ಕಾಡಿನಿಂದ ನಾಡಿಗೆ ದೂಡಲಾದ ದಿಡ್ಡಳ್ಳಿ ಆದಿವಾಸಿಗಳಿಗೆ ಈಗ ಮರಣ ಭೀತಿ

ದೇವಮಚ್ಚಿ ಮೀಸಲು ಅರಣ್ಯದಲ್ಲಿ ನೆಲೆಸಿದ್ದ ಆದಿವಾಸಿ ಸಮುದಾಯವನ್ನು ಸರ್ಕಾರ ಇತ್ತೀಚೆಗೆ ನಾಡಿಗೆ ಸ್ಥಳಾಂತರಿಸಿದೆ. ಆದರೆ ಭರವಸೆ ನೀಡಿದ್ದ ವಸತಿ ಸೌಲಭ್ಯಗಳು ಇನ್ನೂ ಸಿಗದೆ, ಆರೋಗ್ಯ ಸಮಸ್ಯೆಗಳ ನಡುವೆ ಆದಿವಾಸಿಗಳ ಜೀವನ ಬರ್ಬರ ಸ್ಥಿತಿಯಲ್ಲಿದೆ. ಇಲ್ಲಿದೆ ‘ದಿ ಸ್ಟೇಟ್’ ಪ್ರತ್ಯಕ್ಷ ವರದಿ

೨೦೧೬ ರ ಅಂತ್ಯ ಭಾಗದಲ್ಲಿ ವೀರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ದೇವಮಚ್ಚಿ ಮೀಸಲು ಅರಣ್ಯಕ್ಕೆ ಸೇರಿದ ಸುಮಾರು ೧೦೦ ಎಕರೆ ಪ್ರದೇಶದಲ್ಲಿ ಟೆಂಟ್ ಗಳನ್ನು ಹಾಕಿಕೊಂಡು ಜಾಗವನ್ನು ಅತಿಕ್ರಮಿಸಿದ್ದಾರೆ ಎನ್ನುವ ಆರೋಪ ಗಿರಿಜನ ಸಮುದಾಯದ ಮೇಲೆ ಬಂದಿತ್ತು. ಈ ಗಿರಿಜನರನ್ನು ಸರ್ಕಾರ ಪೋಲೀಸರ ನೆರವಿನಿಂದ ಬಲಾತ್ಕಾರವಾಗಿ ಒಕ್ಕಲೆಬ್ಬಿಸಿದ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಹಲವರು ಗಿರಿಜನರ ಬೆಂಬಲಕ್ಕೆ ನಿಂತಿದ್ದರು. ಈ ಹಿನ್ನೆಲೆಯಲ್ಲಿ ದಿಡ್ಡಳ್ಳಿಯಲ್ಲಿ ದೊಡ್ಡ ಬಿಕ್ಕಟ್ಟು ತಲೆತೋರಿತ್ತು. ನಂತರ ಸರ್ಕಾರ ಈ ಗಿರಿಜನ ಸಮುದಾಯವನ್ನು ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಬ್ಯಾಡಗೊಟ್ಟ ಮತ್ತು ಬಸವನಳ್ಳಿಯಲ್ಲಿ ತಾತ್ಕಾಲಿಕವಾಗಿ ಟೆಂಟ್ ಹಾಕಿ ನೆಲೆಸಲು ಅನುವು ಮಾಡಿಕೊಟ್ಟಿತ್ತು. ಈ ಸಮುದಾಯಕ್ಕೆ ವಸತಿ ಸೌಲಭ್ಯವನ್ನು ಶೀಘ್ರವೇ ಕಲ್ಪಿಸಿಕೊಡುವುದಾಗಿ ಸರ್ಕಾರ ಅಭಯ ನೀಡಿತ್ತು.

