗಿದ್ದ ಕೆರೆಗೆ ಇತ್ತೀಚೆಗೆ ಸುರಿದ ಮಳೆ ಜೀವ ಕಳೆ ತುಂಬಿದ್ದು, ಈಗ ಉತ್ತಮ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಡುತ್ತ ದೂರದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇದರಿಂದ ನಿತ್ಯ ವಿವಿಧ ಭಾಗಗಳಿಂದ ಆಗಮಿಸುವ ಪ್ರವಾಸಿಗರು ತುಂಬಿದ ಕರೆ ಮತ್ತು ಜಲಪಾತದ ಸೊಬಗನ್ನು ಸವಿದು ಸಂತಸಪಡುತ್ತಿದ್ದಾರೆ.

ಬೃಹತ್ ಕೋಡಿಯ ಮೇಲೆ ಹರಿಯುವ ನೀರಿನ ದೃಶ್ಯ ರಮಣೀಯವಾಗಿದೆ. ಕೋಡಿಯಿಂದ ಕೇವಲ ೫೦ ಮೀಟರ್ ದೂರದಲ್ಲಿ ಎರಡು ಪರ್ವತಗಳನ್ನು ಸೀಳಿಕೊಂಡು ಸುಮಾರು ೧೫೦ ಅಡಿ ಎತ್ತರದಿಂದ ಬಂಡೆಗಲ್ಲುಗಳ ಮೇಲಿಂದ ಧುಮ್ಮಿಕ್ಕುವ ಜಿಲ್ಲೆಯ ಏಕೈಕ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ. ಧುಮ್ಮಿಕ್ಕುವ ನೀರಿನ ರಭಸಕ್ಕೆ ತುಂತುರು ಮಳೆಯಂತೆ ನೀರಿನ ಹನಿಗಳು ತೇಲಿಬರುತ್ತವೆ. ಹೀಗೆ ಗಾಳಿಯಲ್ಲಿ ತೇಲಿಬರುವ ಮಂಜಿನ ಹನಿ ಆಹ್ಲಾದಕರ ಸ್ಪರ್ಶವನ್ನು ಉಂಟುಮಾಡಿ ಮನಸ್ಸಿಗೆ ಮುದ ನೀಡುತ್ತಿವೆ.

ಮದಗ ಮಾಸೂರು ಕೆರೆ ಅಭಿವೃದ್ಧಿಪಡಿಸಿ ಸುಂದರ ಪ್ರವಾಸಿ ತಾಣವನ್ನಾಗಿ ಮಾಡುವಂತೆ ನಿರಂತರ ಹೋರಾಟ ಮಾಡಿದ ಪರಿಣಾಮ ತಕ್ಕಮಟ್ಟಿಗೆ ಅಭಿವೃದ್ಧಿಯಾಗಿದೆ. ಕೆರೆ ಸಮೀಪ ಯಾತ್ರಿ ನಿವಾಸ, ಉತ್ತಮ ರಸ್ತೆ, ಕಿರು ವಿದ್ಯುತ್ ಉತ್ಪಾನಾ ಕೇಂದ್ರ ಸ್ಥಾಪಿಸಬೇಕಿದ್ದು, ಅರಣ್ಯ ಬೆಳೆಸಬೇಕಿದೆ.
ನಿಂಗಪ್ಪ ಚಳಗೇರಿ, ಮದಗ-ಮಾಸೂರು ಕೆರೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ
ಇದನ್ನೂ ಓದಿ : ತುಮಕೂರಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಚುರುಕು; ಹೆಚ್ಚು ನೀರು ಸಂಗ್ರಹದ ಗುರಿ

