ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸದೆ ಖಾಸಗಿ ಶಿಕ್ಷಣ ನೀಡುವ ತೀರ್ಮಾನ

ಮುಂಡರಗಿ ತಾಲೂಕಿನ ನಾರಾಯಣಪುರ ಗ್ರಾಮಸ್ಥರು ಶಿಕ್ಷಕರ ಮೇಲಿನ ಆಕ್ರೋಶದಿಂದ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿಲ್ಲ. ಶಿಕ್ಷಣ ನೀಡದ ಶಾಲೆಗೆ ಮಕ್ಕಳನ್ನು ಕಳುಹಿಸುವ ಬದಲಾಗಿ ಸ್ಥಳೀಯವಾಗಿ ಶಿಕ್ಷಕರನ್ನು ನೇಮಿಸಿ ಮಕ್ಕಳನ್ನು ಓದಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ

ಶಿಕ್ಷಕರ ಮೇಲಿನ ಆಕ್ರೋಶಕ್ಕೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದ ಸಾತ್ವಿಕ ಆಕ್ರೋಶ ಹೊರಹಾಕಿದ್ದಾರೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ನಾರಾಯಣಪುರ ಗ್ರಾಮಸ್ಥರು. 70 ಮನೆಗಳಿರುವ ಈ ಪುಟ್ಟ ಗ್ರಾಮದಲ್ಲಿ 1 ರಿಂದ 5 ನೇ ತರಗತಿಯವರೆಗೆ 26 ವಿದ್ಯಾರ್ಥಿಗಳಿದ್ದಾರೆ. ಆದರೆ ಈಗ ಮಕ್ಕಳಿಗೆ ಶಾಲೆಗಳೇ ಇಲ್ಲದಂತಹ ಸ್ಥಿತಿ ಬಂದಿದೆ.

ಶಾಲೆಯಲ್ಲಿ ಇರುವ ಇಬ್ಬರು ಶಿಕ್ಷಕರು ಕೇವಲ ವೇತನಕ್ಕಷ್ಟೆ ಸೀಮಿತವಾಗಿದ್ದಾರೆ ಎನ್ನುವುದು ಪಾಲಕರ ಆರೋಪ. ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಿಲ್ಲ ಎಂದು ಇಡೀ ಊರ ಜನರು ಐದು ದಿನಗಳಿಂದ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದೇ ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ಕಳೆದ ಐದು ದಿನಗಳಿಂದ ಸರ್ಕಾರಿ ಪ್ರಾಥಮಿಕ ಶಾಲೆ ಖಾಲಿ ಬಿದ್ದಿದೆ.

ಇದನ್ನೂ ಓದಿ : ನೂತನ ಶಿಕ್ಷಣ ಸಚಿವರ ಸರ್ಕಾರಿ ಶಾಲೆ ವಿಲೀನ ನಿರ್ಧಾರಕ್ಕೆ ವ್ಯಾಪಕ ವಿರೋಧ

1ನೇ ತರಗತಿಯಿಂದ 5ನೇ ತರಗತಿವರೆಗಿನ ನಾರಾಯಣಪುರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 26 ವಿದ್ಯಾರ್ಥಿಗಳಿದ್ದಾರೆ. ಓರ್ವ ಖಾಯಂ ಶಿಕ್ಷಕ ಮತ್ತು ಇನ್ನೊಬ್ಬ ಅತಿಥಿ ಶಿಕ್ಷಕ ಸೇರಿ ಶಾಲೆಯಲ್ಲಿ ಇಬ್ಬರೇ ಶಿಕ್ಷಕರು. ಆದರೆ ಇಲ್ಲಿಯ ವಿದ್ಯಾರ್ಥಿಗಳಿಗೆ ಕನ್ನಡ ಕೂಡ ಓದಲು, ಬರೆಯಲು ಬರುವುದಿಲ್ಲ. ಇನ್ನು ಗಣಿತದ ಮಗ್ಗಿ, ಜೊತೆಗೆ ಇಂಗ್ಲಿಷ್ ಮಕ್ಕಳಿಗೆ ಕಬ್ಬಿಣದ ಕಡಲೆ. ಬಹಳಷ್ಟು ವಿದ್ಯಾರ್ಥಿಗಳಿಗೆ ತಾವು ಎಷ್ಟನೇ ತರಗತಿಯಲ್ಲಿ ಓದುತ್ತಿದ್ದೇವೆ ಎನ್ನುವುದೂ ತಿಳಿದಿಲ್ಲ! ಶಿಕ್ಷಕರ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳು ಪಾಠದಲ್ಲಿ ಹಿಂದೆ ಬಿದ್ದಿದ್ದಾರೆ ಎನ್ನುವುದು ಮಕ್ಕಳ ಹೆತ್ತವರ ದೂರು. ಆದರೆ ಶಿಕ್ಷಣಾಧಿಕಾರಿಗಳನ್ನು ವಿಚಾರಿಸಿದರೆ, ಪರಿಸ್ಥಿತಿಯನ್ನು ನಿಭಾಯಿಸಲಾಗಿದೆ ಎಂದು ಉತ್ತರ ಕೊಡುತ್ತಾರೆ.