ಆದರೆ ಕಳೆದ ೧೬ ತಿಂಗಳುಗಳಿಂದ ಬ್ಯಾಡಗೊಟ್ಟ ಮತ್ತು ಬಸವನಳ್ಳಿಯಲ್ಲಿ ತಾತ್ಕಾಲಿಕ ಟೆಂಟ್‌ಗಳಲ್ಲಿ ವಾಸಿಸುತ್ತಿರುವ ಆದಿವಾಸಿ ಸಮುದಾಯದ ಕಷ್ಟಗಳು ಇನ್ನೂ ತೀರಿಲ್ಲ. ಇದೀಗ ಟೆಂಟ್‌ ನಿವಾಸಿಗಳ ಸರಣಿ ಸಾವುಗಳು ಹೊಸ ಬಿಕ್ಕಟ್ಟಿನ ಸೂಚನೆ ನೀಡಿದೆ. ‘ ದಿ ಸ್ಟೇಟ್’ ಬ್ಯಾಡಗೊಟ್ಟ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದಾಗ ಆದಿವಾಸಿಗಳು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡಿದ್ದಾರೆ. “ಅರಣ್ಯ ಇಲಾಖೆಯ ಅಧಿಕಾರಿಗಳು ಪೋಲೀಸರೊಂದಿಗೆ ಬಂದು ಡಿಸೆಂಬರ್ ೭ರಂದು ನಮ್ಮನ್ನು ಎತ್ತಂಗಡಿ ಮಾಡಿ ಇಲ್ಲಿಗೆ ಎಸೆದು ಹೋಗಿದ್ದಾರೆ” ಎಂದು ೫೬ರ ಪ್ರಾಯದ ಗೌರಮ್ಮ ಸ್ವಾಮೀ ಹೇಳಿಕೊಂಡರು. “ನಮ್ಮನ್ನು ಯಾವ ಕಾಡು ಪ್ರಾಣಿಗಳೂ ನುಂಗಲಿಲ್ಲ ಅಥವಾ ಕಚ್ಚಲಿಲ್ಲ. ಆದರೆ ಇಲ್ಲಿ ತಿಂಗಳಿಗೊಂದು ಸಾವು ಸಂಭವಿಸುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಗೌರಮ್ಮ.

ಹಾಗೆ ನೋಡಿದರೆ, ಟೆಂಟ್‌ನಲ್ಲಿ ವಾಸಿಸುತ್ತಿರುವ ಜನರಿಗೆ ಸರ್ಕಾರ ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದೆ. “ನಮ್ಮ ಆರೋಗ್ಯ ಪರೀಕ್ಷೆಗಾಗಿ ವೈದ್ಯರೂ ಬರುತ್ತಾರೆ. ಔಷಧಿ ಮಾತ್ರೆಗಳನ್ನೂ ಕೊಡುತ್ತಾರೆ. ಆದರೆ ಸಾವಿನ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ” ಎಂದು ಗೌರಮ್ಮ ಹೇಳಿಕೊಂಡಿದ್ದಾರೆ.

ಕಳೆದ ೧೬ ತಿಂಗಳುಗಳಿಂದ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟದಲ್ಲಿ ಬದುಕು ಸಾಗಿಸುತ್ತಿರುವ ೧೫೦ಕ್ಕೂ ಅಧಿಕ ಕುಟುಂಬಗಳಲ್ಲಿ ಸರಿ ಸುಮಾರು ತಿಂಗಳಿಗೊಂದು ಸಾವು ಸಂಭವಿಸಿದೆ. ಈ ಟೆಂಟ್‌ಗಳಿಗೆ ಭೇಟಿ ಕೊಟ್ಟರೆ ಸಮೀಪವೇ ಹಾದು ಹೋಗುವ ಚರಂಡಿಯ ದುರ್ವಾಸನೆ ಸ್ವಾಗತಿಸುತ್ತದೆ. ಅಲ್ಲಲ್ಲಿ ಪಾಚಿಕಟ್ಟಿ ನಿಂತಿರುವ ಚರಂಡಿ ನೀರು ನೊಣಗಳು ಹಾಗೂ ಸೊಳ್ಳೆಗಳ ಉತ್ಪತ್ತಿಯ ಕೇಂದ್ರವಾಗಿ ಬಿಟ್ಟಿದೆ. ಇಲ್ಲಿನ ಆದಿವಾಸಿ ಮುಖಂಡ ಮಲ್ಲಪ್ಪ ಅವರನ್ನು ಮಾತನಾಡಿಸಿದಾಗ, “ಇಲ್ಲಿ ತಾತ್ಕಾಲಿಕ ಶೌಚಾಲಯ ಕಟ್ಟಿಕೊಟಿದ್ದಾರೆ. ಆದರೆ ಅದು ತುಂಬಿ ಹರಿದರೂ ಕೇಳುವವರಿಲ್ಲ. ಕೂಡಿಗೆ ಗ್ರಾಮ ಪಂಚಾಯತಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಜನಪ್ರತಿನಿದಿಗಳೂ ಇತ್ತ ತಿರುಗಿ ನೋಡಿಲ್ಲ” ಎಂದರು. “ಈ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ನಮಗೆಲ್ಲಾ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಮಾಡಿಸಿಕೊಡಬೇಕೆಂದು ಅಧಿಕಾರಿಗಳಿಗೆ ಆದೇಶ ನೀಡಿ ಅನೇಕ ತಿಂಗಳುಗಳೇ ಆಗಿವೆ. ಆದರೆ ಯಾವುದೇ ಕಾರ್ಡ್ ಯಾರಿಗೂ ಸಿಕ್ಕಿಲ್ಲ” ಎಂದರು ಮಲ್ಲಪ್ಪ.