ಮದಗ ಮಾಸೂರು ಕೆರೆಗೆ ದಕ್ಷಿಣ ಭಾಗಕ್ಕಿರುವ ಶಿಕಾರಿಪುರದ ಕಡೆಯಿಂದ ಕುಮದ್ವತಿ ಹರಿದುಬಂದು ಸೇರುತ್ತದೆ. ಮುಂದೆ ಕೆರೆಯ ಕೋಡಿಯಿಂದ ಮಾಸೂರು, ರಟ್ಟೀಹಳ್ಳಿ ಮೂಲಕ ಸಾಗುತ್ತದೆ. ಎರಡು ಗುಡ್ಡಗಳ ಮಧ್ಯೆ ನಿರ್ಮಾಣಗೊಂಡು ನಂತರ ಶಿಥಿಲವಾಗಿದ್ದ ಮದಗ ಮಾಸೂರು ಕೆರೆಯನ್ನು ೧೮೫೮ರಲ್ಲಿ ಬ್ರಿಟಿಷ್ ಸರ್ಕಾರ ವಿಶೇಷ ಆಸಕ್ತಿಯಿಂದ ದುರಸ್ತಿಗೊಳಿಸಿತ್ತು ಎನ್ನಲಾಗಿದೆ. ಕೆರೆಯ ಕೋಡಿ ಮತ್ತು ತೂಬನ್ನು ವ್ಯವಸ್ಥಿತಗೊಳಿಸಿ ಎಂಟೂವರೆ ಮೈಲು ಉದ್ದದ ಬಲದಂಡೆ ಕಾಲುವೆ ಹಾಗೂ ಐದೂವರೆ ಮೈಲು ಉದ್ದದ ಎಡದಂಡೆ ಕಾಲುವೆ ನಿರ್ಮಿಸಿ, ೩೦೦೦ ಎಕರೆ ಕೃಷಿ ಜಮೀನಿಗೆ ನೀರುಣಿಸುವಂತೆ ಮಾಡಿದ್ದಾರೆ. ೧೮೮೯ರಲ್ಲಿ ಕಾಮಗಾರಿ ಮುಕ್ತಾಯವಾದ ಬಗ್ಗೆ ಗೆಝೆಟಿಯರ್‌ನಲ್ಲಿ ದಾಖಲಿಸಲಾಗಿದೆ. ಬಚಾವತ್ ಆಯೋಗದ ಪ್ರಕಾರ, ಮದಗ ಮಾಸೂರು ಕೆರೆ ನೀರಾವರಿ ಯೋಜನೆಗೆ ೨.೭೧ ಟಿಎಂಸಿ ನೀರನ್ನು ನಿಗದಿಪಡಿಸಿದೆ. ಕೋಡಿಯನ್ನು ೧೧.೨೭ಅಡಿ ಎತ್ತರಿಸಿ, ಎಡದಂಡೆ ಕಾಲುವೆಯನ್ನು ೩೬.೪ ಕಿಮೀ ಹಾಗೂ ಬಲದಂಡೆ ಕಾಲುವೆಯನ್ನು ೩೮.೨ ಕಿಮೀ ನಿರ್ಮಿಸುವ ಮೂಲಕ ರಟ್ಟೀಹಳ್ಳಿ, ಹಿರೇಕೆರೂರ, ರಾಣಿಬೆನ್ನೂರು ಹಾಗೂ ಹರಿಹರ ತಾಲೂಕುಗಳ ೪೫ ಹಳ್ಳಿಗಳ ೨೧ ಸಾವಿರ ಎಕರೆ ಕೃಷಿಭೂಮಿಗೆ ನೀರು ದೊರೆಕಿಸಿಕೊಡುವ ಯೋಜನೆಯನ್ನು ಸರ್ಕಾರ ೧೯೭೪-೭೫ರಲ್ಲಿ ಸಿದ್ಧಪಡಿಸಿತಾದರೂ ಯೋಜನೆ ಅನುಷ್ಠಾನಗೊಳ್ಳಲಿಲ್ಲ, ನಂತರದ ಯಾವುದೇ ಸರ್ಕಾರಗಳು ಇದರ ಬಗ್ಗೆ ಗಮನ ಹರಿಸಲಿಲ್ಲ ಎಂಬುದು ಈ ಭಾಗದ ರೈತರ ನೋವಿನ ಸಂಗತಿ.

ಸುಮ್ಮನೆ ಹರಿದುಹೋಗುತ್ತಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಉತ್ತಮ ಯೋಜನೆ ರೂಪಿಸುವುದು ಅಗತ್ಯವಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಈ ಸ್ಥಳವನ್ನು ಅಭಿವೃದ್ಧಿಪಡಿಸುವ ಕೆಲಸ ತಕ್ಕಮಟ್ಟಿಗೆ ನಡೆದಿದ್ದರೂ ಕಿಡಿಗೇಡಿಗಳು ಮತ್ತೆ ಹಾಳುಗೆಡವಿದ್ದಾರೆ. ಅಗತ್ಯ ಮೂಲಭೂತ ಸವಲತ್ತುಗಳನ್ನು ಕಲ್ಪಿಸಿದರೆ ಅತ್ಯುತ್ತಮ ಪ್ರವಾಸಿ ತಾಣವಾಗುವ ಎಲ್ಲ ಅರ್ಹತೆ ಮದಗ ಮಾಸೂರು ಕೆರೆಗೆ ಇದ್ದು, ಈ ಕುರಿತು ಸರ್ಕಾರ ಬದ್ಧತೆಯನ್ನು ಪ್ರದರ್ಶಿಸಿ, ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More