ನಾರಾಯಣಪುರದ ಶಾಲೆಯ ಅತಿಥಿ ಶಿಕ್ಷಕರ ನೇಮಕ ವಿಚಾರದಲ್ಲಿ ಮುಖ್ಯ ಶಿಕ್ಷಕರ ಕರ್ತವ್ಯ ಲೋಪದ ಬಗ್ಗೆ ಡಿಡಿಪಿಐ ಅವರಿಗೆ ವರದಿ ಕಳಿಸಲಾಗುವುದು. ಜೊತೆಗೆ ಈ ಕ್ಲಸ್ಟರ್‌ನ ಸಂಪನ್ಮೂಲ ಶಿಕ್ಷಕರನ್ನು ಈ ಶಾಲೆಗೆ ಶಿಕ್ಷಕರಾಗಿ ನೇಮಿಸಿದ್ದೇನೆ. ಇನ್ನು ಗ್ರಾಮದ ಇಂಜನಿಯರಿಂಗ್ ಯುವಕ ಸ್ವಯಂ ಪ್ರೇರಣೆಯಿಂದ ಗ್ರಾಮದ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಮುಂದಾಗಿದ್ದಾರೆ. ಅವರಿಗೆ ಯಾವುದೇ ಗೌರವ ಧನವಿಲ್ಲದ ಎಸ್ ಡಿಎಂಸಿ ಠರಾವ್ ಮೂಲಕ ಪಾಠ ಮಾಡಲು ಅನುಮತಿ ನೀಡಲಾಗಿದೆ. ಹೀಗಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಗ್ರಾಮಸ್ಥರಲ್ಲಿ ವಿನಂತಿಸಿಕೊಳ್ಳುವೆ.
ಶಂಕರ ಹಳ್ಳಿಗುಡಿ, ಬಿಇಒ

ಸದ್ಯ ಗ್ರಾಮದೇವತೆ ದೇವಸ್ಥಾನದಲ್ಲಿ ಪರ್ಯಾಯ ಶಿಕ್ಷಣಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ. ಗ್ರಾಮದ ಎಂಜನಿಯರಿಂಗ್ ಪದವಿಧರನಿಂದ ದೇವಸ್ಥಾನದಲ್ಲಿ ಶಿಕ್ಷಣ ಕೊಡಿಸಲು ಸ್ಥಳಿಯ ಪಾಲಕರು ಮುಂದಾಗಿದ್ದಾರೆ. ಐದು ದಿನಗಳಿಂದ ಶಾಲೆಗೆ ವಿದ್ಯಾರ್ಥಿಗಳು ಬಾರದೇ ಇದ್ದರೂ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಕಿಡಿಕಾರುತ್ತಿದ್ದಾರೆ.

“ಶಿಕ್ಷಕರು ಸರಿಯಾಗಿ ಓದಿಸದೇ ಇದ್ದಾಗ ಶಾಲೆಗೆ ಮಕ್ಕಳನ್ನು ಕಳಿಸುವ ಅಗತ್ಯವೇನಿದೆ?” ಎಂದು ನಾರಾಯಣಪುರ ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಬೇರೆ ಊರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಶಿಕ್ಷಣ ಕೊಡಿಸಬೇಕೆಂದರೆ ಗ್ರಾಮಕ್ಕೆ ಬಸ್ ಸೌಲಭ್ಯ ಕೂಡ ಇಲ್ಲ. ಹೀಗಾಗಿ ಈ ವ್ಯವಸ್ಥೆ ಸರಿಪಡಿಸಲು ಸ್ಥಳೀಯ ಇಬ್ಬರು ಶಿಕ್ಷಕರನ್ನು ಬದಲಾಯಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More