ಇದೇ ಹಾಡಿ ನಿವಾಸಿ ಭೈರ (೪೨) ಅವರನ್ನು ಮಾತಾಡಿಸಿದಾಗ ಜನರು ಪ್ರಾಣ ಕಳೆದುಕೊಳ್ಳುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಸಾಮಾನ್ಯವಾಗಿ ಆದಿವಾಸಿ ಸಮುದಾಯಗಳಲ್ಲಿ ದೇವರು ಮತ್ತು ದೈವಗಳ ಬಗ್ಗೆ ಅತೀವ ಭಕ್ತಿ ಇರುತ್ತದೆ. ತಮ್ಮ ಸಮುದಾಯ ಸಮಸ್ಯೆ ಎದುರಿಸಿದಾಗ “ದೇವರು ಮುನಿಸಿಕೊಂಡಿದ್ದಾರೆ” ಎಂದು ತಿಳಿಯುವುದೇ ಹೆಚ್ಚು. ಭೈರ ಕೂಡಾ ಇದಕ್ಕೆ ಹೊರತಾಗಿಲ್ಲ. “ಇಲ್ಲಿನ ನಿವಾಸಿಗಳಿಗೆ ದೈವದ ಶಾಪ ತಟ್ಟಿದೆ. ಕೂಡಿಗೆ ಗ್ರಾಮ ಪಂಚಾಯತ್‌ ಸ್ಮಶಾನಕ್ಕೆಂದು ಊರ ದೈವ ಮುನೀಶ್ವರನ ದೇವಸ್ಥಾನದ ಎದುರಿಗೇ ಒಂದು ಎಕರೆ ಜಾಗ ಅಳೆದು ಕೊಟ್ಟಿದೆ. ಈಗ ಮೃತಪಟ್ಟಿರುವ ಎಲ್ಲರನ್ನೂ ಅಲ್ಲೇ ಮಣ್ಣು ಮಾಡಲಾಗಿದೆ. ದೇವಾಲಯದ ಎದುರೇ ಹೂಳಿರುವುದರಿಂದ ಮುನೀಶ್ವರ ಮುನಿಸಿಕೊಂಡಿದ್ದಾನೆ” ಎನ್ನುವುದು ಭೈರ ಅವರು ಅಭಿಪ್ರಾಯ. “ಇಲ್ಲಿರುವ ಸ್ಮಶಾನವನ್ನು ಬೇರೆಡೆಗೆ ಸ್ಥಳಾಂತರಿಸಿದರೆ ಸಾವುಗಳು ನಿಲ್ಲುತ್ತವೆ” ಎಂದೂ ಅವರು ಬೇಡಿಕೆ ಇಟ್ಟರು.

“ಈ ಕಾಲನಿಯಲ್ಲಿ ನಮ್ಮ ಸಂಖ್ಯೆ ಇರೋದೇ ೫೦೦ರಿಂದ ೬೦೦. ಹೀಗೆ ತಿಂಗಳಿಗೊಬ್ಬರಂತೆ ಸಾಯುತ್ತಾ ಹೋದರೆ ಮುಂದೆ ೧೦ ವರ್ಷಗಳಲ್ಲಿ ನಮ್ಮ ಸಂತತಿಯೇ ನಾಶವಾಗಲಿದೆ,” ಎನ್ನುತ್ತಾರೆ ಆದಿವಾಸಿ ರಾಜ. ಹಾಗೆಂದು ಸಾವಿಗೆ ಕಾರಣವೇನು ಎಂದು ಪ್ರಶ್ನಿಸಿದರೆ ನಿವಾಸಿಗಳು ಹಲವು ಕಾರಣಗಳನ್ನು ಮುಂದಿಡುತ್ತಿದ್ದಾರೆ. ಚೋಮ (೪೦ ) ಎನ್ನುವ ವ್ಯಕ್ತಿ ಮರದಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಕಾವೇರಿ (೩೬) ಎನ್ನುವ ಮಹಿಳೆ ಹೃದಯಾಘಾತದಿಂದ ಅಸು ನೀಗಿದ್ದಾಳೆ. ರವಿ (೩೦) ಅವರು ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಅಕ್ಷಿತಾ (೨), ಶಶಿ(೨೮) , ಶಿವು (೩೫) ಕಿಟ್ಟು (೫೫) ಮಣಿ (೮೧), ನಾಗಪ್ಪ (೪೧) ಇವರೆಲ್ಲರೂ ಇಂತಹುದೇ ಹಲವು ಅನಾರೋಗ್ಯಗಳಿಂದ ಮೃತಪಟ್ಟಿದ್ದಾರೆ. ಮಂಜು (೪೫) ಎನ್ನುವವರು ಜಾಂಡೀಸ್‌ನಿಂದ ಸಾವನ್ನಪ್ಪಿದ್ದಾರೆ. ಇವರನ್ನು ಹೊರತುಪಡಿಸಿ ಇತರ ಮೂವರು ಮೃತಪಟ್ಟಿದ್ದು, ಅವರ ಶವಗಳನ್ನು ಗೋಣಿಕೊಪ್ಪ ಮತ್ತು ತಿತಿಮತಿಗೆ ತೆಗೆದುಕೊಂಡು ಹೋಗಲಾಗಿದೆ. ಹೀಗಾಗಿ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೃತಪಟ್ಟಿರುವವರಲ್ಲಿ ಎಲ್ಲರ ಸಾವೂ ಆಸ್ಪತ್ರೆಗಳಲ್ಲಿ ಆಗಿದ್ದು ಇಬ್ಬರ ಸಾವು ಮಾತ್ರ ಗುಡಿಸಲಿನಲ್ಲಿ ಆಗಿದೆ.

ಈ ಬಗ್ಗೆ ‘ದಿ ಸ್ಟೇಟ್’ ಕುಶಾಲನಗರದ ಆರೋಗ್ಯಾಧಿಕಾರಿ ಡಾ.ದೇವರಾಜ್ ಅವರನ್ನು ಸಂಪರ್ಕಿಸಿದಾಗ, “ಬಹುತೇಕರು ಖಾಯಿಲೆಯ ಕೊನೆ ಹಂತದಲ್ಲಿ ಚಿಕಿತ್ಸೆಗೆ ಬರುತ್ತಾರೆ. ಅಷ್ಟರಲ್ಲಿ ರೋಗ ಉಲ್ಪಣಗೊಂಡಿರುತ್ತದೆ. ನಾವು ಬೇರೆ ದೊಡ್ಡ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದರೂ ಅವರು ಸ್ಪಂದಿಸುವುದಿಲ್ಲ. ಹಣದ ಕಾರಣ ಮುಂದೊಡ್ಡಿ ಚಿಕಿತ್ಸೆ ಪಡೆಯದೆ ಸುಮ್ಮನಿರುತ್ತಾರೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಚಳವಳಿ ನಿರತ ಜಾರ್ಖಂಡ್‌ ಆದಿವಾಸಿ ಕಾರ್ಯಕರ್ತರ ಮೇಲೆ ರಾಷ್ಟ್ರದ್ರೋಹದ ಆರೋಪ

ಈ ನಡುವೆ ನಿವಾಸಿಗಳಿಗಾಗಿ ಬ್ಯಾಡಗೊಟ್ಟದಲ್ಲಿ ಈಗ ೩೫೪ ಮನೆಗಳು ನಿರ್ಮಾಣಗೊಳ್ಳುತ್ತಿವೆ. ಆದರೆ ಜಿಎಸ್‌ಟಿ ಜಾರಿಗೆ ಬಂದ ನಂತರ ಮನೆಗಳ ನಿರ್ಮಾಣ ಕಾರ್ಯ ದುಬಾರಿ ಆಗಿದೆ. ಹೀಗಾಗಿ ನಿರ್ಮಾಣ ಪೂರ್ಣಗೊಳಿಸಲು ಆಗುತ್ತಿಲ್ಲ ಎಂದು ನಿರ್ಮಾಣ ಕಾರ್ಯ ಮಾಡುತ್ತಿರುವ ಕೊಡಗು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ಹೇಳಿದ್ದಾರೆ. “ಒಂದು ಮನೆ ನಿರ್ಮಾಣಕ್ಕೆ ಸರ್ಕಾರ ೩.೯ ಲಕ್ಷ ರೂಪಾಯಿ ನೀಡುತ್ತಿದೆ. ಇದರಲ್ಲಿ ೨೪ ರಿಂದ ೨೫ ಸಾವಿರ ರೂಪಯಿ ಜಿಎಸ್‌ಟಿ ಗೆ ಹೋಗುತ್ತಿದೆ. ಉಳಿದ ೩.೬೫ ಲಕ್ಷ ರೂಪಾಯಿ ಹಣದಲ್ಲಿ ಮನೆ ನಿರ್ಮಾಣ ಕಷ್ಟವಾಗಿದೆ. ಸುಮಾರು ೧೮ ಅಡಿ ಅಗಲ ೨೦ ಅಡಿ ಉದ್ದದ ಮನೆ ನಿರ್ಮಾಣಕ್ಕೆ ಈಗಿನ ಕಟ್ಟಡ ಸಾಮಾಗ್ರಿಗಳ ದರದಲ್ಲಿ ೪.೫ ಲಕ್ಷ ರೂಪಾಯಿ ಬೇಕೇ ಬೇಕು. ಆದರೆ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದರೂ ಇನ್ನೂ ದರ ಪರಿಷ್ಕರಣೆ ಮಾಡಿಲ್ಲ. ಮನೆಗಳನ್ನು ನಿರ್ಮಾಣ ಮಾಡಿ ಹೊರಗಿನ ಕೆಲಸಗಳನ್ನು ಇನ್ನೂ ಪೂರ್ಣಗೊಳಿಸಲು ಆಗಿಲ್ಲ,” ಎಂದೂ ಸಚಿನ್ ಹೇಳಿದರು.

ಇದೇ ಕಾರಣದಿಂದ ಬ್ಯಾಡಗೊಟ್ಟದಲ್ಲಿ ೩೫೪ ಮನೆಗಳನ್ನು ನಿರ್ಮಿಸಲಾಗುತಿದ್ದರೆ, ಸಮೀಪದ ಬಸವನಳ್ಳಿಯಲ್ಲಿ ಸುಮಾರು ೧೭೪ ಮನೆಗಳ ನಿರ್ಮಾಣ ಕಾರ್ಯ ಕುಂಟುತ್ತ ಸಾಗಿದೆ. ಆದಿವಾಸಿಗಳು ಕಾಡಿನಲ್ಲೆ ಬದುಕು ಕಟ್ಟಿಕೊಂಡು ನೆಮ್ಮದಿಯಾಗಿದ್ದರು. ಆದರೆ ಊರಿಗೆ ಕರೆದುಕೊಂಡು ಬಂದ ನಂತರ ಸರ್ಕಾರ ಪ್ರತೀ ಕುಟುಂಬಕ್ಕೆ ಕನಿಷ್ಟ ತಲಾ ಎರಡು ಎಕರೆ ಭೂಮಿ ನೀಡಬೇಕು ಎಂದೂ ಆದಿವಾಸಿಗಳು ಮನವಿ ಮಾಡಿದ್ದಾರೆ. ಆದರೆ ಇನ್ನೂ ಆದಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡದೆ ಇರುವ ಸರ್ಕಾರ ಜಮೀನು ನೀಡುವುದು ಸಂಶಯವೇ ಆಗಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More